LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗಣತಿದಾರರನ್ನು ಕಾಯುವ ಅಗತ್ಯವಿಲ್ಲ

ಆನ್ಲೈನ್ಮಾಹಿತಿಗೆ ಅವಕಾಶಕೆ.. ದಯಾನಂದ

 

ನಂಜುಂಡಪ್ಪ.ವಿ.

ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗಣತಿದಾರರನ್ನು ಕಾಯದೇ ಆನ್‌ ಲೈನ್‌ ಮೂಲಕ ಮಾಹಿತಿ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಾದ ದಯಾನಂದ ಕೆ.ಎ ಅವರು ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ್ಧಾರೆ. Karnataka State Commission for Backward Classes ಲಿಂಕ್ ಮೂಲಕ ನಿಮ್ಮ ಮತ್ತು ನಿಮ್ಮ ಕುಟುಂಬದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನೀವೆ ಮಾಡಿಕೊಳ್ಳಬಹುದು. ತಮ್ಮ ಮನೆಗೆ ಸಮೀಕ್ಷರು ಬರುವುದನ್ನು ಕಾಯಬೇಕಿಲ್ಲ ಎಂದಿದ್ದಾರೆ.

 

ನೋಡಿ ಎಲ್ಲಾ ಜಾತಿ, ಧರ್ಮದಲ್ಲಿ ಮಾನವೀಯತೆಯೇ ಪ್ರಮುಖ ಸಾರ. ಬಡವರನ್ನು ಶ್ರೀಮಂತರು ಕೈ ಹಿಡಿದು ನಡೆಸಿದ್ದರೆ, ಸಮಾನವಾಗಿ ಕಂಡಿದ್ದರೆ ಮೀಸಲಾತಿಯಂತಹ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಎಲ್ಲಾ ವಲಯಗಳಲ್ಲೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಸಮತೋಲನವಿದೆ. ಬೇಕೋ, ಬೇಡವೋ ಜಾತಿ ವ್ಯವಸ್ಥೆ ಇದೆ. ಸಮ ಸಮಾಜ ನಿರ್ಮಾಣಕ್ಕಾಗಿ ಯಾವ ವಲಯದಲ್ಲಿ ಯಾರು ಹಿಂದುಳಿದಿದ್ದಾರೆ ಎಂಬುದನ್ನು ಪತ್ತೆ ಮಾಡುವುದು ಇಂದಿನ ಅಗತ್ಯ.



ಮುಂದುವರೆದ ಜಾತಿಗಳಿಗೆ ಕೇಂದ್ರ ಸರ್ಕಾರ ಇಡಬ್ಲ್ಯುಎಸ್‌ ಮೀಸಲಾತಿ ಕಲ್ಪಿಸಿದೆ. ರಾಜ್ಯದಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ದಿ ನಿಗಮವೂ ಇದೆ. ತಾವು ಜಾತಿ ರಹಿತ, ವರ್ಗ ರಹಿತ ವ್ಯಕ್ತಿ ಎಂದು ಸಹ ಘೋಷಣೆ ಮಾಡಿಕೊಳ್ಳಲು ಅವಕಾಶವಿದೆ. ಸಮೀಕ್ಷೆಯಲ್ಲಿ ಜಾತಿಯನ್ನು ನಮೂದಿಸಲು ಮುಜುಗರ ಪಟ್ಟುಕೊಳ್ಳುವವರಿಗೆ ಪರ್ಯಾಯ ಮಾರ್ಗಗಳಿವೆ. ಆಯೋಗದ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಬಹುದು ಅಥವಾ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಹಾಯವಾಣಿ ಸಂಖ್ಯೆ 8050770004ಕ್ಕೆ ಕರೆ ಮಾಡಿ ವಿವರಗಳನ್ನು ಹಂಚಿಕೊಳ್ಳಬಹುದು ಎಂದರು.

 

2 ಕೋಟಿ ಮನೆಗಳ ಸಮೀಕ್ಷೆಗೆ 1.75 ಲಕ್ಷ ಶಿಕ್ಷಕರನ್ನು ಬಳಸಿಕೊಳ್ಳುತ್ತಿದೆ. ಪ್ರತಿ ಶಿಕ್ಷಕರಿಗೆ 120 ರಿಂದ 150 ಮನೆಗಳ ಸಮೀಕ್ಷೆಯ ಜವಾಬ್ದಾರಿ ವಹಿಸಲಾಗಿದೆ. ಶಿಕ್ಷಕರು, ಆಶಾ ಕಾರ್ಯಕರ್ತರ ಗೌರವ ಧನಕ್ಕಾಗಿಯೇ 375 ಕೋಟಿ ರೂ. ವೆಚ್ಚವಾಗಲಿದ್ದು, ಮೊದಲ ಹಂತದಲ್ಲಿ 420 ಕೋಟಿ ರೂ. ಬಿಡುಗಡೆಯಾಗಿದೆ. ಸಮೀಕ್ಷೆ ಎಂಬುದು ಇಂದು ನಿನ್ನೆಯದಲ್ಲ, ಬ್ರಿಟೀಷರ ಕಾಲದಿಂದಲೂ ಅನುಚೂನವಾಗಿ ನಡೆದುಕೊಂಡು ಬರುತ್ತಿದೆ. 1931 ರ ವರೆಗೆ ನಿಯಮಿತವಾಗಿ ಸಮೀಕ್ಷೆಗಳನ್ನು ನಡೆಸಲಾಗಿದೆ. 1941  ರಲ್ಲಿ ಎರಡನೇ ಮಹಾ ಯುದ್ಧದ ಕಾರಣ ಸಮೀಕ್ಷೆ ನಡೆದಿರಲಿಲ್ಲ. 1961 ರಲ್ಲಿ ಕೇಂದ್ರ ಸರ್ಕಾರ ನಡೆಸಿದ ಸಮೀಕ್ಷೆ ವಿವರಗಳು ಬಹಿರಂಗಗೊಂಡಿರಲಿಲ್ಲ. ಮೀಸಲಾತಿ, ಸವಲತ್ತು ಕಲ್ಪಿಸುವ ನಿಟ್ಟಿನಲ್ಲಿ ರೂಪುಗೊಳ್ಳುವ ನೀತಿ, ನಿರೂಪಣೆಗಳಿಗೆ  ಸೂಕ್ತ ಮಾಹಿತಿ, ದತ್ತಾಂಶಗಳು, ದಾಖಲೆಗಳ ಅಗತ್ಯವಿದೆ. ಸಮೀಕ್ಷೆಗೆ  ಸಾಂವಿಧಾನಿಕ ಮಾನ್ಯತೆಯೂ ಇದೆ ಎಂದರು.

 

1991 ರಲ್ಲಿ ಜಸ್ಟೀಸ್‌ ಇಂದಿರಾ ಸಹಾನಿ ಅವರು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ದತ್ತಾಂಶಗಳಿಲ್ಲದೇ ಮೀಸಲಾತಿ ನೀಡುವುದು ತಪ್ಪು. ಇದಕ್ಕಾಗಿ ಎಲ್ಲಾ ರಾಜ್ಯಗಳಲ್ಲಿ ಶಾಶ್ವತ ಆಯೋಗಗಳು ರಚನೆಯಾಗಬೇಕು ಎಂದಿದ್ದರು. ಇದಕ್ಕೂ ಮುನ್ನ ಆಯೋಗಳಿದ್ದರೂ ಅವು ಸರ್ಕಾರಿ ನೇಮಕಾತಿ ಸಂದರ್ಭದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಹಿಂದುಳಿದಿರುವಿಕೆಗೆ ಜಾತಿ ಒಂದು ಪ್ರಮುಖ ಕಾರಣ. ಹಾಗಾಗಿ ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವುದಕ್ಕೆ ಜಾತಿ ಎಂಬುದು ಇಲ್ಲಿ ಒಂದು ಪ್ರಶ್ನೆಯಷ್ಟೇ. ಇದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ. ಇದು ಜಾತಿ ಗಣತಿಯಲ್ಲ ಎಂದು ದಯಾನಂದ ಅವರು ಸ್ಪಷ್ಟನೆ ನೀಡಿದರು.



ಜಾತಿಗಳ ನಡುವೆ ತುಲನಾತ್ಮಕವಾಗಿ ಹೋಲಿಕೆ ಮಾಡಿದಾಗ ಮಾತ್ರ ಹಿಂದುಳಿದಿರುವಿಕೆ ತಿಳಿಯುತ್ತದೆ. ಈ ಹಿಂದೆ ಹಿಂದುಳಿದ ವರ್ಗಗಳ ಸಮೀಕ್ಷೆಯನ್ನು ಮಾತ್ರ ನಡೆಸಲಾಗುತ್ತಿತ್ತು. ಕಾಂತರಾಜು ಅವರು ಆಯೋಗದ ಅಧ್ಯಕ್ಷರಾಗಿದ್ದಾಗ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಾಗಿ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದ ಎಲ್ಲಾ ಜಾತಿ, ಜನಾಂಗದವರನ್ನು ಸಮೀಕ್ಷೆ ವ್ಯಾಪ್ತಿಗೆ ತರಲಾಯಿತು. ವಿವಿಧ ಜಾತಿಗಳ ನಡುವೆ ಹೋಲಿಕೆ ಇಲ್ಲ ಎಂದಾಗ ನಿಖರ ಮಾಹಿತಿ ದೊರೆಯುವುದಿಲ್ಲ.  ಯಾರು ಮುಂದುವರೆದಿದ್ದಾರೆ.  ಯಾರು ಹಿಂದುಳಿದಿದ್ದಾರೆ ಎಂಬ ಮಾಹಿತಿ ಪಡೆಯಲು ಸಮೀಕ್ಷೆ ನಡೆಸುವುದು ಅತ್ಯಂತ ಅಗತ್ಯವಾಗಿದೆ ಎಂದರು.

 

ಸಮೀಕ್ಷೆಯಲ್ಲಿ ಧರ್ಮ ಒಂದು ಭಾಗ. ಇದು ಮೂಲ ಅಲ್ಲ. ಧರ್ಮದ ಬಗ್ಗೆ ಮಾಹಿತಿ ಕೊಡಲೇಬೇಕೆಂಬ ಕಡ್ಡಾಯವಿಲ್ಲ. ಮಾಹಿತಿ  ನಿರಾಕರಿಸಬಹುದು. ಅವರವರ ವಿವೇಚನೆ ಅನುಸಾರ ಮಾಹಿತಿ ಪಡೆಯುತ್ತೇವೆ. ಆದರೆ ವಾಸ್ತವಿಕ ಮಾಹಿತಿ ನೀಡಿ ಎಂದು ಕೇಳುತ್ತೇವೆಯೇ ಹೊರತು ಹೀಗೆಯೇ ವಿವರಗಳನ್ನು ಕೊಡಿ ಎಂದು ಯಾರನ್ನೂ ಬಲವಂತಪಡಿಸುವುದಿಲ್ಲ. ಕಾಂತರಾಜು ವರದಿಯಲ್ಲಿ ತಾವು ಜಾತಿ, ಧರ್ಮವನ್ನು ಬಹಿರಂಗಪಡಿಸುವುದಿಲ್ಲ ಎಂದು 1.5  ಲಕ್ಷ ಮಂದಿ ಹೇಳಿದ್ದರು. ಧರ್ಮ ಗೊತ್ತಿಲ್ಲ ಎಂದು ಹೇಳಿದ 1.75  ಲಕ್ಷಕ್ಕೂ ಅಧಿಕ ಜನ ಇದ್ದಾರೆ. ಈ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಇಷ್ಟವಿಲ್ಲ ಎಂದು ಹೇಳಿದವರೂ ಇದ್ದಾರೆ. ಆದ ಕಾರಣ ಇದು ಅವರ ವೈಯಕ್ತಿಕ ಸ್ವಾತಂತ್ರ್ಯ,. ಒತ್ತಡವಿಲ್ಲ ಎಂದರು.

 

ಪ್ರಸ್ತುತ ನೀಡಲಾಗಿರುವ ಎಲ್ಲಾ 60 ಪ್ರಶೆಗಳೂ ಪ್ರಸ್ತುವೇ. ಕೇಂದ್ರ ಸರ್ಕಾರ ಜಾತಿ ಜನಗಣತಿ ಘೋಷಣೆಯ ನಂತರ ಈ ವಿಚಾರದ ಬಗ್ಗೆ ಚರ್ಚೆಯಾಗುತ್ತಿದೆ. ಕೇಂದ್ರ ಸರ್ಕಾರ ಜನಗಣತಿಯಲ್ಲಿ ಜಾತಿಯನ್ನು ಒಂದು ಕಾಲಂನಲ್ಲಿ ನಮೂದಿಸಬಹುದು. ನಾವೀಗ ಸಂಗ್ರಹಿಸುತ್ತಿರುವುದು ಪ್ರಾಥಮಿಕ ಮಾಹಿತಿ. ನಂತರ ಎರಡನೇ ಹಂತದಲ್ಲಿ ನಾವು ಮಾಹಿತಿಯನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸುತ್ತೇವೆ. ಆದರೆ ಜಾತಿಗಳ ಹಿಂದುಳಿದಿರುವಿಕೆಯ ಸಮಗ್ರ ಮಾಹಿತಿ ಕೇಂದ್ರದ ಜನ ಗಣತಿ ಸಂದರ್ಭದಲ್ಲಿ ಹೆಕ್ಕಿ ತೆಗೆಯಲು ಸಾಧ್ಯವಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ತಿಳಿಸಿದರು.

 

ಜನಸಾಮಾನ್ಯರ ಪಾಲ್ಗೊಳ್ಳುವಿಕೆ, ಒಳಗೊಳ್ಳುವಿಕೆ ಇಲ್ಲದಿದ್ದರೆ ಯಾವುದೇ ಸಮೀಕ್ಷೆ, ಯೋಜನೆಗಳು ಯಶಸ್ವಿಯಾಗುವುದಿಲ್ಲ. ಸಮೀಕ್ಷೆಯಲ್ಲಿ ಸತ್ಯ ಸಂಗತಿಗಳನ್ನು ಮಾತ್ರ ಹೇಳಿ. ತಪ್ಪು ಮಾಹಿತಿ ನೀಡಿದರೆ ನೈಜ ಫಲಾನುಭವಿಗಳಿಗೆ ಅನ್ಯಾವಾಗಲಿದೆ. ಸಮೀಕ್ಷೆ ಸಂದರ್ಭದಲ್ಲಿ ಕುಟುಂಬದ ಎಲ್ಲಾ ಸದಸ್ಯರ ಆಧಾರ್‌ ಸಂಖ್ಯೆ, ಒಟಿಪಿ ಪಡೆದು ಅಪ್‌ ಲೋಡ್‌ ಮಾಡುವುದು ಬಹು ದೊಡ್ಡ ಕಸರತ್ತು. ಸಮೀಕ್ಷೆಯಲ್ಲಿ ಡುಪ್ಲಿಕೇಶನ್‌ ಆಗಬಾರದು. ತಮ್ಮ ಜಾತಿಯ ಸಂಖ್ಯೆ ಹೆಚ್ಚಿಸಿಕೊಳ್ಳಲು ಕೆಲವರು ವಾಮ ಮಾರ್ಗ ಅನುಸರಿಸಬಹುದು ಎನ್ನುವ ಕಾರಣ ಇಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಡಿತರ ಚೀಟಿ ಇದ್ದಲ್ಲಿ ಆಧಾರ್‌ ಬೇಕಾಗಿಲ್ಲ. ಪಡಿತರ ಚೀಟಿಗಳಿಗೆ ಇ-ಕೆವೈಸಿ ಆಗಿರುತ್ತದೆ. ಪಡಿತರ ಚೀಟಿಯಲ್ಲಿ ಮೂರು ಜನರ ಹೆಸರಿದ್ದು, ನಾಲ್ಕನೇಯವರ ಹೆಸರಿಲ್ಲದಿದ್ದಲ್ಲಿ ಆಗ ಆಧಾರ್‌ ಸಂಖ್ಯೆ ಕೇಳುತ್ತೇವೆ. ಆಧಾರ್ ಇಲ್ಲದಿದ್ದರೆ ಇ ಆಧಾರ್  ಸಲ್ಲಿಸಬಹುದು. ಆಧಾರ್ ಇಲ್ಲದೇ ಇದ್ದ ಪಕ್ಷದಲ್ಲಿ ಅಂತಹ ವ್ಯಕ್ತಿಯ ಛಾಯಾಚಿತ್ರವನ್ನು ತೆಗೆದುಕೊಂಡು ಅಪ್ ಲೋಡ್ ಮಾಡಲು ಅವಕಾಶವಿದೆ ಎಂದರು.



ಪರಿಶಿಷ್ಟರ ಸಮೀಕ್ಷೆ ಸಂದರ್ಭದಲ್ಲಿ ತಮ್ಮ ಜಾತಿ ಹೇಳಿಕೊಳ್ಳಲು ಹಿಂಜರಿದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಾತಿ ಹೆಸರು ಕೇಳುವಾಗ ಅತ್ಯಂತ ಸೂಕ್ಷ್ಮತೆಯಿಂದ ವರ್ತಿಸುವಂತೆ ಗಣತಿದಾರರಿಗೆ ತರಬೇತಿ ನೀಡಲಾಗಿದೆ. ಪ್ರತಿಯೊಂದು ಜಾತಿ, ಸಮುದಾಯದವರನ್ನು ಗೌರವದಿಂದ ಕಾಣಬೇಕೆಂದು ಸೂಚಿಸಲಾಗಿದೆ. ಹಾಗೆಯೇ ಸಂಗ್ರಹಿಸಿದ ಮಾಹಿತಿಯನ್ನು ಅಂತಿಮ ವರದಿ ಸಿದ್ಧವಾಗುವ ತನಕ ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಿಲ್ಲ. ಖಾಸಗೀತನದ ರಕ್ಷಣೆಗೆ ಒತ್ತು ನೀಡಲಾಗಿದೆ. ಎರಡು ಕೋಟಿಗೂ ಹೆಚ್ಚು ಮನೆಗಳಲ್ಲಿ ಸಮೀಕ್ಷೆ ನಡೆಸುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಆಪ್ ಬಳಕೆ ಮಾಡಲಾಗುತ್ತಿದೆ. ಕೈ ಬರಹದ ಮೂಲಕ ಮಾಹಿತಿ ಸಂಗ್ರಹಿಸಿ, ನಂತರ ಅದನ್ನು ಡಿಜಿಟಲೈಸ್ ಮಾಡುವುದನ್ನು ತಪ್ಪಿಸಲು, ಲೋಪದೋಷಗಳಿಲ್ಲದಂತೆ ಮಾಡಲು ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ.

 

ಸಮೀಕ್ಷೆದಾರರಿಗೆ ಗುರುತಿನ ಚೀಟಿ ನೀಡಲಾಗಿದೆ. ಮಾಹಿತಿ ನೀಡುವವರಿಗೆ ಏನಾದರೂ ಅನುಮಾನ ಇದ್ದಲ್ಲಿ ಆಯೋಗ ಅಥವಾ ಜಿಲ್ಲಾಧಿಕಾರಿಗಳು ವಿತರಿಸಿರುವ ಗುರುತಿನ ಚೀಟಿಯನ್ನು ಪರಿಶೀಲಿಸಬಹುದು. ನಾವು ಮೂರು ಹಂತದ ಮಾಹಿತಿ ಪಡೆಯುತ್ತೇವೆ. ಮೂಲಭೂತವಾಗಿ ವಾಸಸ್ಥಳದ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ.  ನಂತರ 40 ವೈಯಕ್ತಿಕ ಪ್ರಶ್ನೆ ಇರುತ್ತದೆ. ಕುಟುಂಬದ ಆಸ್ತಿ, ಚಿರಾಸ್ತಿ ಬಗ್ಗೆಯೂ ವಿವರಗಳನ್ನು ಪಡೆಯುತ್ತೇವೆ. ವಿಶೇಷಚೇತನರಾಗಿದ್ದಲ್ಲಿ ಅವರ ಅಂಗ ವೈಕಲ್ಯತೆಯ ತೀವ್ರತೆ, ಪ್ರಮಾಣ ಪತ್ರಗಳ ವಿವರಗಳನ್ನು ಪಡೆಯುತ್ತೇವೆ. ಕುಲ ಕಸುಬಿನ ವಿವರಗಳನ್ನು ಸಂಗ್ರಹಿಸುತ್ತೇವೆ ಎಂದರು.

 
ವಸತಿ ಸಮುಚ್ಚಯದಲ್ಲಿರುವವರು ಗಣತಿದಾರರನ್ನು ಒಳಗೆ ಬಿಟ್ಟುಕೊಳ್ಳುತ್ತಿಲ್ಲ ಎಂಬ ದೂರುಗಳಿವೆ. ಇಂತಹ ಕಹಿ ಘಟನೆಗಳು ಹಿಂದೆಯೂ ನಡೆದಿವೆ. ವಸತಿ ಸಮುಚ್ಚಯಗಳಲ್ಲಿ ಸಮೀಕ್ಷೆಗೆ ಅವಕಾಶ ನೀಡಬೇಕು. ಒಂದು ವೇಳೆ ಅಲ್ಲಿ ಪ್ರತಿಯೊಬ್ಬರೂ ಆನ್ ಲೈನ್ ಮೂಲಕ ಮಾಹಿತಿ ನೀಡಲು ಇಚ್ಚಿಸಿದರೆ ಅದಕ್ಕೂ ಕೂಡ ಅವಕಾಶ ಕೊಡುತ್ತೇವೆ. ಆದರೆ ಗಣತಿದಾರರನ್ನು ತಡೆಯುವ, ನಿಯಂತ್ರಿಸುವ ಕೆಲಸ ಮಾಡಬಾರದು.

ದಯಾನಂದ ಕೆ.ಎ,  ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ


Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST