ರಾಯಚೂರು : ಕಲ್ಯಾಣ ಕರ್ನಾಟಕ ಭಾಗದ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳ ಮಧ್ಯದ ತನ್ನದೇ ಆದ ಮಹತ್ವವುಳ್ಳ ಜಿಲ್ಲೆಗೆ, 2024 ರ ಅಗಷ್ಟ 15 ರಂದು ರಾಯಚೂರ ನಗರದಲ್ಲಿ ಆರಂಭವಾದ ತಾಯಿ ಮಕ್ಕಳ ಆಸ್ಪತ್ರೆಯು ಸುಸಜ್ಜಿತ ಹೆರಿಗೆ ಕೊಠಡಿ, ಅತ್ಯಾಧುನಿಕ ಉಪಕರಣಗಳು, ನುರಿತ ವೈದ್ಯರುಗಳನ್ನು ಹೊಂದುವ ಮೂಲಕ ಕರ್ನಾಟಕ ಸರಕಾರದ ಆಶಯದಂತೆ ಕಡು ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಅದರಲ್ಲೂ ಹೆರಿಗೆಯೆನ್ನುವ ಮಹತ್ವಪೂರ್ಣ ಸನ್ನಿವೇಶದಲ್ಲಿ ಯಾವುದೇ ಕಾರ್ಪೋರೆಟ್ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಸಾಧನೆ ಮಾಡಿ ಮುಂಚೂಣಿಯಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರಬಾಬು ತಿಳಿಸಿದರು.

2025 ರ ಸ್ವಾತಂತ್ರ್ಯೊತ್ಸವಕ್ಕೆ ತಾಯಿ ಮಕ್ಕಳ ಆಸ್ಪತ್ರೆಯು ಆರಂಭವಾದ ಮೊದಲ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಸೇವಾ ಮನೋಭಾವನೆಯ ತಜ್ಞ ವೈದ್ಯರ ಮೂಲಕ ಸಹಜ ಹೆರಿಗೆಗಳು- 681, ಶಸ್ತ್ರಚಿಕಿತ್ಸೆ ಮೂಲಕ 522 ಹೆರಿಗೆಗಳು ಸೇರಿದಂತೆ ಒಟ್ಟು 1203 ಹೆರಿಗೆಗಳನ್ನು ನಿರ್ವಹಿಸಲಾಗಿದೆ. ಇದಕ್ಕಾಗಿ ಪ್ರತಿ ಹಂತದಲ್ಲೂ ಬೆಂಬಲ ನೀಡಿರುವ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತವನ್ನು ಸದಾ ಸ್ಮರಿಸಬೇಕಿದೆ ಎಂದು ತಿಳಿಸಿದರು.
ಅಲ್ಲದೆ ಮಕ್ಕಳ ಬೆಳವಣಿಗೆಯ ನ್ಯೂನ್ಯತೆಗಳನ್ನು ಗುರ್ತಿಸಿ ಚಿಕಿತ್ಸೆ ನೀಡುವ "ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರ" (ಡಿಇಐಸಿ) ವನ್ನು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಶೀಘ್ರದಲ್ಲಿಯೇ ಆರಂಭಿಸಲಾಗುತ್ತಿದೆ ಎಂದರು.

225, ಗಂಡಾಂತರ ಗರ್ಭಿಣಿಯರ ಹೆರಿಗೆ: ಸಾಮಾನ್ಯವಾಗಿ ಹೆರಿಗೆ ಸಮಯದಲ್ಲಿ ತಾಯಿಯ ಜೀವಕ್ಕೆ ಅಪಾಯಕಾರಿಯಾಗುವ ಗಂಡಾಂತರ ಗರ್ಭಿಣಿ ಎಂದು ಹೇಳಲಾಗುವ ಚೊಚ್ಚುಲು ಗರ್ಭಿಣಿ, 145 ಸೇಂಟಿಮಿಟರ್‌ಗಿಂತ ಕಡಿಮೆ ಎತ್ತರ, ಅಧಿಕ ರಕ್ತದೊತ್ತಡ, ಅವಳಿ ಜವಳಿ ಗರ್ಭಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವ, ಮೊದಲ ಹೆರಿಗೆ ಸಿಸೇರಿಯನ್ ಆಗಿರುವ ಮುಂತಾದ ಕಾರಣಗಳಿದ್ದು, ಹೆರಿಗೆ ಅಪಾಯಕಾರಿಯಾಗಿರುವ 225 ಗರ್ಭಿಣಿಯರ ಹೆರಿಗೆ ಮಾಡಲಾಗಿದೆ.
ನವೋದಯ ವೈದ್ಯಕೀಯ ಮಹಾವಿದ್ಯಾಲಯದ ತಜ್ಞರ ಸೇವೆ: ನಗರದ ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ತಜ್ಞವೈದ್ಯರು, ಸ್ನಾತ್ತಕೋತ್ತರ ವೈದ್ಯ ವಿಧ್ಯಾರ್ಥಿಗಳು ಆಸ್ಪತ್ರೆಯಲ್ಲಿ ಹೆರಿಗೆ ನಿರ್ವಹಣೆ, ಮಕ್ಕಳ ಆರೈಕೆ ಚಿಕಿತ್ಸೆಗೆ ನಿರಂತರವಾಗಿ ಸಹಕರಿಸುತ್ತಿರುವುದರಿಂದ ಸಾಧನೆ ಮಾಡಲು ಸಹಕಾರಿಯಾಗಿದೆ.
ಪ್ರಸ್ತುತ 4 ಪ್ರಸೂತಿ ತಜ್ಞರು, 3 ಮಕ್ಕಳ ತಜ್ಞರು, ಸೇರಿದಂತೆ ರೆಡಿಯಾಲಜಿಸ್ಟ್ ಡಾ ಪ್ರಜ್ವಲ್‌ಕುಮಾರ ಆಡಳಿತ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ ನಂದಿತಾ ಎಮ್ ಎನ್ ಮಾಹಿತಿ ನೀಡುತ್ತಾ, ಈಗಾಗಲೆ ಪ್ರತಿ ತಿಂಗಳು 09 ಹಾಗೂ 24 ತಾರೀಖು ಗಳಂದು ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಗಂಡಾತರ ಗರ್ಭಿಣಿಯರು ಸೇರಿದಂತೆ ಎಲ್ಲ ಗರ್ಭಿಣಿಯರ ಆರೋಗ್ಯ ತಪಾಸಣೆಯನ್ನು ಪ್ರಸೂತಿ ತಜ್ಞರ ನೇತೃತ್ವದಲ್ಲಿ ಮಾಡುವ ಮೂಲಕ ಹೆರಿಗೆ ದಿನಾಂಕ, ಮಗುವಿನ ಬೆಳವಣಿಗೆ, ಕಬ್ಬಿಣಾಂಶ ಮಾತ್ರೆಗಳ ಸೇವನೆ, ಪೌಷ್ಟಿಕಾಹಾರ ಮಹತ್ವ ಕುರಿತು ಜಾಗೃತಿ ನೀಡಲಾಗುತ್ತದೆ ಎಂದರು.
ಮಕ್ಕಳ ತಜ್ಞರ ಸೇವೆ: ಅಲ್ಲದೆ 3 ನುರಿತ ಮಕ್ಕಳ ತಜ್ಞರ ಮೂಲಕ ಹೆರಿಗೆ ನಂತರ ಮಕ್ಕಳಿಗೆ ಕಂಡು ಬರಬಹುದಾದ ಯಾವುದೇ ಆರೋಗ್ಯ ಸಮಸ್ಯೆಗಳಿಗೆ, ಮಕ್ಕಳ ಇತರ ಆರೋಗ್ಯದ ಸಮಸ್ಯೆಗಳನ್ನು ಗುರ್ತಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಇಲ್ಲಿಯವರೆಗೆ 465 ಮಕ್ಕಳಿಗೆ ಒಳರೋಗಿಗಳಾಗಿ ಚಿಕಿತ್ಸೆ ನೀಡಲಾಗಿದೆ ಎಂದರು.
ಮಕ್ಕಳ ಜನನದ ಮಧ್ಯ ಅಂತರಕ್ಕಾಗಿ ತಾತ್ಕಾಲಿಕ ವಿಧಾನಗಳ ಸೌಲಭ್ಯ: ಹೆರಿಗೆಯಾದ ನಂತರ ತಾಯಿ ಮಗುವಿನ ಆರೋಗ್ಯ ದೃಷ್ಟಿಯಿಂದ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದುಡುವುದು ಅಗತ್ಯವಾಗಿದ್ದು, ಇದಕ್ಕಾಗಿ ಪಿಪಿಐಯುಸಿಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಪಡೆಯಬಹುದಾದ ಸರಳವಾದ ಅಂತರ ಚುಚ್ಚುಮದ್ದು, 5 ರಿಂದ 10 ವರ್ಷ ಅಂತರವಿಡಬಹುದಾದ ಕಾಪರ-ಟಿ ಹಾಗೂ ನುಂಗುವ ಮಾತ್ರೆಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಮಕ್ಕಳ ಜನನ ತಡೆಗೆ ಶಾಶ್ವತ ವಿಧಾನ ಸೌಲಭ್ಯ: ಮಕ್ಕಳು ಬೇಡವೆಂದು ದಂಪತಿಗಳು ನಿರ್ಧರಿಸಿದರೆ ಶಾಶ್ವತ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಯಾದ ಟ್ಯುಬೆಕ್ಟುಮಿ ಮಾಡಲಾಗುತ್ತಿದ್ದು, ಇಲ್ಲಿಯವರೆಗೆ 115 ತಾಯಂದರಿಗೆ ಹೆರಿಗೆ ನಂತರ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಪ್ರಸ್ತುತ ತಿಂಗಳಿನಿಂದ ಲ್ಯಾಪ್ರೋಸ್ಕೋಪಿಕ್ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ಆಸ್ಪತ್ರೆಯು ಆರಂಭವಾಗದ ಒಂದು ವರ್ಷದಲ್ಲಿ ದೋಅಬ್ ನಾಡು ರಾಯಚೂರು ಜಿಲ್ಲೆಯ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಜೊತೆಗೆ ತಾಯಿ ಮರಣ, ಶಿಶು ಮರಣ ತಡೆಗೆ ತನ್ನದೆಯಾದ ಕೊಡುಗೆ ನೀಡುತ್ತಿರುವ ತಾಯಿ ಮಕ್ಕಳ ಆಸ್ಪತ್ರೆಯ ಸೇವೆಯನ್ನು ಸಾರ್ವಜನಿಕರು ಪಡೆಯಲು ಕೋರಲಾಗಿದೆ.