ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಶ್ರೀ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠಕ್ಕೆ ಹಿಂದಿನ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರೂ. 3.5 ಕೋಟಿ ಹಣ ಮಂಜೂರು ಮಾಡಲಾಗಿತ್ತು. ಇದರಲ್ಲಿ ಈಗಾಗಲೇ ಮಠದ ಕಾಮಗಾರಿಗಳಿಗೆ ರೂ. 2.5 ಕೋಟಿ ವೆಚ್ಚವಾಗಿ ಅನುದಾನ ಬಿಡುಗಡೆ ಮಾಡಲಾಗಿತ್ತು ಸರ್ಕಾರವು ಬದಲಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬಾಕಿ 1.5 ಕೋಟಿ ಹಣವನ್ನು ಬಿಡುಗಡೆ ಮಾಡಿರಲಿಲ್ಲ. ಮಠದ ಸ್ವಾಮಿಗಳು ಬಾಕಿ ಬರಬೇಕಾದ ಹಣವನ್ನು ಬಿಡುಗಡೆ ಮಾಡಲು ಸಚಿವ ಶಿವರಾಜ್ ತಂಗಡಿಯವರಿಗೆ ಮನವಿ ಮಾಡಿದ ನಂತರ ಫಲ ದೊರೆಯದಿದ್ದಾಗ ಅನಿವಾರ್ಯವಾಗಿ ನ್ಯಾಯಾಲದ ಮೊರೆ ಹೋದರು. ನ್ಯಾಯಾಲಯವು ಶ್ರೀ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠಕ್ಕೆ ಬಾಕಿ ರೂ 1.5 ಕೋಟಿ ಹಣವನ್ನು ಬಿಡುಗಡೆ ಮಾಡಲು ಆದೇಶಿಸಿತು. ರಾಜ್ಯ ಸರ್ಕಾರವು ಮಠಕ್ಕೆ ನೀಡಬೇಕಾದ ಹಣಕ್ಕೂ ಕಮೀಷನ್ ನೀಡಲು ಒತ್ತಾಯಿಸಿರುವುದು ಸರ್ಕಾರದಲ್ಲಿ ಮಠವಾಗಲಿ, ಮಂದಿರವಾಗಲಿ ಅಥವಾ ವ್ಯಕ್ತಿಯಾಗಲಿ ಲಂಚ ಕೊಟ್ಟರೇ ಮಾತ್ರ ಹಣ ಬಿಡುಗಡೆ ಮಾಡುವುದು ಎಂದಿರುವುದು ಎಲ್ಲ ಹಂತದಲ್ಲಿಯೂ ಹರಡಿರುವ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಿದೆ ಎಂದು ವಿಶ್ಲೇಷಿಸಿದರು.

ರಾಜ್ಯದ ವಿವಿಧ ಮಠ ಮತ್ತು ಸಂಘ ಸಂಸ್ಥೆಗಳಿಗೆ ಬಿಡುಗಡೆ ಮಾಡಬೇಕಾದ ಹಣಕ್ಕೂ ಸಚಿವರಿಗೆ ಕಪ್ಪ ನೀಡಿ ಪಡೆಯಬೇಕಾದ ದುರವಸ್ಥೆ ಅತ್ಯಂತ ಖಂಡನೀಯ. ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕಡಿವಾಣವಿಲ್ಲದಾಗಿದೆ. ಸ್ವತ: ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ ಸಿಲುಕಿದ್ದಾರೆ. ವಾಲ್ಮೀಕಿ ನಿಗಮದ ಹಗರಣ ಈಗ ಸಿಬಿಐ ತನಿಖೆಗೆ ನ್ಯಾಯಾಲಯದ ಆದೇಶವಾಗಿದೆ. ಮಠಗಳು ಹಣಕೊಟ್ಟು ಅನುದಾನ ಪಡೆಯಿರಿ ಎಂಬ ಹೀನಾಯ ಪರಿಸ್ಥಿತಿ ರಾಜ್ಯದಲ್ಲಿ ಕಂಡಿರಲಿಲ್ಲ, ಕೂಡಲೇ ಶ್ರೀ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಬಾಕಿ ಅನುದಾನ ಬಿಡುಗಡೆ ಮಾಡಬೇಕು. ಹಿಂದುಳಿದ ವರ್ಗದ ಇಲಾಖೆಯಲ್ಲಿ ಅನುದಾನ ಬಿಡುಗಡೆಗೆ ಕಪ್ಪ ವಸೂಲಿಯ ಬಗ್ಗೆ ತನಿಖೆಗೆ ಆದೇಶಿಸಬೇಕು. ಹಿಂದುಳಿದ ವರ್ಗದ ಸಚಿವ ಶಿವರಾಜ್ ತಂಗಡಿಯವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ, ಎಂಎಲ್‌ಸಿ ಸತೀಶ, ಮುಖಂಡರಾದ ಜಿ.ರಾಮಚಂದ್ರಯ್ಯ, ಕೆ.ಎಸ್. ದಿವಾಕರ್, ಬಿ.ಓಬಳೇಶ್, ಗರ‍್ರಮ್ ವೆಂಕಟರಮಣ ಇನ್ನಿತರರು ಇದ್ದರು.