LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಚಿವ ಎನ್.ಎಸ್. ಬೋಸರಾಜು 79 ನೇ ಸಂಭ್ರಮದ ಹುಟ್ಟುಹಬ್ಬ ಸಮಾರಂಭ

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು 79 ನೇ ಸಂಭ್ರಮದ ಹುಟ್ಟುಹಬ್ಬ: ರಾಜಕೀಯ ಮುತ್ಸದ್ದಿಗೆ ಅಭಿನಂದನೆಯ ಹೂಮಳೆ

ಅದ್ದೂರಿ ಅಭಿನಂದನಾ ಸಮಾರಂಭದಲ್ಲಿ “ಚೈತನ್ಯ ಸಾಗರ ಗ್ರಂಥ” ಲೋಕಾರ್ಪಣೆ

ರಾಜಕಾರಣದಲ್ಲಿ ಎನ್.ಎಸ್. ಬೋಸರಾಜು ಅಜಾತಶತ್ರು, ಸಮಸ್ಯೆ ನಿವಾರಣೆಯಲ್ಲಿ ಟ್ರಬಲ್ ಶೂಟರ್ : ಎಚ್.ಕೆ. ಪಾಟೀಲ್

ಎಲ್ಲಾ ಧರ್ಮ, ಜಾತಿ, ಜನಾಂಗದ ಪ್ರೀತಿ ಗಳಿಸಿದ ನಾಯಕ ಎನ್.ಎಸ್. ಬೋಸರಾಜು : ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು :  ಹೈದ್ರಾಬಾದ್ ಕರ್ನಾಟಕದ ಹಿರಿಯ ಧುರೀಣ,  ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರ 79 ನೇ ಹುಟ್ಟುಹಬ್ಬವನ್ನು ರಾಯಚೂರಿನ ಕೃಷಿ ವಿವಿ ಆವರಣದಲ್ಲಿಂದು ಅದ್ದೂರಿಯಾಗಿ ಆಚರಿಸಲಾಯಿತು.

ಎನ್.ಎಸ್. ಬೋಸರಾಜು ಅವರ ಅಭಿನಂದನಾ ಸಮಿತಿಯಿಂದ ಹೊರ ತಂದ “ಚೈತನ್ಯ ಸಾಗರ” ಗ್ರಂಥ ಬಿಡುಗಡೆ ಮಾಡಲಾಯಿತು. ಕರ್ನಾಟಕ,  ತೆಲಂಗಾಣದ ಹಿರಿಯ ರಾಜಕೀಯ ನಾಯಕರು, ಗಣ್ಯರು, ಅಭಿಮಾನಿಗಳ ಸಮ್ಮುಖದಲ್ಲಿ ಹಿರಿಯ ರಾಜಕೀಯ ಮುತ್ಸದ್ದಿಗೆ ಅಭಿನಂದನೆಯ ಹೂಮಳೆ ಹರಿಸಲಾಯಿತು. ಎನ್.ಎಸ್. ಬೋಸರಾಜು ಅವರ ಸಾರ್ವಜನಿಕ ಬದುಕಿನ ನಾನಾ ಆಯಾಮಗಳನ್ನು ಅನಾವರಣಗೊಳಿಸಲಾಯಿತು.

ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ತಾವು ಎದುರಿಸಿದ ಮೊದಲ ಉಪ ಚುನಾವಣೆಯಲ್ಲಿ ತಮ್ಮ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿದ್ದವರು ಎನ್.ಎಸ್. ಬೋಸರಾಜು. ಅವರ ಸಾರಥ್ಯದಲ್ಲಿ ಗೆದ್ದು ಶಾಸಕನಾದೆ. ಹೀಗಾಗಿ ಇವರನ್ನು ನಾನು ಎಂದಿಗೂ ಮರೆಯುವುದಿಲ್ಲ.  “ಚೈತನ್ಯ ಸಾಗರ ಗ್ರಂಥ” ಯುವ ಸಮೂಹಕ್ಕೆ ಸಂದೇಶವಾಗಿದೆ. ಇತಿಹಾಸ ತಿಳಿದವರು ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ. ಬೋಸರಾಜು  ಎಲ್ಲಾ ಜಾತಿ, ಜನಾಂಗ, ಜನ ಸಮುದಾಯದ ಪ್ರೀತಿ ಗಳಿಸಿದ ಜನಪ್ರಿಯ ನಾಯಕರಾಗಿದ್ದಾರೆ ಎಂದರು.  

ರಾಜಕೀಯ ನಾಯಕರ ಮಕ್ಕಳು ಜನರ ವಿಶ್ವಾಸ ಗಳಿಸುವುದು ಅಷ್ಟು ಸುಲಭವಲ್ಲ. ಇಂತಹ ಸಂಕಷ್ಟವನ್ನು ತಾವು ಕೂಡ ಎದುರಿಸಿದ್ದು, ಅನುಭವದಿಂದ ಈ ಮಾತು ಹೇಳುತ್ತಿದ್ದೇನೆ. ಆದರೆ ಬೋಸರಾಜು ಅವರ ಪುತ್ರ ರವಿ ಬೋಸರಾಜು ಇದಕ್ಕೆ ತದ್ವಿರುದ್ಧವಾಗಿದ್ದು, ತಂದೆಯಂತೆ ಜನಪ್ರಿಯ ನಾಯಕರಾಗಿದ್ದಾರೆ. ಬೋಸರಾಜು ಪಕ್ಷಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಸಭಾಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ “ಚೈತನ್ಯ ಸಾಗರ ಗ್ರಂಥ” ಬಿಡುಗಡೆ ಮಾಡಿ ಮಾತನಾಡಿ,  ಕಾಂಗ್ರೆಸ್ ನಾಯಕರು ರಾಯಚೂರಿಗೆ ಬಂದರೆ ಸಿಗುವ ಪ್ರೀತಿ, ಗೌರವ, ಸ್ವಾಗತ ಬೇರೆ ಯಾವುದೇ ಜಿಲ್ಲೆಯಲ್ಲಿ ಸಿಗುವುದಿಲ್ಲ. ಇದಕ್ಕೆ ಮೂಲ ಕಾರಣ ಎನ್.ಎಸ್. ಬೋಸರಾಜು. ಕಾಂಗ್ರೆಸ್ ನಲ್ಲಿ ಯುವ ನಾಯಕರಾಗಿ ಹೊರ ಹೊಮ್ಮಿ ಸಂಘಟನೆಗೆ ಚೈತನ್ಯ ತಂದಿದ್ದಾರೆ. ಇವರ ಪರಿಶ್ರಮದಿಂದ ರಾಯಚೂರು, ಹೈದ್ರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಚಿತ್ರಣ ಬದಲಾಗಿದೆ. ಪಕ್ಷದ ಬುನಾದಿಯನ್ನು ಭದ್ರಗೊಳಿಸಿದ್ದಾರೆ. ಎಲ್ಲಿ ಬಿಕ್ಕಟ್ಟು ಇರುತ್ತದೆಯೋ ಅಲ್ಲಿ ಬೋಸರಾಜು ಇರುತ್ತಾರೆ. ಟ್ರಬಲ್ ಶೂಟರ್ ಆಗಿ ಸಮಸ್ಯೆ ಬಗೆಹರಿಸುತ್ತಾರೆ ಎಂದು ಹೇಳಿದರು.

ರಾಜಕಾರಣದಲ್ಲಿ ಅಜಾತಶತ್ರು. ಎಲ್ಲರ ಜೊತೆಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ನಮ್ಮ ತಂದೆ ಕೆ.ಎಚ್. ಪಾಟೀಲ್ ಅವರೊಂದಿಗೂ ಒಡನಾಟ ಹೊಂದಿದ್ದರು. ಬೋಸರಾಜು ಅವರೊಂದಿಗೆ 50 ವರ್ಷಗಳಿಂದ ಸಂಬಂಧ ಹೊಂದಿದ್ದೇನೆ.  ಹೈದ್ರಾಬಾದ್ ಕರ್ನಾಟಕದ ಯಾವುದೇ ವಿಚಾರ ಬಂದರೂ ಸ್ಪಂದಿಸುವ ದಿಟ್ಟತನದ ನಾಯಕರಾಗಿದ್ದಾರೆ. ಈ ಭಾಗದ ನೆಲ, ಜಲದ ವಿಚಾರದಲ್ಲಿ ಅವಿರತವಾಗಿ ಕೆಲಸ ಮಾಡುತ್ತಿದ್ದು, ಜನಪರ ಕೆಲಸಕ್ಕೆ ಮಾದರಿಯಾಗಿದ್ದಾರೆ ಎಂದರು.

ಎನ್.ಎಸ್. ಬೋಸರಾಜು ನಿಜಕ್ಕೂ ಚೈತನ್ಯ ಸಾಗರ. ಇವರ ಯಶಸ್ಸಿನಲ್ಲಿ ಅವರ ಪತ್ನಿಯ ಪಾತ್ರ ಹಿರಿದಾದದ್ದು. ಬೋಸರಾಜು ಶತಮಾನೋತ್ಸವ ಆಚರಿಸಿಕೊಳ್ಳಲಿ. ತಮ್ಮ ರಾಜಕೀಯ ಬದುಕಿನ ಆರಂಭಿಕ ಹಂತದಲ್ಲಿ ನೀರಾವರಿ ವಿಚಾರಗಳ ಬಗ್ಗೆ ಮಾರ್ಗದರ್ಶನ ಮಾಡಿದ್ದರು. ಆಗ ಕ್ಯೂಸೆಕ್, ಟಿಎಂಸಿ ಅಂದರೆ ಏನು ಎಂಬ ಬಗ್ಗೆ ನನಗೆ ತಿಳಿವಳಿಕೆ ಇರಲಿಲ್ಲ. ಆ ಸಂದರ್ಭದಲ್ಲಿ ನನ್ನ ಅರಿವು ಹೆಚ್ಚಿಸಿದ ಧೀಮಂತ ನಾಯಕ ಎಂದು ಹೇಳಿದರು. 

ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮಾತನಾಡಿ, ಬೋಸರಾಜು ಅವರು ಏಐಸಿಸಿ ಕಾರ್ಯದರ್ಶಿಯಾಗಿ ಪಕ್ಷದ ಮುಖಂಡರ ನಡುವೆ ಸಮನ್ವಯತೆ ಸಾಧಿಸಿದ್ದರು. ತೆಲಂಗಾಣದಲ್ಲಿ ಅವರು ಉತ್ತಮ ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದು, ಅವರ ಪರಿಶ್ರಮದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅವರು ಅತ್ಯಂತ ಯಶಸ್ವಿ ನಾಯಕರು. ಪ್ರತಿಯೊಬ್ಬ ನಾಯಕರನ್ನು ತನ್ನ ಸ್ವಂತ ಕುಟುಂಬದವರಂತೆ ಹರಸಿ, ಹಾರೈಸಿದ್ದಾರೆ ಎಂದು ಹೇಳಿದರು.

ತೆಲಂಗಾಣದ ಪಶು ಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವಾಕಿಟಿ ಶ್ರೀಹರಿ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಬೋಸರಾಜು, ಪಕ್ಷ ಸಂಘಟನೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಕರ್ನಾಟಕವಷ್ಟೇ ಅಲ್ಲದೇ ತೆಲಂಗಾಣದ ಜೊತೆಯೂ ಉತ್ತಮ ಒಡನಾಟ ಹೊಂದಿದ್ದಾರೆ. ಇನ್ನೂ ನೂರ್ಕಾಲದ ಸಂತಸದ ಬದುಕು ಬೋಸರಾಜು ಅವರದ್ದಾಗಲಿ ಎಂದು ಹಾರೈಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಬೋಸರಾಜು ಅವರು 1969 ರಿಂದಲೂ ರಾಜಕೀಯ ಕ್ಷೇತ್ರದಲ್ಲಿದ್ದು, ಈಗಲೂ ನವ ಯುವಕರನ್ನು ನಾಚಿಸುವಂತೆ ಕೆಲಸ ಮಾಡುತ್ತಿದ್ದಾರೆ. ಅವರ ಉತ್ಸಾಹ, ಆಸಕ್ತಿ ನಮಗೆಲ್ಲ ಮಾದರಿಯಾಗಿದೆ. ತೆಲಂಗಾಣದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಬೋಸರಾಜು ನಿರಂತರವಾಗಿ ಶ್ರಮಿಸಿದ್ದಾರೆ. ಪಕ್ಷದ ಕೆಲಸ ಎಂದರೆ ಸದಾ ಚೈತನ್ಯದ ಚಿಲುಮೆಯಾಗಿ ಮುನ್ನಡೆಯುತ್ತಾರೆ ಎಂದು ಹೇಳಿದರು. 

ಹಿರಿಯ ಸಾಹಿತಿ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಗ್ರಂಥ ಕುರಿತು ಮಾತನಾಡಿ, ಎನ್.ಎಸ್. ಬೋಸರಾಜು ಅವರ ಬದುಕಿನ ನಾನಾ ಆಯಾಮಗಳ ಕುರಿತು ಬೆಳಕು ಚೆಲ್ಲಿಸಿದರು. ಎಂದಿಗೂ ವ್ಯಕ್ತಿ ನಿಷ್ಠೆ ಪರವಾಗಿರಲಿಲ್ಲ. ಬದಲಿಗೆ ಪಕ್ಷ ನಿಷ್ಠೆ ಬೋಸರಾಜು ಜೀವನದ ಅವಿಭಾಜ್ಯ ಅಂಗ ಎಂದರು.

ಅಭಿನಂದನಾ ಸಮಿತಿ ಅಧ್ಯಕ್ಷರು ಮತ್ತು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಹಂಪಯ್ಯ ನಾಯಕ್. ರಾಯಚೂರು ಶಾಸಕ ಡಾ. ಶಿವರಾಜ್ ಪಾಟೀಲ್, ಸಂಸದ ಜಿ. ಕುಮಾರ್ ನಾಯಕ್, ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಮತ್ತಿತರ ಶಾಸಕರು, ಸಂಸದರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST