LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಿಸ್ತುಬದ್ಧ ರಥೋತ್ಸವಕ್ಕೆ ಸಚಿವ ಡಿ. ಸುಧಾಕರ್ ಕಟ್ಟುನಿಟ್ಟಿನ ಸೂಚನೆ

ನಾಯಕನಹಟ್ಟಿ : ಐತಿಹಾಸಿಕ ಪ್ರಸಿದ್ಧ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಮತ್ತು ಶಿಸ್ತುಬದ್ಧವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಯೋಜನೆ, ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

​ನಾಯಕನಹಟ್ಟಿಯ ಒಳಮಠದ ಆವರಣದಲ್ಲಿ ಜರುಗಿದ ಜಾತ್ರಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ರಾಜ್ಯದ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸುವುದರಿಂದ, ಯಾವುದೇ ಸಣ್ಣ ಲೋಪದೋಷಗಳಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. ಭಕ್ತಾದಿಗಳಿಗೆ ಕುಡಿಯುವ ನೀರು, ಸ್ವಚ್ಛತೆ ಮತ್ತು ತುರ್ತು ವೈದ್ಯಕೀಯ ಸೇವೆಗಳಲ್ಲಿ ಯಾವುದೇ ಕೊರತೆಯಾಗದಂತೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು  ಸಚಿವ ಡಿ.ಸುಧಾಕರ್ ಹೇಳಿದರು.

ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ ಮೊಳಕಾಲ್ಮುರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಮುಂಬರುವ ಐತಿಹಾಸಿಕ ಜಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದರು.

ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ 10 ಲಕ್ಷ ರೂಪಾಯಿಗಳ ಧನಸಹಾಯ ನೀಡುವುದಾಗಿ ಘೋಷಿಸಿದ ಶಾಸಕ ಗೋಪಾಲಕೃಷ್ಣ ಒಂದು ವೇಳೆ ತಾಂತ್ರಿಕ ಕಾರಣಗಳಿಂದ ಸರ್ಕಾರಿ ಅನುದಾನ ವಿಳಂಬವಾದರೆ, ವೈಯಕ್ತಿಕವಾಗಿಯಾದರೂ ಈ ಮೊತ್ತವನ್ನು ಭರಿಸುವುದಾಗಿ ಅವರು ಸ್ಪಷ್ಟಪಡಿಸಿದರು.

 

 

​ಜಾತ್ರೆ ಹಿನ್ನಲೆಯಲ್ಲಿಬಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಅಳವಡಿಸಿ ಪಟ್ಟಣದ ಅಂದಗೆಡಿಸುವುದನ್ನು ತಡೆಗಟ್ಟಲು ಪಟ್ಟಣ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸುವುದರಿಂದ, ಮಾರ್ಚ್ ತಿಂಗಳ ಬಿಸಿಲನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಮೈಸೂರು ದಸರಾ ಮಾದರಿ ದೀಪಾಲಂಕಾರ

​ಜಾತ್ರೆಯ ಸೌಂದರ್ಯ ಮತ್ತು ಭಕ್ತರ ಉತ್ಸಾಹವನ್ನು ಹೆಚ್ಚಿಸಲು ಈ ಬಾರಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೈಸೂರು ದಸರಾ ಮಾದರಿಯಲ್ಲಿ ದೇವಸ್ಥಾನದ ಮುಖ್ಯ ದ್ವಾರದಿಂದ ರಥ ಬೀದಿಯವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಆಕರ್ಷಕ ದೀಪಾಲಂಕಾರ ಮಾಡಲಾಗುವುದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆಯಲ್ಲಿ ತಿಳಿಸಿದರು.

ದೀಪಾಲಂಕಾರ ಜಾತ್ರೆಗೆ ಮತ್ತಷ್ಟು ಮೆರುಗು ನೀಡಲಿದೆ. ಜನರನ್ನು ಸಹ ಆಕರ್ಷಿಸಲಿದೆ. ದೀಪಾಲಂಕರದ ಕುರಿತು ದೇವಸ್ಥಾನ ಮಂಡಳಿ ಜೊತೆ ಬೆಸ್ಕಾಂ ಅಧಿಕಾರಿಗಳು ಚರ್ಚಿಸಿ ಯೋಜನೆ ರೂಪಿಸುವಂತೆ ಈ ವೇಳೆ ಅವರು ಸೂಚಿಸಿದರು.

ಐತಿಹಾಸಿಕ ಜಾತ್ರೆಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಾತ್ರಾ ಆವರಣದಲ್ಲಿ ಪ್ರಾಣಿಬಲಿ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಕೈಗೊಳ್ಳಬೇಕು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಈ ಬಾರಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯ ಕಾಯಂ ಸಿಸಿಟಿವಿ ಕ್ಯಾಮೆರಾಗಳ ಜೊತೆಗೆ, 40 ರಿಂದ 50 ತಾತ್ಕಾಲಿಕ ಕ್ಯಾಮೆರಾಗಳನ್ನು ಅಳವಡಿಸಿ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಪ್ರತಿ ಕ್ಷಣದ ಮೇಲೆ ನಿಗಾ ಇರಿಸಬೇಕು ಎಂದು ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

 

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ:

ಜಾತ್ರೆಯ ಸಮಯದಲ್ಲಿ ಶಾಂತಿ ಕಾಪಾಡಲು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಅಬಕಾರಿ ಇಲಾಖೆಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.

 

ಇದೇ ವೇಳೆ ಲೋಕೋಪಯೋಗಿ ಇಲಾಖೆಯು ನಾಯಕನಹಟ್ಟಿ ಸಂಪರ್ಕಿಸುವ ರಸ್ತೆ ಗುಂಡಿಗಳನ್ನು  ಮುಚ್ಚಬೇಕು. ರಥ ಸಾಗುವ ಹಾದಿಯನ್ನು ಸರಿಪಡಿಸಬೇಕು. ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದ ಅವರು, ಹಳೆಯ ದಾಸೋಹ ಭವನವನ್ನು ತೆರವುಗೊಳಿಸಲಾಗಿದೆ. ತಿರುಪತಿ ಮತ್ತು ಮಂತ್ರಾಲಯದ ಮಾದರಿಯಲ್ಲಿ 'ಸರ್ಕ್ಯುಲರ್ ಕ್ಯೂ ಲೈನ್' ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಭಕ್ತರ ದಟ್ಟಣೆಯನ್ನು ಸುಗಮವಾಗಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 

ದೇವಸ್ಥಾನದ ಕಲ್ಯಾಣ ಮಂಟಪ, ಹೊರಮಠದಲ್ಲಿರುವ ಕೊಠಡಿಗಳು ಅತ್ಯಂತ ಅಶುಚಿಯಾಗಿವೆ ಎಂದು ಭಕ್ತರು ದೂರಿದರು.

ದೇವಸ್ಥಾನದ ಆವರಣದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಇದು ಭಕ್ತರ ಭದ್ರತೆಯ ಬಗ್ಗೆ ಆತಂಕ ಮೂಡಿಸಿದೆ.ಅನಗತ್ಯವಾಗಿ ಬ್ಯಾನರ್ ಹಾಕಿ ಜಾತ್ರೆಯ ಸೌಂದರ್ಯಕ್ಕೆ ಧಕ್ಕೆ ತರಬಾರದು ತಡೆಯಬೇಕು ಎಂದು ಸಾರ್ವಜನಿಕರು ಸಭೆಯ ಕೋರಿದರು.

ಮುಕ್ತಿ ಬಾವುಟ ಹರಾಜು : ಹಣ ವಸೂಲಿಗೆ ಕ್ರಮ

ಕಳೆದ ಎರಡು ವರ್ಷಗಳ ಹಿಂದೆ  ಮುಕ್ತಿ ಬಾವುಟವನ್ನು ಪಡೆದವರು ಈಗಾಗಲೇ 12 ಲಕ್ಷ ರೂಪಾಯಿಗಳನ್ನು ನಗದಾಗಿ ಪಾವತಿಸಲಾಗಿದ್ದಾರೆ ಉಳಿದ 5 ಲಕ್ಷ ರೂಪಾಯಿಗಳಿಗೆ ಚೆಕ್ ನೀಡಿದ್ದಾರೆ. ಬಾಕಿ ಮೊತ್ತವನ್ನು ಜಾತ್ರೆ ಆರಂಭದ ಒಳಾಗಾಗಿ ವಸೂಲಿ ಮಾಡುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಂದು ಸ್ಪಷ್ಟಪಡಿಸಿದರು.

 

ಸಭೆಯಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ,  ಚಿತ್ರದುರ್ಗ ಶಾಸಕ ಕೆ.ಎಸ್.ವೀರೇಂದ್ರ ಪಪ್ಪಿ,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ಬಾಮಿ, ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ನಾಯಕನಹಟ್ಟಿ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಗಂಗಾಧರ, ಪಟ್ಟಣ ಪಂಚಾಯತಿ ಅಧ್ಯಕ್ಷರು ಮಂಜುಳ ಶ್ರೀಕಾಂತ್ ಉಪಾಧ್ಯಕ್ಷ ಪಿ ಬೋಸಮ್ಮ ಸ್ಥಾಯಿ ಸಮಿತಿಯ ಅಧ್ಯಕ್ಷ ಸೈಯದ್ ಅನ್ವರ್ ಸದಸ್ಯರಾದ ಜಿ. ಆರ್ ರವಿಕುಮಾರ್ ತಿಪ್ಪೇಶ್. ಈರಕ್ಕ ಸುನೀತ ಸರ್ವಮಂಗಳ, ಎಂ.ಟಿ.ಮಂಜುನಾಥ, ವಿನೂತ ಗ್ರಾಮಸ್ಥರಾದ ಜೆಪಿ ರವಿಶಂಕರ್, ಜಿಎಸ್ ಪ್ರಭುಸ್ವಾಮಿ, ಎಂ.ವೈ.ಟಿ.ಸ್ವಾಮಿ, ಕೆ.ಎಂ.ಶಿವಸ್ವಾಮಿ, ಎಸ್.ಉಮಾಪತಿ, ಬಾಲರಾಜ್ ಸೇರಿದಂತೆ ಮತ್ತಿತರರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST