ಶಿಕ್ಷಣ ಮತ್ತು ಪ್ರೇರಣೆಯ ಆರಂಭ
ಪ್ರಸನ್ನ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶ್ರೀ ತಿರುಚಿ ಮಹಾಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. 2018-19ನೇ ಸಾಲಿನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಮಕ್ಕಳ ಹಕ್ಕುಗಳ ಕುರಿತು ನಡೆದ ತರಬೇತಿ ಇವರ ಜೀವನದ ದಿಕ್ಕನ್ನೇ ಬದಲಿಸಿತು. ಮಕ್ಕಳ ಹಕ್ಕುಗಳ ಕ್ಲಬ್‌ನಲ್ಲಿ ಸಾಮಾನ್ಯ ಸದಸ್ಯನಾಗಿ ಸೇರಿದ್ದ ಅವರು, ನಂತರ 10ನೇ ತರಗತಿಯಲ್ಲಿ ಕ್ಲಬ್‌ನ ಪ್ರತಿನಿಧಿಯಾಗಿ ಆಯ್ಕೆಯಾಗಿ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡರು.

ವೀಣಾ ಮೇಡಂ ಮತ್ತು ನೀಲಪ್ಪ ಅವರ ಮಾರ್ಗದರ್ಶನದಲ್ಲಿ ಬಾಲ್ಯ ವಿವಾಹ, ಬಾಲಕಾರ್ಮಿಕತೆ ಮತ್ತು ಶಾಲೆ ಬಿಟ್ಟ ಮಕ್ಕಳ ಸಮಸ್ಯೆಗಳ ಕುರಿತು ಆಳವಾದ ಚರ್ಚೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಚಿಂತನೆ ಪ್ರಾರಂಭಿಸಿದರು.
ಮಕ್ಕಳ ಹಕ್ಕುಗಳ ಹೋರಾಟ
ಗ್ರಾಮದಲ್ಲಿ ಮಕ್ಕಳ ಗ್ರಾಮಸಭೆ ನಡೆಯಬೇಕೆಂದು ಪಂಚಾಯಿತಿಗೆ ಮನವಿ ಸಲ್ಲಿಸಿದ ಪ್ರಸನ್ನ, ಬಾಲಕಾರ್ಮಿಕ ವಿರೋಧಿ ಜಾಗೃತಿ ಕಾರ್ಯಕ್ರಮಗಳನ್ನು ಎತ್ತಿನಗಾಡಿ ಮೂಲಕ ಹಮ್ಮಿಕೊಂಡು ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರಲು ಪ್ರಯತ್ನಿಸಿದರು. ಜಿಲ್ಲಾ ನಿಸರ್ಗ ಮಕ್ಕಳ ಹಕ್ಕುಗಳ ಒಕ್ಕೂಟದ ಕಾರ್ಯದರ್ಶಿಯಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಅನೇಕ ಗ್ರಾಮಗಳಲ್ಲಿ ಮಕ್ಕಳ ಹಕ್ಕುಗಳ ಅರಿವು ಮೂಡಿಸಿದರು.
ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಿಂದ ಮಕ್ಕಳಿಗೆ ಓದಲು ತೊಂದರೆ ಆಗುತ್ತಿದ್ದಾಗ, ಸೋಲಾರ್ ಲೈಟ್‌ಗಳನ್ನು ಒದಗಿಸಿ ನೆರವಾದರು. ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ತರಗತಿಗಳಿಗೆ ಟಿವಿ ವ್ಯವಸ್ಥೆ ಕಲ್ಪಿಸಿ ಶಿಕ್ಷಣ ನಿರಂತರವಾಗುವಂತೆ ನೋಡಿಕೊಂಡರು. 10ನೇ ತರಗತಿಯಲ್ಲಿ 84% ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದರು.

ಪ್ರಶಸ್ತಿ ಮತ್ತು ಗೌರವಗಳು
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. 2020ರಲ್ಲಿ “ಮಕ್ಕಳ ಮಿತ್ರ” ಪ್ರಶಸ್ತಿ 2021ರಲ್ಲಿ ರಾಷ್ಟ್ರೀಯ ಮಕ್ಕಳ ಮಿತ್ರ ಪ್ರಶಸ್ತಿ ರಾಷ್ಟ್ರ ಮಟ್ಟದ ಶ್ರೀ ಕೃಷ್ಣ ದೇವರಾಯ ಪ್ರಶಸ್ತಿ ಉತ್ತಮ ಸಾಧಕ ಪ್ರಶಸ್ತಿ ಸಮಾಜ ಸೇವೆ ರತ್ನಾ ಪ್ರಶಸ್ತಿ ಈ ಎಲ್ಲಾ ಗೌರವಗಳು ಇವರ ಸಮಾಜಮುಖಿ ಕಾರ್ಯಗಳಿಗೆ ಸಿಕ್ಕ ಮಾನ್ಯತೆಗಳಾಗಿವೆ.
ಸಮಾಜ ಸೇವೆಯಲ್ಲಿ ಮುಂಚೂಣಿ
ಪ್ರಸನ್ನ ಕುಮಾರ್ ಅವರು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಯುವ ಘಟಕದ ಅಧ್ಯಕ್ಷರಾಗಿ ರಸ್ತೆ ಅಪಘಾತ ತಡೆ ಜಾಗೃತಿ ಅಭಿಯಾನವನ್ನು ರಾಜ್ಯ ಮಟ್ಟದಲ್ಲಿ ನಡೆಸುತ್ತಿದ್ದಾರೆ. ಅಪಘಾತಕ್ಕೊಳಗಾದವರಿಗೆ ನೆರವು ನೀಡುವುದು, ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಪರಿಸರ ಸಂರಕ್ಷಣೆ ಮತ್ತು ರೈತರ ಪರ ಹೋರಾಟ – ಇವೆಲ್ಲವೂ ಇವರ ಕಾರ್ಯಕ್ಷೇತ್ರಗಳಾಗಿವೆ.
ಪ್ರೇರಣೆಯ ವ್ಯಕ್ತಿತ್ವ
“ಸಾಧನೆಗೆ ವಯಸ್ಸಿಲ್ಲ, ಮಿತಿಯಿಲ್ಲ, ಸಾವಿಲ್ಲ” ಎಂಬ ಮಾತಿಗೆ ಪ್ರಸನ್ನ ಜೀವಂತ ಉದಾಹರಣೆ. ವೀಣಾ ಮೇಡಂ ಮತ್ತು ನೀಲಪ್ಪ ಅವರ ಮಾರ್ಗದರ್ಶನದಲ್ಲಿ, ಅವರು ಸಮಾಜ ಸೇವೆಯನ್ನು ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿದ್ದಾರೆ.
ಹಳ್ಳಿಯ ಚಿಗುರು ದಿಲ್ಲಿಯವರೆಗೂ” ಎಂಬಂತೆ ಗ್ರಾಮದಿಂದ ರಾಷ್ಟ್ರಮಟ್ಟದ ವೇದಿಕೆಗೆ ಏರಿದ ಯುವ ನಾಯಕನಾಗಿ ಬೆಳೆಯುತ್ತಿದ್ದಾರೆ.
ಒಟ್ಟಾರೆ, ಪ್ರಸನ್ನ ಕುಮಾರ್ ಒಬ್ಬ ಸಾಮಾನ್ಯ ಯುವಕನಲ್ಲ – ಅವರು ನಿಜವಾದ “ಮಕ್ಕಳ ಧ್ವನಿ”. ಇಂತಹ ಅಪರೂಪದ ಪ್ರತಿಭೆಯನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಇವರಿಗೆ ಪ್ರೋತ್ಸಾಹ ನೀಡಿದರೆ ನಮ್ಮ ಜಿಲ್ಲೆ, ರಾಜ್ಯ ಮತ್ತು ದೇಶಕ್ಕೆ ಮಾದರಿಯಾಗುವ ನಾಯಕನಾಗಿ ಹೊರಹೊಮ್ಮುವುದು ನಿಶ್ಚಿತ.