ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಹಿಂಸಾ ಸಂಘಟನೆ ಅಧ್ಯಕ್ಷ ಎಂ.ನಾಗರಾಜು, ರಾಜ್ಯ ಸರ್ಕಾರ 2023ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಯಾವುದೇ ಸಂವೀಧಾನಾತ್ಮಕ ಮತ್ತು ಕಾನೂನಾತ್ಮಕ ರಕ್ಷಣೆ ಇಲ್ಲದೇ ಸೂಕ್ತ ಪ್ರಾತಿನಿಧ್ಯೆ ಇದ್ದಾಗ್ಯೂ ಪರಿಶಿಷ್ಟ ಜಾತಿಗೆ ಶೇಕಡ 15 ರಿಂದ ಶೇಕಡ 17ಕ್ಕೆ ಮೀಸಲಾತಿ ಹೆಚ್ಚಿಸಿ ಪರಿಶಿಷ್ಟ ಪಂಗಡಕ್ಕೆ ಶೇಕಡ 3 ರಿಂದ ಶೇಕಡ 7ಕ್ಕೆ ಹೆಚ್ಚಳ ಮಾಡಿ ಒಟ್ಟು ಮೀಸಲಾತಿಯನ್ನು ಶೇಕಡ 56ಕ್ಕೆ ಹೆಚ್ಚಿಸಿದೆ. ಇದೊಂದು ಅಸಂವಿಧಾನಿಕ ಆದೇಶವಾಗಿದ್ದು, ಇತ್ತೀಚೆಗೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಸರ್ಕಾರದ ನೇರ ಮೀಸಲಾತಿಯನ್ನು ಶೇಕಡ 56ಕ್ಕೆ ಹೆಚ್ಚಿಸಿದ್ದ ಆದೇಶವನ್ನು ರದ್ದುಗೊಳಿಸಿದೆ. ಮೀಸಲಾತಿಯನ್ನು ಶೇಕಡ 50ಕ್ಕೆ ಮಿತಿಗೊಳಿಸಬೇಕೆಂದು ಆದೇಶ ನೀಡಿದೆ. ಹೀಗಾಗಿ ಸರ್ಕಾರ ಓಲೈಕೆಗಾಗಿ ಅವೈಜ್ಞಾನಿಕ ಕ್ರಮಗಳಿಗೆ ಮುಂದಾಗಬಾರದು ಎಂದರು.
ರಾಜ್ಯ ಸರ್ಕಾರ 1992ರಲ್ಲಿ ಮೀಸಲಾತಿಯನ್ನು ಶೇ50ರಿಂದ ಶೇ 68ಕ್ಕೆ ಹೆಚ್ಚಳ ಮಾಡಿತ್ತು. ಅದನ್ನು ಪ್ರಶ್ನಿಸಿ ಎಸ್.ವಿ.ಜೋಶಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂಕೋರ್ಟ್ ಪರಿಗಣಿಸಿ ಮೀಸಲಾತಿ ಶೇಕಡ50ರನ್ನು ಮೀರಬಾರದೆಂದು ಆದೇಶಿಸಿತ್ತು. ತದನಂತರ ಮೀಸಲಾತಿಯನ್ನು ಪುನರ್ ನಿಗದಿ ಪಡಿಸಿ ಶೇಕಡ 50ಕ್ಕೆ ತಗ್ಗಿಸಲಾಯಿತು. ಶೇಕಡ 50ಕ್ಕಿಂತ ಹೆಚ್ಚು ಮೀಸಲಾತಿಯನ್ನು ನೀಡಿರುವ ಅಸಂವಿಧಾನಿಕ ಆದೇಶವನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್ ನಲ್ಲಿ ಇನ್ನೂ ಹಲವಾರು ಅರ್ಜಿಗಳನ್ನು ಇತ್ತೀಚೆಗೆ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ ಎಂದರು.

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗದ ಶಿಫಾರಸ್ಸಿನನ್ವಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿಯ ಪ್ರಮಾಣ ನಿರ್ಧರಿಸುವಾಗ ಸರ್ಕಾರ ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ಆದೇಶದನ್ವಯ ಒಟ್ಟು ಮೀಸಲಾತಿಯನ್ನು ಶೇಕಡ 50ಕ್ಕೆ ಮಿತಿಗೊಳಿಸಬೇಕು. ಹಾಗೆಯೇ ಹಿಂದುಳಿದ ವರ್ಗಗಳಿಗೆ ನೀಡಿರುವ ಶೇಕಡ 32ರಷ್ಟು ಮೀಸಲಾತಿಯ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದು ಸೂಕ್ತ ಎಂದು ಹೇಳಿದರು.
ಶೇಕಡ 50ಕ್ಕಿಂತಲೂ ಅಧಿಕ ಮೀಸಲಾತಿ ನೀಡಲು ಮಾಡಬಹುದಾದ ಯಾವುದೇ ತೀರ್ಮಾನ ನ್ಯಾಯಾಲಯ ನಿಂದನೆ ಹಾಗೂ ಕಾನೂನು ಬಾಹಿರವಾಗುತ್ತದೆ. ಒಂದು ವೇಳೆ ಹಿಂದುಳಿದ ವರ್ಗಗಳಿಗೆ ನೀಡಿರುವ ಶೇಕಡ 32ರ ಮೀಸಲಾತಿಯಲ್ಲಿ ಕಡಿತಗೊಳಿಸಿದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಮತ್ತು ಸಾಮಾನ್ಯ ವರ್ಗದವರು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಆದುದರಿಂದ ಸರ್ಕಾರವು ಈ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ ಕ್ರಮಕೈಗೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಅಹಿಂಸಾ ಸಂಘಟನೆ ಪ್ರಧಾನ ಕಾರ್ಯದರ್ಶಿ ಎಲ್.ರವಿ, ಸಂಘಟನಾ ಕಾರ್ಯದರ್ಶಿ ಬಿ.ಪೀತಾಂಬರ ಸ್ವಾಮಿ, ಸಮಿತಿ ಸದಸ್ಯರಾದ ನಾಗರಾಜ್ ಉಪಸ್ಥಿತರಿದ್ದರು.