ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿರೇಸಿಂದೋಗಿ ಹಳ್ಳದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಣಿಕೆಯನ್ನು ಈಚೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಇನ್ನಿತರ ಇಲಾಖೆ ಒಳಗೊಂಡ ಅಧಿಕಾರಿಗಳ ತಂಡ ದಾಳಿ ನಡೆಸಿ, ಮರಳಿನ ಬೋಟ್ ಗಳನ್ನು ಧ್ವಂಸಗೊಳಿಸಿದೆ. ಅಲ್ಲದೆ, ಅಪಾರ ಪ್ರಮಾಣದ ಮರಳು ವಶ ಪಡಿಸಿಕೊಂಡಿದೆ. ಆದರೆ, ಈವರೆಗೂ ಯಾರ ಮೇಲೆಯೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದೇ ಇರುವುದು ಅಚ್ಚರಿ ತಂದಿದೆ ಎಂದರು.

ಈ ಭಾಗದಲ್ಲಿ ಮರಳು ದಂಧೆ ಬಹಿರಂಗವಾಗಿ ನಡೆಸುತ್ತಿರುವವರು ಯಾರು ಎಂಬುದು ಜಗಜ್ಜಾಹಿರು ಆಗಿದ್ದರೂ ಪೊಲೀಸರು ಕೂಡ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಿರೇಹಳ್ಳ ವ್ಯಾಪ್ತಿಯಲ್ಲಿನ ಹೂಳು ತೆಗೆದು ರೈತರಿಗೆ ಅನುಕೂಲವಾಗಲೆಂದು ಅನುಕೂಲ ಕಲ್ಪಿಸಲಾಗಿದೆ. ಆದರೆ, ರಾಜಕೀಯ ಪ್ರೇರಿತ ಶಕ್ತಿಗಳು, ನಿಸರ್ಗದ ಸಂಪತ್ತನ್ನು ಹಾಡುಹಗಲೇ ಕೊಳ್ಳೆ ಹೊಡೆಯುತ್ತಿವೆ. ಇದಕ್ಕೆ ಆಡಳಿತದಲ್ಲಿರುವ ಜನಪ್ರತಿನಿಧಿಗಳು ಬೆಂಗಾವಲಾಗಿರುವುದು ದುರದೃಷ್ಟಕರ. ಇದಲ್ಲದೇ ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದಲ್ಲಿರುವ ಕೆರೆಯ ಅಪಾರ ಪ್ರಮಾಣದ ಮಣ್ಣನ್ನು ಅನಧಿಕೃತವಾಗಿ ಸಾಗಾಟ ಮಾಡುತ್ತಿರುವ ಪ್ರಕರಣ ಈಚೆಗೆ ಬೆಳಕಿಗೆ ಬಂದಿತ್ತು. ಇಂತಹ ಹಲವು ಘಟನೆಗಳು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಇದರಿಂದ ನಿಸರ್ಗದ ಮೇಲೆ ಗಂಭೀರ ಪರಿಣಾಮ ಬಿರುತ್ತಿದೆ. ಆಡಳಿತ ಪಕ್ಷದ ಜನಪ್ರತಿನಿಧಿಗಳು ಇಂತಹ ಅಕ್ರಮಗಳಿಗೆ ಕಡಿವಾಣ ಹಾಕುವುದು ಬಿಟ್ಟು ದಂಧೆಕೋರರ ಪರವಾಗಿ ಕೆಲಸ ಮಾಡುತ್ತಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ. ಇನ್ನಾದರೂ ಇಂತಹ ಪ್ರಕರಣಗಳಿಗೆ ಕಡಿವಾಣ ಬಿಳಬೇಕಿದೆ. ನಿಸರ್ಗದ ಸಂಪತ್ತು ಉಳಿಯಬೇಕಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ವೈದ್ಯ ಬಸವರಾಜ ಕ್ಯಾವಟರ್ ಒತ್ತಾಯಿಸಿದ್ದಾರೆ.