ಅದಾದ ಬಳಿಕ 2010, ಅ.5ರಂದು ಈ ಉದ್ಯಾನವನದಲ್ಲಿ ವರನಟ ಡಾ.ರಾಜ್‌ಕುಮಾರ್ ಅವರ ಪುತ್ಥಳಿ ನಿರ್ಮಿಸಿದ್ದರಿಂದ ಉದ್ಯಾನಕ್ಕೆ ವಿಶೇಷ ಕಳೆಬಂದಿತ್ತು. ಆಗಿನಿಂದ ಕುಂಟಗಡ್ಡೆ(ಗೋಲ್ಡನ್ ಜ್ಯುಬಿಲಿ) ಪಾರ್ಕ್, ಡಾ.ರಾಜ್‌ಕುಮಾರ್ ಉದ್ಯಾನವನವಾಗಿ ನಾಮಕರಣಗೊಂಡಿತು. ಅಲ್ಲದೇ 2014-15ರಲ್ಲಿ ಬಳ್ಳಾರಿ ಜಿಲ್ಲಾಡಳಿತದಿಂದ ಮನರಂಜನೆಗಾಗಿ ಸಂಗೀತ ಕಾರಂಜಿ ಮತ್ತು ಅಂದಾಜು 50ಕ್ಕೂ ಹೆಚ್ಚು ಅಡಿ ಆಳ, 5234 ಚದರ ಅಡಿ ಸುತ್ತಳತೆಯ ವಿಶಾಲವಾದ ಹೊಂಡದಲ್ಲಿ ಬೋರ್‌ವೆಲ್ ಮತ್ತು ನಗರ ನೀರು ಸರಬರಾಜು ಸಂಪರ್ಕದಿಂದ ನೀರು ಸಂಗ್ರಹಿಸ ವಾಟರ್ ಬೋಟಿಂಗ್ ಮುಂತಾದ ಸೌಲಭ್ಯಗಳನ್ನು ಈ ಉದ್ಯಾನವನದಲ್ಲಿ ಕಲ್ಪಿಸಲಾಯಿತು.

ಮಕ್ಕಳಿಗಾಗಿ ಹೆಚ್ಚಿನ ಆಟಿಕೆ ಸಾಮಾನುಗಳನ್ನು ಅಳವಡಿಸಿ, ವಾರಕ್ಕೊಮ್ಮೆಯಾದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಲಿತ್ತು. ಈ ಉದ್ಯಾನದಲ್ಲಿ ನಿರ್ಮಿಸಿದ ಅಂದಾಜು 35 ಅಡಿಗೂ ಎತ್ತರ, 1040ಚದರ ಅಡಿ ಅಗಲವಿರುವ ಕೃತಕವಾದ ಫಾಲ್ಸ್ ಮತ್ತು 30ಎಚ್‌ಪಿಯ ಆರು ಮೋಟರ್‌ಗಳ ಮೂಲಕ ಹೊಂಡದಲ್ಲಿನ ನೀರನ್ನು ಮೇಲಕ್ಕೆತ್ತಿ ಎತ್ತರದಿಂದ ನೀರು ಬೀಳುವಂತೆ ಮಾಡಲಾದ ವ್ಯವಸ್ಥೆ ತುಂಬಾ ಆಕರ್ಷಕವಾಗಿತ್ತು. ಆದರೆ ಇಡೀ ಪಾರ್ಕ್ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿ ಅನುಚಿತ ವರ್ತನೆಗಳ ಅಡ್ಡವಾಗುತ್ತಿದೆ.

ಅಂದವಾಗಿ ಕಟ್ಟಿದ್ದ ಗೋಡೆ, ಕಂಬಗಳ ಮೇಲೆ ಕಿಡಿಗೇಡಿಗಳು ಹೆಸರು ಬರೆದು ವಿರೂಪಗೊಳಿಸಿದ್ದಾರೆ. ಸಮಾಜದ ಸ್ವಾಸ್ಥ್ಯತೆ ಕಾಪಾಡುವಲ್ಲಿ ಉದ್ಯಾನವನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಬಹುಮುಖ್ಯ ಪಾತ್ರ ವಹಿಸುವುದರಿಂದ ಈ ಮೂಲಕವಾದರೂ ಜನಪ್ರತಿನಿಧಿಗಳು ಪಾರ್ಕನ ಪುನಶ್ಚೇತನಕ್ಕೆ ಉತ್ಸಾಹ ತೋರುವ ಅನಿವಾರ್ಯತೆ ಇದೆ ಎಂದು ರಂಗ ಸಂಶೋಧಕರಾದ ಅರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ ತಿಳಿಸಿದ್ದಾರೆ.