ಚಿತ್ರದುರ್ಗ : ಬೆಂಗಳೂರಿನ ಪ್ರಜಾಸತ್ತಾತ್ಮಕ ಸರ್ಕಾರದ ಕೇಂದ್ರ ಸ್ಥಾನವಾದ ವಿಧಾನಸೌಧದ ಎದಿರೇ ಎರಡು ಗುಂಪುಗಳು ಹೊಡೆದಾಡಿದ ಮರುದಿನವೇ ಬೆಂಗಳೂರಿನಂತ ಜನ ನಿಬಿಡ ಪ್ರದೇಶದಲ್ಲಿ ಹಾಡು ಹಗಲೇ ಎಟಿಎಂಗೆ ಸಾಗಿಸುವ ಟ್ರಕ್ ಹೈಜಾಕ್ ಮಾಡಿ ಸುಮಾರು ಏಳು ಕೋಟಿಗೂ ಅಧಿಕ ಹಣದೋಚುತ್ತಾರೆ ಎಂದರೆ ಏನರ್ಥ. ಇವೆಲ್ಲವನ್ನೂ ನೋಡುತ್ತಿದ್ದರೆ ರಾಜ್ಯದಲ್ಲಿ ಸರ್ಕಾರ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಾಗಿ ಬಿಜೆಪಿ ಮುಖಂಡ ಪ್ರಭಾಕರ ಗಂಭೀರವಾಗಿ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರವು ಕೇವಲ ಅಧಿಕಾರ ಹಂಚಿಕೆಯಲ್ಲಿ ಕಾಲಹರಣ ಮಾಡುತ್ತಿದೆ ಬಿಟ್ಟರೆ ರಾಜ್ಯದ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಯ ಕಡೆಗೆ ಗಮನ ಹರಿಸಿಲ್ಲದಿರುವುದು ಕಂಡು ಬರುತ್ತಿದೆ ಎಂದು ಪ್ರಭಾಕರ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಶೂನ್ಯವಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರ ನಿಸ್ತೇಜವಾಗಿದೆ ಎಂದರು. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ಜನ ಪರದಾಡುವಂಥಾಗಿದೆ ಒಂದು ಹೊಸ ರಸ್ತೆ ಇಲ್ಲ, ಹೊಸ ಯೋಜನೆಯಿಲ್ಲ, ಇರುವಂತ ಚರಂಡಿಗಳ ಸ್ವಚ್ಛತೆ ಮಾಡಿಸಿಲ್ಲ. ಚರಂಡಿಗಳು ಸ್ವಚ್ಛತೆ ಇಲ್ಲದೆ ಸಾಂಕ್ರಾಮಿಕ ರೋಗಗಳು ಯಥೇಚ್ಛವಾಗಿ ಹರಡುವ ಭೀತಿ ಎದುರಾಗಿದೆ.
ಮೊಳಕಾಲ್ಮುರು ಕ್ಷೇತ್ರದ ಮಾನ್ಯ ಶಾಸಕರು ಮಂತ್ರಿಯಾಗುವ ಬಗ್ಗೆ ಹಗಲು ಗನಸು ಕಾಣುತ್ತಾ ಅಭಿವೃದ್ಧಿಯ ಕಡೆಗೆ ಗಮನಹರಿಸದೆ ಇರುವುದು ಕೂಡ ಕ್ಷೇತ್ರದ ಹಿನ್ನೆಡೆಗೆ ಕಾರಣವಾಗಿದೆ. ಕೆಲ ಕಾಮಗಾರಿಗಳ ಶಂಕುಸ್ಥಾಪನೆ ಮಾಡಿದ್ದರೂ ಅದು ಮೊಳಕಾಲ್ಮೂರು ಹೋಬಳಿಯಲ್ಲಿ ಮಾತ್ರ. ತಳಕು, ನಾಯಕನಹಟ್ಟಿ ಹೋಬಳಿಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ನಾನು ಅತ್ಯಂತ ಹಿರಿಯ ಶಾಸಕ ಎಂಬ ಅಹಂನಲ್ಲಿರುವ ಗೋಪಾಲಕೃಷ್ಣ ಅವರು ಮಂತ್ರಿಗಳ ಬಳಿ ಹೋಗಿ ಅಭಿವೃದ್ಧಿಗೆ ಪತ್ರ ನೀಡಿರುವುದಂತೂ ನಾನಂತೂ ಕಂಡಿಲ್ಲ ಎಂದು ಪ್ರಭಾಕರ ಹೇಳಿದ್ದಾರೆ.
ಇತ್ತೀಚೆಗೆ ನಾನು ದೇವಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಪ್ರವಾಸ ಮಾಡಿ ಅಲ್ಲಿನ ಚರಂಡಿ ಸ್ವಚ್ಛತೆ ಮಾಡಿಲ್ಲದಿರುವ ಬಗ್ಗೆ ಪಿಡಿಒ ಅಮಾನತಿಗೆ ಆಗ್ರಹಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿರುವ ವಿಚಾರವಾಗಿ 7 ಬಾರಿ ಶಾಸಕರಾಗಿರುವ ಗೋಪಾಲಕೃಷ್ಣ ಅವರು ಗೌರವ ಇಲ್ಲದೆ ನನ್ನ ಬಗ್ಗೆ ಕೇವಲವಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವಂತಹ ಸಂಗತಿಯಲ್ಲ ನಮ್ಮಂತ ಯುವಕರು ಮುಂದಿನ ದಿನಗಳಲ್ಲಿ ಶಾಸಕರಾಗಬೇಕೆಂಬ ಹಂಬಲದೊಂದಿಗೆ ಕೆಲಸ ಮಾಡುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಪ್ರವಾಸ ಮಾಡಿದರೆ ಗೋಪಾಲಕೃಷ್ಣ ಅವರು ಇನ್ನಿಲ್ಲದ ರೀತಿಯಲ್ಲಿ ಪದಗಳನ್ನು ಬಳಕೆ ಮಾಡಿ ಮಾತನಾಡುವುದು ಅತ್ಯಂತ ಖಂಡನೀಯ ಎಂದು ಪ್ರಭಾಕರ ಹೇಳಿದ್ದಾರೆ.
ಹಿರಿಯ ಶಾಸಕರಾಗಿರುವ ಎನ್.ವೈ.ಗೋಪಾಲಕೃಷ್ಣ ಅವರು ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸಲಿ ಎಂದು ಪ್ರಭಾಕರ್ ಆಗ್ರಹಿಸಿದ್ದಾರೆ.