LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಣದ ಬೇಸಾಯ ಕೈಗೊಳ್ಳಿ: ಕೆ.ನಾಗಣ್ಣ ಗೌಡ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು, ಸದಸ್ಯರ ವಿವಿಧೆಡೆ ಭೇಟಿ-ಪರಿಶೀಲನೆ

ಬಳ್ಳಾರಿ : ಶಾಲೆ ಮತ್ತು ವಸತಿ ನಿಲಯಗಳಲ್ಲಿ ಗ್ರಾಮೀಣ ಭಾಗದಿಂದ ಮಕ್ಕಳು ಶಿಕ್ಷಣ ಪಡೆಯಲು ಬರುತ್ತಾರೆ. ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನೊಳಗೊಂಡ ಪೂರಕ ವಾತಾವರಣ ಕಲ್ಪಿಸಬೇಕು. ಅವರಲ್ಲಿ ಶಿಕ್ಷಣದ ಬೇಸಾಯ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ನಾಗಣ್ಣ ಗೌಡ ಅವರು ಹೇಳಿದರು.

ಅವರು, ನಗರದ ಕೋಟೆ ಪ್ರದೇಶದ ಬಾಲಕಿಯರ ವಸತಿ ನಿಲಯ, ವಿದ್ಯಾನಗರದ ನಂದ ವಸತಿ ಶಾಲೆ, ಇಂದಿರಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ತಾಳೂರು ರಸ್ತೆಯ ಬಾಲಭಾರತಿ ಕೇಂದ್ರಿಯ ವಿದ್ಯಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಸ್ಥಿತಿ-ಗತಿಗಳ ಪರಿಶೀಲನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಿ ಅವರು ಮಾತನಾಡಿದರು.



ಮಕ್ಕಳ ಉತ್ತಮ ಜೀವನ ರೂಪಿಸಿಕೊಳ್ಳಲು ವಸತಿನಿಲಯಗಳು ಪೂರಕವಾಗಿದ್ದು, ಇಲ್ಲಿ ಅವರಿಗೆ ಸ್ನೇಹಮಯಿ ವಾತವರಣ ರೂಪಿಸಬೇಕು. ಇದರಿಂದ ಅವರು ದೇಶದ ಅಡಿಪಾಯ ಆಗುತ್ತಾರೆ ಎಂದರು.

ಕೋಟೆ ಪ್ರದೇಶದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ನಿರ್ವಹಣೆಯೂ ಅಷ್ಟೇ ಸೂಕ್ತವಾಗಿರಬೇಕು. ವಸತಿನಿಲಯದಲ್ಲಿ ಸ್ವಚ್ಛತೆ, ಶೌಚಾಲಯಗಳ ಶುಚಿತ್ವ, ಗುಣಮಟ್ಟದ ಉಟೋಪಚಾರ ಮತ್ತು ಹೆಣ್ಣುಮಕ್ಕಳಿಗೆ ಅಗತ್ಯ ಸ್ಯಾನಿಟರ್ ಪ್ಯಾಡ್ಸ್ ವಿತರಣೆ ಮಾಡಬೇಕು ಎಂದು ನಿಲಯಪಾಲಕರಿಗೆ ಸೂಚಿಸಿದರು.



ವಸತಿನಿಲಯಗಳಲ್ಲಿ ಒಂದೆಡೆ ಎಲ್ಲರಿಗೂ ಗೋಚರಿಸುವಂತೆ ಗೋಡೆಯ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ನ್ನು ದೊಡ್ಡದಾಗಿ ಬರೆಸಬೇಕು. ಪೋಕ್ಸೋ ಮತ್ತು ಬಾಲ್ಯ ವಿವಾಹ ಕುರಿತಂತೆ ನೀತಿ ಶಿಕ್ಷಣ ಹೇಳಬೇಕು. ಮುಖ್ಯವಾಗಿ ಹೆಣ್ಣುಮಕ್ಕಳ ವಸತಿನಿಲಯಗಳಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಅನುತ್ತೀರ್ಣರಾದ ಮಕ್ಕಳ ಬಗ್ಗೆ ನಿಗಾವಹಿಸಬೇಕು. ಅವರು ವಿದ್ಯಾಭ್ಯಾಸ ಮುಂದುವರೆಸುತ್ತಿದ್ದಾರೆಯೇ?, ಅಥವಾ ಬಾಲ್ಯ ವಿವಾಹವಾಗಿದ್ದಾರೆಯೇ? ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಅನುತ್ತೀರ್ಣರಾಗಿದ್ದಲ್ಲಿ, ಬಾಲ್ಯವಿವಾಹ ನಡೆಯುವ ಸಾಧ್ಯತೆ ಹೆಚ್ಚು ಇರುತ್ತದೆ. ಕಠಿಣ ಎನಿಸುವ ವಿಷಯಗಳ ಕುರಿತು ಮಕ್ಕಳಿಗೆ  ಹೆಚ್ಚಿನ ಬೋಧನೆಗೆ ಶಿಕ್ಷಕರು ಮುತುವರ್ಜಿ ವಹಿಸಲು ತಿಳಿಸಬೇಕು ಎಂದರು.

ವಸತಿನಿಲಯದಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ, ಅಗತ್ಯ ಸಿಬ್ಬಂದಿ ನೇಮಕಕ್ಕಾಗಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆಯಿರಿ; ಈ ಕುರಿತು ಆಯುಕ್ತರ ಜೊತೆ ಚರ್ಚಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.



ಸರ್ಕಾರದ ನಿಯಮಗಳಡಿ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು:

ಬಳಿಕ ವಿದ್ಯಾನಗರದ ನಂದ ವಸತಿ ಶಾಲೆಗೆ ಭೇಟಿ ನೀಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ನಾಗಣ್ಣ ಗೌಡ ಅವರು ಸರ್ಕಾರವು ಕಾಲ-ಕಾಲಕ್ಕೆ ಹೊರಡಿಸುವ ಸುತ್ತೋಲೆ ನಿಯಮಗಳನ್ವಯ ಖಾಸಗಿ ಶಾಲೆಗಳು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಖಾಸಗಿ ಶಾಲೆಗಳು ಆಡಳಿತಾತ್ಮಕ, ಅಕಾಡೆಮಿ ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕಾರ್ಯನಿರ್ವಹಿಸಬೇಕು. ಶಾಲಾ ಶುಲ್ಕಗಳ ಕುರಿತು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಶುಲ್ಕಗಳ ಸುತ್ತೋಲೆಗಳನ್ನು ಹೊರಡಿಸಬೇಕು. ಇವುಗಳ ಪ್ರತಿ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಗಳಿಗೆ ನೀಡಬೇಕು. ಶುಲ್ಕ ವಸೂಲಿ ಸಂಬಂಧಿಸಂತೆ ಪೋಷಕರ ಜೊತೆ ಚರ್ಚಿಸಬೇಕು. ಮಕ್ಕಳ ಗಮನಕ್ಕೆ ತಂದು, ವಿನಾಕಾರಣ ಕಿರುಕುಳ ನೀಡಿದಲ್ಲಿ ಅದು ಅಪರಾಧವಾಗುತ್ತದೆ ಎಂದು ತಿಳಿಸಿದರು.

ಶಾಲೆಯಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಗಳಾದ 1098 ಮತ್ತು 112 ಬರೆಸಬೇಕು. ಅಹವಾಲು ಪೆಟ್ಟಿಗೆಯನ್ನು ಸಿಸಿ ಟಿವಿ ಇರುವ ಜಾಗದಲ್ಲಿ ಅಳವಡಿಸಿ ಅವರಿಗೆ ದೂರು ನೀಡಲು ಭಯ ಪಡುವ ಹಾಗೆ ಮಾಡಬಾರದು. ಬೋಧನೆಗೆ ನೇಮಿಸಿಕೊಳ್ಳುವ ಶಿಕ್ಷಕರ ಅರ್ಹತೆ, ಸೇವಾನುಭಾವ ಹಾಗೂ ಅರ್ಹತೆಗಳು ಕಡ್ಡಾಯವಾಗಿರಬೇಕು. ಮುಖ್ಯವಾಗಿ ಮಕ್ಕಳೊಂದಿಗೆ ಕಾರ್ಯನಿರ್ವಹಿಸುವ ಪ್ರತಿಯೊಬ್ಬರ ಕುರಿತು ಪೊಲೀಸ್ ಪರಿಶೀಲನೆಯಾಗಿರಬೇಕು ಎಂದು ಸೂಚಿಸಿದರು.



ಮಕ್ಕಳ ಭವಿಷ್ಯ ರೂಪುಗೊಳ್ಳುವಲ್ಲಿ ದೈಹಿಕ ಶಿಕ್ಷಣವು ಒಂದಾಗಿದ್ದು, ಶಾಲೆಗಳಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಒಂದು ಮಗು ಕನಿಷ್ಠ 45 ನಿಮಿಷಗಳ ವರೆಗೆ ಆಟಗಳಲ್ಲಿ ತೊಡಗಿಸಿಕೊಂಡರೆ ಆ ಮಗು ದೈಹಿಕ ಮತ್ತು ಮಾನಸಿಕವಾಗಿ ಸದೃಢನಾಗುತ್ತಾನೆ. ಹಾಗಾಗಿ ವಾರದಲ್ಲಿ ಕನಿಷ್ಠ 5 ತರಗತಿಗಳನ್ನು ದೈಹಿಕ ಶಿಕ್ಷಣಕ್ಕಾಗಿ ಮೀಸಲಿರಿಸಬೇಕು ಎಂದರು.

ಮುಖ್ಯವಾಗಿ ಪ್ರಾಂಶುಪಾಲರು, ಶಿಕ್ಷಕರು ಮಕ್ಕಳೊಂದಿಗೆ ಸಂವಾದ ನಡೆಸಬೇಕು. ಇದರಿಂದ ಅವರ ಅಹವಾಲುಗಳು ಬೆಳಕಿಗೆ ಬರುತ್ತವೆ. ಶಾಲೆಗಳು ಮಕ್ಕಳಿಗೆ ಸ್ನೇಹಮಯಿಯಾಗಿರಬೇಕು. ನಿಯಮಿತವಾಗಿ ಪೋಷಕರ ಸಭೆ ನಡೆಸಬೇಕು. ಶಾಲಾ ವಾಹನಗಳು ಸುಸ್ಥಿತಿಯಲ್ಲಿರಬೇಕು. ಈ ಕುರಿತು ವಾಹನ ಚಾಲಕರಿಗೆ ಸೂಕ್ತ ನಿರ್ದೇಶನ ನೀಡಬೇಕು. ಶಾಲೆ ನಡೆಸುವ ಅರ್ಹತೆ ನವೀಕರಣ ಮಾಡಿಕೊಳ್ಳುತ್ತಿರಬೇಕು. ಸಂಜೆ ವೇಳೆಯಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಗಳಿಗಾಗಿ ಕೋಚಿಂಗ್ ನಡೆಸುತ್ತಿದ್ದರೆ ಕಡ್ಡಾಯವಾಗಿ ಸರ್ಕಾರದಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿದರು.

ಬಳಿಕ ಅಧ್ಯಕ್ಷರು ಇಂದಿರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಭೇಟಿ ನೀಡಿ, ಅಲ್ಲಿನ ಶಾಲೆಯ ಮೈದಾನ ಸೂಕ್ತ ನಿರ್ವಹಣೆಗೆ ನಿರ್ದೇಶನ ನೀಡಿದರು. ಶಾಲೆಗಳನ್ನು ಪರೀಕ್ಷೆ ಮೌಲ್ಯಮಾಪನ, ಚುನಾವಣೆ ಮತ್ತು ಇತರೆ ಕಾರ್ಯಗಳಿಗಾಗಿ ಬಳಸಿಕೊಂಡಾಗ, ಮೂಲ ಸ್ಥಿತಿಯಲ್ಲಿದ್ದಂತೆಯೇ ಇರಬೇಕು ಎಂದು ಅವರಿಗೆ ತಿಳಿಸಬೇಕು, ಇದರಿಂದ ಶಾಲೆಗಳು ಅಂದಗೆಡುವುದಿಲ್ಲ ಮತ್ತು ಯಾವುದೇ ಶಾಲಾ ವಸ್ತುಗಳು ಹಾನಿಯಾಗುವುದಿಲ್ಲ ಎಂದರು.



ಶಾಲೆಯಲ್ಲಿ ನಲಿ-ಕಲಿ ಕಲಿಕೆಯು ಗುಣಮಟ್ಟದ್ದಾಗಿದ್ದು, ಇನ್ನೂ ಹೆಚ್ಚಿನ ಮಕ್ಕಳನ್ನು ಶಾಲೆಗೆ ದಾಖಲಿಸಲು ಕ್ರಮವಹಿಸಬೇಕು. ಈ ಕುರಿತು ಹತ್ತಿರದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವಂತೆ ಸಮನ್ವಯತೆ ಕೈಗೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ಶಾಲೆಯ ‘ನಲಿ-ಕಲಿ’ ತರಗತಿಯೊಂದರ ಮಕ್ಕಳು ‘ನಲಿಯೋಣ ಬಾ-ಕಲಿಯೋಣ ಬಾ’ ಎಂಬ ಗೀತೆಯನ್ನು ನೃತ್ಯದ ಮುಖಾಂತರ ಪ್ರಸ್ತುತಪಡಿಸಿದ್ದಕ್ಕೆ ಅಧ್ಯಕ್ಷ ಕೆ.ನಾಗಣ್ಣ ಗೌಡ ಅವರು ಮಕ್ಕಳನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕರಾದ ಮಮತಾ, ವಸತಿ ನಿಲಯಪಾಲಕರಾದ ಉಷಾಕುಮಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಎಳೆನಾಗಪ್ಪ, ಬಿಇಒ ಸಿದ್ಧಲಿಂಗಮೂರ್ತಿ, ಸಿಆರ್‌ಪಿ ಸಿದ್ದಪ್ಪ, ನಂದ ವಸತಿ ಶಾಲೆಯ ಪ್ರಾಂಶುಪಾಲರಾದ ಸರೀತಾ, ಇಂದಿರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮುಖ್ಯಗುರುಗಳಾದ ಕಣುಮಕ್ಕ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST