ನಂದಿಹಳ್ಳಿ (ಸಂಡೂರು) : “ಕನ್ನಡ ಲಿಪಿಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ” ಎಂದು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ, ಡಾ. ಸಿದ್ದಲಿಂಗಮ್ಮ ಬಿ.ಜಿ. ಅವರು ಹೇಳಿದ್ದಾರೆ.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ-ಸಂಡೂರು ಸ್ನಾತಕೋತ್ತರ ಕೇಂದ್ರದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ನಂದಿಹಳ್ಳಿ ಅಲ್ಯುಮ್ನಿ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ್ದ "ಕನ್ನಡ ಲಿಪಿ ವಿಕಾಸ: ಮೌರ್ಯರಿಂದ ಮೈಸೂರಿನ ಒಡೆಯರವರೆಗೆ" ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

“ಕನ್ನಡವು ಬ್ರಾಹ್ಮೀ ಲಿಪಿಯಿಂದ ವಿಕಾಸಗೊಂಡರೂ, ಕಾಲಕ್ರಮೇಣ ತನ್ನದೇ ಆದ ಸ್ವತಂತ್ರ ಶೈಲಿ, ಅಕ್ಷರರೂಪ ಹಾಗೂ ವ್ಯಾಕರಣದ ಗುಣಲಕ್ಷಣಗಳನ್ನು ಅಳವಡಿಸಿಕೊಂಡು, ಒಂದು ವಿಶಿಷ್ಟ ಲಿಪಿಯಾಗಿ ರೂಪುಗೊಂಡಿದೆ,” ಎಂದು ಡಾ. ಸಿದ್ದಲಿಂಗಮ್ಮ ಬಿ.ಜಿ. ಅವರು ತಮ್ಮ ಉಪನ್ಯಾಸದಲ್ಲಿ ವಿವರಿಸಿದರು.
“ಮೌರ್ಯರ ಕಾಲದಿಂದಲೇ ಕನ್ನಡ ಭಾಷೆಯ ಅಸ್ತಿತ್ವ ಕಂಡುಬರುತ್ತದೆ. ಆದರೆ ಲಿಪಿಯ ರೂಪದಲ್ಲಿನ ಪ್ರಥಮ ದಾಖಲೆಗಳು ಐದನೇ ಶತಮಾನದಿಂದಲೇ ಲಭ್ಯವಿವೆ. ಕದಂಬರು, ಗಂಗರು, ಚಾಲುಕ್ಯರು ಮೊದಲಾದ ರಾಜ್ಯವ್ಯವಸ್ಥೆಗಳು ಕನ್ನಡ ಲಿಪಿಯನ್ನು ಆಡಳಿತ ಭಾಷೆಯಾಗಿ ಬಳಸಿದ್ದು, ಅದರಿಂದ ಲಿಪಿಯ ಬಳಕೆ ಮತ್ತಷ್ಟು ವ್ಯವಸ್ಥಿತವಾಗಿ ವೃದ್ಧಿಯಾಯಿತು,” ಎಂದರು.
“ಲಿಪಿಯು ಕೇವಲ ಬರವಣಿಗೆಯ ಸಾಧನವಷ್ಟೇ ಅಲ್ಲ, ಇದು ನಾಡಿನ ಸಂಸ್ಕೃತಿ, ಪರಂಪರೆ, ಧಾರ್ಮಿಕತೆ, ಹಾಗೂ ಆಡಳಿತವನ್ನು ಪೂರೈಸಿದ ಜೀವಂತ ಸಾಕ್ಷ್ಯವಾಗಿದೆ” ಎಂದು ಅವರು ತಮ್ಮ ಮಾತುಗಳಲ್ಲಿ ಉಲ್ಲೇಖಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ರವಿ ಬಿ. ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, “ಇಂತಹ ಶೈಕ್ಷಣಿಕ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಸಂಶೋಧನೆಗೆ ಪ್ರೇರಣೆ ನೀಡುತ್ತವೆ,”ಎಂದು ಅಭಿಪ್ರಾಯಪಟ್ಟರು.
ಖನಿಜ ಸಂಸ್ಕರಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎಸ್.ಎಂ. ಶಶಿಧರ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, "ಕುಮುದೇಂದು ಮುನಿಯ ಸಿರಿಭೂವಲಯ ಕೃತಿಯಲ್ಲಿ ಅಕ್ಷರಗಳನ್ನು ಅಂಕಿಗಳ ರೂಪದಲ್ಲಿ ಬರೆಯುವ ಕೋಡಿಂಗ್ -ಡೀಕೋಡಿಂಗ್ ಪದ್ಧತಿ ಬಳಸಲಾಗಿದೆ. ಇದು ಕನ್ನಡ ಭಾಷೆಯ ಹೆಗ್ಗಳಿಕೆ. ಭಾಷೆಯ ಇತಿಹಾಸವೆಂದರೆ ಜನರ ಜಾನಪದವೂ, ಸಂಸ್ಕೃತಿಯ ಸಾರವೂ ಆಗಿದೆ" ಎಂದರು. ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಂಯೋಜಕರಾದ ಡಾ. ನಾಯಕರ ಹೊನ್ನೂರ್‌ಸ್ವಾಮಿ, ಲಿಪಿಯ ಚರಿತ್ರೆಯನ್ನು ಹೊಸ ದೃಷ್ಟಿಕೋನದಲ್ಲಿ ಪರಿಶೀಲಿಸುವ ಅಗತ್ಯತೆಯನ್ನು ಉಲ್ಲೇಖಿಸಿದರು.
ಈ ಉಪನ್ಯಾಸದಲ್ಲಿ ಇತಿಹಾಸ ವಿಭಾಗದ ಉಪನ್ಯಾಸಕರಾದ ಡಾ. ನರಸಿಂಹಮೂರ್ತಿ ಟಿ.ಎನ್., ಡಾ. ವಿರೂಪಾಕ್ಷಪ್ಪ ಎಂ., ರಮೇಶ ರಾಯಚೂರ್ ಹಾಗೂ ಕೇಂದ್ರದ ಕ್ರೀಡಾ ನಿರ್ದೇಶಕ ಶಿವರಾಮ ರಾಗಿ ಅವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಡಾ. ಸಿದ್ದಲಿಂಗಮ್ಮ ಬಿ.ಜಿ. ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.