LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಲ್ಲೆ ಶಿವೋತ್ತಮರಾವ್ ಡಿ.ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆ

ಬೆಂಗಳೂರು: ರಾಜ್ಯ ಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿ ಆಯ್ಕೆ ಸಮಿತಿಯು ೨೦೨೫-೨೬ ನೇ ಸಾಲಿಗೆ ಉಡುಪಿಯ ಕಲ್ಲೆ ಶಿವೋತ್ತಮರಾವ್ ಅವರನ್ನು ಆಯ್ಕೆ ಮಾಡಿದೆ.

ಡಿ.ದೇವರಾಜ ಅರಸುರವರ ತಮ್ಮ ಸಿದ್ಧಾಂತ ಆದರ್ಶಗಳನ್ನು ಮೈಗೂಡಿಸಿಕೊಂಡು, ಅವುಗಳನ್ನು ಅನುಷ್ಠಾನಕ್ಕೆ ತರಲು ಶ್ರಮಿಸುತ್ತಿರುವ ಕಲ್ಲೆ ಶಿವೋತ್ತಮ ರಾವ್ ಜೀವಮಾನವಿಡೀ ಶ್ರಮಿಸುತ್ತಿದ್ದರೆ. ಹೀಗಾಗಿ ಇವರ ಹೆಸರನ್ನು ೨೦೨೫-೨೬ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗಾಗಿ ಸರ್ವಾನುಮತದಿಂದ ಆಯ್ಕೆ ಮಾಡಿ ಪ್ರಶಸ್ತಿಯನ್ನು ನೀಡುವ ಬಗ್ಗೆ ಡಾ.ಸಿ.ಎಸ್.ದ್ವಾರಕಾನಾಥ್ ಅಧ್ಯಕ್ಷತೆಯ ಸಮಿತಿಯು ಸರ್ಕಾರದ ಆದೇಶ ಹೊರಡಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಲ್ಲೆ ಶಿವೋತ್ತಮರಾವ್ ಅವರ ಹೆಸರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕೃತವಾಗಿ ಘೋಷಣೆ ಮಾಡಿದೆ.

ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಶಾಕಿರಣವಾಗಿ, ಸಾಮಾನ್ಯ ನ್ಯಾಯದ ಪ್ರತಿಪಾದಕರಾಗಿ, ನೊಂದವರ ಬದುಕಿಗೆ ಹೊಸ ಚೇತನ ನೀಡಿ, ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು, ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿ `ಗಾಗಿ ಶ್ರಮಿಸಿದ ಮಹಾನ್ ಚೇತನ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ ಹೆಸರಿನಲ್ಲಿ ಕರ್ನಾಟಕ ಸರ್ಕಾರವು ಪ್ರತಿಷ್ಠಾಪಿಸಿರುವ ರಾಜ್ಯ ಮಟ್ಟದ ಪ್ರಶಸ್ತಿಗೆ ಕಲ್ಲೆ ಶಿವೋತ್ತಮರಾವ್‌ರವರು ಆಯ್ಕೆಯಾಗಿದ್ದಾರೆ.



ಯಾರಿವರು?

ಕಲ್ಲೆ ಶಿವೋತ್ತಮರಾವ್ ಇವರು 1929ರಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜನಿಸಿದರು. ಇವರ ಮಾತೃ ಭಾಷೆ ತುಳು. ಇವರು ಚಿಕ್ಕವರಿದ್ದಾಗ ಆಟದಲ್ಲಿ ಅಂತಹ ಆಸಕ್ತಿ ಇರಲಿಲ್ಲ. ಆಟದ ಸಮಯದಲ್ಲಿ, ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿದ್ದ ಅಪ್ಪನ ಲೈಬ್ರರಿಯಲ್ಲಿದ್ದ ಪುಸ್ತಕಗಳನ್ನೆಲ್ಲ ಪಾಠದಂತೆ ಓದಿ, ಮಹಾಭಾರತ, ರಾಮಾಯಣ, ಭಗವದ್ಗೀತೆಗಳನ್ನು ಬಾಯಿಪಾಠ ಮಾಡಿದ್ದರು. 14ನೇ ವಯಸ್ಸಿಗೆ ಮಂಗಳೂರಿನ ಕುಡವರ `ನವಭಾರತ' ಎಂಬ ದೈನಿಕಕ್ಕೆ ವರದಿಗಾರರಾಗಿ ಕೆಲಸಕ್ಕೆ ಸೇರಿದರು. ಆನಂತರ ಕಡಂಗೋಡ್ಲು ಶಂಕರಭಟ್ಟರ `ರಾಷ್ಟ್ರ ಬಂಧು' ವಾರಪತ್ರಿಕೆಗೆ ಸೇರಿ, ರಾಷ್ಟ್ರ ಮತ' ದಲ್ಲಿ ಸ್ವಲ್ಪ ದಿನವಿದ್ದು ಅಲ್ಲಿಂದ ನೇರವಾಗಿ ಬೆಂಗಳೂರಿನ ಬಿ.ಎನ್.ಗುಪ್ತರ `ಜನಪುಗತಿ' ಪತ್ರಿಕೆಗೆ ಬಂದರು. ಅಲ್ಲಿ 14 ವರ್ಷಗಳ ಕಾಲ, ಕಾರ್ಯನಿರ್ವಾಹಕ ಸಂಪಾದಕರಾಗಿ, ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ನಂತರ ಪ್ರಜಾವಾಣಿ ಮತ್ತು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ತಲಾ ಮೂರು ವರ್ಷ ಸೇವೆ ಸಲ್ಲಿಸಿದರು. `ಎನ್‌ಲೈಟ್' ಎಂಬ ಇಂಗ್ಲಿಷ್ ವಾರಪತ್ರಿಕೆಗೂ ಬರೆದರು. ಇವರು ಜೆಪಿ, ಲೋಹಿಯಾರ ಸಮಾಜವಾದ; ಎಡಪಂಥೀಯ ವಿಚಾರಧಾರೆಯನ್ನು ಒಪ್ಪಿದವರು.

ಚಿಂತನಾರ್ಹ ವಿಶ್ಲೇಷಣೆ:

ಅಂದು ತಾಯಿನಾಡು, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ ದೈನಿಕಗಳು ಮತ್ತು ಜನಪಗತಿ, ಕಂಠೀರವ ಎಂಬ ವಾರಪತ್ರಿಕೆಗಳು, ಜನಪ್ರಗತಿ ವಾರಪತ್ರಿಕೆಯಲ್ಲಿ ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸುವ, ಓದುಗರನ್ನು ಜಾಗೃತರನ್ನಾಗಿಸುವ ಅಗ್ರ ಲೇಖನಗಳು ಪ್ರಕಟವಾಗುತ್ತಿದ್ದ ಕಾರಣ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಪತ್ರಿಕೆಯ ಸಂಪಾದಕರಾಗಿದ್ದ ಕಲ್ಲೆ ಶಿವೋತ್ತಮ ರಾಯರು ಪ್ರಬುದ್ಧ, ಚಿಂತನಾರ್ಹ ರಾಜಕೀಯ ವಿಶ್ಲೇಷಣೆಗೆ ಹೆಸರಾಗಿದ್ದರು.

ಪೆರಿಯಾರ್ ಚಳುವಳಿ ಪ್ರತಿಪಾದಕರು:

ಹಾವನೂರು ಆಯೋಗ ರಚನೆ ಪೂರ್ವದಲ್ಲಿಯೇ ಹಿಂದುಳಿದ ವರ್ಗಗಳ ಬಗ್ಗೆ, ಜಾಗೃತಿ ಮೂಡಿಸಲು ಶ್ರಮಿಸಿದವರು, ಪೆರಿಯಾರ್ ಚಳುವಳಿಯ ಪ್ರತಿಪಾದಕರು, ಡಿ. ದೇವರಾಜ ಅರಸು ಅವರಿಗಿಂತ ಮೊದಲೇ ಹಿಂದುಳಿದ ವರ್ಗಗಳ ಸಮುದಾಯದ ಯುವಕರಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಮೂಡಿಸಲು ಶ್ರಮಿಸಿದ್ದ ವ್ಯಕ್ತಿ. `ಜನಪ್ರಗತಿ' ಪತ್ರಿಕೆಯ ಸಂಪಾದಕರಾಗಿ ನೂರಾರು ಯುವಕರನ್ನು ಬರವಣಿಗೆ ಕ್ಷೇತ್ರಕ್ಕೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಗೆ ಬದ್ಧರಾಗಿದ್ದ ಶಿವೋತ್ತಮರಾಯರು ಪತ್ರಿಕೋದ್ಯಮದ ಮೌಲ್ಯವನ್ನು ಹೆಚ್ಚಿಸಿದವರಲ್ಲಿ ಪ್ರಮುಖರಾಗಿದ್ದರು. ಅಧಿಕಾರಸ್ಥರಿಂದ ಸಮಾನ ಅಂತರವನ್ನು ಕಾಯ್ದು ಕೊಂಡು, ಪತ್ರಿಕೋದ್ಯಮಕ್ಕೆ ಬೆಲೆ ತಂದವರು.

ನೊಂದವರ ನಂದಾದೀಪ:

ನೊAದವರ ನಂದಾದೀಪ, ಶೋಷಿತರ ಸಮಗ್ರ ಅಭಿವೃಧಿಯ ಹರಿಕಾರ ಡಿ ದೇವರಾಜ ಅರಸು ರವರ ಚಿಂತನೆ, ಆದರ್ಶ ತತ್ವಗಳಿಗೆ ಧ್ವನಿಯಾಗಿ, ಸಮಾಜವಾದಿ ವಿಚಾರಗಳನ್ನು ಮೈಗೂಡಿಸಿಕೊಂಡು ಜಾತ್ಯಾತೀತತೆ ತತ್ವದಲ್ಲಿ ನಂಬಿಕೆ ಇರಿಸಿ, ಸಾಮಾಜಿಕ ನ್ಯಾಯದ ಪರವಾಗಿ ಕಾರ್ಯನಿರ್ವಹಿಸುತ್ತಾ, ಧಮನಿತರ ಪರವಾದ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಕಲ್ಲೆ ಶಿವೋತ್ತಮರಾವ್ ಇವರನ್ನು ಕರ್ನಾಟಕ ರಾಜ್ಯ ಸರ್ಕಾರವು ಗುರುತಿಸಿ, ಗೌರವಿಸಿ ೨೦೨೫ನೇ ಸಾಲಿನ ಪ್ರತಿಷ್ಠಿತ `ಡಿ.ದೇವರಾಜ ಅರಸು ಪ್ರಶಸ್ತಿ' ಯನ್ನು ನೀಡುತ್ತಿದೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST