LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಆಂಜನೇಯ

ಮಾದಿಗರ ಹಾದಿ ತಪ್ಪಿಸುವ ಷಡ್ಯಂತ್ರ

 ಕೆಲವರಿಂದ ಅನಗತ್ಯ ಹೋರಾಟ

ಚಿತ್ರದುರ್ಗ : ಒಳಮೀಸಲಾತಿ ವರದಿ ಸರ್ಕಾರದ ಕೈಗೆ ಇದೇ ವಾರದಲ್ಲಿ ಕೈಸೇರಲಿದ್ದು, ಮುಂದಿನ 15 ದಿನದೊಳಗೆ ಒಳಮೀಸಲಾತಿ ಜಾರಿಯಾಗಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲಾತಿ ಸಂಬಂಧ 35 ವರ್ಷ ಹೋರಾಟವನ್ನು ಮಾದಿಗ ಸಮುದಾಯ, ದಸಂಸ ನಡೆಸಿವೆ. ಜೊತೆಗೆ ಕಾಂಗ್ರೆಸ್ ಪಕ್ಷ ಒಳಮೀಸಲಾತಿ ಜಾರಿಗೆ ಕಾಲಕಾಲಕ್ಕೆ ತನ್ನ ಬದ್ಧತೆ ಪ್ರದರ್ಶಿಸಿದೆ ಎಂದರು.

ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗವನ್ನು ನೇಮಿಸಿತು. ಇದೇ ಸಂದರ್ಭದಲ್ಲಿ ಆಂಧ್ರದಲ್ಲಿ ಜಾರಿಗೊಂಡಿದ್ದ ಒಳಮೀಸಲಾತಿಗೆ ಸುಪ್ರೀಂ ಕೋರ್ಟ್ ತಡೆ ಹಾಕಿತು. ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಒಳಮೀಸಲಾತಿ ಜಾರಿಗೊಳಿಸುವ ನಡೆಯಿಂದ ಹಿಂದೆ ಸರಿಯಲಿಲ್ಲ ಎಂದು ಹೇಳಿದರು.

ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿದೆ ಎಂಬಮಹತ್ವದ ತೀರ್ಪನ್ನು ಆ.1, 2024ರಂದು ಸುಪ್ರೀಂ ಕೋರ್ಟ್ ನೀಡಿದ ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗಾಗಿ ವೈಜ್ಞಾನಿಕ ಹೆಜ್ಜೆಯನ್ನಿಟ್ಟಿದ್ದಾರೆ ಎಂದರು.



ಉದ್ಯೋಗ ನೇಮಕಾತಿಗೆ ತಡೆ ಹಾಕಿದ್ದಾರೆ, ಜೊತೆಗೆ ರಾಜ್ಯದಲ್ಲಿ ಎಕೆ, ಎಡಿ, ಆದಿಆಂಧ್ರ ಹೆಸರಲ್ಲಿ ಮಾದಿಗ, ಛಲವಾದಿ ಸಮುದಾಯದವರು ಪ್ರಮಾಣ ಪತ್ರ ಪಡೆದು ಗೊಂದಲಕ್ಕೆ ಕಾರಣರಾಗಿದ್ದಾರೆ. ಇವರ ಜನಸಂಖ್ಯೆ ಹಾಗೂ ಹಿಂದುಳಿಯುವಿಕೆ ಗುರುತಿಸಲು ನ್ಯಾ.ನಾಗಮೋಹನ್ ದಾಸ್ ಆಯೋಗ ನೇತೃತ್ವದಲ್ಲಿ ಜಾತಿಗಣತಿ ಸಮೀಕ್ಷೆಯನ್ನು ಜೂ.5ರಿಂದ ಜು.6ರ ವರೆಗೆ ನಡೆಸಲಾಗಿದೆ. ಇನ್ನೇನು ವರದಿ ಸಿದ್ಧವಾಗುತ್ತಿದ್ದು, ನಾಲ್ಕೈದು ದಿನಗಳಲ್ಲಿ ವರದಿ ಸರ್ಕಾರದ ಕೈ ಸೇರಲಿದೆ ಎಂದರು.

ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ದಿನಗಣನೆ ಆರಂಭಾಗಿದೆ. ಇಂತಹ ಸಂದರ್ಭ ಕೆಲವರು ಆತಂಕಕ್ಕೆ ಒಳಗಾಗಿ ರಾಜ್ಯದಲ್ಲಿ ಗೊಂದಲ ಹುಟ್ಟುಹಾಕಲು ಹೋರಾಟ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಎತ್ತುವಳಿಗೆ ನಿಂತಿದ್ದಾರೆ ಎಂದು ದೂರಿದರು.

ಒಳಮೀಸಲಾತಿ ಜಾರಿಯಿಂದ ಮಾದಿಗ, ಛಲವಾದಿ, ಲಂಬಾಣಿ, ಭೋವಿ, ಕೊರಚ, ಕೊರಮ ಸೇರಿ ಪರಿಶಿಷ್ಟ ಗುಂಪಿನಲ್ಲಿರುವ 101 ಜಾತಿ ಜನರು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದತ್ತ ಅಭಿಮಾನ ಹೊಂದಲಿದ್ದಾರೆ. ಈ ಸತ್ಯ ಅರಿತು ಭೀತಿಗೆ ಒಳಗಾಗಿ ಅನಗತ್ಯ ಚಳವಳಿ ನಡೆಸಲಾಗುತ್ತಿದೆ ಎಂದು ಬೇಸರಿಸಿದರು.

ಎಷ್ಟೇ ಚಳವಳಿ, ಹೋರಾಟ ಏನೆ ನಡೆಸಲಿ, ಒಳಮೀಸಲಾತಿ ನಮಗೆ ಬೇಡ ಎಂದೂ ಕೂಗು ಹಾಕಿದರೂ ಕೂಡ ತನ್ನ ಬದ್ಧತೆಯಿಂದ ಹಿಂದೆ ಸರಿಯುವುದಿಲ್ಲ.ಶೀಘ್ರದಲ್ಲಿಯೇ ಒಳಮೀಸಲಾತಿ ನೀಡಲಾಗುವುದು ಎಂದು ಸಿದ್ದರಾಮಯ್ಯ ಅನೇಕ ಬಾರಿ ಹೇಳಿದ್ದಾರೆ. ಅವರನ್ನು ಮುಜುಗರಕ್ಕೆ ತಳ್ಳಲು ಇಂತಹ ದುಷ್ಕಂತ್ರ್ಯಗಳು ನಡೆಯುತ್ತಿವೆ. ಅದರಲ್ಲೂ ಮುಗ್ಧ ಮಾದಿಗ ಸಮುದಾಯವನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.



ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಒಳಮೀಸಲಾತಿ ಜಾರಿಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಆದರೆ, ಮೊದಲ ಸಚಿವ ಸಂಪುಟದಲ್ಲಿಯೇ ಒಪ್ಪಿಗೆ ನೀಡಿ ಜಾರಿಗೊಳಿಸುತ್ತೇವೆ ಎಂದು ಹೇಳಿಲ್ಲ. ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲದ ಮೇಲೆ ಹೇಗೆ ಸಾಧ್ಯ. ಆದರೂ ಸರ್ಕಾರದ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.

ಗೋವಿಂದ ಕಾರಜೋಳ ಉಪಮುಖ್ಯಮಂತ್ರಿ, ಎ.ನಾರಾಯಣಸ್ವಾಮಿ ಕೇಂದ್ರ ಸಚಿವರಾಗಿದ್ದ ಸಂದರ್ಭ ಅವರು ಈ ಸಂಬಂಧ ಸಣ್ಣ ಪ್ರಯತ್ನ ನಡೆಸಲಿಲ್ಲ. ತಮ್ಮದೇ ಸರ್ಕಾರ ಕೇಂದ್ರ-ರಾಜ್ಯದಲ್ಲಿದ್ದ ಸಂದರ್ಭದಲ್ಲಿ ಏಕೆ ಧ್ವನಿಯೆತ್ತಲಿಲ್ಲ ಎಂಬುದನ್ನು ಅವರೇ ಹೇಳಬೇಕು ಎಂದು ತಿಳಿಸಿದರು.

ಕಳೆದ 35 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿದವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಡೆ ಕೈಗೊಳ್ಳುತ್ತಿರುವ ಕಾರ್ಯಕ್ಕೆ ಮೆಚ್ಚಿ ಮೌನವಹಿಸಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ತೀರ್ಪು ಬಳಿಕ ರಾಜ್ಯದಲ್ಲಿ ದಿಢೀರ್ ಹೋರಾಟಗಾರರು ಹುಟ್ಟಿಕೊಂಡಿದ್ದಾರೆ. ಅಂತಹವರ ಕೂಗಿಗೆ ಮಾದಿಗರು ಮನ್ನಣೆ ಹಾಕುವುದಿಲ್ಲ ಎಂದರು.

ಜಾತಿಗಣತಿ ಸಮೀಕ್ಷೆ ವೇಳೆ ಹಟ್ಟಿ, ಕಾಲೋನಿಗಳಿಗೆ ಹೋಗಿ ಜಾಗೃತಿ ಮೂಡಿಸದವರು ಈಗ ಇದ್ದಕ್ಕಿದ್ದಂತೆ ಹೋರಾಟ ನಡೆಸುತ್ತಿರುವುದು ನಗೆಪಾಟಿಲು ಆಗಿದೆ. ಇಂತಹ ನಡೆಯನ್ನು ಜನ ಗಮನಿಸುತ್ತಾರೆ ಎಂದು ಹೇಳಿದರು.

ನಾನು ಸೇರಿ ಎಲ್ಲರೂ ಒಳಮೀಸಲಾತಿಗಾಗಿ ಪ್ರಾಮಾಣಿಕವಾಗಿ ಚಳವಳಿ ನಡೆಸಿದವರನ್ನು ಗೌರವಿಸುತ್ತೇವೆ. ಆದರೆ, ನಕಲಿಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಯಾರೇ ಏನೇ ಹೇಳಲಿ ಒಳಮೀಸಲಾತಿ ಜಾರಿಯ ಫಲ 35 ವರ್ಷ ಹೋರಾಟ ಮಾಡಿದ ಚಳವಳಿಗಾರರು ಹಾಗೂ ಒಳಮೀಸಲಾತಿ ಜಾರಿಗೊಳಿಸುವ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಸಲ್ಲಲಿದೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜು, ಶಂಕರ್, ವಕೀಲರಾದ ಶರಣಪ್ಪ, ರವೀಂದ್ರ, ಅನಿಲ್ ಕೋಟಿ, ವಿಜಯಕುಮಾರ್ ಇತರರಿದ್ದರು.

ಉದ್ಯೋಗ ನೇಮಕಾತಿಗೆ ತಡೆವೊಡ್ಡಿರುವುದರಿಂದ ಬಹಳಷ್ಟು ಮಂದಿ ವಯೋಮೀತಿಮೀರಲಿದ್ದಾರೆ. ಆದ್ದರಿಂದ ಒಳಮೀಸಲಾತಿ ಜಾರಿ ಬಳಿಕ ನೇಮಕಾತಿ ಮಾಡಿಕೊಳ್ಳುವ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಒಂದು ವರ್ಷ ವಯೋಮಿತಿ ಸಡಿಲಗೊಳಿಸಬೇಕು.


ಎಚ್.ಆಂಜನೇಯ, ಮಾಜಿ ಸಚಿವ


Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST