ನಾಯಕನಹಟ್ಟಿ : ಒಳಮೀಸಲಾತಿ ಜಾರಿ ಇಲ್ಲದೆ 56,432 ಹುದ್ದೆಗಳಿಗೆ ನೇಮಕಾತಿ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಮಾದಿಗ ಸಮುದಾಯಕ್ಕೆ ಅನ್ಯಾಯ ಎಸಗುತ್ತಿದೆ ಎಂದು ಬಿಜೆಪಿ ಮುಖಂಡ ಬೇಡರೆಡ್ಡಿಹಳ್ಳಿ ರಮೇಶ್ ಆಕ್ರೋಶ ಹೊರ ಹಾಕಿದರು.
ಪಟ್ಟಣದ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು ರಾಜ್ಯ ಸರ್ಕಾರ ಒಳಮೀಸಲಾತಿ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಒಳಮೀಸಲಾತಿ ಜಾರಿ ಮಾಡದೆ ಕಾಂಗ್ರೆಸ್ ಸರ್ಕಾರ ನಾಟಕವಾಡುತ್ತಿದೆ ಎಂದು ಆರೋಪಿಸಿದರು.
ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಮ್ ಕೋರ್ಟ್ 2024ರ ಆಗಸ್ಟ್ನಲ್ಲಿಯೇ ಆದೇಶ ನೀಡಿದೆ. ಕಾಂಗ್ರೆಸ್ ಸರ್ಕಾರ ಯಾರ ಒತ್ತಡಕ್ಕೆ ಮಣಿದು ಒಳಮೀಸಲಾತಿ ಜಾರಿ ಮಾಡದೆ ಕುತಂತ್ರ ನಾಟಕವಾಡುತ್ತಿದೆ. ಬಾಗಲಕೋಟೆ ಮತ್ತು ದಾವಣಗೆರೆ ರಾಜ್ಯ ಉಪಚುನಾವಣೆಯಲ್ಲಿ ಒಳಮೀಸಲಾತಿ ಜಾರಿ ಮಾಡದೆ ಹೋದರೆ ಮಾದಿಗ ಸಮುದಾಯದವರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಿಕ್ಕೆ ಬಂದರೆ ಮೊದಲ ಅದಿವೇಶನದಲ್ಲಿಯೇ ಒಳಮೀಸಲಾತಿ ಜಾರಿ ಮಾಡುವ ಭರವಸೆಯನ್ನು ನೀಡಲಾಗಿತ್ತು. ಆದರೆ 3 ವರ್ಷ ಆಗುತ್ತ ಬಂದರು ಇದನ್ನು ಪ್ರಾಮಾಣಿಕವಾಗಿ ಜಾರಿಗೊಳಿಸದೆ ಮಾದಿಗ ಸಮುದಾಯಕ್ಕೆ ಮೋಸ ಮಾಡುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಆರಂಭದಿAದಲೂ ಒಳಮೀಸಲಾತಿ ಜಾರಿಗೆ ವಿರೋಧಿಸುತ್ತಲೆ ಬಂದಿದ್ದಾರೆ. ಇದಕ್ಕೆ ವಿಶೇಷ ಸಚಿವ ಸಂಪುಟ ಸಭೆ ಕರೆದು ದೀರ್ಘ ಚರ್ಚೆಯ ಅಗತ್ಯವು ಇಲ್ಲ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ ಎಂದು ನೆಪ ಹೇಳಿ ವಿಳಂಭ ಮಾಡುವ ಮೊದಲು ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.