LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಲೆಮಾರಿಗಳಿಗೆ ಮತ್ತೆ ಅನ್ಯಾಯ - ಡಿ.ರಂಗಯ್ಯ ಆತಂಕ

ಬಳ್ಳಾರಿ: ಜಸ್ಟೀಸ್ ನಾಗಮೋಹನ್ ದಾಸ್ ಅವರ ವರದಿಯನ್ವಯ ಅತಿ ಸೂಕ್ಷ್ಮ  ಸಮುದಾಯಗಳಿಗೆ ರಾಜ್ಯ ಸರ್ಕಾರ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಬೇಕಿತ್ತು. ಬದಲಾಗಿ ಪರಿಶಿಷ್ಟ ಜಾತಿಯ ಸಿ ವರ್ಗದ ಬಲಾಢ್ಯ ಸಮುದಾಯಗಳೊಂದಿಗೆ ಅತಿ ಸೂಕ್ಷ್ಮ  ಸಮುದಾಯಗಳನ್ನು ಸೇರ್ಪಡೆ ಮಾಡಿ ಒಳ ಮೀಸಲಾತಿ ಜಾರಿಗೊಳಿಸಿದ್ದಾರೆ. ಇದರಿಂದಾಗಿ ಅಲೆಮಾರಿ ಸಮುದಾಯಗಳು ಮತ್ತೆ ಅನ್ಯಾಯಕ್ಕೊಳಗಾಗಬೇಕಾಗಿದೆ ಎಂದು ಎಸ್.ಸಿ., ಎಸ್.ಟಿ., ಅಲೆಮಾರಿ ಬುಡಕಟ್ಟು ಮಹಾಸಭಾ ಮತ್ತು ಜಿಲ್ಲಾ ಚನ್ನದಾಸರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ರಂಗಯ್ಯ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಎಸ್.ಸಿ., ವಿಭಾಗದ 51 ಸಮುದಾಯಗಳು, ಎಸ್.ಟಿ., ವಿಭಾಗದ 23 ಸಮುದಾಯಗಳು ಎಲ್ಲ ಸೇರಿ 74 ಸಮುದಾಯಗಳ ಕೋಶ ರಚನೆ ಮಾಡಿದ್ದರು. 150 ಕೋಟಿ ರೂ. ಹಣವನ್ನು ಮೀಸಲಿರಿಸಿ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಸಣ್ಣ ಸಮುದಾಯಗಳ ಸಬಲೀಕರಣಕ್ಕೆ ಉದ್ದೇಶಿಸಿದ್ದರು. ಈಗ ಸಿ ಗುಂಪಿನ ಸಮುದಾಯಗಳೊಂದಿಗೆ ಎಸ್.ಸಿ., ಎಸ್.ಟಿ., ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳನ್ನು ಸೇರ್ಪಡೆ ಮಾಡಿರುವುದರಿಂದ ಈ ಸಮುದಾಯಗಳಿಗೆ ಸರ್ಕಾರದ ಯಾವುದೇ ಯೋಜನೆಗಳು ಲಭಿಸುವುದು ಕಷ್ಟವಾಗುತ್ತದೆ. ಇವರಿಗೆ ಸಿಗುವ ಸೌಲಭ್ಯಗಳೂ ಶೂನ್ಯವಾಗಲಿವೆ ಎಂದು ಡಿ.ರಂಗಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.



ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಹರಿಕಾರರೆನ್ನುವುದರಲ್ಲಿ ಎರಡು ಮಾತಿಲ್ಲ. ಜಸ್ಟೀಸ್ ನಾಗಮೋಹನ್ ದಾಸ್ ಅವರು ಎಸ್.ಸಿಯಲ್ಲಿ ಬರುವ 101 ಸಮುದಾಯಗಳನ್ನು ಐದು ವರ್ಗ ಮಾಡಿ ವಿಂಗಡಿಸಿದ್ದರು. ಇದೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಈಗ ಆ.19 ರಂದು ಜಾರಿಗೊಳಿಸಿದ ಒಳ ಮೀಸಲಾತಿಯಲ್ಲಿ ಎ,ಬಿ.ಸಿ. ಗುಂಪುಗಳನ್ನು ಮಾಡಿ ಎಸ್.ಸಿ., ಎಸ್.ಟಿ., ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಸಿ ಗುಂಪಿನಲ್ಲಿ ಸೇರ್ಪಡೆಗೊಳಿಸಿದ್ದಾರೆ. ಸಿ ಗುಂಪಿನಲ್ಲಿರುವ ಬಲಾಢ್ಯ ಸಮುದಾಯಗಳಾದ ಕೊರಮ, ಕೊರಚ, ಭೋವಿ ಮತ್ತು ಲಂಬಾಣಿ ಸಮುದಾಯಗಳೊಂದಿಗೆ ಈ ಸಮುದಾಯಗಳನ್ನು ಸೇರಿಸಿದ್ದಾರೆ. ಈಗಾಲೇ ಈ ನಾಲ್ಕೂ ಸಮುದಾಯಗಳು ಶೈಕ್ಷಣಿಕವಾಗಿ ಪ್ರಗತಿ ಪಥದಲ್ಲಿದ್ದು ಸರ್ಕಾರಿ ಸೌಲಭ್ಯಗಳು ಮತ್ತು ರಾಜಕೀಯ ಸೌಕರ್ಯಗಳನ್ನು ಪಡೆಯುತ್ತಿದ್ದಾರೆ. ಇದೇ ಸಮುದಾಯಗಳೊಂದಿಗೆ ಎಸ್.ಸಿ., ಎಸ್.ಟಿ., ಅಲೆಮಾರಿ, ಅರೆ ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳನ್ನು ಸೇರ್ಪಡೆ ಮಾಡಿದರೆ ಸರ್ಕಾರದ ಸವಲತ್ತುಗಳಿಂದ ಮತ್ತೆ ಈ  ವಂಚಿತವಾಗುತ್ತವೆ ಎನ್ನುವ ಆತಂಕವನ್ನು ಡಿ.ರಂಗಯ್ಯ ವ್ಯಕ್ತಪಡಿಸಿದ್ದಾರೆ.

 

ಪ್ರಸ್ತುತ ಸರ್ಕಾರ ಎ.ಬಿ.ಸಿ. ಈ ಮೂರು ಗುಂಪುಗಳಾಗಿ ವಿಂಗಡಿಸಿದ್ದು ಎಡ-ಶೇ 6, ಬಡ-ಶೇ6 ಮತ್ತು ಸಿ-ಶೇ 5 ವಿಂಗಡಣೆ ಮಾಡಲಾಗಿದೆ. ಆದರೆ ಸಿ ಪಂಗಡಗಳಲ್ಲಿರುವ  ಬಲಾಢ್ಯ ಸಮುದಾಯಗಳೊಂದಿಗೆ ಅಲೆಮಾರಿಗಳು ಪೈಪೋಟಿ ಮಾಡಲು ಸಾಧ್ಯವಾಗದೇ ಇರುವ ಪರಿಸ್ಥಿತಿ ಸೃಷ್ಟಿಯಾಗಿದೆ. ಶೈಕ್ಷಣಿಕ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯಗಳನ್ನು ಸಿ ವರ್ಗದಿಂದ ಬೇರ್ಪಡಿಸಿ, ಜಸ್ಟೀಸ್ ನಾಗಮೋಹನ್ ದಾಸ್ ಅವರು ಸೂಕ್ಷ್ಮ  ಸಮುದಾಯಗಳೆಂದು ಗುರುತಿಸಿ ಎ ಗುಂಪಾಗಿ ಪರಿಗಣಿಸಿ ಶೇ 1 ಮೀಸಲಾತಿ ಇರಿಸಿದ್ದರು. ಅದನ್ನೇ ಮುಂದುವರಿಸಬೇಕು. ಈ ವಿಷಯವಾಗಿ ಎಡ ಮತ್ತು ಬಲ ಪಂಥದ ಸಮುದಾಯದ ಎಲ್ಲ ನಾಯಕರು ಮತ್ತು ಧುರೀಣರು ಕೂಡ ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಚಲನಚಿತ್ರ ನಿರ್ದೇಶಕರಾದ ಬರಗೂರು ರಾಮಚಂದ್ರಪ್ಪ, ಚಿತ್ರನಟ ಚೇತನ್ ಅಹಿಂಸಾ ಸೇರಿದಂತೆ ಅನೇಕ ಸಾಮಾಜಿಕ ಹೋರಾಟಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿದ ಡಿ.ರಂಗಯ್ಯ ಅವರು, ಮುಖ್ಯಮಂತ್ರಿಗಳು ಅವನತಿಯ ಹಾದಿಯಲ್ಲಿರುವ ಈ ನಮ್ಮ ಸಮುದಾಯಗಳ ಬಗ್ಗೆ ಕಾಳಜಿ ವಹಿಸುತ್ತಾರೆಂಬ ನಂಬಿಕೆ ಇದೆ. ಇಲ್ಲದೇ ಹೋದರೆ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST