LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಿಓಪಿ ಗಣೇಶ ಪ್ರತಿಷ್ಠಾಪಿಸಿದರೆ ಮಂಡಳಿಯೇ ಹೊಣೆ

ಇಂದು ಕಾನೂನು ಎನ್ನುವುದು ಆಡೋಣ ಬಾ, ಕೆಡಿಸೋಣ ಬಾ ಎನ್ನುವಂತಾಗಿದೆ. ಕಳೆದ ಹಲವು ವರ್ಷಗಳಿಂದ ಪ್ರತಿ ಬಾರಿ ಗೌರೀ ಗಣೇಶ ಹಬ್ಬದ ಸಂದರ್ಭದಲ್ಲಿ ಅನೇಕ ಸಂಘಟನೆಗಳು ಪಿಓಪಿ ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರಕ್ಕೆ ಎರವಾಗುತ್ತಿವೆ. ಇದಕ್ಕಾಗಿ ಪರಿಸರ ಮಾಲಿನತ್ಯ ಮತ್ತು ನಿಯಂತ್ರಣ ಮಂಡಳಿ ಇದ್ದರೂ ಮಂಡಳಿ ಹಲ್ಲು ಕಿತ್ತ ಹಾವಿನಂತಾಗಿದೆ. ಪಿಓಪಿ ಗಣೇಶನನ್ನು ಪ್ರತಿಷ್ಠಾಪಿಸದಿರುವಂತೆ ಕಾನೂನು ಜಾರಿಗೆ ತಂದಿದ್ದರೂ ಪಿಓಪಿ ಗಣೇಶನನ್ನು ಪ್ರತಿಷ್ಠಾಪಿಸುವವರ ಮೇಲೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಮಂಡಳಿಯ ಅಧಿಕಾರಿಗಳು ಇದ್ದರೂ ಪಿಓಪಿ ಗಣೇಶನ ಮೂರ್ತಿಗಳು ರಾಜ್ಯದಾದ್ಯಂತ ಎಗ್ಗಿಲ್ಲದೇ ಮಾರಾಟವಾಗುತ್ತಿವೆ.

2025ನೇ ಸಾಲಿನ ಗೌರಿ-ಗಣೇಶ ಹಬ್ಬದ ಸಮಯದಲ್ಲಿ ಪರಿಸರ ಸಂರಕ್ಷಣೆಗೆ ಪೂರಕವಾದಂತಹ ಬಣ್ಣರಹಿತ ಜೇಡಿ ಮಣ್ಣಿನಿಂದ ತಯಾರಿಸಲಾದ ವಿಗ್ರಹಗಳನ್ನು ಮಾತ್ರ ಸಾರ್ವಜನಿಕರಿಗೆ ಸರಬರಾಜು ಮಾಡಬೇಕೆಂದು ನ್ಯಾಯಾಲಯ ಸೂಚಿಸಿದ್ದರು, ಅನೇಕ ಕಡೆಗೆ ಪಿಓಪಿ ಗಣಪತಿ ಮೂರ್ತಿಗಳ ಮಾರಾಟ ಕಂಡು ಬರುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತಾಗಿದ್ದಾರೆ. ಯಾವುದೇ ಕಾರಣಕ್ಕೂ ಪರಿಸರಕ್ಕೆ ಮಾರಕವಾದಂತಹ ಭಾರಲೋಹ ಮಿಶ್ರಿತ, ಬಣ್ಣಸಹಿತ. ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಮಾರಾಟ, ಸಾಗಣೆ, ಪ್ರತಿಷ್ಠಾಪಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಗಣೇಶ ಮೂರ್ತಿಗಳನ್ನು ಉತ್ಪಾದಿಸಿರುವ ಉತ್ಪಾದಕರ ಗಮನಕ್ಕೆ ಮಂಡಳಿಯು ತಂದು ಪಿಓಪಿ ಗಣೇಶನನ್ನು ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಬೇಕಿದೆ.



ಗೌರಿ-ಗಣೇಶ ಹಬ್ಬದಂದು ಯಾವುದೇ ಕಾರಣಕ್ಕೂ ಪರಿಸರಕ್ಕೆ ಮಾರಕವಾಗದಂತೆ ಮಂಡಳಿ ಕಟ್ಟುನಿಟ್ಟಾಗಿ ಕ್ರಮ ವಹಿಸಲಿ. ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಭಾರಲೋಹ ಮಿಶ್ರಿತ ರಾಸಾಯನಿಕ ಯುಕ್ತ ಬಣ್ಣದಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದಾಗಲಿ, ಪೂಜಿಸುವುದಾಗಲಿ ಮಾಡಬಾರದೆಂದು ಸೂಚಿಸಬೇಕು. ಪರಿಸರಕ್ಕೆ ಪೂರಕವಾದ ಜೇಡಿ ಮಣ್ಣಿನಿಂದ ತಯಾರಾದ ವಿಗ್ರಹಗಳನ್ನೆ ಪ್ರತಿಷ್ಠಾಪಿಸಿ ಪೂಜಿಸಿ ಹಳ್ಳಿ, ನಗರ, ಪಟ್ಟಣ ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು ಭಾಗಿಯಾಗಬೇಕೆಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಈ ರೀತಿಯ ಕ್ರಮಗಳನ್ನು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ, ರಾಜ್ಯದ ಎಲ್ಲ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಹಳ್ಳಿ ಹಳ್ಳಿಗಳಲ್ಲೂ ಪ್ರಚಾರ ಮಾಡಬೇಕಿದೆ.



ಪಿಓಪಿ ಗೌರಿ, ಗಣೇಶ ಮೂರ್ತಿ ಮತ್ತು ಪರಿಸರಕ್ಕೆ ಮಾರಕವಾದ ಪಟಾಕಿ ಹಚ್ಚಬಾರದು. ಹಸಿರು ಪಟಾಕಿ ನಿಗದಿತ ಸಮಯದಲ್ಲಿ ಮಾತ್ರ ಹಚ್ಚಬೇಕು. ಪಟಾಕಿ, ಪಿಓಪಿ ಗಣೇಶ ದಾಸ್ತಾನು, ಮಾರಾಟ, ಸಾಗಾಟ ಮತ್ತು ನೀರಿನಲ್ಲಿ ವಿಸರ್ಜನೆ ಆಗದಂತೆ ನಿಯಂತ್ರಿಸಿ ಜಲ ಮೂಲ ರಕ್ಷಿಸಬೇಕು. ಆಯಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ತಹಶೀಲ್ದಾರರನ್ನು ಒಳಗೊಂಡAತೆ ಸಮಿತಿಯನ್ನು ರಚಿಸಬೇಕು. ಎಲ್ಲೆಡೆ ಸೂಕ್ತ ಕ್ರಮಕೈಗೊಳ್ಳಲು ರಾಜ್ಯದ ಎಲ್ಲಾ ಜಿಪಂ., ತಾಪಂ., ಮತ್ತು ಗ್ರಾ.ಪಂ., ವ್ಯಾಪ್ತಿಗಳಲ್ಲಿ ಕ್ರಮ ಕೈಗೊಳ್ಳಬೇಕು. ಹೀಗಿದ್ದರೂ ಪಿಓಪಿ ಗೌರಿ ಗಣೇಶ ಮೂರ್ತಿಗಳನ್ನು ಪೂಜಿಸುವುದು ಕಂಡು ಬಂದರೆ ಮಂಡಳಿಯ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿಸಬೇಕು. ಹಾಗಾದಾಗ ಮಾತ್ರ ಪರಿಸರಕ್ಕೆ ಮಾರಕವಾಗುವ ಗೌರಿ, ಗಣೇಶ ಮೂರ್ತಿ ಪೂಜೆ ಮಾಡುವುದನ್ನು ತಪ್ಪಿಸಲು ಸಾಧ್ಯ. ಇಲ್ಲವೇ ಕಾನೂನು ಕೇವಲ ರೂಪಿಸಲು ಮಾತ್ರ, ಜಾರಿಗೆ ತರಲು ಅಲ್ಲ ಎನ್ನುವುದು ಋಜುವಾತಾಗುತ್ತದೆ. ಈ ಬಗ್ಗೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST