LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾನು... ನನ್ನ ಶಾಲೆಯ ಸವಿ ನೆನಪುಗಳು

ನಾನು......

ಪ್ರತಿಯೊಬ್ಬರಿಗೂ ಇಂದು ನಾನು ಎಂದು ಹೇಳಿಕೊಳ್ಳಬೇಕಾದರೆ ಮೊದಲು ನೆನಪಿಸಿಕೊಳ್ಳಬೇಕಿರುವುದು ತಂದೆ ತಾಯಿ. ಅವರ ನಂತರ ಅವರಿನಷ್ಟೇ ನಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸುವರು ಶಿಕ್ಷಕರು. ಅದರಲ್ಲೂ ಪ್ರಮುಖವಾಗಿ ನಮ್ಮ ಜೀವನಕ್ಕೆ ಭದ್ರ ಬುನಾದಿ ಹಾಕುವ ಪ್ರಾಥಮಿಕ ಶಾಲೆ, ಆ ಶಾಲೆಯ ಗುರುಗಳು, ಶಿಕ್ಷಕರು. ನಾನಿಂದು ಇಲ್ಲಿ ಹೇಳಬಯಸಲು ಹೊರಟಿರುವುದು ನಮ್ಮ ಶಾಲೆ. ಅದು ನಮ್ಮ ಹೆಮ್ಮೆ.



ಹೌದು, ಪ್ರತಿಯೊಬ್ಬರಿಗೂ ಅವರವರ ಶಾಲೆಗಳೆಂದರೆ ಅದೇನೊ ಹೇಳಲಾಗದಂತಹ ಪ್ರೀತಿ, ಗೌರವ. ಶಾಲೆ ಬಿಟ್ಟು ಕಾಲೇಜು ಸೇರಿ ಉನ್ನತ ವ್ಯಾಸಾಂಗ ಮಾಡಿ, ಉನ್ನತ ಹುದ್ದೆ ಪಡೆದುಕೊಂಡರೂ ಆ ಶಾಲೆಯ ಬಗ್ಗೆ ಇರುವ ಮಮಕಾರ ಎಂದಿಗೂ ಕಡಿಮೆಯಾಗೋದಿಲ್ಲ.

ನನಗೂ ಹಾಗೆಯೇ...! ನನ್ನ ಶಾಲೆ ಎಂದರೆ ಮೊದಲು ನೆನಪಾಗುವುದೇ ಒಂದು ಕೊಠಡಿ. ಅದರಲ್ಲಿ ಏಳೆಂಟು ಜನ ವಿದ್ಯಾರ್ಥಿಗಳು. ನಮ್ಮ ಶೈಕ್ಷಣಿಕ ಜೀವನ ಆರಂಭವಾಗಿರುವುದು 1999ರಲ್ಲಿ. ಬಳ್ಳಾರಿ ನಗರದ ಅಂಜಿನಪ್ಪ ವೃತ್ತದಲ್ಲಿರುವ ವಿಜಯ ನಿವಾಸ ಎಂಬ ಕಟ್ಟಡದಲ್ಲಿ. ನಮ್ಮ ಜೀವನಗಳು ಅಷ್ಟಕ್ಕಷ್ಟೇ ಇದ್ದವು. ವಿದ್ಯಾಭ್ಯಾಸ ಮಾಡಬೇಕಾದರೆ ಸರ್ಕಾರಿ ಶಾಲೆಗೆ ಹೋಗಬೇಕು ಎಂಬುದಾಗಿತ್ತು. ಅದರಲ್ಲೂ ಅಂದಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಬೆಲ್ಲದ ಹಿಟ್ಟಿನ ಹುಂಡೆ ಸಿಗುತ್ತೆ ಎಂಬ ಸುದ್ದಿ. ಅಂದಿನ ಕಾಲದಲ್ಲಿ ಒಂದೊಪ್ಪೊತ್ತಿನ ಊಟ ಮಾಡಲು ಕೂಡ ಪರದಾಡುವಂತಹ ಪರಿಸ್ಥಿತಿ.

ಆಗ ತಾನೆ ಪದವಿ ಮುಗಿಸಿಕೊಂಡ ಭೂಪ್ರಕಾಶ್ ಅವರು ವಿದ್ಯೆಯನ್ನು ಹಂಚಬೇಕು. ಪ್ರತಿಯೊಬ್ಬರಿಗೂ ವಿದ್ಯೆ ಸಿಗಬೇಕು ಎಂಬ ದೃಷ್ಟಿಯಿಂದ ಹೊಸದಾಗಿ ಶಾಲೆಯೊಂದನ್ನು ಪ್ರಾರಂಭಿಸಿದರು. ಆ ಶಾಲೆಯಲ್ಲಿ ಮೊದಲ ವಿದ್ಯಾರ್ಥಿ ನಾನು ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆಯೇ ಸರಿ. ಏಕೆಂದರೆ ತಂದೆಯಿಲ್ಲದ ನನ್ನನ್ನು ಕೈಹಿಡಿದು ಶಾಲೆಗೆ ಕರೆತಂದು ನನಗೆ ವಿದ್ಯಾಭ್ಯಾಸ ಹೇಳಿಕೊಟ್ಟ ಮಹಾನ್ ಶಿಕ್ಷಣ ಸಂತರು ನಮ್ಮ ಅಚ್ಚು ಮೆಚ್ಚಿನ ಭೂಪ್ರಕಾಶ್ ಸರ್ ಅವರು.



ಕೆಲ ತಿಂಗಳುಗಳ ಕಾಲ ಉಚಿತವಾಗಿ ಶಿಕ್ಷಣ ನೀಡಿದ ಅವರು ನಂತರ ಶಾಲಾ ಫೀಜ್ ಕಟ್ಟಬೇಕು ಎಂದು ಹೇಳಿ ಕಳುಹಿಸಿದರು. ಅದನ್ನು ಕೇಳಿದ ನಮ್ಮ ಪೋಷಕರು ನಾವು ಫೀಜ್ ಕಟ್ಟಿ ಓದಿಸುವಷ್ಟು ಹಣ ನಮ್ಮಲ್ಲಿಲ್ಲ. ಬದಲಿಗೆ ನಮ್ಮ ಮಗುವನ್ನು ಸರ್ಕಾರಿ ಶಾಲೆಗೆ ಹಾಕುತ್ತೇವೆ ಎಂದು ಹೇಳಿ ನನ್ನನ್ನು ಮನೆಯಲ್ಲಿ ಕೂರಿಸಿದರು. ಮರುದಿನವಷ್ಟೇ ಭೂಪ್ರಕಾಶ್ ಸರ್ ಅವರು ತಮ್ಮ ಸಹೋದರಿಯೊಂದಿಗೆ ನನ್ನ ಮನೆಯ ಬಳಿ ಬಂದು ಈ ಮಗುವಿಗೆ ಯಾವುದೇ ಶುಲ್ಕ ಕಟ್ಟಬೇಡಿ. ಆ ಮಗುವಿಗೆ ವಿದ್ಯಾಭ್ಯಾಸದ ಮೇಲೆ ಒಳ್ಳೆಯ ಆಸಕ್ತಿ ಇದೆ. ಆತನನ್ನು ನಾನು ಓದಿಸುತ್ತೇನೆ ಎಂದು ಹೇಳಿ ನನ್ನ ಕೈಹಿಡಿದು ಕರೆದುಕೊಂಡು ಬಂದ ನಮ್ಮ ಗುರುಗಳನ್ನು ನಾವೆಂದಿಗೂ ಮರೆಯಲು ಸಾಧ್ಯವೇ...?

ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯೇ ಇದ್ದರೂ ನಮಗೆ ವಿದ್ಯಾಭ್ಯಾಸದಲ್ಲಾಗಲಿ, ಊಟೋಪಚಾರದಲ್ಲಾಗಲಿ ಹಾಗೂ ಆಟೋಪಚಾರದಲ್ಲಿ ಎಂದಿಗೂ ಕಡಿಮೆ ಮಾಡಲಿಲ್ಲ. ಮನೆಯ ಮೊದಲ ಮಹಡಿಯಲ್ಲಿಯೇ ಇದ್ದ ಕೊಠಡಿಗಳಲ್ಲಿ ಕಪ್ಪು ಹಲಗೆಯನ್ನು ಹಾಕಿ ಅದರಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ಆ ಕೊಠಡಿಯ ಮೇಲ್ಭಾಗದಲ್ಲಿನ ಖಾಲಿ ಸ್ಥಳದಲ್ಲಿ ಆಟವಾಡಲೆಂದು ಆಟಿಕೆ ವಸ್ತುಗಳನ್ನು ತಂದು ಕೊಡುತ್ತಿದ್ದರು.

ಇಂದಿನ ಕಾಲಕ್ಕೆ ಹೋಲಿಕೆ ಮಾಡಿ ನೋಡುವುದಾದರೆ ಮಕ್ಕಳು ಯಾವಾಗ ಶಾಲೆ ಬಿಡುತ್ತಾ.. ಯಾವಾಗ ಮನೆಗೆ ಹೋಗಿ ಆಟ ಆಡೋಣ್ವಾ ಎಂದೆಲ್ಲಾ ಯೋಚನೆ ಮಾಡ್ತಾರೆ. ಆದರೆ ನಾವು ಪ್ರಾಥಮಿಕ ಶಿಕ್ಷಣ ಪಡೆಯುವ ವೇಳೆ ನಮಗೆ ಮನೆಯು ಕೂಡ ನೆನಪಾಗುತ್ತಿರಲಿಲ್ಲ. ಅಂದರೆ ನಮ್ಮ ಗುರುಗಳು ನಮ್ಮ ಮೇಲೆ ತೋರಿಸುತ್ತಿರುವ ಕಾಳಜಿ, ಪ್ರೀತಿ ಹಾಗೆ ಇರುತ್ತಿತ್ತು. ಆರಂಭದ ತರಗತಿಗಳಲ್ಲಿ ನಮ್ಮ ಗುರುಗಳ ತೊಡೆಯ ಮೇಲೆ ಕುಳಿತುಕೊಂಡು ಓದು ಬರಹ ಕಲಿತುಕೊಂಡ ನೆನಪುಗಳು ಇಂದಿಗೂ ನಮ್ಮನ್ನು ಬಿಡಲಾರವು. ಪ್ರಾರಂಭದಲ್ಲಿ ಬರೀ ಕಟ್ಟಡವೊಂದೇ ಇದ್ದ ಶಾಲೆಯಲ್ಲಿ ಆಟವಾಡಲು ಸ್ಥಳದ ಅಭಾವ ಇದ್ದರೂ, ಒಳಾಂಗಣ ಕ್ರೀಡೆಗಳನ್ನು ಆಡಿಸುವ ಪ್ರಯತ್ನವೂ ನಡೆದಿತ್ತು. ಅದರಲ್ಲೂ ಪ್ಲಾಸ್ಟಿಕ್ ಕಾರುಗಳ ಟೈರ್‌ಗಳನ್ನು ತೆಗೆದು ಆಟವಾಡಿದ್ದೂ ಉಂಟು.



ಹೀಗೆ ವರ್ಷಗಳು ಉರುಳಿದಂತೆ ಶಾಲಾ ಕಟ್ಟಡವೂ ಬೆಳೆಯುತ್ತಾ ಹೋಯಿತು. ಹಾಗೆಯೇ ವಿದ್ಯಾರ್ಥಿಗಳ ಸಂಖ್ಯೆಯೂ ಬೆಳೆಯುತ್ತಾ ಸಾಗಿತು. ಒಂದು ತರಗತಿಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರುವಂತಾಯಿತು. ಅಂದಿನ ಕಾಲಕ್ಕೆ ಯಾವುದೇ ಪ್ರತಿಭಾ ಕಾರಂಜಿಗಳು ನಡೆಯುವುದು ಕಡಿಮೆ ಇದ್ದರೂ ನಮಗೆ ಅಲ್ಲಿಯವರೆಗೆ ಹೋಗುವ ಸಾಧ್ಯತೆಗಳು ಕಡಿಮೆಯೇ ಇತ್ತು. ಆದರೂ ನಮ್ಮಲ್ಲಿನ ಪ್ರತಿಭೆಯನ್ನು ಹೊರತರಲೆಂದು ಆಗಾಗ್ಗೆ ಹೊರಾಂಗಣ ಕ್ರೀಡೆಗಳು, ಜ್ಞಾನ ಸಂಪತ್ತಿನ ಪರೀಕ್ಷೆಗಳು, ಚಿತ್ರಲೇಖನ, ಕ್ರಾಫ್ಟ್ ಮಾಡಿಸುವಂತಹ ಕೆಲಸಗಳನ್ನು ಮಾಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಹುಮಾನಗಳನ್ನು ವಿತರಿಸುವ ಕೆಲಸವೂ ನಡೆಯುತ್ತಿತ್ತು.

ಮಹನೀಯರ ಜಯಂತಿಗಳನ್ನು ಆಚರಿಸುವ ಪರಿಯಂತೂ ಹೇಳತೀರದು. ಪ್ರತೀ ವರ್ಷವೂ ವಿಭಿನ್ನವಾಗಿ ಮಹನೀಯರ ಮೂರ್ತಿಗಳು ಅಥವಾ ಭಾವಚಿತ್ರಗಳನ್ನು ಸಭಾಂಗಣದಲ್ಲಿ ಮೆರವಣಿಗೆ ಮಾಡಿಸುವುದು. ಮಕ್ಕಳಿಂದ ಮಹನೀಯರ ವೇಷಭೂಷಣಗಳನ್ನು ಹಾಕಿಸುವುದು. ಅದರಲ್ಲೂ ನಾನು ಮಹಾತ್ಮಗಾಂಧಿ ವೇಷಭೂಷಣವನ್ನು ಧರಿಸಿದ್ದು, ನನ್ನ ಸ್ನೇಹಿತ ಗಿರಿ ಚಾಚಾ ನೆಹರೂ ಅವರ ವೇಷಭೂಷಣವನ್ನು ಧರಿಸಿದ್ದು ಮರೆಯಲಾರದು. ಮಹನೀಯರ ಬಗ್ಗೆ ಸವಿವರವಾಗಿ ತಿಳಿಸುತ್ತಾ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡುತ್ತಿದ್ದರು. ನಮ್ಮ ಗುರುಗಳಿಗೆ ಸಾಥ್ ನೀಡಿದ್ದು ಅವರ ತಾಯಿ ಸುಶೀಲಾಬಾಯಿ ಮೇಡಂ ಅವರು. ಅವರ ಸಲಹೆ ಸೂಚನೆಗಳನ್ನು ಪಾಲಿಸುತ್ತಲೇ ಶಾಲೆಯನ್ನು ಉನ್ನತವಾಗಿ ಅಭಿವೃದ್ಧಿ ಪಡಿಸಲಾಯಿತು.

ಇನ್ನೂ ನಮ್ಮ ಗುರುಗಳು ಹಾಕಿದ ಹಾದಿಯಲ್ಲೇ ಶಿಕ್ಷಣದ ಸೇವೆ ಸಲ್ಲಿಸಲು ಆಗಮಿಸಿದ್ದ ಕೆಲ ಶಿಕ್ಷಕರು ಕೂಡ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆಯೇ ಭಾವಿಸಿ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿದ್ದಾರೆ ಎಂದರೂ ತಪ್ಪಾಗುವುದಿಲ್ಲ. ಶಾಲೆಯಲ್ಲಿ ಶಿಕ್ಷಣ ಸೇವೆ ಮಾಡಿದ ಹಲವರಲ್ಲಿ ಕೆಲವರನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು. ಪ್ರಾರಂಭದಲ್ಲಿ ಎಲ್ಲಾ ವಿಷಯಗಳನ್ನು ಭೂಪ್ರಕಾಶ್ ಸರ್ ಅವರೇ ಹೇಳುತ್ತಿದ್ದರು. ನಂತರದಲ್ಲಿ ಪ್ರಮುಖವಾಗಿ ಶ್ರೀಮತಿ ವಾಣಿಶ್ರೀ ಮೇಡಂ ಅವರು ಕನ್ನಡ ಹಾಗೂ ಗಣಿತ ವಿಷಯದಲ್ಲಿ ನಮ್ಮನ್ನು ತಿದ್ದಿ ತೀಡಿದವರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಂತರದಲ್ಲಿ ಶ್ರೀಮತಿ ಪದ್ಮಜಾ ಮೇಡಂ ಅವರು ಸಮಾಜ ವಿಜ್ಞಾನ ಭಾಷೆಯನ್ನು ಭೋದಿಸುತ್ತಿದ್ದರು. ಶ್ರೀಮತಿ ಚೇತನಾ ಪಾಟೀಲ್ ಅವರು ಇಂಗ್ಲೀಷ್ ಭಾಷೆಯನ್ನು ಬೋಧಿಸುತ್ತಿದ್ದರು. ಹಾಗೆಯೇ ಶ್ರೀಮತಿ ಮಲ್ಲೇಶ್ವರಿ ಅವರು ಹಿಂದಿ ಭಾಷೆಯನ್ನು ಅಭ್ಯಾಸ ಮಾಡಿಸುತ್ತಿದ್ದರು. ಇನ್ನು ನಮ್ಮ ಗುರುಗಳು ವಿಜ್ಞಾನ ವಿಷಯವನ್ನು ಬೋಧಿಸುತ್ತಿದ್ದರು. ವಿಜ್ಞಾನದಲ್ಲಿ ಬರುವ ಚಿತ್ರಗಳನ್ನು ಕಪ್ಪು ಹಲಗೆಯ ಮೇಲೆ ಚಿತ್ರಿಸಿ ಅವುಗಳ ಬಗ್ಗೆ ವಿವರಿಸುತ್ತಿದ್ದ ಪರಿ ಇಂದಿಗೂ ಎಲ್ಲಾ ಶಿಕ್ಷಕರಿಗೂ ಮಾದರಿ ಎಂದರೂ ತಪ್ಪಾಗಲಾರದು.



ನಮ್ಮ ಬ್ಯಾಚ್‌ನ ಜೊತೆಗೆ ಉಳಿದ ಬ್ಯಾಚ್‌ಗಳಲ್ಲಿ ಹಲವರು ಶಿಕ್ಷಕರು ಬೋಧನೆ ಮಾಡಿದ್ದಾರೆ. ಅದರಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟು ನೃತ್ಯ ಕಲಿಸುವಲ್ಲಿ ಶ್ರೀಮತಿ ವಸಂತ ಮೇಡಂ ಅವರು ಜನಪದ ಗೀತೆಗಳು, ಕನ್ನಡದ ಅಚ್ಚು ಮೆಚ್ಚಿನ ಚಿತ್ರಗೀತೆಗಳಿಗೆ ನೃತ್ಯ ಸಂಯೋಜನೆ ಮಾಡಿಸುತ್ತಿದ್ದರು. ಇವುಗಳಲ್ಲಿ ಪ್ರಮುಖವಾಗಿ ನಮ್ಮ ಶಾಲೆಯಲ್ಲಿ ನಡೆಯುತ್ತಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವAತೂ ನಮಗೆ ಅಚ್ಚು ಮೆಚ್ಚು. ಕಾರ್ಯಕ್ರಮಕ್ಕೆ ನಡೆಸುತ್ತಿದ್ದ ತಯಾರಿ, ವೇದಿಕೆ ಅಲಂಕರಣ, ನೃತ್ಯಗಳು, ಉಪಯುಕ್ತಕರವಾದ ನಾಟಕ ಪ್ರದರ್ಶನ, ಹಾಸ್ಯ ಭರಿತ ನಾಟಕ ಪ್ರದರ್ಶನಗಳು, ದೇಶಭಕ್ತಿಗೀತೆಗಳ ನೃತ್ಯಗಳು ಹೀಗೆ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳು ನೋಡುಗರ ಮನಸೆಳೆಯುತ್ತಿದ್ದವು.

ಈ ಸಮಾರಂಭಗಳಲ್ಲಿ ಅದೆಷ್ಟೋ ಬಹುಮಾನಗಳನ್ನು ಗೆದ್ದ ಖುಷಿ ನಮ್ಮದು. ಅಷ್ಟೇ ಅಲ್ಲದೇ ನಮ್ಮಲ್ಲಿ ನಮಗೇ ಪೈಪೋಟಿಗಳು ನಡೆಯುತ್ತಿತ್ತು. ಅದು ಕೂಡ ಓದುವ ವಿಚಾರದಲ್ಲಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ತರುವ ವಿಚಾರದಲ್ಲಿ. ಹೌದು ನಮ್ಮ ಆರಂಭದ ಬ್ಯಾಚ್‌ನಲ್ಲಿ ನಾವು ಇದ್ದದ್ದು 10 ಜನ. ರಾಕೇಶ್, ಭೀಮರಾಜು, ವೇಮಲರಾಜು, ಗಿರಿಧರ್, ರಮೇಶ್, ಸುರೇಶ್, ವಿಜಯ್, ಸುಮಂಗಳ, ನಾಗಲಕ್ಷ್ಮಿ, ವಿದ್ಯಾಶ್ರೀ.

ಈ ಹತ್ತು ಜನ ವಿದ್ಯಾರ್ಥಿಗಳಲ್ಲಿಯೇ ಒಂದು ಪರೀಕ್ಷೆಯಲ್ಲಿ ಒಬ್ಬರು ಪ್ರಥಮ ಬಹುಮಾನ ಪಡೆದರೆ ಮತ್ತೊಂದು ಪರೀಕ್ಷೆಯಲ್ಲಿ ಮತ್ತೊಬ್ಬರು ಪ್ರಥಮ ಬಹುಮಾನ ಪಡೆಯುತ್ತಿದ್ದರು. ಅಂದಿನ ದಿನದಲ್ಲಿ ನಮಗೆ ಒಂದು ಪುಸ್ತಕ ಪೆನ್ ಬಹುಮಾನವಾಗಿ ಸಿಕ್ಕರೇ ಅದೇ ಬಹುದೊಡ್ಡ ಸಂತೋಷ. ನಂತರದಲ್ಲಿ ಕ್ಯಾರೇಜ್ ಬಾಕ್ಸ್, ಊಟದ ತಟ್ಟೆ, ಲೋಟ ಹೀಗೆ ಹಲವಾರು ಬಹುಮಾನಗಳನ್ನು ಪಡೆದಿರುವ ಸಂತೋಷ ನಮ್ಮಲ್ಲಿದೆ. ಈ ಪೈಪೋಟಿಯಲ್ಲಿ ನನಗೆ ಪೋಟಿ ನೀಡುತ್ತಿದ್ದುದು ಸುಮಂಗಳ, ವಿಜಯ್ ಮಾತ್ರ. ಪ್ರತೀ ಪರೀಕ್ಷೆಯಲ್ಲಿ ಒಂದು ಅಥವಾ ಎರಡು ಅಂಕಗಳ ವ್ಯತ್ಯಾಸದಲ್ಲಿ ನಾನು ಮೊದಲ ಬಹುಮಾನ ಪಡೆದರೆ, ಸುಮಂಗಳ ಅಥವಾ ವಿಜಯ್ ಇವರಿಬ್ಬರು ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆಯುತ್ತಿದ್ದರು. ನಮ್ಮಲ್ಲಿ ಎಷ್ಟೇ ಪೈಪೋಟಿಗಳು ನಡೆದರೂ ನಮಲ್ಲಿ ಇಂದು ಬಹುತೇಖರಿಗೆ ವಿವಾಹಗಳಾಗಿ ಸಂತಾನವಾಗಿದ್ದರೂ ನಮ್ಮಗಳ ಸ್ನೇಹ ಮಾತ್ರ ಎಲ್ಲಿಯೂ ಕಡಿಮೆಯಾಗಿಲ್ಲ. ನಮ್ಮ ಸ್ನೇಹ ಬಾಂಧವ್ಯಗಳು ಇಂದೇ ಅಲ್ಲ ನಮ್ಮ ಅಂತ್ಯದ ವರೆಗೂ ಹಾಗೇ ಇರುತ್ತದೆ ಎಂಬುದು ನಮ್ಮ ನಂಬಿಕೆ.



ಹಾಗೆಯೇ ನಮ್ಮೆಲ್ಲರ ಸ್ನೇಹದ ಜೊತೆಗೆ ನಮ್ಮ ಗುರುಗಳೊಂದಿಗೆ ಇರುವ ಬಾಂಧವ್ಯವೂ ಹಾಗೇ ಇದೆ ಎಂದರೂ ತಪ್ಪಾಗಲಾರದು. ನಮ್ಮಲ್ಲಿ ಒಬ್ಬೊಬ್ಬರು ಒಂದು ವಿಧದ ವ್ಯಾಪಾರ ವಹಿವಾಟು ಮಾಡುತ್ತಿದ್ದರೆ, ಕೆಲವರು ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲಿ ಒಬ್ಬನಾದ ನಾನು ಪತ್ರಕರ್ತನಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸದ ಜೊತೆಗೆ ಸ್ವಂತವಾಗಿ ಕೃತಿ ಕ್ರಿಯೇಷನ್ಸ್ ಎಂಬ ಹೆಸರಲ್ಲಿ ಸಣ್ಣ ಉದ್ಯಮವೊಂದನ್ನು ಪ್ರಾರಂಭಿಸಿಕೊಂಡು ಖಾಲಿ ಸಿಕ್ಕ ಸಮಯದಲ್ಲಿ ಶಾಲೆಗೆ ಭೇಟಿ ನೀಡುತ್ತಾ, ಶಾಲೆಯ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ ನಮ್ಮ ಶಾಲೆಯ ಋಣ ತೀರಿಸುವ ಪ್ರಯತ್ನ ಮಾಡುತ್ತಿದ್ದೇನೆ.

ಅಂದು ನಾವು ಶಾಲೆಗೆ ಸೇರಿದಾಗ ಮನೆಯ ಮೇಲ್ಭಾಗದಲ್ಲಿನ ಕೊಠಡಿಯೊಂದರಲ್ಲಿ ಆರಂಭವಾದ ತರಗತಿಗಳು ಇಂದು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಾಗಿದ್ದು ಹೆಮ್ಮರವಾಗಿ ಬೆಳೆದಿದೆ. ನಮ್ಮಂತೆ ಅದೆಷ್ಟೋ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಉನ್ನತ ಮಟ್ಟದ ಸ್ಥಾನಗಳನ್ನು ಅಲಂಕರಿಸಿ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ವ್ಯಾಪಾರ ವಹಿವಾಟುಗಳನ್ನು ನಡೆಸಿದರೆ, ಕೆಲವರು ವೈದ್ಯರುಗಳಾಗಿದ್ದಾರೆ. ಕೆಲವರು ಎಂಜಿನಿಯರ್‌ಗಳಾಗಿದ್ದಾರೆ. ಇನ್ನೂ ಕೆಲವರು ಬ್ಯಾಂಕ್ ಉದ್ಯೋಗಸ್ಥರಾಗಿದ್ದಾರೆ. ಇನ್ನೂ ಕೆಲವರು ಲೆಕ್ಕ ಪರಿಶೋಧಕರಾಗಿ, ಲಾಯರ್‌ಗಳಾಗಿ, ಶಿಕ್ಷಕರಾಗಿ ಹೀಗೆ ಇನ್ನಿತರೆ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದು ನಮ್ಮ ಶಾಲೆಯ ಹೆಮ್ಮೆಯೇ ಸರಿ. ಇಂತಹ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ನಾನು ಪುಣ್ಯವಂತನೆಂದೇ ಭಾವಿಸುತ್ತೇನೆ. ನಮಗೆ ಪ್ರಾಥಮಿಕ ಶಿಕ್ಷಣ ನೀಡಿ ಒಳ್ಳೆಯ ಹಾದಿಯನ್ನು ಹಾಕಿಕೊಟ್ಟ ನಮ್ಮ ಗುರುಗಳಿಗೆ ನಾನು ಎಂದಿಗೂ ಆಭಾರಿಯಾಗಿರುತ್ತೇನೆ.

ಧನ್ಯವಾದಗಳೊಂದಿಗೆ,

ರಾಕೇಶ್.ವಿ.

ಸಂಪಾದಕರು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST