ಸಿಂಧನೂರು: ರಾಜ್ಯ ಸರ್ಕಾರದಿಂದ ಜಾರಿಗೆ ತಂದಿರುವ ಗ್ಯಾರೆಂಟಿ ಯೋಜನೆಗಳು ಮಾದರಿಯಾಗಿದ್ದು, ಅದನ್ನು ಅನುಸರಿಸಲು ಇತರೆ ರಾಜ್ಯಗಳು ಚಿಂತನೆ ನಡೆಸಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ನಗರದ ಸತ್ಯಗಾರ್ಡನ್ ನಲ್ಲಿ ಶನಿವಾರ ಆಯೋಜಿಸಿದ್ದ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ, ನೂತನ ಜಿಟಿಟಿಸಿ ತರಬೇತಿ ಕೇಂದ್ರ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಮಾತುಕೊಟ್ಟಂತೆ ನಡೆದುಕೊಂಡಿದೆ. ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಸರ್ಕಾರದಿಂದ ಸಿಗುವ ಸವಲತ್ತು ನೇರವಾಗಿ ಫಲಾನುಭವಿಗಳಿಗೆ ಸಿಗಬೇಕೆಂಬ ಸಿಎಂರ ಉದ್ದೇಶ ಈಡೇರಿದೆ. ಗ್ಯಾರಂಟಿ ಯೋಜನೆ ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.

ಬಿಜೆಪಿ ಅಭಿವೃದ್ಧಿ ಸಹಿಸದೆ ಆರೋಪ ಮಾಡುತ್ತಿದ್ದು ಇದರಲ್ಲಿ ಹುರುಳಿಲ್ಲ. ಸರ್ಕಾರದಲ್ಲಿ ಹಣವಿಲ್ಲ ಎಂದು ಬಿಜೆಪಿ ಬೊಬ್ಬೆ ಹೊಡೆಯತ್ತಿದೆ. ಹೊಸ ಆರೋಗ್ಯ ಕೇಂದ್ರ, ಜಿಟಿಆರ್ ಟಿಸಿ ಕೇಂದ್ರ ಆರಂಭಿಸಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿನ ಆರೋಗ್ಯ ಕೇಂದ್ರದ ಕೊರತೆ ನೀಗಿಸಿದ್ದೇವೆ. ಆರೋಗ್ಯ ಅವಿಷ್ಕಾರಗಳನ್ನು ಅನುಷ್ಠಾನಗೊಳಿಸಿದ್ದೇವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 857 ಕೋಟಿ ರೂ. ಅನುದಾನ ನೀಡಿ, ಆರೋಗ್ಯ ಸುಧಾರಣೆಗೆ ನೀಡಿದ್ದೇವೆ. ಈಗಾಗಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗಿದೆ ಎಂದರು.
ಜಿಲ್ಲೆಗೆ 16 ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಲಿಂಗಸುಗೂರಿನಲ್ಲಿ 20 ಕೋಟಿ ರೂ. ನಲ್ಲಿ ಕ್ರಿಟಿಕಲ್ ಕೇರ್ ನೀಡಲಾಗಿದೆ. ನಮ್ಮ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ದೇಶದಲ್ಲಿ ಅತೀ ಹೆಚ್ಚು ತೆರಿಗೆ ನಮ್ಮ ರಾಜ್ಯವೇ ನೀಡುತ್ತಿದೆ. ಕೇಂದ್ರ ಈಗ ಕೇವಲ 13 ಪೈಸೆಯಷ್ಟು ಅನುದಾನ ಬರುತ್ತಿದೆ. ಬರಗಾಲದ ಹಣ ಕೂಡ ಕೊಡಲಿಲ್ಲ. ಕೋರ್ಟ್ ಮೂಲಕ ಹಣ ಪಡೆಯಬೇಕಾಯ್ತು. ನಮಗೆ ಕೇಂದ್ರದಿಂದ ಅನ್ಯಾಯವಾಗುತ್ತಿದೆ. ರಾಜಕಾರಣ ಮಾಡಿ, ಜನರನ್ನು ಕಂಗೆಡಿಸುತ್ತಿದೆ. ಅಭಿವೃದ್ಧಿ ಪ್ರಶ್ನಿಸಲಿ, ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ತಿಳಿಸಿದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಬಹು ವರ್ಷಗಳ ನಂತರ ಜಿಲ್ಲೆಯಲ್ಲಿ ಅತಿವೃಷ್ಟಿ ಹೆಚ್ಚಿದ್ದು ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಂಕಷ್ಟಕ್ಕೆ ನೆರವು ನೀಡಬೇಕು. ಅತಿವೃಷ್ಟಿ ಪ್ರದೇಶವೆಂದು ಘೋಷಿಸಬೇಕು. ರಸ್ತೆಗಳೆಲ್ಲ ಹಾಳಾಗಿದ್ದು ದುರಸ್ತಿಗೆ ಅನುದಾನ ಬಿಡುಗಡೆ ಮಾಡಬೇಕು. ತಾಲೂಕಿನಲ್ಲಿ ಗಂಭೀರ ಕಾಯಿಲೆಯ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಆಸ್ಪತ್ರೆಗೆ ತಜ್ಞ ವೈದ್ಯರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು
ಜಿಲ್ಲಾ ಉಸ್ತುವಾರಿ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್, ಶಾಸಕರಾದ ಬಸನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ಶರಣೇಗೌಡ ಬಯ್ಯಾಪುರ, ಎ.ವಸಂತಕುಮಾರ, ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಜಿಲ್ಲಾಧಿಕಾರಿ ಕೆ.ನಿತೀಶ, ಜಿಪಂ ಸಿಇಒ ಈಶ್ವರ ಕಾಂದೂ, ರಾಯಚೂರು ಎಸ್ಪಿ ಪುಟ್ಟ ಮಾದಯ್ಯ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಕುಲಪತಿ ವಿಜಯಾ, ನಗರಾಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ, ಖಾಜಿ ಮಲ್ಲಿಕ್ ವಕೀಲ, ತಹಸೀಲ್ದಾರ್ ಅರುಣ ದೇಸಾಯಿ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ತಾಪಂ ಇಒ ಚಂದ್ರಶೇಖರ ಇದ್ದರು. ಡಾ.ಎಸ್.ಶಿವರಾಜ ನಿರೂಪಿಸಿದರು.