LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದುಗೆ ಕೃತಜ್ಞತೆ : ಅಲೆಮಾರಿಗಳನ್ನು ಕೈಬಿಡದಂತೆ ಆಂಜನೇಯ ಆಗ್ರಹ

ಬೆಂಗಳೂರು : ಒಳಮೀಸಲಾತಿ ಅಧಿಕೃತವಾಗಿ ಬುಧವಾರ ಜಾರಿಗೊಳ್ಳುತ್ತಿದ್ದಂತೆ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಮುಖ್ಯಮಂತ್ರಿ ನಿವಾಸ ಕಾವೇರಿ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಾದಿಗ ಸಮುದಾಯದವರು, ಸಿದ್ದರಾಮಯ್ಯ ಬೃಹತ್ ಭಾವಚಿತ್ರಕ್ಕೆ ಹಾಲಿನಾಭಿಷೇಕದ ಜೊತೆಗೆ ಹೂವಿನ ಮಳೆ ಸುರಿಸಿದರು.

ಬಳಿಕ ಸಿಎಂ ನಿವಾಸ ಪ್ರವೇಶಿಸಿದ ಆಂಜನೇಯ ಇತರ ಪ್ರಮುಖ ಮುಖಂಡರು, ಬೃಹತ್ ಹೂವಿನ ಹಾರದೊಂದಿಗೆ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಎಚ್.ಆಂಜನೇಯ, ಒಳಮೀಸಲಾತಿ ಕಲ್ಪನೆ ಜನಕರಾದ ಮಾದಿಗ ಸಮುದಾಯದವರು 35 ವರ್ಷ ನಿರಂತರ ಹೋರಾಟ ನಡೆಸಿದ್ದು, ಸುಪ್ರೀಂ ಕೋರ್ಟ್ ತಮ್ಮ ಹಕ್ಕನ್ನು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.

ಬಲಾಢ್ಯ ಸಮುದಾಯಗಳ ಮಧ್ಯೆ ಸರ್ಕಾರಿ ಸೌಲಭ್ಯ, ಉನ್ನತ ಉದ್ಯೋಗ-ಶಿಕ್ಷಣ ಪಡೆಯುವುದು ಮಾದಿಗರು ಹಾಗೂ ಸಂಬಂಧಿತ ಜಾತಿಗಳಿಗೆ ಗಗನಕುಸುಮವಾಗಿತ್ತು. ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳಾಗಿ ಮಾದಿಗ ಸಮುದಾಯ ನೌಕರಿ ಪಡೆಯುವದಕ್ಕಷ್ಟೇ ಮೀಸಲಾತಿ ಸೀಮಿತವಾಗಿತ್ತು. ಈ ಸತ್ಯವನ್ನು ಸರ್ಕಾರಗಳು ಹಾಗೂ ನ್ಯಾಯಾಂಗಕ್ಕೆ ಮನದಟ್ಟು ಮಾಡಿಕೊಡಲಾಗಿತ್ತು ಎಂದರು.



ಪರಿಣಾಮ ಆಗಸ್ಟ್ 1, 2024ರಂದು ಒಳಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ. ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡುತ್ತಿದ್ದಂತೆ ತಾವು ಹೆಚ್ಚು ಕಾಳಜಿ ವಹಿಸಿ, ವೈಜ್ಞಾನಿಕವಾಗಿ ಮೀಸಲಾತಿ ಹಂಚಿಕೆಗೆ ಗಟ್ಟಿ ನಿರ್ಧಾರ ಕೈಗೊಂಡಿದ್ದರ ಫಲ ಇಂದು ಮಾದಿಗರು ಸಂಭ್ರಮಿಸುವAತಾಗಿದೆ ಎಂದರು.

ನ್ಯಾ.ನಾಗಮೋಹನ್ ದಾಸ್ ಆಯೋಗ ವರದಿ ಸಲ್ಲಿಸಿದ ಬಳಿಕ ಒಳಮೀಸಲಾತಿ ಜಾರಿ ಆಗದಂತೆ ಅನೇಕ ಶಕ್ತಿಗಳು ಅಡ್ಡಗಾಲು ಹಾಕಿದರು. ಆದರೆ, ತಾವು ಯಾವುದಕ್ಕೂ ಜಗ್ಗದೆ ನುಡಿದಂತೆ ನಡೆದಿದ್ದೀರಿ. ಅದರಲ್ಲೂ ಮಾದಿಗ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ನೀಡಿಯೇ ಸಿದ್ದ ಎಂದು ಅನೇಕ ವರ್ಷಗಳಿಂದ ಹೇಳುತ್ತಿದ್ದ ಮಾತಿನಂತೆ ನಡೆದುಕೊಂಡಿದ್ದೀರಿ. ಈ ಕಾರಣಕ್ಕೆ ಮಾದಿಗ ಸಮುದಾಯ ತಮಗೆ ಸದಾ ಕೃತಜ್ಞರಾಗಿರುತ್ತದೆ ಎಂದು ಹೇಳಿದರು.

ಯಾವುದೇ ಒತ್ತಡಕ್ಕೆ ಮಣಿಯದೆ ಒಳಮೀಸಲಾತಿ ಜಾರಿಗೊಳಿಸಿ ನುಡಿದಂತೆ ನಡೆಯುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದೀರಿ. ಆಯೋಗ ನೀಡಿದ್ದ ಐದು ಗುಂಪುಗಳ ಬದಲಾಗಿ ಮೂರು ವರ್ಗಗಳನ್ನಾಗಿಸಿದ್ದೀರಿ. ಅತ್ಯಂತ ಹಿಂದುಳಿದ ಮಾದಿಗ ಮತ್ತು ಸಂಬAಧಿತ ಜಾತಿಗಳನ್ನು ಎ ಗುಂಪು ಎಂದೇ ಪರಿಗಣಿಸಬೇಕೆಂದು ಕೋರಿದರು.



ಮುಖ್ಯವಾಗಿ ಆಯೋಗ ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕ ಗುಂಪು ಗಳನ್ನಾಗಿಸಿ ಶೇ.1ರಷ್ಟು ಮೀಸಲಾತಿ ಕಲ್ಪಿಸಿತ್ತು. ಆಂಧ್ರ, ತೆಲಂಗಾಣದಲ್ಲಿ ಇದೇ ನೀತಿ ಅನುಸರಿಸಲಾಗಿತ್ತು. ಆದರೆ, ಇದನ್ನು ಕೈಬಿಟ್ಟು ಬೇರೆ ವರ್ಗದಲ್ಲಿ ಸೇರಿಸಿರುವುದು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ಈ ಸಂಬAಧ ಅಲೆಮಾರಿ ಸಮುದಾಯದ ಮುಖಂಡರನ್ನು ಕರೆಯಿಸಿ ಅವರೊಂದಿಗೆ ಚರ್ಚಿಸಿ ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಲು ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅಲೆಮಾರಿಗಳನ್ನು ತಾವು ಕೈಬಿಡಬಾರದು ಎಂದು ಮನವಿ ಮಾಡಿದರು.

ವಕೀಲ ರವೀಂದ್ರ ಮಾತನಾಡಿ, ಒಳಮೀಸಲಾತಿ ಜಾರಿಗೆ ದಶಕಗಳ ಕಾಲದಿಂದಲೂ ಅಡ್ಡಿಯಾಗಿದ್ದವರು ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೂ ತಡೆವೊಡ್ಡುವ ಪ್ರಯತ್ನ ನಡೆಸಿ ದ್ದರು. ತಾವು ಯಾವುದಕ್ಕೂ ಮನ್ನಣೆ ನೀಡದೆ ಜಾರಿಗೊಳಿಸಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಈ ಸಂಬAಧ ಮಾದಿಗ ಮತ್ತು ಇತರ ಸಮುದಾಯಗಳು ತಮ್ಮನ್ನು ಸದಾ ಸ್ಮರಿಸುತ್ತವೆ ಎಂದು ಕೃತಜ್ಞತೆ ಸಲ್ಲಿಸಿದರು.

ಕೊಪ್ಪಳದ ಗುಳೇಪ್ಪ, ಗುಲ್ಬರ್ಗಾದ ಶ್ಯಾಮ್ ನಾಟಿಕೇರ್, ಬೀದರ್‌ನ ಚಂದ್ರಕಾAತ್ ಇಪ್ಪಾಳ್ಗ, ಹೊಸಕೋಟೆ ಸುಬ್ಬಣ್ಣ, ಮಹದೇವ ಪುರದ ಚಿಮ್ಮಿ, ಹಾಸನದ ಶಂಕರ್‌ರಾಜ್, ಚಿತ್ರದುರ್ಗ ಶರಣಪ್ಪ, ನರಸಿಂಹರಾಜ್, ಮಾಗಡಿ ಮಂಜೇಶ್, ಬೆಂಗಳೂರಿನ ಮುತ್ತುರಾಜ್, ರಾಯಚೂರಿನ ಶರಣು ಇತರರಿದ್ದರು.


ಓದಿ ಉನ್ನತ ಸ್ಥಾನಕ್ಕೆ ಏರಿ

ಒಳಮೀಸಲಾತಿಯಲ್ಲಿ ಎ, ಬಿ, ಸಿ ಗುಂಪಿನಲ್ಲಿ ಅತ್ಯಂತ ಹಿಂದುಳಿದ ಗುಂಪಿನಲ್ಲಿಯೇ ಮಾದಿಗ  ಸಮುದಾಯವನ್ನು ಸೇರಿಸಲಾಗಿದೆ. ಈ ವಿಷಯದಲ್ಲಿ ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.  ಒಳಮೀಸಲಾತಿ ಜಾರಿಯ ಆಶಯ ನೀವುಗಳು ಅರಿತುಕೊಳ್ಳಬೇಕು. ಮುಖ್ಯವಾಗಿ ನಿಮ್ಮ ಮಕ್ಕಳು, ಸಮುದಾಯದವರನ್ನು ಶೈಕ್ಷಣಿಕವಾಗಿ ಉನ್ನತಕ್ಕೆ ಕೊಂಡೊಯ್ಯಬೇಕು. ಮೇಲ್ವರ್ಗದ ರೀತಿ ಪರಿಶಿಷ್ಟ ಜಾತಿಯವರು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಮುಖ್ಯವಾಗಿ ನಿಮ್ಮ ಸಮುದಾಯದ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಹೊಣೆಗಾರಿಕೆ ನಿಮ್ಮಗಳ ಮೇಲಿದೆ. ನೀವುಗಳು ಉನ್ನತ ಸ್ಥಾನಕ್ಕೇರಿದರೆ ಮಾತ್ರ ಒಳಮೀಸಲಾತಿ ಆಶಯ, ನನ್ನ ಕಾರ್ಯಕ್ಕೆ ಫಲ ಸಿಗಲಿದೆ ಎಂದು ತಿಳಿಸಿದರು.

ದಲಿತ ಶಕ್ತಿ ಬಲಗೊಳ್ಳಲಿ

ಪರಿಶಿಷ್ಟ ಜಾತಿಯಲ್ಲಿ ಮೂರು ಗುಂಪುಗಳಾಗಿ ವಿಂಗಡಣೆ ಆಗಿರುವ ಎಲ್ಲ ಸಮುದಾಯಗಳು ಸಹೋದರರ ರೀತಿ ಜೀವನ ನಡೆಸಬೇಕು ಎಂದು ಹೆಚ್.ಆಂಜನೇಯ ಹೇಳಿದರು.  ಒಳಮೀಸಲಾತಿ ಜಾರಿ,  ಒಡಹುಟ್ಟಿದವರು ಆಸ್ತಿ ಹಂಚಿಕೆ ಮಾಡಿಕೊಂಡಂತೆ ಅಷ್ಟೇ. ಕಷ್ಟ-ಸುಖಗಳ ಸಂದರ್ಭ ನಾವೆಲ್ಲರೂ ಒಗ್ಗೂಡಬೇಕು. ಯಾವುದೇ ಕಾರಣಕ್ಕೂ ದಲಿತ ಶಕ್ತಿಗೆ ಪೆಟ್ಟಾಗದ ರೀತಿ ಎಚ್ಚರಿಕೆ ವಹಿಸಬೇಕು. ಒಳಮೀಸಲಾತಿ ಜಾರಿ ದಲಿತ ಶಕ್ತಿಯನ್ನು ಇನ್ನಷ್ಟು ಬಲಿಷ್ಠರನ್ನಾಗಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST