ಬೆಂಗಳೂರು: ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಪ್ರಯತ್ನಕ್ಕೆ ಸರ್ಕಾರ ಸ್ಪಂದಿಸಿದ್ದು, ಐತಿಹಾಸಿಕ ಋತುಚಕ್ರ ರಜೆಯನ್ನು ಜಾರಿ ಮಾಡಿದ ಬೆನ್ನಲ್ಲೇ ಮತ್ತೊಂದು ಮಹತ್ವದ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಕಾರ್ಮಿಕ ಇಲಾಖೆಯ ಮತ್ತೊಂದು ಮಹತ್ವದ ಕ್ರಮ ಇದಾಗಿದ್ದು ಕರ್ನಾಟಕ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ವಿಧೇಯಕ, ೨೦೨೬ ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕರ್ನಾಟಕ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ವಿಧೇಯಕ ೨೦೨೬ ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಗೃಹ ಕಾರ್ಮಿಕರು ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಅವರ ಕಲ್ಯಾಣ ಮತ್ತು ಭದ್ರತೆಯ ದೃಷ್ಟಿಯಿಂದ ಈ ವಿಧೇಯಕ ಮಹತ್ವದ ಪಾತ್ರ ವಹಿಸಲಿದೆ. ಆ ಮೂಲಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಶ್ರಮಕ್ಕೆ ಸರ್ಕಾರದ ಸ್ಪಂದನೆ ಸಮಯೋಚಿತವಾಗಿದೆ. ಇದರೊಂದಿಗೆ ಕಾರ್ಮಿಕ ಇಲಾಖೆಯು ಮತ್ತೊಂದು ಮಹತ್ವದ ಕ್ರಮ ಜಾರಿಗೆ ಸರ್ಕಾರ ಮುಂದಾಗಿದೆ.
ಉದ್ದೇಶಿತ ಮಸೂದೆಯು ರಾಜ್ಯದಲ್ಲಿ ಅಧಿಸೂಚಿತವಾಗಿರುವ ಎಲ್ಲಾ ನಗರ ಪಾಲಿಕೆಗಳಿಗೆ ಅನ್ವಯವಾಗಲಿದ್ದು, ಮಸೂದೆಯ ಕರಡನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಮಸೂದೆಯ ಬಗ್ಗೆ ಮನೆಕೆಲಸದವರ ಸಂಘಟನೆಗಳ ಒಕ್ಕೂಟದೊಂದಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಈಗಾಗಲೇ ಚರ್ಚೆ ನಡೆಸಿದ್ದಾರೆ. ಮಸೂದೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಒಂದು ವೇಳೆ ಮಸೂದೆ ಜಾರಿಯಾದರೆ ಇಡೀ ದೇಶದಲ್ಲೇ ಕರ್ನಾಟಕ ಮಾದರಿಯಾಗಲಿದೆ. ಇದು ಮಹಿಳಾ ಸಬಲೀಕರಣದ ಮತ್ತೊಂದು ಉಪಕ್ರಮವಾಗಲಿದೆ.
ಋತುಚಕ್ರ ರಜೆಯನ್ನು ಜಾರಿ ಮಾಡಿದ್ದ ಸಚಿವ ಸಂತೋಷ್ ಲಾಡ್ ಅವರು, ಗೃಹ ಕಾರ್ಮಿಕರ ಕಲ್ಯಾಣ ವಿಧೇಯಕಕ್ಕೆ ಅನುಮೋದನೆ ದೊರಕಿಸಿಕೊಡುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ. ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಸಚಿವ ಲಾಡ್ ಪಣ ತೊಟ್ಟಿದ್ದು, ಅಸಂಘಟಿತ ವರ್ಗದ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಸೌಲಭ್ಯಗಳನ್ನು ಜಾರಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇದೀಗ ಮನೆ ಕೆಲಸದವರಿಗೂ ಸಾಮಾಜಿಕ ಭದ್ರತೆ ಒದಗಿಸುವಲ್ಲಿ ಈ ವಿಧೇಯಕ ಸಹಾಯವಾಗಲಿದೆ.