ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರೈತರ ವಿಚಾರದಲ್ಲಿ ಸರಕಾರ ನಿರ್ಲಕ್ಷ್ಯ ದೋರಣೆ ಅನುಸರಿಸಿದೆ. ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ತಡೆಯುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ಸೂಕ್ತ ಪರಿಹಾರ ಒದಗಿಸಬೇಕು. ರೈತನ ಮನೆಗೆ ಯಾವೊಬ್ಬ ಸಚಿವರೂ ಭೇಟಿ ನೀಡುತ್ತಿಲ್ಲ. ಜಾಹಿರಾತುಗಳ ಮೂಲಕ ಪ್ರಚಾರ ಮಾಡಿಕೊಂಡು ಖಜಾನೆಯನ್ನು ಖಾಲಿ ಮಾಡುತ್ತಿದೆ. ಈ ಸರ್ಕಾರದ ಸಾಧನೆ ಶೂನ್ಯ ಎಂದು ಕಿಡಿಕಾರಿದ ಶ್ರೀರಾಮುಲು ರಾಜ್ಯದಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡ ರೈತರ ಸಮಾಧಿಗಳ ಮೇಲೆ ಸಾಧನಾ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಮೋದಿ, ಸಮಾವೇಶಗಳಲ್ಲಿ ಅಮಿತ್ ಶಾ ಮತ್ತು ಕುಮಾರಸ್ವಾಮಿಯವರನ್ನ ಬೈಯೋದು ಬಿಟ್ಟು ಇವರ ಸಾಧನಾ ಸಮಾವೇಶದಲ್ಲಿ ಬೇರೆ ಏನೂ ಇರೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದಲ್ಲಿ ಒಂದು ಸಾವಿರ ಕೋಟಿ ರೂ. ಹಣ ಮೀಸಲಿಡಲಾಗಿತ್ತು. ಈ ಕಾಂಗ್ರೆಸ್ ಸರಕಾರ ರೈತರಿಗಾಗಿ ಕೇವಲ ನಾಲ್ಕು ನೂರು ಕೋಟಿ ರೂ ಮಾತ್ರ ಮೀಸಲಿಟ್ಟಿದೆ.
ಸರಕಾರಕ್ಕೆ ನಿಜವಾಗಿಯೂ ಕಾಳಜಿ ಇದ್ದರೆ ತುಂಗಭದ್ರಾ ಡ್ಯಾಂ ನ 19 ನೇ ಕ್ರಸ್ಟ್ ಗೇಟ್ ದುರಸ್ಥಿ ಕಾರ್ಯ ಮಾಡಬೇಕಿತ್ತು. ಡ್ಯಾಂನ ಗೇಟ್ ಕಿತ್ತುಹೋದರೂ ದುರಸ್ಥಿ ಮಾಡಿಲ್ಲ. ರೈತರ ಬೆಳೆಗೆ ಉಪಯೋಗಿಸಬೇಕಾಗಿದ್ದ, ನೀರು ನದಿಗೆ ಹರಿಸಿ ವ್ಯರ್ಥ ಮಾಡಲಾಗುತ್ತಿದೆ ಎಂದು ಹೇಳಿದರು.

ಬಳ್ಳಾರಿ ಜಿಲ್ಲೆಗೆ 27 ಸಾವಿರ ಟನ್ ಗೊಬ್ಬರ ಬೇಕಾಗಿದೆ. 32 ಸಾವಿರ ಟನ್ ಗೊಬ್ಬರ ಪೂರೈಸಿದ್ದೇವೆ ಎನ್ನುತ್ತಾರೆ. ರೈತರಿಗೆ ಬೇಕಾದ ಗೊಬ್ಬರ ಎಲ್ಲಿಹೋಗಿದೆ? ಎಂದ ಅವರು, ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟವಾಗುತ್ತಿದೆ. ಕಂಪನಿಗಳು ಡೀಲರ್ ಮೇಲೆ ಒತ್ತಡ ಹಾಕಿ ಬೇರೆ ಉತ್ಪನ್ನಗಳನ್ನ ಖರೀಸಲು ಹೇಳುತ್ತಿದ್ದಾರೆ. ಡೀಲರ್ ಗಳು, ಕಂಪನಿ ನಡುವಿನ ಒತ್ತಡದಲ್ಲಿ ರೈತರು ಬಲಿಯಾಗುತ್ತಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸಚಿವ ಸಂಪುಟದಿAದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಘಟಕದ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಮುಖಂಡರಾದ ಐನಾಥ ರೆಡ್ಡಿ, ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ, ಬೋಜರಾಜು, ಓಬಳೇಶ್, ತಿಮ್ಮಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.