
ನಮ್ಮ ರಾಜಣ್ಣ ನವರು ಕೊಪ್ಪಳ ಲೋಕಸಭಾ ಸದಸ್ಯರಾಗಿದ್ದಾರೆ. ರಾಘಣ್ಣ ಶಾಸಕರಾಗಿ ಹ್ಯಾಟ್ರಿಕ್ ಹೀರೋ ಎನಿಸಿದ್ದೀರಿ. ಸಾಲದ್ದಕ್ಕೆ ಇದೀಗ ಕೆ.ಎಂ.ಎಫ್. ಅಧ್ಯಕ್ಷರೂ ಕೂಡ ಆಗಿದ್ದೀರಿ. ರಾಘಣ್ಣ ನೀವು ಮೂರು ಬಾರಿ ಶಾಸಕರಾಗಿ ಜನಪ್ರಿಯತೆ ಪಡೆದಿದ್ದೀರಿ. ಈ ಅಧಿಕಾರ ಮತ್ತು ಹಣ ಶಾಶ್ವತವಲ್ಲ. ನಿಮಗಿದು ಗೊತ್ತಿರಲಿ. ಆದರೆ ನೀವು ಮಾಡುವ ಸಾಮಾಜಿಕ ಕಾರ್ಯಗಳು ಸೂರ್ಯ ಚಂದ್ರರಿರುವರೆಗೂ ಜನರು ನಿಮ್ಮನ್ನು ಸ್ಮರಿಸುತ್ತಾರೆ ಎನ್ನುವ ಕಲ್ಪನೆ ನಿಮಗಿರಲಿ. ನಿಮ್ಮ ಜೀವನದಲ್ಲಿ ಭಗವಂತ ಅತಿದೊಡ್ಡ ಅವಕಾಶಗಳನ್ನು ನೀಡಿದ್ದಾನೆ. ನಿಮಗೆ ರಾಜಕೀಯ ಮತ್ತು ಆಡಳಿತಾತ್ಮಕ ಗುರುಗಳಾಗಿ ವಿದ್ಯಾರಣ್ಯರ ಸ್ವರೂಪದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿದ್ದಾರೆ. ನಿಮ್ಮ ಪ್ರತಿಯೊಂದು ನಡೆಗಳನ್ನು ತಿದ್ದಿ, ತೀಡಿ ಸರಿದಾರಿಗೆ ತರಲು ಸಾಕ್ಷಾತ್ ಶಿಕ್ಷಕರ ಸ್ಥಾನದಲ್ಲಿ ತಮ್ಮ ತಂದೆಯವರಾದ ಬಸವರಾಜ ಹಿಟ್ನಾಳ ಅಂಕಲ್ ಇದ್ದಾರೆ. ನಿಮ್ಮ ಬೆನ್ನಿಗೆ ಇಡೀ ಕೊಪ್ಪಳ ಕ್ಷೇತ್ರದ ಜನರಿದ್ದಾರೆ.

ಇದೀಗ ಶ್ರಾವಣ ಮಾಸ ಬಂದಿದೆ. ಹಂಪಿ ಪರಿಸರದ ಪಶ್ಚಿಮ ಭಾಗದ ತುತ್ತ ತುದಿಯಲ್ಲಿರುವ ಕೆರೆಹಳ್ಳಿ ಬಳಿಯ ತಿರುಗಲ್ ತಿಮ್ಮಪ್ಪ ಬೆಟ್ಟಕ್ಕೆ ಪ್ರತಿ ಶನಿವಾರ ಭಕ್ತರು ಅಲ್ಲಿಗೆ ತೆರಳುತ್ತಾರೆ. ಶ್ರಾವಣ ಮಾಸದ ಕೊನೆಯ ದಿನ ಅಲ್ಲಿ ಜಾತ್ರೆ ನಡೆಯುತ್ತದೆ. ಬಂಡೆಯೂಟ ನಡೆಯುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಈ ಜಾತ್ರೆ ತುಂಬಾ ವಿಶಿಷ್ಟವಾದುದು. ಇದಕ್ಕೆ ವಿಜಯನಗರ ಕಾಲದಿಂದಲೂ ಗತ ಇತಿಹಾಸವಿದೆ. ಇತಿಹಾಸದಲ್ಲಿ ದಿಂದಿರಿಗಿ ಪಟ್ಟಣವೆಂದು ಕರೆಯುತ್ತಿದ್ದ ಈ ತಾಣ ತಾಯಿ ಅನ್ನಪೂರ್ಣೇಶ್ವರಿಯ ಸನ್ನಿಧಾನ. ಹೈವೇ ನಿರ್ಮಾಣಕ್ಕೆ ಅನ್ನಪೂರ್ಣೇಶ್ವರಿ ದೇವಸ್ಥಾನ ಅತಿಕ್ರಮಿಸಲು ಆ ತಾಯಿ ಬಿಡಲಿಲ್ಲ. ಇದು ಸತ್ವವುಳ್ಳ ಜಾಗ ಎನ್ನುವುದು ನಿಮಗೂ ಗೊತ್ತಿದೆ. ಕೆರೆಹಳ್ಳಿ ತಿರುಗಲ್ ತಿಮ್ಮಪ್ಪ ಬೆಟ್ಟ ನಿಜಕ್ಕೂ ಪ್ರವಾಸಿಗರ ಸ್ವರ್ಗ ಎನಿಸುವುದರಲ್ಲಿ ಸಂದೇಹ ಇಲ್ಲ. ಹೀಗಾಗಿ ಇಲ್ಲಿಗೆ ತೆರಳಲು ಭಕ್ತರಿಗಾಗಿ ಮತ್ತು ಪ್ರವಾಸಿಗರಿಗಾಗಿ ರಸ್ತೆ ನಿರ್ಮಾಣ ಮಾಡಿಕೊಡಿ. ಬೆಟ್ಟದ ಮೇಲೆ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಿರೆಂದು ತಮ್ಮಲ್ಲಿ ಭಕ್ತರ ಪರವಾಗಿ ಕೇಳಿಕೊಳ್ಳುತ್ತಿದ್ದೇನೆ.

ಜೊತೆಗೆ ಅಗಳಕೇರಿ ಬಳಿ ಇರುವ ಶ್ರೀ ಅಂದಿಗಾಲೀಶ ಗುಡ್ಡವೂ ಪ್ರಾಕೃತಿಕ ಸಂಪತ್ತಿನಿAದ ಕೂಡಿದೆ. ಅಂದಿಗಾಲೀಶ ಗುಡ್ಡಕ್ಕೂ ಕೂಡ ಪ್ರತಿ ಶನಿವಾರ ಭಕ್ತರು ಭೇಟಿ ನೀಡುತ್ತಾರೆ. ತುಂಗಭದ್ರಾ ಎಡದಂಡೆ ನಾಲೆಗೆ ಕಾಲು ಸೇತುವೆ ಇರುವುದರಿಂದ ಭಕ್ತರು ಆತಂಕದಿAದ ದಾಟುವ ಪರಿಸ್ಥಿತಿ ಇದೆ. ಹೀಗಾಗಿ ತುಂಗಭದ್ರಾ ಎಡದಂಡೆ ನಾಲೆಗೆ ಸೇತುವೆ ನಿರ್ಮಾಣ ಮಾಡಿ ಭಕ್ತರು ಅಂದಿಗಾಲೀಶನ ದರ್ಶನ ಪಡೆಯಲು ಅನುಕೂಲ ಮಾಡಿಕೊಡಿ. ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಮ್ಮ ಶಿವರಾಜ ತಂಗಡಿಗಿ ಅವರಿದ್ದಾರೆ. ರಾಜಣ್ಣ, ರಾಘಣ್ಣ ಮತ್ತು ಶಿವರಾಜ ತಂಗಡಿಗಿ ಅವರು ಮನಸ್ಸು ಮಾಡಿದರೆ ನಮ್ಮ ಕೊಪ್ಪಳ ಜಿಲ್ಲೆ ಇಡೀ ವಿಶ್ವದಲ್ಲಿಯೇ ಹೆಸರುವಾಸಿಯಾಗುವುದರಲ್ಲಿ ಸಂದೇಹವಿಲ್ಲ. ಆಂಧ್ರಪ್ರದೇಶದಲ್ಲಿ ತಿರುಪತಿ (ಟಿಟಿಡಿ) ಇರುವಂತೆ ಕರ್ನಾಟಕದಲ್ಲೂ ಅದರಲ್ಲೂ ನಮ್ಮ ಕೊಪ್ಪಳ ಜಿಲ್ಲೆಯ ಕೆರೆಹಳ್ಳಿ-ಅಗಳಕೇರಿ ಪರಿಸರದಲ್ಲಿ ತಿರುಗಲ್ ತಿಮ್ಮಪ್ಪ ದೇವಸ್ಥಾನ(ಟಿಟಿಡಿ), ತೇರಿನ ಹನುಮಂತರಾಯ ಮತ್ತು ಲಕ್ಷಿö್ಮÃದೇವಿ ಮಂದಿರಗಳನ್ನು ಅಭಿವೃದ್ಧಿಪಡಿಸಿದರೆ ಭವಿಷ್ಯದ ದಿನಗಳಲ್ಲಿ ಈ ಕ್ಷೇತ್ರ ತಿರುಪತಿಯಂತೆಯೇ ಪ್ರಸಿದ್ಧಿ ಪಡೆಯುವುದರಲ್ಲಿ ಸಂದೇಹವಿಲ್ಲ. ಜೊತೆಗೆ ಅಗಳಕೇರಿ ಬಳಿ ಇರುವ ಶ್ರೀ ಅಂದಿಗಾಲೀಶ ಗುಡ್ಡವನ್ನೂ ತಾವು ಅಭಿವೃದ್ಧಿಪಡಿಸಿದರೆ ತಿರುಪತಿ, ಧರ್ಮಸ್ಥಳ ಮಾದರಿಯಲ್ಲಿ ಪುಣ್ಯಕ್ಷೇತ್ರಗಳಾಗಿ ಹೊರ ಹೊಮ್ಮುತ್ತವೆ. ನಿಮ್ಮ ಕುಟುಂಬದ ಹೆಸರು ಆ ಸೂರ್ಯ ಚಂದ್ರರಿರುವವರೆಗೆ ಉಳಿಯುತ್ತದೆ. ಇತಿಹಾಸದಲ್ಲಿ ಶ್ರೀಕೃಷ್ಣದೇವರಾಯನ ಚರಿತ್ರೆ ಹೇಗೆ ಉಳಿದಿದೆಯೋ ಹಾಗೆ *ಹಿಟ್ನಾಳ ಸಹೋದರರ ಕೀರ್ತಿ ಉಳಿಯುವುದರಲ್ಲಿ ಸಂದೇಹವಿಲ್ಲ.
ನೀವು ಕೂಡ ಧಾರ್ಮಿಕ ಮನೋಭಾವನೆಗಳನ್ನು ಉಳ್ಳವರು ಮತ್ತು ಜನಪರ ಕಾಳಜಿ ಇರುವವರಿದ್ದೀರಿ. ನಮ್ಮ ಕೆರೆಹಳ್ಳಿ ಮತ್ತು ಅಗಳಕೇರಿ ಗುಡ್ಡದ ಪರಿಸರವನ್ನು ಮುಂದಿನ ಭವಿಷ್ಯತ್ತಿಗಾಗಿ ಉಳಿಸಿ ಬೆಳೆಸಲು ಅಲ್ಲಿ ದೇವಸ್ಥಾನಗಳ ಅಭಿವೃದ್ಧಿ ಮತ್ತು ಭಕ್ತರಿಗೆ ಬಂದು ಹೋಗಲು ರಸ್ತೆ, ಕುಡಿಯುವ ನೀರು ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರೆ ಮುಂದಿನ ದಿನಗಳಲ್ಲಿ ಇದೊಂದು ರಾಜ್ಯದ ಅತಿದೊಡ್ಡ ಪ್ರವಾಸಿ ತಾಣ ಮತ್ತು ತಿರುಪತಿ ಮಾದರಿಯಲ್ಲಿ ಬೆಳೆಯುವುದರಲ್ಲಿ ಸಂದೇಹವಿಲ್ಲ. ಇದರಿಂದ ನಿಮಗೂ, ನಿಮ್ಮ ಕುಟುಂಬಕ್ಕೂ ಮತ್ತು ನಿಮ್ಮ ಮಕ್ಕಳಿಗೂ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ. ನೀವೂ ಕೂಡ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಧೃವತಾರೆಗಳಾಗಿ ಹೊರ ಹೊಮ್ಮುವುದರಲ್ಲಿ ಸಂದೇಹವಿಲ್ಲ.
ಕೊಪ್ಪಳ ಕ್ಷೇತ್ರದ ಜನತೆಗಾಗಿ, ನಾಡಿನ ಘನತೆಗಾಗಿ, ನಿಮ್ಮಗಳ ಹಿತಕ್ಕಾಗಿ ಮತ್ತು ಭವಿಷ್ಯದ ದಿನಗಳಲ್ಲಿ ನಿಮ್ಮ ಕುಟುಂಬವನ್ನು ಇಡೀ ಸಮುದಾಯವೇ ಸ್ಮರಿಸುತ್ತಿರಲಿ ಎನ್ನುವ ಕಾರಣಕ್ಕೆ ಓರ್ವ ಸಹೋದರನಾಗಿ ನನ್ನ ಅನಿಸಿಕೆಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬರೆದಿದ್ದೇನೆ. ತಾವೂ ಕೂಡ ಬಲ್ಲವರಿದ್ದೀರಿ. ಧಾರ್ಮಿಕ ಜೀವಿಗಳಿದ್ದೀರಿ. ನಿಮ್ಮೊಂದಿಗೆ ಹಿರಿಯ ರಾಜಕೀಯ ಅನುಭವಿಗಳಾದ ಕರಡಿ ಸಂಗಣ್ಣನವರೂ ಇದ್ದಾರೆ. ನೀವೆಲ್ಲ ಮನಸ್ಸು ಮಾಡಿದರೆ ತಿರುಪತಿಯನ್ನು ಇದೇ ನಮ್ಮ ಕೆರೆಹಳ್ಳಿ ತಿರುಗಲ್ ತಿಮ್ಮಪ್ಪನ ಬೆಟ್ಟದಲ್ಲಿ ಸೃಷ್ಟಿಸಬಲ್ಲಿರಿ. ನಿಮಗೆ ಆ ಶಕ್ತಿ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ನೀವು ಕನಕನ ಕುಲದವರು ಎನ್ನುವುದನ್ನು ಮರೆಯಬೇಡಿ. ತಿರುಗಲ್ ತಿಮ್ಮಪ್ಪ ಬೆಟ್ಟ ಅಭಿವೃದ್ಧಿಪಡಿಸುವ ಮೂಲಕ ನಾಡಿನಲ್ಲಿ ಹಿಟ್ನಾಳ ಕುಟುಂಬ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿ ಎಂದು ಭಕ್ತರ ಪರವಾಗಿ ಭಾವಿಸಿದ್ದೇನೆ.

ಎಂ.ವಿ.ಜೋಷಿ, ಪತ್ರಕರ್ತರು, ಶಹಪುರ.