ಶಿಕ್ಷಣ ಹಾಗೂ ವಸತಿ ಸೌಲಭ್ಯಗಳನ್ನು ಒದಗಿಸಿದ್ದು, ಇದರ ಪ್ರಯೋಜನ ಪಡೆಯುವುದು ಹೆಣ್ಣು ಮಕ್ಕಳ ಕರ್ತವ್ಯವಾಗಿದೆ. ಶಿಕ್ಷಣ ಪಡೆದು ಹೆಣ್ಣು ಮಕ್ಕಳು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಯತ್ನಿಸಬೇಕು. ತಾವು ಅಬಲೆಯರು ಎನ್ನುವ ಕೀಳರಿಮೆ ತೊರೆದು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಶಿಕ್ಷಣ ಕಲಿತ ಹೆಣ್ಣು ಮಕ್ಕಳು ಕೌಟುಂಬಿಕ ಟ್ಟುಪಾಡುಗಳಿಗೆ ಗೌರವ ಕೊಡಬೇಕು. ಹಾಗಂತ ಮೂಢ ನಂಬಿಕೆಗಳಿಗೆ ತಮ್ಮನ್ನು ಒಗ್ಗಿಸಿಕೊಳ್ಳಬಾರದು. ಅಂಕಿಅಂಶಗಳ ಪ್ರಕಾರ ಇಂದು ಗಂಡಸರಿಗಿಂತ ಹೆಣ್ಣು ಮಕ್ಕಳೇ ಸ್ಟಾçಂಗ್ ಎನ್ನುವುದು ನಿರೂಪಿತವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಹೆಣ್ಣು ಮಕ್ಕಳು ತಾಳಿ ಕಟ್ಟಿದ ಗಂಡನಿಗೆ ಶೋಷಣೆ ಮಾಡುವುದು, ಪೋಷಕರನ್ನು ಧಿಕ್ಕರಿಸುವುದು, ಕುಟುಂಬ ಸದಸ್ಯರನ್ನು ಹೀಗಳೆಯುವುದು ಮಾಡಬಾರದು. ತಾವು ಎಷ್ಟೇ ಉನ್ನತ ಶಿಕ್ಷಣ, ವ್ಯಾಸಂಗ ಮಾಡಿರಲಿ ತಮ್ಮ ಇತಿಮಿತಿಯಲ್ಲಿರಬೇಕು. ಕುಟುಂಬದ ಸೌಖ್ಯದೊಂದಿಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ಅರಿತಿರಬೇಕು. ಹೆಣ್ಣು ಮಕ್ಕಳು ಶಿಕ್ಷಣ, ಆರೋಗ್ಯದೊಂದಿಗೆ ಆರ್ಥಿಕವಾಗಿ ಸಬಲರಾಗಿದ್ದೇವೆ ಎನ್ನುವ ಕಾರಣಕ್ಕೆ ತಮ್ಮಷ್ಟಕ್ಕೆ ತಾವಿರದೇ ಕುಟುಂಬ ಹಾಗೂ ಸಮಾಜದಲ್ಲಿ ತಮ್ಮ ಅಸ್ತಿತ್ವದ ಅಸ್ಮಿತೆ ಮೂಡಿಸಲು ಯತ್ನಿಸಬೇಕು.

ಲೋಕಮತ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಹೆಣ್ಣು ಮಕ್ಕಳಿಗೆ ಖುಷಿ ತಂದರೂ, ಸಾಮಾಜಿಕ ಕಟ್ಟುಪಾಡುಗಳಿಗೆ ಅನುಗುಣವಾಗಿ ಹೆಣ್ಣು ಮಕ್ಕಳು ಹೊಂದಿಕೊಳ್ಳಬೇಕು. ಲೋಕಮತ್ ವರದಿಯಲ್ಲಿರುವಂತೆ ಆರು ವರ್ಷಗಳ ಅಂತ್ಯದ ವೇಳೆಗೆ ಜಗತ್ತಿನ 45% ಹುಡುಗಿಯರು ಕನ್ಯೆಯರಾಗಿಯೇ ಉಳಿಯುತ್ತಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ಇದು ಎಷ್ಟರ ಮಟ್ಟಿಗೆ ಸರಿ? ಎನ್ನುವ ವಿಚಾರ ಇದೀಗ ಚರ್ಚೆಗೆ ಗುರಿಯಾಗಿದೆ. ಅಂತರರಾಷ್ಟ್ರೀಯ ಸಮೀಕ್ಷಾ ವರದಿ ಪ್ರಕಾರ ಮಾರ್ಗನ್ ಸ್ಟ್ಯಾನ್ಲಿ ಎಂಬ ಸಂಸ್ಥೆಯು ಹುಡುಗಿಯರ ವಿವಾಹದ ಕುರಿತಾದ ತನ್ನ ಅಂತರರಾಷ್ಟ್ರೀಯ ಸಮೀಕ್ಷಾ ವರದಿಯಲ್ಲಿ ಆರು ವರ್ಷಗಳ ಅಂತ್ಯದ ವೇಳೆಗೆ, ವಿಶ್ವದ 45% ಹುಡುಗಿಯರು ಅವಿವಾಹಿತರಾಗಿಯೇ ಉಳಿಯುತ್ತಾರೆ ಎಂದು ಹೇಳಿದೆ. ಇಕ್ಕೆ ಕಾರಣ ಹಲವಾರು ಇರಬಹುದು. ಇದರಲ್ಲಿ ಪ್ರಮುಖವಾಗಿ ಉನ್ನತ ಶಿಕ್ಷಣ ಪಡೆದ ಹುಡುಗಿಯರ ಶೇಕಡಾವಾರು ಹೆಚ್ಚಳ, ತಮ್ಮ ವೃತ್ತಿಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು, ಅವರ ಪ್ರಗತಿ ಅವರಿಗೆ ಮುಖ್ಯವಾಗಿರುವುದು, ಯಾರನ್ನೂ ಅವಲಂಬಿಸದೇ ಇರುವುದು, ಸ್ವಾತಂತ್ರ‍್ಯ ಬಯಸಿ, ಯಾರಿಗೂ ಬದ್ಧವಾಗಿರಲು ಇಷ್ಟವಿಲ್ಲದಿರುವುದು, ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ತನ್ನ ಇಚ್ಛೆಯಂತೆ ತನ್ನ ಜೀವನವನ್ನು ನಡೆಸಲು ಬಯಸುವುದು, ಮದುವೆಯ ಬಂಧಗಳಲ್ಲಿ ಬಂಧಿಸಲ್ಪಡಲು ಬಯಸದೇ ಇರುವುದು, ದೊಡ್ಡ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವುದು, ದೊಡ್ಡ ಪ್ಯಾಕೇಜ್‌ಗಳೂ ಸಿಗುತ್ತಿರುವುದು ಇದಕ್ಕೆ ಕಾರಣವೆನ್ನಲಾಗುತ್ತಿದೆ.

ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಿರುವುದು, ಹೊಸ ದಾಖಲೆಗಳನ್ನು ನಿರ್ಮಿಸುತ್ತಿರುವುದು, ಮದುವೆಯ ವಯಸ್ಸನ್ನು ದಾಟಿದ ನಂತರವೂ ಅವರು ಮದುವೆಯಾಗದಿರುವುದು, ಓದುವಾಗ, ಉದ್ಯೋಗ ಪಡೆಯುವಾಗ ಮತ್ತು ನಂತರ ಸಂಬಂಧವನ್ನು ಹುಡುಕುವಾಗ ವಯಸ್ಸು ಹೆಚ್ಚುತ್ತಿದೆ. ಹೆಚ್ಚಿನ ವಿದ್ಯಾವಂತ ಯುವತಿಯರು ವಯಸ್ಸಾದಂತೆ ಸಮಾನವಾದ ವಿವಾಹ ಪ್ರಸ್ತಾಪಗಳನ್ನು ಕಂಡುಹಿಡಿಯುವುದು ಕಷ್ಟಕರವಾಗುತ್ತದೆ. ಹುಡುಗಿಯರು ದೊಡ್ಡವರಾದ ನಂತರ ಮದುವೆಯಲ್ಲಿ ಆಸಕ್ತಿ ಕಳೆದುಕೊಳ್ಳುರುವುದು, ಮದುವೆಯಾಗುವುದು ಮತ್ತು ಮಗುವನ್ನು ಹೊಂದುವುದು ತನ್ನ ಪ್ರಗತಿಗೆ ಒಂದು ಅಡಚಣೆ ಎಂದು ಪರಿಗಣಿಸುವುದು, ಈ ಬಿಕ್ಕಟ್ಟನ್ನು ತಪ್ಪಿಸಲು ಯುವತಿಯರು ಮತ್ತು ಹುಡುಗರು 23 ರಿಂದ 25 ವರ್ಷ ವಯಸ್ಸಿನೊಳಗೆ ಮದುವೆಯಾಗುವಂತೆ ಸಮಾಜದಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಕುಟುಂಬ ವ್ಯವಸ್ಥೆ ನಶಿಸಿ ಹೋಗುತ್ತದೆ. ಆಗ ಮಕ್ಕಳೇ ಅಪರೂಪ ಆಗುತ್ತಾರೆ. ಈ ದಿಸೆಯಲ್ಲಿ ಜಾಗೃತಿ ಅಗತ್ಯ.