ಜನಮಾನಸದಲ್ಲಿ ಅಚ್ಚಳಿಯದ ಹೆಗ್ಗುರುತುಗಳನ್ನು ಮೂಡಿಸಿರುವ ಡಾ. ಪರಮೇಶ್ವರ್ ಜನರಿಂದ, ಜನರಿಗಾಗಿ, ಜನರಿಗೋಸ್ಕರವೇ ತಮ ಬದುಕು ಸಮರ್ಪಿಸಿಕೊಂಡಿರುವ ಧೀಮಂತ ನಾಯಕ. ಕಲ್ಪತರು ನಾಡಿನಲ್ಲಿ ಪ್ರಬಲ ಸಮುದಾಯಗಳ ನಡುವೆ ಕಲ್ಪವೃಕ್ಷದಂತೆ ಎಲ್ಲರಿಗೂ ಬೇಕಾದ ನಾಯಕರಾಗಿ ಹೊರ ಹೊಮಿದ್ದಾರೆ.

ಸಾಮಾಜಿಕ ನ್ಯಾಯ, ಸಮಾನತೆ, ಸಂಘಟನೆ, ಸಂಘರ್ಷದ ಬದುಕು ಅವರ ಜೀವನದ ಪ್ರಮುಖ ಅಧ್ಯಾಯದ ಪುಟಗಳು. 1951ರ ಆಗಸ್ಟ್ 6ರಂದು ತುಮಕೂರು ತಾಲೂಕಿನ ಗೊಲ್ಲಳ್ಳಿಯಲ್ಲಿ ಜನಿಸಿದ ಡಾ. ಪರಮೇಶ್ವರ್ ಆಸ್ಟ್ರೇಲಿಯಾದ ಅಡಿಲೇಡ್ ವಿಶ್ವವಿದ್ಯಾಲಯದಲ್ಲಿ ಸಸ್ಯ ಶರೀರಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಎನ್.ಸಿ.ಸಿ. ಸೇರಿದ್ದ ಅವರು, ಉತ್ತಮ ಕ್ರೀಡಾಪಟು. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ 100 ಮೀಟರ್ ಓಟದಲ್ಲಿ 10.9 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ, ಮಹತ್ವದ ದಾಖಲೆ ನಿರ್ಮಿಸಿದ್ದಾರೆ. ಬಳಿಕ ಅಂತರ್ ಕಾಲೇಜು, ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವುದು ಅವರ ಹೆಗ್ಗಳಿಕೆ. ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಉತ್ತಮ ಕೆಲಸ ಮಾಡಿದ್ದಾರೆ. ವಿದೇಶದಲ್ಲಿ ಅಧ್ಯಯನ ಮಾಡಿದ ನಂತರ ಅವರು ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೊತ್ತುಕೊಂಡರು. ಇದೀಗ ಈ ಶಿಕ್ಷಣ ಸಂಸ್ಥೆ 350ಕ್ಕೂ ಹೆಚ್ಚು ಶಾಲಾ, ಕಾಲೇಜುಗಳನ್ನು ಹೊಂದಿದೆ. ಇಷ್ಟೊಂದು ಅಕ್ಷರ ಸೇವೆ ಮಾಡಿದ ಮತ್ತೊಬ್ಬ ದಲಿತ ನಾಯಕರು ರಾಜ್ಯದಲ್ಲಿ ಕಾಣಸಿಗುವುದಿಲ್ಲ.
1987 ರಲ್ಲಿ ವೈದ್ಯಕೀಯ ಕಾಲೇಜು ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ್ದ ಕಾಂಗ್ರೆಸ್ ವರಿಷ್ಠ ರಾಜೀವ್ ಗಾಂಧಿ, ಡಾ. ಜಿ. ಪರಮೇಶ್ವರ್ ಅವರನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ, ನೀವು ರಾಜಕೀಯಕ್ಕೆ ಬರುವಂತೆ ಆಹ್ವಾನ ನೀಡಿದರು. ಬಳಿಕ ಡಾ.ಜಿ ಪರಮೇಶ್ವರ್ 1989ರಲ್ಲಿ ಮಧುಗಿರಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ಶಾಸಕರಾದರು. 1993ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ, ಎಸ್.ಎಂ ಕೃಷ್ಣ ಸರ್ಕಾರದಲ್ಲಿ ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ, ಕಾರ್ಮಿಕ, ಸಣ್ಣ ನೀರಾವರಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.2014ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹಸಚಿವರಾಗಿದ್ದರು. 2018ರಲ್ಲಿ ಸಮಿಶ್ರ ಸರ್ಕಾರದಲ್ಲಿ 8ನೇ ಡಿ.ಸಿ.ಎಂ ಆಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೂಡ ಕಾರ್ಯ ಮಾಡಿದ ಅವರು, 7 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, 5 ಬಾರಿ ಶಾಸಕರಾಗಿ ಆಯ್ಕೆಯಾಗಿರುವುದು ಅವರ ವಿಶೇಷತೆ.

ರಾಜ್ಯದ ದಲಿತ ಸಮುದಾಯ, ಪ್ರಮುಖ ಸಮುದಾಯಗಳು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿಶ್ವಾಸಗಳಿಸಿದ್ದಾರೆ. ಗೌಡರು, ಲಿಂಗಾಯಿತರ ಪ್ರಾಬಲ್ಯದ ತುಮಕೂರು ಜಿಲ್ಲೆಯ ಮತದಾರರ ಜೊತೆ ಉತ್ತಮ ಸಂಪರ್ಕ ಹೊಂದಿದ್ದಾರೆ. ವೈರತ್ವ ಬೆಳೆಸಿಕೊಳ್ಳದೇ, ತಾವಾಯಿತು, ತಮ ಕೆಲಸವಾಯಿತು ಎನ್ನುವಂತೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ವಿವಾದಗಳಿಂದ ದೂರವಿರುವ ಅವರು, ದಲಿತ ಸಮುದಾಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಂತರ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಅಧಿಕಾರ, ಹಣವಿದೆ ಎಂದು ಅಹಂ ತೋರಿಸಿಲ್ಲ. ಮೃದು ಸ್ವಭಾವದ ಅವರು ಘಟಾನುಘಟಿ ರಾಜಕಾರಣಿಗಳ ನಡುವೆ ತನ್ನದೇ ಆದ ಛಾಪು ಮೂಡಿಸಿದ್ಧಾರೆ. ಸುಶಿಕ್ಷಿತ ನಾಯಕ. ಡೀಸೆಂಟ್ ರಾಜಕಾರಣಿ. ಕೆಪಿಸಿಸಿ ಅಧ್ಯಕ್ಷರಾದ ನಂತರ ದಲಿತ ಸಮುದಾಯದ ದೊಡ್ಡ ನಾಯಕರಾಗಿ ಬೆಳೆದರು. ಪಕ್ಷದ ಚುಕ್ಕಾಣಿ ಹಿಡಿದ ನಂತರ ಅವರು ಎಂದಿಗೂ ಪಕ್ಷದಲ್ಲಿ ಹಿರಿತನ ಕುಂದಿಸುವ ಪ್ರಯತ್ನ ಮಾಡಲಿಲ್ಲ. ಖರ್ಗೆ ಅವರ ಜೊತೆ ನಿಕಟವಾದ ಸಂಬಂಧ ಹೊಂದಿದ್ದಾರೆ.
2010ರಿಂದ 2018ರವರೆಗೂ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ದೀರ್ಘ ಅವಧಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು. ಪಕ್ಷಕ್ಕೆ ಕ್ಲೀನ್ ಇಮೇಜ್ ತಂದುಕೊಟ್ಟ ನಾಯಕ. ಕರಾವಳಿಯಲ್ಲಿ ಕೋಮು ಸೌಹಾರ್ದತೆ ತರುವ ನಿಟ್ಟಿನಲ್ಲಿ ಶ್ರಮಿಸಿದರು.
ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ
ಕಾಂಗ್ರೆಸ್ ನಡಿಗೆ ಕರಾವಳಿಯೆಡೆಗೆ
ಉಡುಪಿಯಿಂದ ಉಲ್ಲಾಳದವರೆಗೆ ಪಾದಯಾತ್ರೆ ಮಾಡುವ ಮೂಲಕ ಕರಾವಳಿ ಭಾಗದ ಬಿಜೆಪಿಯ ಭದ್ರಕೋಟೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನೆಲೆಯೂರುವಂತೆ ಮಾಡಿದರು.
ಪರಮೇಶ್ವರ್ ಅವರ ಹೋರಾಟದ ಪ್ರತಿಯೊಂದು ಹೆಜ್ಜೆಯಲ್ಲಿ ನಾನು ಕೂಡ ಹೆಜ್ಜೆ ಹಾಕಿದ್ದೇನೆ ಎಂಬುದು ಹೆಮೆಯ ವಿಷಯ.

2013ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ತಾವು ಸ್ಪರ್ಧಿಸಿದ್ದ ಕೊರಟಗೆರೆಗಿಂತ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂಬ ಛಲದಿಂದ ಕಾರ್ಯನಿರ್ವಹಿಸಿದ ನೇತಾರರಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿದ್ದಾರೆ. ಪರಮೇಶ್ವರ್ ಅವರು ರಾಜಕೀಯ ಬದುಕಿನ ಮಹತ್ವದ ಕಾಲಘಟ್ಟದಲ್ಲಿ ಪರಾಭವಗೊಂಡದದ್ದನ್ನು ಈಗಲೂ ಅರಗಿಸಿಕೊಳ್ಳಲು ಅವರ ಬೆಂಬಲಿಗರಿಗೆ ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿ ರೇಸ್‌ನಲ್ಲಿರಬೇಕಾದವರು ನೇಪಥ್ಯಕ್ಕೆ ಸರಿಯುವಂತಾಗಿದ್ದು, ನಿಜಕ್ಕೂ ಈ ನಾಡಿನ ದುರಂತ. 2023 ರಲ್ಲಿ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಪರಿಶಿಷ್ಟರಿಗೆ ಒಳ ಮೀಸಲಾತಿ ಜಾರಿಗೊಳಿಸುವ ಆಶ್ವಾಸನೆ ನೀಡಿದ್ದರು. ನಂತರ ತಮ ಸಮುದಾಯದ ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ. ತಿಮಾಪುರ ಮಾಜಿ ಸಚಿವ ಎಚ್. ಆಂಜನೇಯ ಮತ್ತಿತರರ ಜೊತೆ ನಿರಂತರ ಸಭೆಗಳನ್ನು ನಡೆಸಿ ಜಸ್ಟೀಸ್ ನಾಗಮೋಹನ್ ದಾಸ್ ಅವರಿಂದ ವರದಿ ಪಡೆಯುವವರೆಗೆ ಅವಿರತವಾಗಿ ಶ್ರಮಿಸಿದ್ದಾರೆ.
ಡಾ. ಜಿ. ಪರಮೇಶ್ವರ್ ಗೃಹ ಸಚಿವರಾಗಿರುವ ಇವರ ಕಾಲದಲ್ಲೇ ಘಟಾನುಘಟಿಗಳು ಜೈಲು, ಬೇಲುಗಳಿಗಾಗಿ ಎಡತಾಕುವಂತೆ ಮಾಡಿದ್ದಾರೆ. ಶ್ರೀ ಕೃಷ್ಣ ಜನ್ಮಸ್ಥಾನ ಇನ್ನೂ ಹಲವು ಪ್ರಭಾವಿಗಳಿಗಾಗಿ ಕಾಯುತ್ತಿದೆ. ಪೊಲೀಸರಿಗೆ ಮುಕ್ತ ಅಧಿಕಾರ ನೀಡಿ ಉತ್ತಮ ಕೆಲಸ ಮಾಡುವಂತೆ ಹುರಿದುಂಬಿಸುತ್ತಿದ್ದಾರೆ. ಅಧಿಕಾರದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಡಾ. ಪರಮೇಶ್ವರ್ ಅವರ ರಾಜಕೀಯ ಬದುಕು ಉತ್ತುಂಗಕ್ಕೇರಲಿ ಎಂದು ಹಾರೈಸುತ್ತೇನೆ.

ಡಾ.ಆನಂದ ಕುಮಾರ್ ಕೆಪಿಸಿಸಿ ಕಾರ್ಯದರ್ಶಿ