LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪರೀಕ್ಷೆಯ ಬಗ್ಗೆ ಆತಂಕ ಬೇಡ ಆತ್ಮ ವಿಶ್ವಾಸವಿರಲಿ

ಜೀವನ ಎನ್ನವುದೆ ಒಂದು ಪರೀಕ್ಷೆ .ಹುಟ್ಟಿನಿಂದ ಸಾವಿನ ತನಕ ಮಾನವ ಸಾವಿರಾರು ಪರೀಕ್ಷೆಗಳನ್ನು ಎದುರಿಸುತ್ತಾನೆ.ಕೆಲವನ್ನು ಗೆಲ್ಲುತ್ತಾನೆ ಕೆಲವನ್ನು ಸೋಲುತ್ತಾನೆ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೆ ಗೆಲ್ಲುತ್ತಾನೆ.ಹೀಗೆ ಬದುಕಿನುದ್ದಕ್ಕೂ ಸೋಲು ಗೆಲುವಿನ ಚದುರಂಗದಾಟ ನಡದೇ ಇರುತ್ತದೆ,ಅಂದರೆ ಪರೀಕ್ಷೆ ಎನ್ನುವುದು ಮಾನವನಲ್ಲಿ ಅಡಕವಾಗಿರುವ ಜಾಣ್ಮೆ ತಾಳ್ಮೆ ವಿನಯತೆ ವಿಶೇಷತೆ ವಿಭಿನ್ನತೆ ದೋಷ ರೋಷ ಎಲ್ಲವನ್ನೂ ಪತ್ತೆ ಹಚ್ಚುತ್ತದೆ,ಹಾಗಾಗಿ ಪರೀಕ್ಷೆಗೆ  ಮಹತ್ವವಿದೆ, ಹಾಗಂತ ಪರೀಕ್ಷೆಗೆ ಹೆದರಿ ಓಡಬೇಕಾಗಿಲ್ಲ ಎದುರಿಸಿ ಗೆಲ್ಲಬೇಕು .ಗೆಲುವಿಗೆ ಬೇಕಾದ ಸಿದ್ಧತೆ ಮಾಡಿಕೊಂಡು ಗುರಿಯನ್ನು ಮುಟ್ಟಬೇಕು ,ಈಗ ಈ ವಿಷಯವನ್ನು ಏಕೆ ಪ್ರಸ್ತಾಪಿಸುತ್ತಿದ್ದೇನೆಂದರೆ ನಾಳೆಯಿಂದ ಅಂದರೆ ೨೮.೨.೨೫ ರಿಂದ  ದ್ವಿತೀಯ ಪಿ.ಯು.ಸಿ ಮಕ್ಕಳ   ಪರೀಕ್ಷೆ ಪ್ರಾರಂಭವಾಗುತ್ತಿವೆ. ಮಾರ್ಚ್ ತಿಂಗಳೆಂದರೆ  ವಿದ್ಯಾರ್ಥಿಗಳ ಪರೀಕ್ಷೆಯ ಕಾಲ ವರ್ಷವಿಡೀ ಓದಿದ್ದನ್ನು ಮೂರು ಗಂಟೆಯಲ್ಲಿ ಬರೆಯಬೇಕಾದ ಒಂದು ವಿಧಾನ,ಆದರೆ ಪರೀಕ್ಷೆ ಎಂಬ ಶಬ್ಧ ಕೇಳಿದೊಡನೆ ವಿದ್ಯಾರ್ಥಿಗಳ ಮನದ ಮೂಲೆಯಲ್ಲಿ ಅಡಗಿದ್ದ ಆತಂಕ ಭಯ ಉದ್ವೇಗ ಎಲ್ಲವೂ ತಾ ಮುಂದು ನಾ ಮುಂದು ಎಂದು ಲಗ್ಗೆ ಇಟ್ಟು ಲವಲವಿಕೆಯಿಂದ‌ ಅರಳಿದ  ಹೂವ್ವಿನಂತೆ ಇದ್ದ ಹುಡುಗ   ಬಾಡಿದ ಹೂವ್ವಿನಂತಾಗುತ್ತಾನೆ. ಕಾರಣ ಅವನಲ್ಲಿನ ಪರೀಕ್ಷಾ ಭಯ ಪ್ರಿಯ ವಿದ್ಯಾರ್ಥಿ ಮಿತ್ರರೆ ಪರೀಕ್ಷೆ ಎಂದರೆ ಆತಂಕಬೇಡ ಆತ್ಮ ವಿಶ್ವಾಸವಿರಲಿ ಭಯಬೇಡ ಉತ್ಸಾಹವಿರಲಿ ಪರೀಕ್ಷೆ ಒಂದು ಹಬ್ಬ ಬನ್ನಿ ಸಂಭ್ರಮಿಸೋಣ

 

ಅಂತಿಮ ಪರೀಕ್ಷೆ ಎಂದರೆ ಭಯವೇಕೆ?

ಪ್ರಿಯ ಮಿತ್ರರೆ ನೀವು ಈಗಾಗಲೇ  ನಿಮ್ಮ ಪಠ್ಯಕ್ರಮಕ್ಕೆ ಸಂಬಂದಿಸಿದಂತೆ ಐದರಿಂದ ಆರು ಪರೀಕ್ಷೆಯನ್ನು ನಿಮ್ಮ ಕಾಲೇಜು ಹಂತದಲ್ಲಿ ಬರೆದಿದ್ದೀರಿ , ಪಠ್ಯಕ್ರಮ ಗೊತ್ತಿದೆ ಪ್ರಶ್ನೆ ಪತ್ರಿಕೆಯ ಮಾದರಿ ಗೊತ್ತಿದೆ ಯಾವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದನ್ನು ನಿಮ್ಮ ಗುರುಗಳು ಹೇಳಿದ್ದಾರೆ  ಈಗಾಗಲೆ ನಿಮಗೇ ನಿಮ್ಮ ಬಲ ಯಾವುದು? ದೌರ್ಬಲ್ಯ ಯಾವುದು? ಅದನ್ನು ಹೇಗೆ ಸರಿಪಡಿಸಿಕೊಳಬೇಕು ಎಲ್ಲವು ತಿಳಿದಿದೆ. ಇಷ್ಟೆಲ್ಲಾ ಮಾಹಿತಿ ತಿಳಿದಿರುವ ನೀವು ಅಂತಿಮ ಪರೀಕ್ಷೆ ಎಂದ ಕೂಡಲೆ ಭಯ ಪಡುವುದೇಕೆ? ಎಲ್ಲ ಪರೀಕ್ಷೆಯಂತೆ ಇದು ಒಂದು ಪರೀಕ್ಷೆ ಅಷ್ಟೆ .ಅದೇ ಪ್ರಶ್ನೆ ಪತ್ರಿಕೆ ಅದೇ ಉತ್ತರ ಪತ್ರಿಕೆ  ಪ್ರಶ್ನೆಗಳು ಕೂಡ ನೀವು ಓದಿದವುಗಳೆ !ಹೀಗಿರುವಾಗ ಅಂತಿಮ ಪರೀಕ್ಷೆಗೆ ಹೆದರಿ ಆತ್ಮ ವಿಶ್ವಾಸ ಕಳೆದುಕೊಳ್ಳುವುದರಲ್ಲಿ ಯಾವ ಅರ್ಥವಿಲ್ಲ  ಹೋಳಿ ಆಡಿದಂತೆ ಪರೀಕ್ಷೆ ಎನ್ನುವ ಬಣ್ಣದ ಹಬ್ಬವನ್ನು ಸಂಭ್ರಮದಿಂದ ಆಚರಿಸಿ.  ಭಯ ಬಿಡಿ ವಿಶ್ವಾಸದಿಂದ ಪರೀಕ್ಷೆ ಎದುರಿಸಿ  ಖಂಡಿತಾ ನಿಮಗೆ ಯಶಸ್ಸು ಸಿಕ್ಕೇ ಸಿಗುತ್ತದೆ.



ಅಂತಿಮ ತಯಾರಿ ಹೀಗಿರಲಿ ಗೆಳೆಯರೆ,

ಪರೀಕ್ಷೆಯ ಅಂತಿಮ ತಯಾರಿ ಬಹು ಮುಖ್ಯವಾದದ್ದು ಇಷ್ಟು ದಿನ ನೀವು ಏನನ್ನು ಓದಿದ್ದಿರೋ ಅದೆಲ್ಲವನ್ನು ನೆನಪಿನಲ್ಲಿ ಇಟ್ಟು ಕೊಳ್ಳಲು ಕೆಲವೊಂದು ಕೀ ಪಾಯಿಂಟ್ ಮಾಡಿಕೊಂಡು ಸದಾ ನಮ್ಮ ಜೇಬಿನಲ್ಲಿ ಇರಿಸಿಕೊಂಡಿರೆ ,ಆ ಪಾಯಿಂಟ್ ನೋಡಿದ ಕೂಡಲೇ ಇಡೀ ಆ ಪ್ಯಾರ ನಿಮ್ಮ ಕಣ್ಮುಂದೆ ಬರಬೇಕು, ಹಾಗೆ ತಯಾರಿಸಿಟ್ಟುಕೊಳ್ಳಿ ಹಾಗೆಯೇ ಪ್ರಮುಖ Formula  ಗಣಿತದ ಸೂತ್ರಗಳು,ಇತಿಹಾಸದ ಘಟನೆ ಜರುಗಿದ  ಕಾಲ  ಪ್ರಮುಖ ತಜ್ಞರು ಹೇಳಿದ ಹೇಳಿಕೆ  ಈ ಎಲ್ಲ ವಿವರಗಳನ್ನು ಒಂದು ಪ್ಲೋ ಚಾಟ್ ಮಾಡಿಕೊಂಡು ನೀವು ಓದುವ ಕೋಣೆಗೆ ಅಂಟಿಸಿಕೊಂಡಿರಿ.ನೀವು ಸುಮ್ಮನೆ ಅವುಗಳನ್ನು ನೋಡುತ್ತಿದ್ದರೆ ಸಾಕು ಎಲ್ಲವೂ ಜ್ಞಾಪಕಕ್ಕೆ ಬರುತ್ತವೆ. ನೀವು ಈಗಾಗಲೆ ನಿಮ್ಮ ಪ್ರವೇಶ ಪತ್ರವನ್ನ ಪಡೆದಿದ್ದೀರಿ ಅದರಲ್ಲಿ ನಿಮ್ಮ ಪರೀಕ್ಷಾ ದಿನಾಂಕ, ಪರೀಕ್ಷಾ ಕೇಂದ್ರ ಪರೀಕ್ಷಾ ಅವಧಿ , ಪರೀಕ್ಷಾ ನಿಯಮಗಳು ಎಲ್ಲವು ಮುದ್ರಣವಾಗಿರುತ್ತದೆ  ನೀವು ಅದನ್ನು ಓದಿ ನಿಮ್ಮ ಪರೀಕ್ಷಾ ದಿನಾಂಕಗಳನ್ನು ನಿಮ್ಮ ಮನೆಯ ಕ್ಯಾಲೆಂಡರಿನಲ್ಲಿ ಗುರುತು ಹಾಕಿಕೊಳ್ಳಿ ಪರೀಕ್ಷೆ ಹತ್ತಿರಕ್ಕೆ ಬಂದಂತೆಲ್ಲಾ ನಿದ್ದೆಗೆಟ್ಟು ಓದುವ ಸಾಹಸ ಮಾಡಬೇಡಿ ಅತಿಯಾಗಿ ನಿದ್ದೆ ಕಟ್ಟುವುದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ  ಪರೀಕ್ಷೆಯ ಹಿಂದಿನ ರಾತ್ರಿ ಮಾತ್ರ ಯಾವ ಕಾರಣಕ್ಕು ತಡರಾತ್ರಿಯವರೆಗೆ ಓದಬೇಡಿ ರಾತ್ರಿ ೧೦ ಕ್ಕೆ ಮಲಗಿ ಬೆಳಗಿನ ಜಾವ ೫ ಕ್ಕೆ ಎದ್ದು ಅಂದಿನ ಪರೀಕ್ಷೆಯ ವಿಷಯದ ಕೀ ನೋಟ್ ಒಮ್ಮೆ ನೆನಪಿಸಿಕೊಂಡು, ಪರೀಕ್ಷೆಗೆ ಹೊರಡುವ ಸಿದ್ಧತೆ ಮಾಡಿಕೊಳ್ಳಿ.

 

ಗಾಳಿಸುದ್ದಿಗಳಿಗೆ ಕಿವಿಗೊಡಬೇಡಿ- ಎಚ್ಚರಿಕೆಯಿಂದಿರೆ

ಪರೀಕ್ಷೆಯ ಹಿಂದಿನ ದಿನ ಎರಡು ದಿನ ಮುಂಚಿತವಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಪರೀಕ್ಷೆ ಮುಂದೂಡುತ್ತಾರೆ ಎನ್ನುವ ಗಾಳಿಸುದ್ದಿ ಹಬ್ಬಿಸಿ ಮಕ್ಕಳ ಮನಸ್ಸನ್ನು ಮತ್ತಷ್ಟು ಆತಂಕಕ್ಕೆ ದೂಡುವ ಸನ್ನಿವೇಶ ನಿರ್ಮಾಣ ಮಾಡುತ್ತಾರೆ ಇಂತಹ ಯಾವುದೇ ಗಾಳಿಸುದ್ಧಿಗೆ ಕಿವಿಗೊಡದಿರಿ ನಿಮ್ಮ ಸಿದ್ದತೆ ನೀವು ಮಾಡಿಕೊಳ್ಳಿ. ಕೆಲವೊಂದು ಜನ ಪರೀಕ್ಷೆ ಸಮಯವನ್ನು ಬಂಡವಾಳ ಮಾಡಿಕೊಂಡು ಯಾವುದು ಹಳೆಯ ಪತ್ರಿಕೆಗೆ ಹೊಸ ದಿನಾಂಕ ಹಾಕಿ ನಮ್ಮಲ್ಲಿ ನಾಳೆ ಜರುಗುವ ವಿಷಯದ ಪ್ರಶ್ನೆ ಪತ್ರಿಕೆ ಇದೆ ೨೦೦೦ ರಿಂದ ೩೦೦೦ ಸಾವಿರ ಕೊಟ್ಟರೆ ಆ ಪ್ರಶ್ನೆ ನಿಮ್ಮ ಕೈ ಸೇರುತ್ತೆ ಎನ್ನುವ ವದಂತಿ ಹಬ್ಬಿಸುತ್ತಾರೆ ಇಲ್ಲವೆ ಅನಾಮಧೇಯ ಕರೆಗಳು ಬರುತ್ತವೆ. ಇಂತಹ ಆಮಿಷಕ್ಕೆ ಬಲಿಯಾಗಿ ನಿಮ್ಮ ಹಣ ಹಾಗು ಸಮಯ ವ್ಯರ್ಥ ಮಾಡಿಕೊಳ್ಳಬೇಡಿ ನಿಮ್ಮ ಮನಸ್ಸು ಓದಿನ ಕಡೆಗೆ ಇರಲಿ ಇಂತಹ ಗಾಳಿ ಸುದ್ದಿ ನಂಬಬೇಡಿ ಹುಷಾರ್ ಹುಷಾರ್ ..



ಪರೀಕ್ಷಗೆ ಹೊರಡುವ ಮುನ್ನ ...

ಇನ್ನೇನು ಪರೀಕ್ಷೆಗೆ ಹೊರಡುವ ಸಮಯ ಸಮೀಪಿಸಿತು ಸ್ನಾನ ಮಾಡಿ ಉಪಹಾರ ಸೇವಿಸಿ (ಹೊಟ್ಟೆ ತುಂಬಾ ಊಟ ಬೇಡ ಎಣ್ಣೆ ಪದಾರ್ಥವೂ ಬೇಡ ಸಾತ್ವಿಕ ಆಹಾರ ಸೇವಿಸಿ) ನಿಮ್ಮ ಕಾಲೇಜಿನ ಸಮವಸ್ತ್ರ ಧರಿಸಿಕೊಂಡು ತಂದೆ ತಾಯಿಗೆ ನಮಿಸಿ,

ಪರೀಕ್ಷೆಗೆ  ಬರೆಯಲು ಬೇಕಾದ ಗುಣಮಟ್ಟದ ಪೆನ್ನು ಪೆನ್ಸಿಲ್ ಜಾಮಿಟ್ರ ಬಾಕ್ಸ ಪ್ರವೇಶ ಪತ್ರ ಗುರುತಿನ ಪತ್ರ ಎಲ್ಲವನ್ನೂ ತೆಗೆದುಕೊಂಡು ನಿಮ್ಮ ಪರೀಕ್ಷಾ ಕೇಂದ್ರಕ್ಕೆ ಹೊರಡಿ  ಸರ್ಕಾರ ಪರೀಕ್ಷೆ ಬರೆಯವ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಿದೆ ಅವಶ್ಯ ಇದ್ದರೆ ಬಳಸಿಕೊಳ್ಳಿ  ಯಾವುದೇ ಕಾರಣಕ್ಕು ನೀವೇ ಬೈಕ್ ಚಾಲನೆ ಮಾಡಿಕೊಂಡು ಹೋಗಬೇಡಿ ನಿಮ್ಮ ಪೋಷಕರ ನೆರವಿನಿಂದ  ಪರೀಕ್ಷಾ ಕೇಂದ್ರಕ್ಕೆ ಬನ್ನಿ  ಹತ್ತಿರವಿದ್ದರೆ ನಡದೇ  ಬನ್ನಿ  ಅರ್ಧ ಗಂಟೆ ಮುಂಚಿತವಾಗಿ ಬನ್ನಿ  ಪರೀಕ್ಷಾ ಕೇಂದ್ರದ ನೋಟೀಸ್ ಬೋರ್ಡಿನಲ್ಲಿ  ನಿಮ್ಮ ನೊಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿ ಇದೆ ಎಂಬುದನ್ನು ಪ್ರಕಟ ಪಡಿಸಿರುತ್ತಾರೆ ಅದನ್ನು ಸಮಾಧಾನದಿಂದ ಸರಿಯಾಗಿ ನೋಡಿಕೊಳ್ಳಿ ,ಪರೀಕ್ಷಾ ಕೇಂದ್ರದಲ್ಲಿ ಗೆಳೆಯರೊಂದಿಗೆ ಹರಟೆ  ಚರ್ಚೆ ಏನೂ ಬೇಡ ಕೊನೆಯ ಕ್ಷಣದವರೆಗೂ ಓದಬೇಡಿ. ಪರೀಕ್ಷಾ ಕೇಂದ್ರದ ಒಳಗಡೆ ಹೋಗುವ ಮುನ್ನ ಜೇಬಿನಲ್ಲಿ ಏನಾದರೂ ಪೇಪರ್ ಇದ್ದರೆ ತೆಗೆದುಹಾಕಿ ಯಾವ ಕಾರಣಕ್ಕು ಪರೀಕ್ಷಾ ಸಾಮಾಗ್ರಿಗಳನ್ನು ಪರೀಕ್ಷಾ ಕೊಠಡಿ ಒಳಗೆ ತೆಗೆದುಕೊಂಡು ಹೋಗಬೇಡಿ. ವಾಚ್ ಮೊಬೈಲ್  ವೈಜ್ಞಾನಿಕ ಕ್ಯಾಲಿಕ್ ಲೇಟರ್ ಒಯ್ಯಲು ಅವಕಾಶವಿಲ್ಲ  ನಿಮ್ಮ ಕೋಣೆಯಲ್ಲಿ ನಿಮ್ಮ ನಂಬರ್ ಎಲ್ಲಿದೆ  ನೀವು ಕುಳಿತುಕೊಳ್ಳುವ ಡೆಸ್ಕ ಮೇಲಿರುವ ನಂಬರ್ ನಿಮ್ಮದೆ ಎಂದು ಖಾತ್ರಿ ಮಾಡಿಕೊಂಡು  ಅಕ್ಕ ಪಕ್ಕದಲ್ಲಿ ಚೀಟಿ ಬಿದ್ದಿದ್ದರೆ ಅದನ್ನು ಹೊರಗೆ ಹಾಕಿ  ದ್ಯಾನಸ್ಥ ಸ್ಥಿತಿಯಲ್ಲಿ ಕುಳಿತುಕೊಳ್ಳಿ.

 

ಪ್ರಶ್ನೆ ಪತ್ರಿಕೆಯೆ ಕೈಗೆ ಬಂದಾಗ..

ಒಂದು ವರ್ಷ ಯಾವ ಕ್ಷಣಕ್ಕಾಗಿ ಹಗಲಿರುಳು ಶ್ರಮಪಟ್ಟಿದ್ದಿರೋ  ಜಾತಕ ಪಕ್ಷಿಯಂತೆ ಕಾದಿದ್ದಿರೋ ಆ  ಅಮೃತಗಳಿಗೆ ಈಗ ಬಂದೇ ಬಿಟ್ಡಿತು, ಕೊಠಡಿ ಮೇಲ್ವಿಚಾರಕರು ಪ್ರಶೆ ಪತ್ರಿಕೆ ವಿತರಿಸುವಾಗ  ನಿಮ್ಮ ಹೃದಯದ ಬಡಿತ ಇನ್ನು ವೇಗವಾಗುತ್ತದೆ ಕುತೂಹಲ ಇಮ್ಮಡಿಗೊಳ್ಳುತ್ತದೆ ಪ್ರಶ್ನೆ ಪತ್ರಿಕೆ ಕೈಗೆ ಬಂತು, ಆವೇಶ ಉದ್ವೇಗ ಬೇಡ ಸಮಾದಾನದಿಂದ ಪ್ರಶ್ನೆ ಪತ್ರಿಕೆ ಓದಿ , ನಿಮಗೆ ಗೊತ್ತಿರುವ ಪ್ರಶ್ನೆಗಳೆ ಇವೆ? ಅಬ್ಬಾ!ಈಗ ಸಮಾದಾನದ  ನಿಟ್ಟುಸಿರು ! ಹಾಗಂತ ಗೊತ್ತಿರುವ ಉತ್ತರಗಳನ್ನು ಪ್ರಶ್ನೆ ಪತ್ರಿಕೆಯಲ್ಲಿ ಗುರುತು ಹಾಕಬೇಡಿ ಪ್ರಶ್ನೆ ಪತ್ರಿಕೆಯಲ್ಲಿ ಏನನ್ನೂ ಬರೆಯುವಂತಿಲ್ಲ. ೧೦ ನಿಮಿಷದ ನಂತರ ಉತ್ತರ ಪತ್ರಿಕೆ ಕೊಡುತ್ತಾರೆ ಕೊಟ್ಟ ತಕ್ಷಣವೇ ಅದು ಸರಿಯಾಗಿ್ದೆಯಾ   ಎಲ್ಲ ಪುಟಗಳು ಕ್ರಮಬಧ್ಧವಾಗಿದೆಯಾ ಎಂದು ಪರೀಕ್ಷಿಸಿಕೊಳ್ಳಿ  ಲೋಪವಿದ್ದರೆ  ಪರೀಕ್ಷಕರ ಗಮನಕ್ಕೆ ತನ್ನಿ  ಸರಿಯಾಗಿದ್ದರೆ ನಿಮ್ಮ ನೊಂದಣಿ ಸಂಖ್ಯೆ  ಪರೀಕ್ಷಾ ದಿನಾಂಕ ವಿಷಯ ಹಾಗು ವಿಷಯ ಸಂಕೇತ ನಮೂದಿಸಿ  ನಂತರ ಕೊಠಡಿ ಮೇಲ್ವಚಾರಕರ ಸಹಿ ಪಡೆದುಕೊಳ್ಳಿ ಎಲ್ಲಿಯೂ ನಿಮ್ಮ ಹೆಸರು ಬರೆಯಬೇಡಿ.ಬರಯಲು ಪ್ರಾರಂಬಿಸಿ ಎಂದು ಮೇಲ್ವಿಚಾರಕರು ಅನುಮತಿ ಕೊಟ್ಟ ನಂತರ ಬರೆಯಲು ಪ್ರಾರಂಭಿಸಿ.

 

ಉತ್ತರ ಬರೆಯುವ ಮುನ್ನ..

ಉತ್ತರ ಬೇಗ ಬೇಗ ಬರೆಯುವ ಆತುರ ಬೇಡ  ಮೂರು ಗಂಟೆಯ ಸಮಯವಿದೆ ಸಮಧಾನ ಚಿತ್ತದಿಂದ ಉತ್ತರ ಬರೆಯಲು ಪ್ರಾರಂಭಿಸಿ..ಉತ್ತರ ನಿಖರವಾಗಿರಲಿ ಮೌಲ್ಯಮಾಪಕರ ಗಮನ ಸೆಳೆಯುವಂತಿರಲಿ  ಅಕ್ಷರಗಳನ್ನು ತೀರ ಚಿಕ್ಕದು ತೀರ ದೊಡ್ಡ ಗಾತ್ರದಲ್ಲಿ ಬರೆಯಬೇಡಿ ಮಧ್ಯಮ ಗಾತ್ರದಲಿದ್ದರೆ ಸಾಕು.ನೀಲಿ ಆಥವಾ ಕಪ್ಪು ಬಣ್ಣದ ಬಾಲ್ ಪಾಯಿಂಟ್  ಪೆನ್ನ ಬಳಸಿ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಿರಿ. ನಂತರ ನೆನಪಿಸಿಕೊಂಡು ಉಳಿದ ಪ್ರಶ್ನೆಗಳಿಗೆ ಉತ್ತರಿಸಿ.  ಬೇಗ ಮುಗಿಸಿ ಹೊರಬರಲು ಅವಕಾಶವಿಲ್ಲ ಹಾಗಾಗಿ ಮೂರು ಗಂಟೆಯವರೆಗು  ತಾಳ್ಮೆಯಿಂದ ಉತ್ತರ ಬರೆಯಿರಿ ಬರೆದದ್ದನ್ನ ಇನ್ನೊಮ್ಮೆ ಓದಿ ಏನಾದರು ತಪ್ಪಿದ್ದರೆ  ಸರಿಪಡಿಸಿ. ದಿನಚರಿಯಲ್ಲಿ (Diary) ನಿಮ್ಮ ಸಹಿ ಹಾಕಿ, ಕೊನೆಯ ಬೆಲ್ ಆದಾಗ ನಿಮ್ಮ ಉತ್ತರಪತ್ರಿಕೆಯನ್ನು ಮೇಲ್ವಿಚಾರಕರ ಕೈಗೆ ಒಪ್ಪಿಸಿ ನಿಮ್ಮ  ಸಲಕರಣೆಗಳನ್ನು ತೆಗೆದುಕೊಂಡು ನಗು ನಗುತ್ತಾ ಹೊರಬನ್ನಿ...

 

ಪರೀಕ್ಷೆ ಮುಗಿದ ನಂತರ...

ಸಹಜವಾಗಿ ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಬಂದ ತಕ್ಚಣವೆ ಉತ್ತರಗಳ ಬಗ್ಗೆ ಚರ್ಚೆಮಾಡುತ್ತಾ  ಕಾಲೇಜಿನ ಕಾರಿಡಾರ್ ನಲ್ಲಿ ನಿಂತಿರುತ್ತಾರೆ ಇದು ಸರ್ವಥಾ ತಪ್ಪು ಉತ್ತರ ಪತ್ರಿಕೆ ಕೊಟ್ಟದಾ ಮೇಲೆ ಅದರ ಬಗ್ಗೆ ಚರ್ಚೆ ಮಾಡಿ ಪ್ರಯೋಜನವಿಲ್ಲ,ಜೊತೆಗೆ ಇಲ್ಲದ  ಆತಂಕ ಶುರುವಾಗುತ್ತದೆ ಅಯ್ಯೋ ಉತ್ತರ ತಪ್ಪು ಬರದೆ ಹೇಗೆ ಮಾಡುವುದು? ಎನ್ನುವ ಚಿಂತೆ ಇಟ್ಟುಕೊಂಡು ಮನೆಗೆ ಬಂದರೆ ಮುಂದಿನ ಪರೀಕ್ಷೆಯ ತಯಾರಿ ಮಾಡಕು ಮನಸ್ಸು ಬರುವುದಿಲ್ಲ ದಿನವಿಡೀ ಅದರ ಬಗ್ಗೆ ಯೋಚಿಸಿ ಯೋಚಿಸಿ ಸಮಯ ವ್ಯರ್ಥವಾಗತ್ತದೆಯೇ ಹೊರತು ಲಾಭವಿಲ್ಲ ಹಾಗಾಗಿ ಪರೀಕ್ಷೆ ಮುಗಿದ ಕೂಡಲೇ ನೀವು ಯಾರೊಂದಿಗು ಏನನ್ನು ಚರ್ಚಿಸಿದೆ ಮನಗೆ ಬನ್ನಿ ಬಿಸಿಯಾದ ಆಹಾರ ಸೇವಿಸಿ ಎರಡು ಗಂಟೆ ನಿದ್ರಿಸಿ ಸಾಯಂಕಾಲ ೩೦ ನಿಮಿಷ ವಾಯುವಿಹಾರ ಮಾಡಿ ಬಂದು ಮತ್ತೆ ಎಂದಿನಂತೆ ಅದೇ ಉತ್ಸಾಹದಲ್ಲಿ ಮುಂದಿನ‌ ಪರೀಕ್ಷೆ ತಯಾರಿ ಪ್ರಾರಂಭಿಸಿ ..ಹೀಗೆ ಎಲ್ಲ ಪರೀಕ್ಷೆ ಬರದು ನಿರಮ್ಮಳರಾಗಿ...ಪರೀಕ್ಷೆ ಕಷ್ಟ ಪಟ್ಟು ಬರೆಯುವುದಲ್ಲ ಇಷ್ಟ ಪಟ್ಟು ಬರೆಯುವುದು ..ವಿದ್ಯಾರ್ಥಿ ಮಿತ್ರರೆ ನಿಮ್ಮ ಪರೀಕ್ಷೆಗಳೆಲ್ಲಾ ಚೆನ್ನಾಗಾಗಲಿ ನಿಮ್ಮ ಕನಸುಗಳು ನನಸಾಗಲಿ ಎಂದು ಈ ಪತ್ರಿಕೆ ಶುಭ ಹಾರೈಸುತ್ತದೆ.


ಎ.ಎಂ.ಪಿ ವೀರೇಶಸ್ವಾಮಿ


ಕನ್ನಡ ಉಪನ್ಯಾಸಕರು


ವೀ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜು


ಬಳ್ಳಾರಿ.9008527708

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST