LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯುವ ಸಮುದಾಯ ವಿದ್ಯೆಗೆ ದಾಸರಾಗಿ

ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಆಲಂಬಾಷ ಅಭಿಪ್ರಾಯ

ಬಳ್ಳಾರಿ : ಯುವ ಸಮುದಾಯ ವಿದ್ಯೆಗೆ ದಾಸರಾಗಬೇಕೇ ಹೊರತು, ದುಶ್ಚಟ ವ್ಯಸನಗಳಿಗಲ್ಲ ಎಂದು ಸತ್ಯಂ ಶಿಕ್ಷಣ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಬಾಷ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೆಂಗಳೂರು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯ ಆವರಣದ ಹೊಂಗಿರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.



ಸದೃಢ ದೇಹದಲ್ಲಿ, ಸದೃಢ ಮನಸ್ಸು ಹೊಂದಿರಲು ಯುವಕರು ದುಶ್ಚಟಗಳಿಗೆ ದಾಸರಾಗಬಾರದು. ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಬೇಕೆಂದರೆ ಎಲ್ಲರೂ ವ್ಯಸನಮುಕ್ತ ಸಮಾಜದೆಡೆಗೆ ಸಾಗಬೇಕಿದೆ ಎಂದರು.

ದುಶ್ಚಟಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ.ಮಹಾಂತ ಶಿವಯೋಗಿಗಳು ಎಂದು ತಿಳಿಸಿದರು.

ಹನ್ನೆರಡನೆಯ ಶತಮಾನದ ಬಸವಣ್ಣನವರ ಕಾಲದಲ್ಲಿನ ಶರಣರು ಸಮ-ಸಮಾಜ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ನಮ್ಮ ದೇಶ ಅತಿಹೆಚ್ಚು ಯುವ ಪೀಳಿಗೆಯನ್ನು ಹೊಂದಿದ ದೇಶ. ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೇ ಅವುಗಳನ್ನು ಮೆಟ್ಟಿ ನಿಲ್ಲಬೇಕು. ಯುವಕರು ತಂದೆ-ತಾಯಿಯವರ ಆಶೋತ್ತರಗಳನ್ನು ಈಡೇರಿಸುವಂತವರಾಗಬೇಕು ಎಂದು ಕಿವಿಮಾತು ಹೇಳಿದರು.

 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಂ ಅವರು ಮಾತನಾಡಿ, ಮನಸ್ಸು, ದೇಹ, ಕುಟುಂಬ ಹಾಗೂ ದೇಶದ ಸ್ವಾಸ್ಥö್ಯ ಹಾಳು ಮಾಡುವ ವ್ಯಸನ ದಾಸ್ಯವೂ ಸಾಮಾಜಿಕ ಪಿಡುಗುಗಳಲ್ಲಿ ಒಂದು. ಹಾಗಾಗಿ ಇಂದಿನ ಯುವಪೀಳಿಗೆಯು ಯಾವುದೇ ತರಹದ ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಆರೋಗ್ಯಕರ ಜೀವನವನ್ನು ರೂಪಿಸಿಕೊಳ್ಳಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬೀಳಬಾರದು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಅಧಿಕಾರಿ ಶರ್ಮಸ್ ವಲಿ ಅವರು ಮಾತನಾಡಿ, ಮಾದಕ ವಸ್ತು ವ್ಯಸನಿಗಳಾಗಿದ್ದಲ್ಲಿ ರಾಜ್ಯ ಸರ್ಕಾರವು ರಾಷ್ಟಿçÃಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಟೆಲಿ ಮೆನಸ್ ಎಂಬ 14416 ಉಚಿತ ಸಹಾಯವಾಣಿ ಆರಂಭಿಸಿದ್ದು, ಸಹಾಯವಾಣಿಗೆ ಕರೆ ಮಾಡಿ ಆಪ್ತಸಮಾಲೋಚನೆ ಪಡೆಯಬಹುದು ಎಂದರು.



ಕಾರ್ಯಕ್ರಮದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ಮದ್ಯಪಾನ, ಮಾದಕವಸ್ತು, ತಂಬಾಕು ವಸ್ತುಗಳ ವ್ಯಸನ ಮುಕ್ತನಾಗುತ್ತೇನೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಬಳ್ಳಾರಿಯ ಹಿಂದುಸ್ತಾನಿ ಗಾಯಕ ನಾಗಭೂಷಣ ಬಾಪುರೆ ಅವರು ವಚನ ಸಂಗೀತ ಪ್ರಸ್ತುತಪಡಿಸಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಗುರುರಾಜ.ವಿ.ಸಿ., ಸಿಬ್ಬಂದಿಗಳಾದ ವಿಜಯ್ ಕುಮಾರ್, ಮಲ್ಲೇಶಪ್ಪ, ಹನುಮೇಶ್, ಹನುಮಂತಪ್ಪ, ತೇಜ, ದಿವಾಕರ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಗಮನಸೆಳೆದ ಜಾಗೃತಿ ಜಾಥಾ:



ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನದ ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಜಾಥಾಗೆ ಸರ್ಕಾರಿ (ಮಾಪು) ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸುಂಕಪ್ಪ ಅವರು ಚಾಲನೆ ನೀಡಿದರು.

ಜಾಥಾವು ನಗರದ ಸರ್ಕಾರಿ (ಮಾಪು) ಪದವಿ ಪೂರ್ವ ಕಾಲೇಜು ಆವರಣದಿಂದ ಆರಂಭವಾಗಿ ಡಾ.ರಾಜ್‌ಕುಮಾರ್ ರಸ್ತೆಯಲ್ಲಿನ ಸಾಂಸ್ಕೃತಿಕ ಸಮುಚ್ಛಯ ಆವರಣದ ಹೊಂಗಿರಣದವರೆಗೆ ತಲುಪಿ ಸಂಪನ್ನಗೊಂಡಿತು.



ಜಾಥಾದಲ್ಲಿ ‘ಕುಡಿತಕ್ಕಿಳಿಯುವ ಮೊದಲು ನೆನಪಾಗಲಿ-ನಿಮ್ಮ ಮುದ್ದು ಮಗುವಿನ ತೊದಲು’, ‘ಬಿಡಿರೋ ಬಿಡಿರೋ ಕುಡಿತವ-ಕಾಣಿರೋ ಸುಖ ಸಂತೋಷದ ನವಜೀವನ’, ‘ಆಗದಿರಿ ಮಾದರಿ ವ್ಯಸನಿ-ಆಗಿರಿ ಬದುಕಿಗೆ ಸಂಜೀವಿನಿ’, ‘ಮಡದಿ ಮಕ್ಕಳು ಸುಂದರ ಸಂಸಾರ-ಕುಡಿತದಿಂದ ಎಲ್ಲವೂ ನಿಸ್ಸಾರ’, ‘ಕುಡಿತದಾಸೆಗೆ ಕಡಿವಾಣ-ಹಾಕಿದವನೇ ಬಲುಜಾಣ’ ಎನ್ನುವ ಜಾಗೃತಿ ಮಾಹಿತಿ ಫಲಕಗಳು ವಿದ್ಯಾರ್ಥಿಗಳ ಕೈಯಲ್ಲಿ ರಾರಾಜಿಸಿದವು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST