ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.34ರ ರಾಜೀವ್ ಗಾಂಧಿನಗರದಲ್ಲಿ ಕಳೆದ ಸುಮಾರು 60 ವರ್ಷಗಳಿಂದ ವಾಸಿಸುತ್ತಿರುವ 187 ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ವಿತರಣೆ ಆಗದಿರುವುದನ್ನು ಖಂಡಿಸಿ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ಟಿ.ಎಸ್. ನಂ.220 ಜಮೀನಿನಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಬೇಕೆಂದು ಕರ್ನಾಟಕ ಸರ್ಕಾರದ ವಕ್ಸ್ ಮತ್ತು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ದಲಿತ ಸಂಘರ್ಷ ಸಮಿತಿ (ಸಾಗರ ಬಣ)ಯ ಹಿರಿಯ ನಾಯಕ ಮಾನಯ್ಯ ಹಾಗೂ ಅವರು ಹಾಗೂ ರಾಜೀವ್ ಗಾಂಧಿನಗರದ ನಿವಾಸಿಗಳು ಯುವ ಹೋರಾಟಗಾರರಾದ ಕಟ್ಟೇಸ್ವಾಮಿ ನಾರಾಯಣ ಮನವಿ ಸಲ್ಲಿಸಿದರು.
ರಾಜೀವ್ ಗಾಂಧಿನಗರದ ಟಿ.ಎಸ್. ನಂ.220 ಜಮೀನಿನಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಜಿಲ್ಲಾಧಿಕಾರಿಗಳು ಮಾ.15ರಂದು ಅಂತಿಮ ಅಧಿಸೂಚನೆ ಹೊರಡಿಸಿ ಆದೇಶ ನೀಡಿರುವುದಾಗಿ ತಿಳಿದುಬಂದಿದೆ. ಅಲ್ಲದೆ 2025ರ ಆ.01ರಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಖಾತೆ ಬದಲಾವಣೆ ಮಾಡಿ ಸಂಬಂಧಿತ ದಾಖಲೆಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಿದ್ದಾರೆ.
ಆದರೂ ಸಹ 2023ರಿಂದ ಇದುವರೆಗೆ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ವಿಳಂಬವಾಗುತ್ತಿರುವುದು ನಿವಾಸಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ತಕ್ಷಣವೇ ಹಕ್ಕುಪತ್ರ ವಿತರಿಸಲು ನಿರ್ದೇಶನ ನೀಡಬೇಕೆಂದು ರಾಜೀವ್ ಗಾಂಧಿನಗರದ ನಿವಾಸಿಗಳು ಹಾಗೂ ದಲಿತ ಸೇನೆಯ ನಾಯಕರು ಕಟ್ಟೇಸ್ವಾಮಿ ನಾರಾಯಣ, ಅರುಣ್ ಕುಮಾರ್, ಮಾನಪ್ಪ ಮತ್ತು ರತ್ನಯ್ಯ ಅವರು ಆಗ್ರಹಿಸಿದರು.
ನ್ಯಾಯ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜೀವ್ ಗಾಂಧಿನಗರದ ಅನೇಕ ನಿವಾಸಿಗಳು ಉಪಸ್ಥಿತರಿದ್ದರು.