ಬೆಂಗಳೂರು : ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ, ಕುಟುಂಬ ಯೋಜನೆ – 2030 ರ ಏಷ್ಯಾ–ಪೆಸಿಫಿಕ್ ಪ್ರಾದೇಶಿಕ ಹಬ್ ಮತ್ತು ಗೇಟ್ಸ್ ಫೌಂಡೇಷನ್ನ ಸಹಯೋಗದಲ್ಲಿ, ಇಂದು ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದಿಂದ ಹಿರಿಯ ಅಧಿಕಾರಿಗಳ ದುಂಡು ಮೇಜಿನ ಸಭೆ ಆಯೋಜಿಸಲಾಗಿತ್ತು.
ಅಭಿವೃದ್ಧಿ ಪಾಲುದಾರರು, ಶೈಕ್ಷಣಿಕ ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಂವಾದ ಕುಸಿಯುತ್ತಿರುವ ಸಂತಾನೋತ್ಪತ್ತಿ ದರಗಳು ಹಾಗೂ ಗುಣಮಟ್ಟದ ಕುಟುಂಬ ಯೋಜನಾ ಸೇವೆಗಳ ಲಭ್ಯತೆಯನ್ನು ವಿಸ್ತರಿಸುವ ಅಗತ್ಯ ಕುರಿತು ಚರ್ಚೆ ನಡೆಸಲಾಯಿತು. ಸಂತಾನೋತ್ಪತಿ ದರ ಕುಸಿತದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತೀವ್ರ ಕಳವಳ ವ್ಯಕ್ತಪಡಿಸಿದರು.
ಯುಎನ್ಎಫ್ಪಿಎ ಭಾರತದ ಪ್ರತಿನಿಧಿ ಆಂಡ್ರಿಯಾ ಎಂ. ವೊಯ್ಜ್ನರ್ ಮಾತನಾಡಿ, ದೇಶದ ಒಟ್ಟು ಸಂತಾನೋತ್ಪತ್ತಿ ದರ 2.0 ಕ್ಕೆ ಇಳಿದಿದ್ದು, ಇದು 2.1ರ ರಿಪ್ಲೇಸ್ಮೆಂಟ್ ಮಟ್ಟಕ್ಕಿಂತ ಕಡಿಮೆ. ಆದರೆ ಕೋಟ್ಯಂತರ ಮಹಿಳೆಯರಿಗೆ ಅವರು ಬಯಸುವ ಕುಟುಂಬ ಯೋಜನಾ ಸೇವೆಗಳು ಇನ್ನೂ ಲಭ್ಯವಿಲ್ಲ. ಭಾರತ ತನ್ನ ಜನಸಂಖ್ಯೆಯ ಪ್ರಯಾಣದ ನಿರ್ಣಾಯಕ ಹಂತದಲ್ಲಿದೆ. ಇಂದಿನ ಸಂತಾನೋತ್ಪತ್ತಿ ಪ್ರವೃತ್ತಿಗಳ ಹಿನ್ನೆಲೆಯಲ್ಲಿ, ಪ್ರತಿಯೊಬ್ಬರ ಪುನರುತ್ಪಾದನಾ ಹಕ್ಕುಗಳು, ಆಯ್ಕೆ ಮತ್ತು ಸಂಪೂರ್ಣ ಪುನರುತ್ಪಾದನಾ ಆರೋಗ್ಯದ ನಿರಂತರ ಸೇವೆಗಳ ಪೂರೈಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ಸಂಡು ಮೇಜು ಸಂವಾದವು ಭವಿಷ್ಯ ಕೇಂದ್ರೀತ, ಪುರಾವೆ–ಆಧಾರಿತ ಕುಟುಂಬ ಯೋಜನಾ ಕಾರ್ಯತಂತ್ರವನ್ನು ನಿರ್ಮಿಸುವತ್ತ ಮಹತ್ವದ ಹೆಜ್ಜೆ ಎಂದು ಹೇಳಿದರು,
ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ ಸದಸ್ಯೆ ಡಾ. ಶಮಿಕಾ ರವೀ ಮಾತನಾಡಿ, ಭಾರತ ವೈವಿಧ್ಯಮಯ ದೇಶ. ಈ ವೈವಿಧ್ಯತೆಯೇ ನಿಖರ ನೀತಿ ನಿರ್ಮಾಣಕ್ಕೆ ಪೂರಕವಾಗಿದೆ. ಪ್ರತಿಯೊಂದು ತಾಲೂಕು, ಗ್ರಾಮ, ವಿಭಿನ್ನ. ಹೀಗಾಗಿ ಒಂದೇ ರೀತಿಯ ನೀತಿ ಎಲ್ಲರಿಗೂ ಅನ್ವಯಿಸುವುದಿಲ್ಲ. ನಿಖರವಾದ ನೀತಿ ನಿರೂಪಣೆ ಇಂದಿನ ಅಗತ್ಯವಾಗಿದೆ ಎಂದರು.