LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಿನಲ್ಲಿ ಜಾತಿಗಣತಿ : ಹಿನ್ನೋಟ - ಮುನ್ನೋಟ ವಿಚಾರಗೋಷ್ಠಿ

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್ : ಭೂಪೇಂದ್ರ ಯಾದವ್

ಬೆಂಗಳೂರು:  ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸುವಂತೆ ಬಾಬಾಸಾಹೇಬ ಡಾ. ಅಂಬೇಡ್ಕರರವರ ಸಂವಿಧಾನ ಹೇಳಿದೆ. ಇದಕ್ಕಾಗಿ ಕಾಕಾ ಕಾಲೇಕರ್ ಆಯೋಗ ರಚಿಸಲಾಗಿತ್ತು. ಹಿಂದುಳಿದವರು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮೇಲ್ಮಟ್ಟಕ್ಕೆ ಬರಬಾರದೆಂದೇ ಕಾಂಗ್ರೆಸ್ ಪಕ್ಷವು ಕಾಕಾ ಕಾಲೇಕರ್ ಆಯೋಗದ ವರದಿಯನ್ನು ಕಡೆಗಣಿಸಿತ್ತು ಎಂದು ಕೇಂದ್ರ ಸರಕಾರದ ಪರಿಸರ ವಿಜ್ಞಾನ, ಅರಣ್ಯ, ಹವಾಮಾನ ವೈಪರೀತ್ಯ ಖಾತೆ ಸಚಿವ ಭೂಪೇಂದ್ರ ಯಾದವ್ ಅವರು ಆರೋಪಿಸಿದರು.

 

ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ಇಂದು ಕರ್ನಾಟಕದ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಏರ್ಪಡಿಸಿದ್ದ `ಜಾತಿಗಣತಿ: ಹಿನ್ನೋಟ- ಮುನ್ನೋಟ' ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನಕರ್ತೃಗಳ ಆಶಯವನ್ನು ಸಂವಿಧಾನವನ್ನು ಜೇಬಿನಲ್ಲಿ ಇಡುವವರು ಕಾಕಾ ಕಾಲೇಕರ್ ಆಯೋಗದ ವರದಿಯನ್ನು ಯಾಕೆ ಅನುಷ್ಠಾನಕ್ಕೆ ತರಲಿಲ್ಲ ಎಂದು ಪ್ರಶ್ನಿಸಿದರು.



ದೇಶವು ತುರ್ತು ಪರಿಸ್ಥಿತಿಯಿಂದ ಸ್ವತಂತ್ರವಾದ ಬಳಿಕ, ಕೌಟುಂಬಿಕ ಅಧಿಕಾರದಿಂದ ಮುಕ್ತವಾದ ನಂತರ, ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರ ಪಡೆಯಿತು. ಮಂಡಲ್ ಆಯೋಗ ರಚಿಸಿತು. ಕಾಂಗ್ರೆಸ್ ಪಕ್ಷ ಅಧಿಕಾರದಿಂದ ದೂರವಾದ ಬಳಿಕ ಹಿಂದುಳಿದ ಎಲ್ಲ ಸಮುದಾಯದವರ ನ್ಯಾಯದ ಮಾತು ಮುನ್ನೆಲೆಗೆ ಬಂತು. ಕೆಲವರ್ಷಗಳ ನಂತರ ಅಧಿಕಾರಕ್ಕೇರಿದ ಕಾಂಗ್ರೆಸ್ ಪಕ್ಷವು ಕಾಕಾ ಕಾಲೇಕರ್ ವರದಿಯ ಮಾದರಿಯಲ್ಲಿ ಮಂಡಲ್ ಆಯೋಗದ ವರದಿಯನ್ನೂ ಕಡೆಗಣಿಸಿತ್ತು. ರಾಜೀವ್ ಗಾಂಧಿಯವರಿಗೆ ಒಬಿಸಿಯವರೇ ೪೦೦ಕ್ಕೂ ಹೆಚ್ಚು ಸಂಸದರ ಸ್ಥಾನ ಕೊಟ್ಟಿದ್ದರು. ಒಬಿಸಿಯವರ ಮತದಿಂದ ಅಧಿಕಾರ ಪಡೆದರೂ ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯ ನೀಡಲಿಲ್ಲ. ಇಲ್ಲಿ ಸಿದ್ದರಾಮಯ್ಯನವರೂ ಒಬಿಸಿ ವರದಿಯನ್ನು ಕಡೆಗಣಿಸಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳಕೊಂಡಿತು. ಆಗ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಅವರ ಸರಕಾರವು ಮಂಡಲ್ ಆಯೋಗದ ವರದಿ ಜಾರಿಯಾಗಿ ಒಬಿಸಿಗೆ ಮೀಸಲಾತಿ ಲಭಿಸಿತು ಎಂದರು.

 

ದೇಶದ ಶಾಸನಗಳಿಗೆ ಸಂವಿಧಾನವೇ ಮೂಲ ಆಧಾರ. ಕೆಲವರು ಸಂವಿಧಾನವನ್ನು ಜೇಬಿನಲ್ಲಿಟ್ಟರೆ ನಾವು ಅದನ್ನು ಆತ್ಮದಲ್ಲಿ ಇಟ್ಟುಕೊಂಡಿದ್ದೇವೆ.  ಅವರು ಸಂವಿಧಾನವನ್ನು ಕುಟುಂಬದ ಕಿಸೆಯೊಳಗೆ ಇಟ್ಟರೆ ನಾವು ಅದನ್ನು ಆತ್ಮದಲ್ಲಿ ಇಟ್ಟುಕೊಂಡಿದ್ದೇವೆ. ಹಿಂದುಳಿದ ವರ್ಗಗಳ ಕಡೆಗಣನೆ ಪರಿಣಾಮವಾಗಿ ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಲ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳಕೊಂಡಿತು. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಆದಾಗ ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯಲು ಸಾಧ್ಯವಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಕೆಲವೇ ದಿನಗಳ ಹಿಂದೆ ನಾವು ತುರ್ತು ಪರಿಸ್ಥಿತಿಯ ೫೦ನೇ ವರ್ಷದ ನೆನಪು ಮಾಡಿದ್ದೇವೆ. ಸರ್ವಾಧಿಕಾರದ ಚಿಂತನೆಯಿAದ ತುರ್ತು ಪರಿಸ್ಥಿತಿ ಬಂದಿತ್ತು. ಮತ್ತೆ ತುರ್ತು ಪರಿಸ್ಥಿತಿ ಬರಬಾರದೆಂದು ಅದನ್ನು ನೆನಪಿಸಿದ್ದೇವೆ. ೧೭-೧೮ನೇ ಶತಮಾನದಲ್ಲಿ ದೇಶದಲ್ಲಿ ಸಾಮಾಜಿಕ ಸುಧಾರಣೆಯ ಆಂದೋಲನ ನಡೆದಿತ್ತು. ಭಾರತದ ಪುನರ್ ಜಾಗೃತಿಗಾಗಿ ಈ ಆಂದೋಲನ ನಡೆದಿತ್ತು. ಅದರ ಪರಿಣಾಮವಾಗಿ ನಾವು ಗಾಂಧೀಜಿ ಅವರ ನೇತೃತ್ವದಲ್ಲಿ ಸ್ವಾತಂತ್ರ‍್ಯ ಪಡೆದೆವು. ಪ್ರತಿ ವ್ಯಕ್ತಿಗೆ ಸಾಮಾಜಿಕ, ರಾಜಕಾರಣ, ಆರ್ಥಿಕ ನ್ಯಾಯ ನೀಡುವುದೇ ಭಾರತದ ಸಂವಿಧಾನದ ಉದ್ದೇಶವಾಗಿದೆ. ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಮೀಸಲಾತಿ ಕೊಡಲಾಗಿದೆ. ಅಸ್ಪೃಶ್ಯತೆ ಮಾನವತೆಯ ಕಳಂಕ. ಆದ್ದರಿಂದಲೇ ಮೀಸಲಾತಿ ಕೊಡಲಾಯಿತು ಎಂದರು.

 

ಕರ್ನಾಟಕ ರಾಜ್ಯ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ನ್ಯಾ.ಡಾ.ಕೆ.ಭಕ್ತವತ್ಸಲ ಅವರು ಉದ್ಘಾಟಿಸಿ ಮಾತನಾಡಿ, ಡಾ. ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯ ಚಿಂತನೆಯಡಿ ಎಲ್ಲರೂ ಸಮಾನರು ಎಂದಿದೆ. ನಮ್ಮ ದೇಶದ ಜನಸಂಖ್ಯೆಯೇ ನಮ್ಮ ದೊಡ್ಡ ಆಸ್ತಿ. ಜಾತಿಗಣತಿ ಅತ್ಯಂತ ಮಹತ್ವದ್ದು. ಇದು ಸುಲಭದ ಕೆಲಸವಲ್ಲ. ಪ್ರತಿಯೊಬ್ಬರೂ ಸಹಕರಿಸುವುದು ಅಗತ್ಯವಿದೆ. ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯವು ಕೇವಲ ನಾಮಕಾವಾಸ್ತೆ ಆಗಿತ್ತು ಎಂದು ಅವರು ಹೇಳಿದರು.



ನಮ್ಮಲ್ಲಿರುವ ದೀನರು, ದಲಿತರು, ಬಡವರಿಗೆ ನ್ಯಾಯ ಕೊಡಲು ಅಂಕಿಅAಶ ಇರುವುದು ಅಗತ್ಯ ಎಂದು ಪ್ರತಿಪಾದಿಸಿದರು. ಗರ್ಭಾವಸ್ಥೆಯಲ್ಲಿರುವಾಗಲೇ ಮಗುವಿಗೆ ಮೊಬೈಲ್ ಸಿಮ್ ನೀಡಿ ಅದನ್ನೇ ಗುರುತಾಗಿ ಪರಿವರ್ತಿಸಬೇಕು. ತೆರಿಗೆ ಪಾವತಿಸದೇ ಇರುವ ೩೦ ವರ್ಷಕ್ಕೆ ಮೇಲ್ಪಟ್ಟವರಿಂದ ನಿಗದಿತ ಮೊತ್ತ ಪಡೆದು ೬೦ ವರ್ಷಗಳ ಬಳಿಕ ಅವರಿಗೆ ಪಿಂಚಣಿ ನೀಡುವ ವ್ಯವಸ್ಥೆ ಜಾರಿ ಮಾಡಬೇಕಿದೆ ಎಂದರು.

 

ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯಕ್ಕಾಗಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಹೋರಾಟ ಮಾಡಿರುವ ಸ್ವಯಂ ನಿವೃತ್ತ ಸರಕಾರಿ ಅಧಿಕಾರಿ ಕೆ.ಮುಕುಡಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಕಾ ಕಾಲೇಕರ್, ಮಂಡಲ್ ವರದಿಯನ್ನು ಕಾಂಗ್ರೆಸ್ ಮುಟ್ಟಿ ನೋಡಲಿಲ್ಲ. ಹಿಂದುಳಿದ ವರ್ಗಕ್ಕೆ ಖಾಯಂ ಆಯೋಗವನ್ನೂ ರಚಿಸಲಿಲ್ಲ; ಇದನ್ನು ವಿರೋಧಿಸಿ ಬಾಬಾ ಸಾಹೇಬ ಅಂಬೇಡ್ಕರರು ರಾಜೀನಾಮೆ ನೀಡಿದ್ದರು. ಇವತ್ತು ಹಿಂದುಳಿದ ವರ್ಗಕ್ಕೆ ಖಾಯಂ ಆಯೋಗ ರಚಿಸಿದ್ದು ಮೋದಿಯವರ ಸರಕಾರ ಎಂದು ವಿವರಿಸಿದರು.

 

ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರಘು ಕೌಟಿಲ್ಯ ಅವರು ಪ್ರಾಸ್ತಾವಿಕ ಮಾತನಾಡಿ, 1931ರಲ್ಲಿ ಸ್ವಾತಂತ್ರ‍್ಯಪೂರ್ವದಲ್ಲಿ ಜಾತಿ ಗಣತಿ ನಡೆದಿತ್ತು. ಬಹುತೇಕ ಒಂದು ಶತಮಾನದ ಬಳಿಕ ಜನಗಣತಿ ಜೊತೆ ಜಾತಿ ಗಣತಿ ನಡೆಯುತ್ತಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಜೀ ಅವರ ಪಾತ್ರ ಮಹತ್ವದ್ದು. ಹಿಂದುಳಿದವರಿಗಾಗಿ ಮೊದಲ ಶಾಶ್ವತ ಆಯೋಗವನ್ನು ರಚಿಸಿದವರು ಮೋದಿಯವರು ಎಂದರು.

 

ಸಾಂವಿಧಾನಿಕ ಅವಕಾಶ ಇಲ್ಲದಿದ್ದರೂ ರಾಜ್ಯದಲ್ಲಿ ಜಾತಿಗಣತಿಯ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಕರ್ನಾಟಕದಲ್ಲಿ ಸುಮಾರು ೩೦೦ ಕೋಟಿ ಖರ್ಚು ಮಾಡಿ ಕೇವಲ ೩ ತಿಂಗಳಲ್ಲಿ ಮತ್ತೊಂದು ಜಾತಿಗಣತಿ ಮಾಡುವುದಾಗಿ ಹೇಳಿಕೊಂಡು ಮೋಸ ಮಾಡುವ - ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಅದನ್ನು ಹಿಮ್ಮೆಟ್ಟಿಸಬೇಕಿದೆ ಎಂದರು. ಒಬಿಸಿ ವರ್ಗಕ್ಕೆ ಸಾಮಾಜಿಕ ನ್ಯಾಯ, ಶೈಕ್ಷಣಿಕ ರಾಜಕೀಯ ಅವಕಾಶ ಸಿಗುವ ಸಂದೇಶವನ್ನು ಈ ವಿಚಾರಗೋಷ್ಠಿ ನೀಡಲಿದೆ ಎಂದು ತಿಳಿಸಿದರು.



ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಮೋಹನ್, ಮುಖಂಡರಾದ ಹಾಲಪ್ಪ ಆಚಾರ್, ರವಿಕುಮಾರ್, ಸುನೀಲ್‌ಕುಮಾರ್, ತಿಪ್ಪಾರೆಡ್ಡಿ, ಬೈರತಿ ಬಸವರಾಜು, ಲಕ್ಷ್ಮೀನಾರಾಯಣ, ಸಿ.ಟಿ.ರವಿ ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು. ಹಿಂದುಳಿದ ವರ್ಗಗಳ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು. ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಅವರು ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಶಂಕರ್ ವಂದಿಸಿದರು. 
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST