೨೦೨೩ ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹೇಗಾದರು ಮಾಡಿ ಅಧಿಕಾರ ಹಿಡಿಯಲು ಐದು ಗ್ಯಾರೆಂಟಿಗಳನ್ನು ಘೋಷಿಸಿತ್ತು. ಅದನ್ನು ಮತದಾರರಿಗೆ ನಂಬಿಸಲು ಹರಸಾಹಸ ನಡೆಸಿತು. ಆಗ ಕಾಂಗ್ರೆಸ್ ಪಕ್ಷದ ಯಾವ ನಾಯಕರೂ ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕೆ ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಹಣ ಬಳಸುವುದಾಗಿ ಹೇಳಿರಲಿಲ್ಲ. ಆದರೆ ಮತದಾರರನ್ನು ಯಾಮಾರಿಸಿ ಚುನಾವಣೆ ಗೆದ್ದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದ ತರುವಾಯ ಮಾಡಿದ್ದೇನು? ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ನೇತೃತ್ವದಲ್ಲಿ ಪಕ್ಷದ ಎಸ್.ಸಿ., ಮೋರ್ಚಾ ಮತ್ತು ಎಸ್.ಟಿ. ಮೋರ್ಚಾ ಘಟಕಗಳು ಇಂದು ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಬಿಜೆಪಿ ಮಾಜಿ ಸಂಸದ ಸಣ್ಣ ಪಕ್ಕಿರಪ್ಪ, ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಸೇರಿದಂತೆ ಅನೇಕ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಸರ್ಕಾರದ ವಿರೋಧಿ ನೀತಿ ಕುರಿತು ದೂರು ನೀಡಿದರು.
೨೦೨೩ರಲ್ಲಿ ಎಸ್ ಸಿ ಎಸ್ ಪಿ ಯಿಂದ ೭೭೧೩.೧೫ ಸಾವಿರ ಕೋಟಿ ರೂ ಮತ್ತು ಟಿ ಎಸ್ ಪಿ ಯಿಂದ ೩೪೩೦.೮೫ ಸಾವಿರ ಕೋಟಿರೂ ಒಟ್ಟಾರೆ ೧೧೧೪೪.೦೦ ಸಾವಿರ ಕೋಟಿ ರೂಗಳನ್ನು ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆ ಮಾಡಿಕೊಂಡಿದೆ. ಮೊದಲಸಲ ದಲಿತರ ಮೀಸಲು ನಿಧಿಗೆ ಅನೈತಿಕವಾಗಿ ಕೈ ಹಾಕುವಾಗ ಮುಖ್ಯಮಂತ್ರಿಗಳು ಹಿಂಜರಿಕೆ ತೋರ್ಪಡಿಸಿದ್ದರು. ಸಚಿವ ಸಂಪುಟ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವರೂ ಸೇರಿದಂತೆ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕೆಲವೇ ತಿಂಗಳಲ್ಲಿ ಸರ್ಕಾರ ಎಮ್ಮೆ ಚರ್ಮ ಬೆಳಸಿಕೊಂಡು, ಸಂವೇದನೆ ಕಳೆದುಕೊಂಡು ದುರಹಂಕಾರದ ಸ್ಥಿತಿ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ವರ್ಷ ಅಂದರೆ ೨೦೨೪ರಲ್ಲಿ ಸರ್ಕಾರ ಇದೇ ಚಾಳಿಯನ್ನು ಮುಂದುವರಿಸಿತು. ಎಸ್ ಸಿ ಎಸ್ ಪಿ ನಿಧಿಯಿಂದ ೯೯೮೦.೬೬ ಸಾವಿರ ಕೋಟಿ ರೂ ಮತ್ತು ಟಿ ಎಸ್ ಪಿ ನಿಧಿಯಿಂದ ೪೩೦೨.೦೨ ಸಾವಿರ ಕೋಟಿ ರೂ., ಒಟ್ಟಾರೆ ೧೪೨೮೨.೬೮ ಸಾವಿರ ಕೋಟಿ ರೂ.,ಗಳನ್ನು ಗ್ಯಾರೆಂಟಿ ಅನುಷ್ಠಾನಕ್ಕಾಗಿ ದುರ್ಬಳಕೆ ಮಾಡಿಕೊಂಡಿದೆ. ಈಗ ಸರ್ಕಾರ ತಾನು ಮಾಡಿದ್ದೇ ಸರಿ ಎಂದು ವಾದಿಸುತ್ತಿದೆ. ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಕೇವಲ ಪರಿಶಿಷ್ಟ ಜಾತಿ, ಪಂಗಡದವರು ಮಾತ್ರ ಇಲ್ಲ, ಸವರ್ಣೀಯರು, ಹಿಂದುಳಿದವರು, ಅಲ್ಪಸಂಖ್ಯಾತರು ಎಲ್ಲರೂ ಇದ್ದಾರೆ. ಉಳಿದವರಿಗೆಲ್ಲ ಸರ್ಕಾರ ತನ್ನ ಖಜಾನೆಯಿಂದ ಹಣ ಕೊಡುತ್ತದೆ. ಆದರೆ ಎಸ್.ಸಿ, ಎಸ್.ಟಿ ಮಂದಿಗೆ ದಲಿತರು ಮೀಸಲು ನಿಧಿಗೆ ಕನ್ನ ಹಾಕುತ್ತದೆ ಎಂದರೆ ಇದನ್ನು ಸಾಮಾಜಿಕ ನ್ಯಾಯ ಎನ್ನಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರ್ಕಾರವು ಸಂವಿಧಾನಿಕವಾಗಿ ಎಸ್ ಸಿ ಎಸ್ ಪಿ, ಟಿ ಎಸ್ ಪಿ ಕಾರ್ಯಕ್ರಮಗಳ ಅಭಿವೃದ್ಧಿಗೆ ಮೀಸಲಾಗಿದ್ದ, 2025-26ನೇ ಸಾಲಿನ 11,896.84 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ದಲಿತ, ವಾಲ್ಮೀಕಿ ಸಮಾಜದ ವಿರೋಧ ನೀತಿ ಎಸ್ ಸಿ ಎಸ್ ಪಿ, ಟಿ ಎಸ್ ಪಿ ದಲಿತ, ವಾಲ್ಮೀಕಿ ಸಮಾಜದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಬಲೀಕರಣಕ್ಕಾಗಿ ಮೀಸಲಿಟ್ಟಿದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವುದು ನಮ್ಮ ಸಮಾಜದ ಅಭಿವೃದ್ಧಿಯನ್ನು ಕುಂಠಿತಗೊಳಿಸಿರುವ ಕಾಂಗ್ರೆಸ್ ಸರ್ಕಾರ ನೇರೆ ಹೊಣೆ ಹೊರಬೇಕಾಗುತ್ತದೆ. ಈ ಕೂಡಲೇ ವರ್ಗಾವಣೆ ಆಗಿರುವ ಕಳೆದ ಮೂರು ವರ್ಷಗಳಲ್ಲಿ ೩೭,೩೨೨ ಕೋಟಿಯನ್ನು ವಾಪಾಸ್ ಎಸ್ ಸಿ ಎಸ್ ಪಿ, ಟಿ ಎಸ್ ಪಿ ಹಣವನ್ನು ಮೀಸಲಿಡಬೇಕು. ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕೆಂದೂ ನಾಯಕರು ಒತ್ತಾಯಿಸಿದರು.

ಅಲ್ಪಸಂಖ್ಯಾತರಿಗೆಂದೇ ಬಜೆಟ್ ನಲ್ಲಿ ಪ್ರತ್ಯೇಕ ಸಾವಿರಾರು ಕೋಟಿ ತೆಗೆದಿರಿಸಲಾಗಿದೆ. ಆದರೆ ಸರ್ಕಾರ ಗ್ಯಾರೆಂಟಿ ಯೋಜನೆ ಅನುಷ್ಠಾನಕ್ಕೆ ಆ ಹಣ ಮುಟ್ಟುವುದಿಲ್ಲ, ಸರ್ಕಾರಿ ಖಜಾನೆಯಿಂದಲೇ ಹಣ ಪೂರೈಸುತ್ತದೆ ಎಂದರೆ ಈ ಸರ್ಕಾರ ದಲಿತ ದ್ರೋಹಿ ಅಲ್ಲದೆ ಮತ್ತೇನು? ಎಂದು ಪ್ರಶ್ನಿಸಿರುವ ನಾಯಕರು, ವಾಸ್ತವದಲ್ಲಿ ಪರಿಶಿಷ್ಟ ಜಾತಿಗಳ ವಿಶೇಷ ಘಟಕ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಘಟಕ ಯೋಜನೆ ಇದರ ಮೂಲ ಉದ್ದೇಶವಾದರೂ ಏನು? ಎಂದು ಆಕ್ರೋಶ ಹೊರ ಹಾಕಿದ್ದಾರೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸಬಲೀಕರಣ, ಶಿಕ್ಷಣ, ಉದ್ಯೋಗ, ಸ್ವಾವಲಂಬನೆ ಮೂಲಕ ಪ್ರತಿ ವ್ಯಕ್ತಿ, ಕುಟುಂಬವನ್ನು ಸಶಕ್ತಗೊಳಿಸಬೇಕು. ದಲಿತಕೇರಿ, ಕಾಲೋನಿಗಳಿಗೆ ಆದಿವಾಸಿ ಹಾಡಿಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಭೂ ಒಡೆತನ, ಭೂಮಿಗೆ ನೀರು, ಸ್ವ ಉದ್ಯೋಗ, ಸ್ವಂತ ವಾಹನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವಸತಿ ಶಾಲೆ, ಹಾಸ್ಟೆಲ್ ನಿರ್ಮಾಣವಾಗಬೇಕು. ಈಗ ಏನಾಗಿದೆ? ಯಾವುದೇ ನೀತಿ, ನಿಯಮ ಇಲ್ಲದೆ, ಪೂರ್ವ ಯೋಜನೆ ಇಲ್ಲದೆ ಇದ್ದಬದ್ದವರಿಗೆಲ್ಲ ಗ್ಯಾರೆಂಟಿ ಘೋಷಿಸಿ ತನ್ನ ಕೈಗೆ ತಾನೆ ಹಗ್ಗ ಕಟ್ಟಿಕೊಂಡು ಸರ್ಕಾರ ದಲಿತರ ಮೀಸಲು ನಿಧಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಸ್ಸಿ,ಎಸ್ಟಿ ಸಮುದಾಯಗಳ ಡಾ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮ ಮತ್ತು ಭೋವಿ ಅಭಿವೃದ್ಧಿ ನಿಗಮದ ಹಣವನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಎಸ್.ಸಿ., ಮೋರ್ಚಾ ಮತ್ತು ಎಸ್.ಟಿ.ಮೋರ್ಚಾ ಘಟಕದ ಮುಖಂಡರು, ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು, ಧುರೀಣರು, ಕಾರ್ಯಕರ್ತರು, ಜಿಲ್ಲಾ ಮತ್ತು ರಾಜ್ಯ ಮಟ್ಟದ ನಾಯಕರು ಇದ್ದರು.