ವರದಿ :ಡಾ.ವರ ಪ್ರಸಾದ್ ರಾವ್ ಪಿ.ವಿ
ಗಣಿ ನಾಡು ಬಳ್ಳಾರಿ ಜಿಲ್ಲೆಗೂ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವಿನಾಭಾವ ನಂಟಿದೆ. ಮಹಾತ್ಮ ಗಾಂಧಿಯವರು ಕರ್ನಾಟಕಕ್ಕೆ 13 ಬಾರಿ ಭೇಟಿ ನೀಡಿದ್ದರು. ಅವರು ವಿವಿಧ ಸಂದರ್ಭಗಳಲ್ಲಿ ಕರ್ನಾಟಕದ ಹಲವಾರು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದರು. ಗಣಿ ನಾಡು ಬಳ್ಳಾರಿ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟಕ್ಕೆ ಹುರುಪು ತುಂಬಿದ್ದರು.ರೈಲಿನ ಮೂಲಕ ಸಂಚರಿಸಿ ಸ್ವಾತಂತ್ರ್ಯ ಚಳವಳಿಗೆ ಜನರನ್ನು ಪ್ರೇರೇಪಿಸುವ ಸಂಕಲ್ಪ ತೊಟ್ಟಿದ್ದ ಮಹಾತ್ಮಾ ಗಾಂಧೀಜಿಯವರು 1921 ರ ಅಕ್ಟೋಬರ್ 1 ರಂದು ಬಳ್ಳಾರಿಗೆ ಭೇಟಿ ನೀಡಿ ಸುಮಾರು 8 ಗಂಟೆಗಳ ಕಾಲ ತಂಗಿದ್ದರು. ಹೀಗಾಗಿ ಈ ಬಳ್ಳಾರಿ ರೈಲು ನಿಲ್ದಾಣ ಐತಿಹಾಸಿಕ ಸ್ಥಳವಾಗಿ ಹೊಂದಿದೆ. ಅವರ ಭೇಟಿಯ ನೆನಪಿಗಾಗಿ, ಭಾರತೀಯ ರೈಲ್ವೆ ಇಲಾಖೆಯು ನಿಲ್ದಾಣದಲ್ಲಿ ಗ್ರಾನೈಟ್ ಫಲಕವನ್ನು ಹಾಕಿ ಪವಿತ್ರ ಸ್ಮಾರಕ ಸ್ಧಳ ಎಂದು ಗೌರವಿಸಿದೆ. ಗಾಂಧೀಜಿ ಭೇಟಿಯ ಸ್ಮರಣೆಗಾಗಿ ಜಿಲ್ಲಾಡಳಿತ ರೈಲು ನಿಲ್ದಾಣ ಬಳಿ ಗಾಂಧಿ ಪ್ರತಿಮೆ ಮತ್ತು ಉದ್ಯಾನವುಳ್ಳ ಸ್ಮಾರಕ ನಿರ್ಮಾಣಗೊಂಡಿದೆ. ಈ ಬಗ್ಗೆ ಒಂದು ಐತಿಹಾಸಿಕ ವರದಿ ಇಲ್ಲಿದೆ.
ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಶಾಂತಿ, ಸಹನೆಯಿಂದ ಏನನ್ನಾದರೂ ಸಾಧಿಸಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟು ರಾಷ್ಟ್ರಪಿತರಾದ ಮಹಾತ್ಮಾ ಗಾಂಧೀಜಿ ಹಿಂದುಳಿದ , ಗಡಿ ಜಿಲ್ಲಾ ಕೇಂದ್ರವಾಗಿರುವ ಬಳ್ಳಾರಿಯಲ್ಲೂ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ.

ದಕ್ಷಿಣ ಆಫ್ರಿಕಾದ ಪೀಟರ್‌ಮರಿಟ್ಜ್‌ಬರ್ಗ್ ರೈಲು ನಿಲ್ದಾಣದಲ್ಲಿ ರೈಲಿನಿಂದ ಹೊರಹಾಕಲ್ಪಟ್ಟಾಗ ಮೋಹನದಾಸ ಕರಮಚಂದ್ ಗಾಂಧಿಯವರು 1915 ರಲ್ಲಿ ಭಾರತಕ್ಕೆ ಹಿಂದಿರುಗಿ ಭಾರತದಲ್ಲಿ ತಮ್ಮ ದೇಶವಾಸಿಗಳಿಗಾಗಿ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಸಾಗಿದರು. ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರವಹಿದ್ದ, ಸಮಾಜಕ ಸುಧಾರಕ ಮತ್ತು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಸಂಸ್ಥಾಪಕರಾಗಿದ್ದ ಗೋಪಾಲ ಕೃಷ್ಣ ಗೋಖಲೆ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯರಿಗೆ ಅತ್ಯಂತ ಪ್ರಮುಖ ಸಲಹೆಯೊಂದು ನೀಡಿದ್ದರು, ಭಾರತ ದೇಶ ಪರ್ಯಾಟನೆ ನಡೆಸಿ ದೇಶದ ಸ್ಥಿತಿಗತಿ ತಿಳಿದು, ಬ್ರಿಟಿಷರ ದುರಾಡಳಿತ ಬಗ್ಗೆ ಜನತೆ ತಿಳಿಸಬೇಕು ಹಾಗೂ ನಿಜವಾದ ಭಾರತವನ್ನು ಅರಿಯಬೇಕು, ಭಾರತೀಯರಿಗೆ ಗೌರವಯುತವಾದ ಉತ್ತಮ ಬದುಕನ್ನು ತಂದುಕೊಡವ ರೀತಿಯಲ್ಲಿ ಶ್ರಮಿಸುವಂತೆ ಎಂದು ಸಲಹೆ ನೀಡಲಾಯಿತು. ಈ ಹಿನ್ನಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ರೈಲುಗಲನ್ನೇರಿ ಭಾರತದ ಸ್ಥಿತಿಗತಿ ಅರಿಯಲು ಹಾಗೂ ಬ್ರಿಟಿಷರ ದುರಾಡಳಿತ ಕೊನೆಗಾಣಿಸಲು ಯಾನವನ್ನು ಕೈಗೊಂಡಿದ್ದರು. 1921ರ ಅಕ್ಟೋಬರ್ 1 ರಂದು ಶತಮಾನದಷ್ಟು ಹಳೆಯದಾದ ಬಳ್ಳಾರಿ ರೈಲು ನಿಲ್ದಾಣಕ್ಕೂ ಭೇಟಿ ನೀಡಿದ್ದರು.ಈ ಇಲ್ಲಿನ ರೈಲು ನಿಲ್ದಾಣದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಕಳೆದರು.ಕುತೂಹಲಕಾರಿ ಸಂಗತಿ ಅಂದರೆ ,ಅವರು ರೈಲುಗಾಡಿಯನ್ನು ತಪ್ಪಿಸಿಕೊಂಡಿಲ್ಲ. ಆದರೆ ಆ ಸಮಯದಲ್ಲಿ ಕಾಂಗ್ರೆಸ್‌ನ ಬಳ್ಳಾರಿ ಘಟಕದಲ್ಲಿ ಹೆಚ್ಚು ಒಳ ಜಗಳಕ್ಕೆ ಕಾರಣವಾಗಿದ್ದ ಗುಂಪುಗಾರಿಕೆಯಿಂದ ದೂರವಾಗಿ ರೈಲು ನಿಲ್ದಾಣದಲ್ಲಿಯೇ ವಿಶ್ರಾಂತಿ ಪಡೆದರು.
ಗಾಂಧೀಜಿಯವರು ಬಳ್ಳಾರಿಗೆ ಬಂದಾಗ ಇಲ್ಲಿನ ಕಾಂಗ್ರೆಸ್ ಸಮಿತಿಯಲ್ಲಿ ಎರಡು ಬಣಗಳಿದ್ದವು. ಬಳ್ಳಾರಿ, ಹೊಸಪೇಟೆ, ಹರಪನಹಳ್ಳಿ, ಕೂಡ್ಲಿಗಿ, ಸಂಡೂರು, ಹಡಗಲಿ ಭಾಗಗಳ ಕನ್ನಡಿಗರನ್ನು ಒಳಗೊಂಡ ಸಮಿತಿ ಒಂದು ಬಣವಾದರೆ. ಬಳ್ಳಾರಿ, ಆಲೂರು, ರಾಯದುರ್ಗ, ಆದೋನಿ ಮುಂತಾದವುಗಳನ್ನು ಒಳಗೊಂಡ ತೆಲುಗು ಭಾಷಿಕರ ಸಮಿತಿ ಇನ್ನೊಂದು ಬಣವಾಗಿತ್ತು. ಕಾರಣ ಬಳ್ಳಾರಿಯು 1921ರ ಮದ್ರಾಸ್ ಪ್ರಾಂತ್ಯವಾಗಿತ್ತು. 1953ರ ಅಕ್ಟೋಬರ್ 1ರ ವರೆಗೆ ಬಳ್ಳಾರಿಯು ಮದ್ರಾಸ್ ರಾಜ್ಯದಲ್ಲೇ ಇತ್ತು. ಗಾಂಧೀಜಿಯವರು ಬಳ್ಳಾರಿಗೆ ಬಂದಾಗ ಇಲ್ಲಿನ ಕಾಂಗ್ರೆಸ್ ಸಮಿತಿಯಲ್ಲಿ ಎರಡು ಬಣಗಳಿದ್ದವು.

ಗಾಂಧೀಜಿ ಅವರನ್ನು ಬರಮಾಡಿಕೊಳ್ಳಲು ಎರಡೂ ಸಮಿತಿಗಳ ಸದಸ್ಯರು ಬಳ್ಳಾರಿ ರೈಲು ನಿಲ್ದಾಣಕ್ಕೆ ಬಂದಿದ್ದರು. ಮೊದಲಿಗೆ ತಮ್ಮನ್ನೇ ಉದ್ದೇಶಿ ಮಾತನಾಡಬೇಕೆಂಬ ಹಂಬಲ ಎರಡೂ ಕಾಂಗ್ರೆಸ್ ಸಮಿತಿ ಬಣಗಳಲ್ಲೂ ಇತ್ತು. ಜತೆಗೆ, ಗಾಂಧೀಜಿಯವರಿಗೆ ನಾವೇ ಆತಿಥ್ಯ ಕೊಡಬೇಕು ಎಂದು ಎರಡೂ ಬಣಗಳು ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ. ಭಾಷಾವಾರು ಆಧಾರದ ಮೇಲೆ ಸಮಿತಿಗಳು ವಿಭಜನೆಯಾಗಿರುವುದನ್ನು ನೋಡಿ, ಎರಡು ಕಾಂಗ್ರೆಸ್ ಬಣಗಳು ಅವರನ್ನು ಭೇಟಿ ಮಾಡಲು ಒಂದೇ ಸ್ಥಳದಲ್ಲಿ ಸೇರಲು ನಿರಾಕರಿಸಿದಾಗ, ಗಾಂಧೀಜಿ ಯಾರ ಒತ್ತಡಕ್ಕೂ ಮಣಿಯದಿರಲು ನಿರ್ಧರಿಸಿದರು ಮತ್ತು ಅವರು ಬಂದಿದ್ದ ಕಾರ್ಯಕ್ರಮಕ್ಕೆ ಹಾಜರಾಗದಿರಲು ನಿರ್ಧರಿಸಿದರು.
ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ "ಮೌನ ಪ್ರತಿಭಟನೆ" ನಡೆಸಿದರು. ಎಂಟು ಗಂಟೆಗಳ ಕಾಲ ತಮ್ಮ ರೈಲು ಪ್ರವಾಸವನ್ನು ಮುಂದುವರಿಸಲು ಕಾಯುತ್ತಿದ್ದರು.
ಬಳ್ಳಾರಿ ರೈಲು ನಿಲ್ದಾಣದ ರೈಲ್ವೆ ನಿಲ್ದಾಣದ ಹೊರಗಡೆಯ ವೇದಿಕೆಯ ಮೇಲೆ ಖಾದಿ ಬಟ್ಟೆಯನ್ನು ಹಾಸಿದ ಗಾಂಧೀಜಿ ಅಲ್ಲಿಯೇ ರಾತ್ರಿ ನಿದ್ರಿಸಿದ್ದರು. ಮರುದಿನ ಬೆಳಿಗ್ಗೆ ಅವರ 52ನೇ ವರ್ಷದ ಹುಟ್ಟುಹಬ್ಬದ ದಿನವಾಗಿತ್ತು. ಬೆಳಗಿನ ಜಾವ ರೈಲು ಮೂಲಕ ಆಂಧ್ರದತ್ತ ತೆರಳಿದ್ದರು. ವಿಶೇಷವೆಂದರೆ ತಮಗೆ ಮತ್ತು ತಮ್ಮೊಂದಿಗೆ ಬಂದಿದ್ದ ಇಬ್ಬರಿಗೆ ಟಿಕೇಟು ಪಡೆದು ವಾಪಸ್ ತೆರಳಿದ್ದರು . ಗಾಂಧೀಜಿಯವರು ಬಳ್ಳಾರಿಯಿಂದ ನಿರ್ಗಮಿಸುವ ಹೋಗುವಾಗ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತನೂ ಅಲ್ಲಿ ಇರಲಿಲ್ಲ.

ಈ ಐತಿಹಾಸಿಕ ರೈಲು ನಿಲ್ದಾಣದ ವೇದಿಕೆಯು ಇಂದು ಸ್ಮಾರಕ ಸ್ಥಳವಾಗಿ ಮಾರ್ಪಟ್ಟಿದೆ. ಕರ್ನಾಟಕದ ಎರಡನೇ ಅತ್ಯಂತ ಹಳೇಯ ರೈಲು ನಿಲ್ದಾಣ ವೆನಿಸಿಕೊಂಡಿರುವ, 150 ವರ್ಷಗಳಷ್ಟು ಹಳೇಯದಾದ ಬಳ್ಳಾರಿ ಜಂಕ್ಷನ್ ರೈಲು ನಿಲ್ದಾಣವು, ದೇಶಕ್ಕೆ ಒಗ್ಗಟ್ಟಿನ ಹೋರಾಟದ ಸಂದೇಶ ರವಾನಿಸಲು ವೇದಿಕೆಯಾಯಿತು. ಇದರ ಸ್ಮರಣಾರ್ಥ ಬಳ್ಳಾರಿ ರೈಲ್ವೆ ನಿಲ್ದಾಣದ ಪ್ರವೇಶದ್ವಾರದಲ್ಲಿರುವ ಗೋಡೆಯ ಮೇಲೆ 4 ಅಡಿ 5 ಅಡಿ ಎತ್ತರದ ಗ್ರಾನೈಟ್ ಫಲಕವೊಂದನ್ನು ಹಾಕಲಾಗಿದ್ದು, " ಈ ಪವಿತ್ರವಾದ ಸ್ಥಳದಲ್ಲಿ ಮಹಾತ್ಮ ಗಾಂಧೀಜೀಯವರು ದಿನಾಂಕ 01.10.1921 ರಂದು ಬಳ್ಳಾರಿಗೆ ಭೇಟಿಯಿತ್ತಾಗ ಸುಮಾರು 8 ಘಂಟೆಗಳ ಕಾಲ ತಂಗಿದ್ದರು " ಎಂದು ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ. ಮಹಾತ್ಮ ಗಾಂಧಿಯವರ ಭೇಟಿಯನ್ನು ಅದರಲ್ಲಿ ಸ್ಮರಿಸಲಾಗಿದೆ.ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುವವರು ಈ ದೃಶ್ಯವನ್ನು ನೋಡಬಹುದು. ಇದು ದೇಶದ ಇತಿಹಾಸ ಮತ್ತು ಪರಂಪರೆಯ ಬಿಂಬಿಸುವ ವೇದಿಕೆಯಾಗಿದೆ.
ಮಹಾತ್ಮ ಗಾಂಧೀಜೀಯವರು ಭೇಟಿಯ ಸ್ಮರಣೆಗಾಗಿ ರೈಲು ನಿಲ್ದಾಣದ ಬಳಿ ಮಹಾತ್ಮ ಗಾಂಧೀಜೀ ಅವರ ಪ್ರತಿಮೆ ಮತ್ತು ಉದ್ಯಾನವುಳ್ಳ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜೋತ್ವದಂದು ಮತ್ತು ಮಹಾತ್ಮ ಗಾಂಧೀಜೀ ಜಯಂತಿ ಹಾಗೂ ವಿಶೇಷ ದಿನಗಳಲ್ಲಿ ಸ್ಮರಣಿಸುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗೌರವ ಸಲ್ಲಿಸಲಾಗುತ್ತಿದೆ.