LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆಯುರ್ವೇದಿಕ್ ಸೌಂದರ್ಯವರ್ಧಕಗಳ ಮೊರೆ ಹೋಗುತ್ತಿರುವ ಜನ

ಆಂಟಿ ಏಜಿಂಗ್ ಟ್ರೀಟ್ ಮೆಂಟ್ ಅಡ್ಡಪರಿಣಾಮಗಳು
ನಂಜುಂಡಪ್ಪ.ವಿ.
ಬೆಂಗಳೂರು: ಕನ್ನಡರಿಗೆ ಚಿರಪರಿಚಿತೆ, ಬಾಲಿವುಡ್ ನಟಿ ಶೆಫಾಲಿ ಜರಿವಾಲ ಅಕಾಲಿಕ ಮರಣ, ಹಾಸನದಲ್ಲಿ ಹೃದಯ ಸಮಸ್ಯೆಗಳಿಂದ ಸರಣಿ ಸ್ವರೂಪದ ಹೃದಯ ವಿದ್ರಾವಕ ಮಾರಣಹೋಮಗಳು ಜನ ಸಾಮಾನ್ಯರನ್ನು ಆತಂಕಕ್ಕೀಡು ಮಾಡಿವೆ.
ಈ ಬೆಳವಣಿಗೆ ಜಯದೇವ ಹೃದ್ರೋಗ ಆಸ್ಪತ್ರೆ, ಪ್ರಮುಖ ಹೃದಯ ತಜ್ಞರಿಗೆ ಬಿಡುವಿಲ್ಲದಂತೆ ಮಾಡಿದೆ. ಸಾಲುಗಟ್ಟಿ ನಿಂತು ಹೃದಯ ತಪಾಸಣೆ ಮಾಡಿಸಿಕೊಳ್ಳುತ್ತಿರುವ ಚಿತ್ರಣ ಭೀತಿಯ ವಾತಾವರಣವನ್ನೇ ಸೃಷ್ಟಿಸಿದೆ. ಹಠಾತ್ ಸಾವುಗಳಿಗೆ ಸಮಾಜ ಮರುಕಪಡುತ್ತಿದ್ದರೆ, ವೈದ್ಯಕೀಯ ಲೋಕಕ್ಕೆ ಇದು ಬಹುದೊಡ್ಡ ಸವಾಲಾಗಿದೆ. ಹೃದಯಾಘಾತಗಳನ್ನು ಬೇಧಿಸಲು ಸರ್ಕಾರ ಸಮಿತಿ ರಚಿಸಿ ನೈಜ ಕಾರಣಗಳನ್ನು ಪತ್ತೆ ಮಾಡಲು ಮುಂದಾಗಿದೆ.


ಆದರೆ ಚಿರಯವ್ವನ ಕಾಯ್ದುಕೊಳ್ಳಲು ನಡೆಸುತ್ತಿರುವ ಹುಚ್ಚಾಟಗಳಿಗೆ ಬಲಿಯಾಗುತ್ತಿರುವವರು, ಅಡ್ಡ ಪರಿಣಾಮಗಳನ್ನು ಎದುರಿಸುತ್ತಿರುವವರ ಸಂಖ್ಯೆಗೇನು ಕಡಿಮೆ ಇಲ್ಲ. ಆಂಟಿ ಏಜಿಂಗ್ ಟ್ರೀಟ್ ಮೆಂಟ್ ಪಡೆಯುತ್ತಿದ್ದ ನಟಿ ಶೆಫಾಲಿ ಜರಿವಾಲ ಅಡ್ಡ ಪರಿಣಾಮಗಳಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ ಎನ್ನುವ ಪ್ರಾಥಮಿಕ ವರದಿ ಕಳವಳ ಉಂಟು ಮಾಡಿದೆ. ಅಕಾಲಿಕ ಮೃತ್ಯವಿಗೆ ಒಳಗಾದ ಬಹುತೇಕ ಮಂದಿ ಯೋಗ, ಆಯುರ್ವೇದ, ಶ್ರಮಿಕ ಜೀವನದಿಂದ ದೂರವಿದ್ದರು ಎನ್ನುವ ಮಾಹಿತಿಯೂ ಇದೆ.
ಆದರೂ ಇತ್ತೀಚೆಗೆ ಮನುಷ್ಯನ ಸರಾಸರಿ ವಯಸ್ಸು ಹೆಚ್ಚಾಗುತ್ತಿದೆ. ಜೊತೆಗೆ ಹುಚ್ಚಾಟಗಳು ಅಧಿಕಗೊಂಡಿವೆ. ಜಾಗತಿಕವಾಗಿ ಸರಾಸರಿ ವಯಸ್ಸು 72.6 ವರ್ಷಗಳು. ಭಾರತದಲ್ಲಿ 70 ವರ್ಷಗಳವರೆಗೆ ಮನುಷ್ಯ ಬದುಕುತ್ತಿದ್ದಾನೆ. ಜೀವಿತಾವಧಿಯು ಆರೋಗ್ಯ, ಜೀವನಶೈಲಿ, ವೈದ್ಯಕೀಯ ಆರೈಕೆ ಮತ್ತು ಇತರ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಾಮಾನ್ಯವಾಗಿ ಜೀವಿತಾವಧಿ ಹೆಚ್ಚಾಗಿರುತ್ತದೆ, ಏಕೆಂದರೆ ಅಲ್ಲಿ ವೈದ್ಯಕೀಯ ಸೌಲಭ್ಯಗಳು ಮತ್ತು ಜೀವನಮಟ್ಟ ಉತ್ತಮವಾಗಿರುತ್ತದೆ. ಭಾರತದಂತಹ ದೇಶಗಳಲ್ಲಿ ಯೋಗ, ಆಯುರ್ವೇದ, ಶ್ರಮಿಕ ಬದುಕು ಆಯುಷ್ಯ ಹೆಚ್ಚಿಸಲು ನೆರವಾಗಿವೆ.
ಆದರೂ ಮುಪ್ಪು ಮತ್ತು ಸಾವು ವ್ಯಾಪಕವಾಗಿ ಮನುಷ್ಯನನ್ನು ಬಾಧಿಸುತ್ತಿರುವ ಎರಡು ಪ್ರಮುಖ ಕಳವಳಗಳು. ಇತ್ತೀಚೆಗೆ ಈ ಕುರಿತು 3 ಲಕ್ಷಕ್ಕೂ ಅಧಿಕ ಲೇಖನಗಳು, ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ಮನುಷ್ಯನ ಚಿರ ಯವ್ವನ ಕಾಪಾಡಲು 700ಕ್ಕೂ ಅಧಿಕ ನವೋದ್ಯಮ ಕಂಪೆನಿಗಳು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿದ್ದು. ಇವು ಸಹಸ್ರಾರು ಕೋಟಿ ರೂ ವಹಿವಾಟು ನಡೆಸುತ್ತಿವೆ. ಪ್ರೋಟಿನ್ ಗಳ ಮೂಲಕ ಯವ್ವನವನ್ನು ಕಾಪಿಟ್ಟುಕೊಳ್ಳುವ, ಮಕ್ಕಳು, ಮೊಮ್ಮಕ್ಕಳ ರಕ್ತ, ಪ್ಲೇಟ್ಲೇಟ್ ಗಳನ್ನು ವರ್ಗಾಯಿಸಿಕೊಂಡು ಚಿರಯವ್ವನಿಗರಾಗಲು ಮುನುಷ್ಯ ತಹತಹಿಸುತ್ತಿರುವುದಾಗಿ ವೈದ್ಯಕೀಯ ವಲಯ ಹೇಳುತ್ತದೆ.
ಹೀಗಾಗಿ ಪ್ರಪಂಚದಾದ್ಯಂತ ಪರ್ಯಾಯ ಆರೋಗ್ಯ ಮತ್ತು ಆರಾಮ ತಾಣಗಳ ಜನಪ್ರಿಯತೆ ಹೆಚ್ಚುತ್ತಿದೆ. ವೇಗದ ಜಗತ್ತಿನಲ್ಲಿ, ದೈನಂದಿನ ಒತ್ತಡಗಳನ್ನು ನಿಭಾಯಿಸಲು ವಿಶೇಷ ಗಮನಹರಿಸುವುದು ಅಗತ್ಯವಾಗಿದೆ. ಆಲೋಪಥಿ ಔಷಧಿಗಳ ಮೇಲಿನ ವಿಶ್ವಾಸದ ಕೊರತೆಯಿರುವ ಕಾರಣ ಆರೋಗ್ಯ ಮತ್ತು ಪುನಶ್ಚೇತನಕ್ಕಾಗಿ ನೈಸರ್ಗಿಕ ಮತ್ತು ಹಾನಿಕರವಲ್ಲದ ಚಿಕಿತ್ಸಾ ವಿಧಾನಗಳನ್ನು ಅನ್ವೇಷಿಸಲು ಜನ ಮುಂದಾಗಿದ್ದಾರೆ. ಶರೀರ ಮತ್ತು ಮನಸ್ಸನ್ನು ಸಂಯೋಜಿಸಿ ಚಿಕಿತ್ಸೆ ನೀಡಲು, ಆರೋಗ್ಯ ಪರಿಸ್ಥಿತಿಯನ್ನು ನಿಯಂತ್ರಿಸಲು ಆಯುರ್ವೇದ ಒಂದು ಅದ್ಭುತ ಮತ್ತು ಸಾಬೀತಾದ ಮಾರ್ಗ.
ಇತ್ತೀಚೆಗೆ ಸೌಂದರ್ಯವರ್ಧಕ ವಲಯದಲ್ಲಿ ಆಯುರ್ವೇದ ಮಹತ್ವದ ಪಾತ್ರ ವಹಿಸುತ್ತಿದೆ. ಇಂತಹ ಆಯುರ್ವೇದ ಉತ್ಪನ್ನಗಳು ಹೇಗೆ ಉತ್ಪಾದನೆಯಾಗುತ್ತವೆ ಎಂಬುದು ಕುತೂಹಲಕಾರಿಯಾದದ್ದು. ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಕರಟುಪಾಳ್ಯಂನಲ್ಲಿರುವ “ಕೈರೇಳಿ ಆಯುರ್ವೇದಿಕ್ ಗ್ರೂಪ್ ಪ್ಯಾಕ್ಟರಿ”ಗೆ ಭೇಟಿ ನೀಡಿದ್ದೆ. ಹೃದಯಾಘಾತ ಮತ್ತು ಆಂಟಿ ಏಜಿಂಗ್ ಟ್ರೀಟ್ ಮೆಂಟ್ ಗಳ ಅಡ್ಡಪರಿಣಾಮಗಳ ನಡುವೆ ಆಯುರ್ವೇದ ಹೇಗೆ ದೇಹಾರೋಗ್ಯ ಕಾಪಾಡಲು ಸೂಕ್ತ ಎಂಬ ನನ್ನ ಅನ್ವೇಷಣೆಯ ಭಾಗವಾಗಿ ಈ ಪ್ರವಾಸ ಕೈಗೊಳ್ಳಲಾಗಿತ್ತು.


ಕೇರಳದ ಅತ್ಯಂತ ಪುರಾತನ ಕೈರೇಳಿ ಆಯುರ್ವೇದ ಉತ್ಪನ್ನಗಳ ಉತ್ಪಾದನಾ ಕೇಂದ್ರ ರಾಸಾಯನಿಕಗಳಿಂದ ಸಂಪೂರ್ಣವಾಗಿ ಮುಕ್ತವಾಗಿದ್ದು, ದೇಹಾರೋಗ್ಯದ ಜೊತೆಗೆ ಸೌಂದರ್ಯ ವರ್ಧಕ ಉತ್ಪನ್ನಗಳಾಗಿಯೂ ಜನಜನಿತವಾಗಿವೆ. ಈ ಘಟಕದಲ್ಲಿ ಒಂದೆರಡಲ್ಲ, 100 ಕ್ಕೂ ಅಧಿಕ ಸೌಂದರ್ಯ ವರ್ಧಕಗಳು ಉತ್ಪಾದನೆಯಾಗುತ್ತಿರುವುದು ಒಂದು ವಿಶೇಷ. ಆಯುರ್ವೇದ ಸೌಂದರ್ಯ ವರ್ಧಕಗಳು ಇದೀಗ ಟ್ರೆಂಡ್ ಕೂಡ ಆಗಿದೆ. ಚರ್ಮದ ಆರೈಕೆ, ತ್ವಚೆಯ ಕಾಂತಿ, ಚರ್ಮದ ಆರೋಗ್ಯ ರಕ್ಷಣೆಗಾಗಿ ಸಿನಿ ತಾರೆಯರು ಕೂಡ ಸಾಂಪ್ರದಾಯಿಕ ಆಯುರ್ವೇದ ವಿಧಾನಗಳತ್ತ ನಿಧಾನವಾಗಿ ವಾಲುತ್ತಿದ್ದಾರೆ.

ಜಗತ್ತಿನಲ್ಲಿ ನಗುವಿಗಿಂತ ಮತ್ತೊಂದು ಸೌಂದರ್ಯವರ್ಧಕವಿಲ್ಲ ಎನ್ನುತ್ತಾರೆ. ನಗು ತ್ವಚೆಗೆ ರಕ್ಷಣಾ ಕವಚ. ಎಲ್ಲಿ ನಗುವಿರುತ್ತದೆಯೋ ಅಲ್ಲಿ ಗೆಲುವಿರುತ್ತದೆ. ಎಲ್ಲಿ ನಗುವಿರುತ್ತದೆಯೇ ಅಲ್ಲಿ ಸೌಂದರ್ಯವಿರುತ್ತದೆ. ಎಲ್ಲಿ ಸ್ಮೈಲ್ ಇರುತ್ತದೆಯೋ ಅಲ್ಲಿ ಸ್ಟೈಲ್ ಇರುತ್ತದೆ ಎನ್ನುತ್ತಾರೆ. ಆಯುರ್ವೇದ ಉತ್ಪನ್ನಗಳು ನಗು, ಕಾಂತಿ, ಆರೋಗ್ಯ ವರ್ಧನೆಗೆ ಪೂರಕವಾಗಿವೆ ಎನ್ನುತ್ತಾರೆ ಕೈರೇಳಿ ಆಯುರ್ವೇದಿಕ್ ಗ್ರೂಪ್ ನ ಕಾರ್ಯಕಾರಿ ನಿರ್ದೇಶಕ ಅಭಿಲಾಶ್ ಕೆ. ರಮೇಶ್.
ಕೈರಳಿ ಆಯುರ್ವೇದ ಉತ್ಪನ್ನ ವಿಭಾಗವನ್ನು 1948ರಲ್ಲಿ ಸ್ಥಾಪಿಸಲಾಗಿದೆ. ತಲತಲಾಂತರಗಳಿಂದ ಬಳಕೆಯಲ್ಲಿರುವ ಪದಾರ್ಥಗಳನ್ನು ಸ್ಥಳೀಯವಾಗಿ ಮತ್ತು ನೈಸರ್ಗಿಕವಾಗಿ ಪಡೆದು ಗುಣಮಟ್ಟದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದಂತೆ ಉತ್ಪಾದಿಸಲಾಗುತ್ತಿದೆ. ಸಾಂಪ್ರದಾಯಿಕ, ಹರ್ಬಲ್ ಮತ್ತು ಆರ್ಗ್ಯಾನಿಕ್ ಆಯುರ್ವೇದಿಕ್ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಇಲ್ಲಿ ತಯಾರಿಸಲಾಗುತ್ತಿದೆ.
ಆಯುರ್ವೇದ ಕೇಂದ್ರ, ಸೌಂದರ್ಯ ಚಿಕಿತ್ಸಾಲಯ, ಪಂಚಕರ್ಮ ಕೇಂದ್ರಕ್ಕೆ ಪೂರಕವಾದ ಆಯುರ್ವೇದ ತೈಲವಷ್ಟೇ ಅಲ್ಲದೇ 300ಕ್ಕಿಂತ ಹೆಚ್ಚು ವಿವಿಧ ರೀತಿಯ ಆಯುರ್ವೇದ ತೈಲಗಳನ್ನು ತಯಾರಿಸುತ್ತಿರುವುದು ನಿಜಕ್ಕೂ ಬೆರಗು ಮೂಡಿಸುತ್ತದೆ. ಪ್ರತಿಯೊಂದು ಆಯುರ್ವೇದಿಕ್ ಕೇಂದ್ರದಲ್ಲಿ ಉಪಯೋಗಿಸಬೇಕಾದ, ಸಾಮಾನ್ಯ ದೇಹ ಮಸಾಜ್ ಗೂ ಕೂಡ ಬಳಸಬಹುದಾದ ತೈಲಗಳು ಇವಾಗಿವೆ. ಚಿಕಿತ್ಸಾತ್ಮಕ ಲಾಭದ ಜೊತೆಗೆ ಗ್ರಾಹಕರ ತೃಪ್ತಿಯ ಮಟ್ಟ ಹೆಚ್ಚಿಸಲು ನೆರವಾಗಿವೆ ಎನ್ನುತ್ತಾರೆ ಅಭಿಲಾಶ್ ಕೆ. ರಮೇಶ್.
ಧನ್ವಂತರಂ ತೈಲ, ಪಿಂಡ ತೈಲ, ಮುರಿವೆನ್ನ ಎಣ್ಣೆ, ಶುಧಬಲ ತೈಲ, ಕರ್ಪೂರಾದಿ ತೈಲ, ಅಭ್ಯಾಂಗ ಎಣ್ಣೆ, ಬಾಲಸ್ವಗಂಧಾದಿ ತೈಲ, ಕೊತ್ತಂಚುಕ್ಕಾದಿ ತೈಲ, ನಲ್ಪಮರದಿ ತೈಲ, ಹೀಗೆ ಒಂದೆರಡಲ್ಲ ಹಲವು ಬಗೆಯ ತೈಲಗಳು ಉತ್ಪಾದನೆಯಾಗುತ್ತವೆ. ಆಯಾ ಕಾಲಕ್ಕೆ ಅನುಗುಣವಾಗಿ ದೊರೆಯುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ತೈಲ ಉತ್ಪಾದಿಸಲಾಗುತ್ತದೆ.
ಉತ್ಪನ್ನಗಳ ಉತ್ಪಾದನೆಗೆ ಸಂಪೂರ್ಣವಾಗಿ ನೈಸರ್ಗಿಕ ಪದಾರ್ಥಗಳನ್ನೇ ಬಳಸಲಾಗುತ್ತದೆ. ಇದಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪ್ರತ್ಯೇಕ ನಿಪುಣರ ತಂಡವನ್ನು ನಿಯೋಜಿಸಲಾಗಿದೆ. ಸೌಂದರ್ಯವರ್ಧಕ ಉತ್ಪನ್ನಗಳ ವಿಶೇಷತೆಗಳು ಹಲವು. ಆಯುರ್ವೇದಿಕ್ ಕಾಸ್ಮೆಟಿಕ್ಸ್, ಹರ್ಬಲ್ ಕಾಸ್ಮೆಟಿಕ್ಸ್, ಹರ್ಬಲ್ ಔಷಧಿಗಳು, ಸಾಂಪ್ರದಾಯಿಕ ಆಯುರ್ವೇದ ಔಷಧಗಳನ್ನು ತಯಾರು ಮಾಡಲಾಗುತ್ತಿದೆ. ಅನುಭವಿ ಆಯುರ್ವೇದ ವೈದ್ಯರ ಸಲಹೆ, ಸೂಚನೆ ಮೇರೆಗೆ ಇವುಗಳನ್ನು ಬಳಸಲು ಸೂಕ್ತ ಮಾರ್ಗದರ್ಶನವನ್ನು ಸಹ ನೀಡಲಾಗುತ್ತಿದೆ. ಇತ್ತೀಚೆಗೆ ಜನ ಅಡ್ಡ ಪರಿಣಾಮಗಳಿಂದ ದೂರವಿರುವ ಆಯುರ್ವೇದದ ಸೌಂದರ್ಯ ವರ್ಧಕಗಳನ್ನು ಬಳಸುತ್ತಿದ್ದು, ಇದು ಇತ್ತೀಚಿನ ಪ್ರಮುಖ ವಿಧಾನವಾಗಿ ಬದಲಾಗಿದೆ.

 



ಆಯುರ್ವೇದ ಸೌಂದರ್ಯ ವರ್ಧಕಗಳ ಮಾರುಕಟ್ಟೆಗಾಗಿ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ನವೋದ್ಯಮಗಳು ಸಹ ಹುಟ್ಟಿಕೊಂಡಿವೆ. ಆಯುರ್ವೇದ ಸೌಂದರ್ಯ ವರ್ಧಕಗಳನ್ನು ಉಡುಗೊರೆಯಾಗಿಯೂ ನೀಡಬಹುದು. ಹಬ್ಬ, ಹರಿದಿನಗಳ ಸಂದರ್ಭದಲ್ಲಿ, ಬಹುಮಾನಗಳು ಮತ್ತು ಗೌರವಿಸಲು, ಕಾರ್ಯಕ್ರಮಗಳು, ಜನ್ಮದಿನ ಸೇರಿದಂತೆ ಹಲವು ವಿಶೇಷ ಸನ್ನಿವೇಶಗಳಲ್ಲಿ ಉಡುಗೊರೆಯಾಗಿ ನೀಡುತ್ತಿರುವುದು ಇತ್ತೀಚಿನ ಟ್ರೆಂಡ್ ಆಗಿದೆ. ರಾಸಾಯನಿಕಗಳಿಂದ ಮುಕ್ತವಾಗಿರುವ ಆಯುರ್ವೇದಿಕ್ ಉತ್ಪನ್ನಗಳು ಕಾಲ ಕ್ರಮೇಣ ಉತ್ತಮ ಫಲಿತಾಂಶ ನೀಡಲಿವೆ.

ಅಭಿಲಾಶ್ ಕೆ. ರಮೇಶ್.
ಕಾರ್ಯಕಾರಿ ನಿರ್ದೇಶಕ, ಕೈರೇಳಿ ಆಯುರ್ವೇದಿಕ್ ಗ್ರೂಪ್

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST