ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಮೂಳೆ-ಕೀಲು ಸಂಬಂಧಿತ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿವೆ. ಹೆಚ್ಚಿದ ಜೀವಿತಾವಧಿ, ಜಡ ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಪೌಷ್ಟಿಕಾಂಶದ ಅಸಮತೋಲನ ಮತ್ತು ಕೊರತೆ, ಹಾಗೂ ಮೂಳೆ ಮತ್ತು ಕೀಲು ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಕಡಿಮೆ ಜಾಗೃತಿಯಂತಹ ಅಂಶಗಳು ಈ ಪರಿಸ್ಥಿತಿಗೆ ಮುಖ್ಯ ಕಾರಣಗಳಾಗಿವೆ ಎಂದು ತಿಳಿಸಿದರು.
ಅಧ್ಯಯನಗಳ ಪ್ರಕಾರ, ಕರ್ನಾಟಕದಲ್ಲಿ ದಾಖಲಾಗುವ ಒಟ್ಟು ಮೂಳೆ ಮತ್ತು ಕೀಲು ರೋಗಗಳ ಪೈಕಿ ಕೀಲು ನೋವು (ಆಸ್ಟಿಯೋಆರ್ಥ್ರೈಟಿಸ್) ಮತ್ತು ಮುರಿತಗಳಂತಹ ಸಮಸ್ಯೆಗಳೇ ಸುಮಾರು ೧೧ ರಿಂದ ೧೫% ರಷ್ಟಿದೆ. ಸೊಂಟ ನೋವು ಮತ್ತೊಂದು ಅತ್ಯಂತ ಸಾಮಾನ್ಯ ಮೂಳೆ ಮತ್ತು ಕೀಲು ಸಂಬಂಧಿ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ತಾವು ಚಿಕಿತ್ಸೆ ನೀಡುತ್ತಿರುವ ರೋಗಿಗಳಲ್ಲಿ ಕಂಡುಬರುತ್ತಿರುವ ಮೂಳೆ ಮತ್ತು ಕೀಲುಗಳ ಪ್ರಮುಖ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಅವರು, ಪ್ರಸ್ತುತ ಸಾಮಾನ್ಯವಾಗಿ ಕಂಡುಬರುತ್ತಿರುವ ಪ್ರವೃತ್ತಿಗಳ ಬಗ್ಗೆ ವಿವರಿಸಿದರು
ಈ ಹಿಂದೆ ಸಾಮಾನ್ಯವಾಗಿದ್ದ ಕೀಲು ನೋವು ವಯಸ್ಸಾದವರಲ್ಲಿ ಮಾತ್ರ ಕಾಣುತ್ತಿತ್ತು. ಈಗ ೩೫-೪೫ ವರ್ಷದೊಳಗಿನ ಯುವ ವಯಸ್ಕರಲ್ಲೂ ಹೆಚ್ಚಾಗಿ ಕಂಡುಬರುತ್ತಿದೆ. ಊತದೊಂದಿಗೆ ಸಂಧಿವಾತ ೨೫-೪೫ ವರ್ಷ ವಯಸ್ಸಿನ ವಯಸ್ಕರಲ್ಲಿ ಕಂಡುಬರುತ್ತಿದೆ. ವಿಶೇಷವಾಗಿ ೫೦ ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಮೂಳೆ ಸವೆತ ಸಮಸ್ಯೆ ಸಾಮಾನ್ಯವಾಗುತ್ತಿದೆ. ವರದಿಯಾದ ಒಟ್ಟು ಪ್ರಕರಣಗಳಲ್ಲಿ ಆಘಾತ ಮತ್ತು ಆಟ ಆಡುವಾಗ ಉಂಟಾಗುವ ಗಾಯಗಳ ಪಾಲು ಗಣನೀಯವಾಗಿದೆ. ಇದರಲ್ಲಿ ಕೀಲುಗಳ ಒಳಗಿನ ಸ್ನಾಯು ರಜ್ಜು ಹರಿದು ಹೋಗುವುದು ೩೩% ರಷ್ಟು ಸಾಮಾನ್ಯ ಸಮಸ್ಯೆಯಾಗಿದೆ. ನಂತರದ ಸ್ಥಾನದಲ್ಲಿ ಭುಜದ ಸುತ್ತಲಿನ ಸ್ನಾಯುಗಳಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗುತ್ತಿವೆ. ಕೃತಕ ಬುದ್ಧಿಮತ್ತೆ ಆಧಾರಿತ ಇಮೇಜಿಂಗ್ ಉಪಕರಣಗಳಾದ ವರ್ಧಿತ ಸಿಟಿ, ಎಂಆರ್‌ಐ ಮತ್ತು ಎಕ್ಸ್‌ರೇ ವಿಶ್ಲೇಷಣೆಯಂತಹ ಕಾರ್ಯವಿಧಾನಗಳ ಸಹಾಯದಿಂದ ಸಾಮಾನ್ಯ ಮೌಲ್ಯಮಾಪನದಲ್ಲಿ ತಪ್ಪಿಹೋಗಬಹುದಾದ ಸೂಕ್ಷ್ಮ ಕೀಲು ಅಥವಾ ಸ್ನಾಯು ರಜ್ಜು ಅಸಹಜತೆಗಳನ್ನು ಪತ್ತೆಹಚ್ಚುವುದು ಈಗ ಸಾಧ್ಯವಾಗಿರುವುದರಿಂದ ವೈದ್ಯರು ಬೇಗ ಚಿಕಿತ್ಸೆ ನೀಡಬಹುದಾಗಿದೆ ಎಂದು ಡಾ. ಸಮರ್ಥ್ ತಿಳಿಸಿದರು.

ಈ ಸಮಸ್ಯೆಗಳ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು, ಅಪಾಯಕಾರಿ ಅಂಶಗಳನ್ನು ಅರ್ಥಮಾಡಿಕೊಳ್ಳುವುದು, ಚಿಕಿತ್ಸಾ ತಂತ್ರಗಳು, ನಿರ್ವಹಣೆಯಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಪುನಶ್ಚೇತನದ ಕುರಿತು ಮಾಹಿತಿ ನೀಡಿದ ಅವರು, ರೋಬಾಟಿಕ್ ವ್ಯವಸ್ಥೆಗಳ ಮೂಲಕ ಕೀಲು ಬದಲಿ ಮತ್ತು ಆಟ ಆಡುವಾಗ ಉಂಟಾದ ಗಾಯಗಳ ಶಸ್ತ್ರಚಿಕಿತ್ಸೆಗಳನ್ನು ಮೈಕ್ರೋಮೀಟರ್ ಮಟ್ಟದ ನಿಖರತೆಯೊಂದಿಗೆ ನಿರ್ವಹಿಸಬಹುದಾಗಿದೆ. ಇದರಿಂದ ಮೃದು ಅಂಗಾಂಶಗಳಿಗೆ ಆಗುವ ಆಘಾತ, ಶಸ್ತ್ರಚಿಕಿತ್ಸೆಯ ನಂತರದ ನೋವು ಮತ್ತು ಗುಣವಾಗಲು ತಗಲುವ ಸಮಯ ಕಡಿಮೆಯಾಗುತ್ತದೆ. ರೋಬೋಟಿಕ್ ವಿಧಾನವು ಶಸ್ತ್ರಚಿಕಿತ್ಸೆಯ ವಿಶ್ಲೇಷಣೆಯಲ್ಲಿ ಒದಗಿಸುವ ನೈಜ ಸಮಯದ ಮಾಹಿತಿಯು ವೈದ್ಯರಿಗೆ ತಪ್ಪುಗಳಾಗದಂತೆ ತಡೆಯಲು ಸಹಾಯ ಮಾಡುತ್ತದೆ. ಪ್ರತ್ಯೇಕ ಕೀಲುಗಳ ಅಂಗರಚನೆಗೆ ಅನುಗುಣವಾಗಿ ಕಾರ್ಯವಿಧಾನಗಳನ್ನು ರೂಪಿಸಲು ಸಹಕರಿಸುತ್ತದೆ ಎಂದು ವಿವರಿಸಿದರು.
ಅಷ್ಟೇ ಅಲ್ಲದೇ, ಈ ಸಮಸ್ಯೆಗಳ ತಡೆಗಟ್ಟುವಿಕೆ, ಆರಂಭಿಕ ಹಂತದಲ್ಲಿ ಗುರುತಿಸುವಿಕೆ ಮತ್ತು ಪರಿಣಾಮಕಾರಿ ಚಿಕಿತ್ಸೆಗೆ ಒತ್ತು ನೀಡಿದ ಅವರು, ವೃದ್ಧಾಪ್ಯದಲ್ಲಿ ಮೂಳೆಗಳ ಆರೋಗ್ಯವು, ಬಾಲ್ಯ ಮತ್ತು ಹದಿಹರೆಯದ ಅಭ್ಯಾಸಗಳ ಆಧಾರದ ಮೇಲೆ ನಿಂತಿದೆ. ಈ ರಚನಾತ್ಮಕ ವರ್ಷಗಳಲ್ಲಿ ಸರಿಯಾದ ಪೋಷಣೆ ಮತ್ತು ನಿಯಮಿತ ದೈಹಿಕ ಚಟುವಟಿಕೆಯು ಬಲವಾದ ಮೂಳೆಗಳನ್ನು ಅಭಿವೃದ್ಧಿಪಡಿಸಿ, ನಂತರದ ದಿನಗಳಲ್ಲಿ ಕೀಲು ನೋವು ಮತ್ತು ಎಲುಬುಗಳು ಮುರಿಯುವ ಅಪಾಯವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ರೋಗಿಯನ್ನು ನಿರ್ವಹಣೆ ಮಾಡುವ ಸಾಧನಗಳಿಂದ ಪ್ರತಿ ರೋಗಿಯ ಸ್ಥಿತಿಗತಿಯನ್ನು ನಿರ್ಧರಿಸಬಹುದು. ಇದರಿಂದ ರೋಗಿಗಳು ಬೇಗ ಚೇತರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ಸಹಯೋಗ ಮತ್ತು ಶಿಕ್ಷಣವನ್ನು ಹೆಚ್ಚಿಸುವ ಮೂಲಕ, ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು ಬಳ್ಳಾರಿ ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಆರೋಗ್ಯಕರ, ಹೆಚ್ಚು ಸಕ್ರಿಯ ಜೀವನಕ್ಕೆ ದಾರಿ ಮಾಡಿಕೊಡುತ್ತಿದೆ. ಕೃತಕ ಬುದ್ಧಿಮತ್ತೆ, ರೋಬಾಟಿಕ್ಸ್, ಮತ್ತು ವೈಯಕ್ತೀಕರಿಸಿದ ಪುನಶ್ಚೇತನಗಳಂತಹ ಸುಧಾರಿತ ತಂತ್ರಜ್ಞಾನಗಳನ್ನು ಒಂದೇ ಕಡೆ ಬಲಪಡಿಸುವುದು ಆರೋಗ್ಯ ಜಾಗೃತಿಯ ಧ್ಯೇಯವನ್ನು ಇನ್ನಷ್ಟು ಬಲಪಡಿಸುತ್ತದೆ. ಎಲ್ಲರಿಗೂ ಹೆಚ್ಚು ನಿಖರ ಚಿಕಿತ್ಸೆ, ಸುರಕ್ಷಿತ ಶಸ್ತ್ರಚಿಕಿತ್ಸೆ ರೋಗಿ ಕೇಂದ್ರಿತ ಮೂಳೆ ಮತ್ತು ಕೀಲು ಆರೈಕೆ ದೊರೆಯುವುದನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದರು.