ಮರಿಯಮ್ಮನಹಳ್ಳಿ: ಪಟ್ಟಣದಲ್ಲಿನ ಬೀದಿ ಬದಿ ವ್ಯಾಪಾರಿಗಳಿಂದ ಜಕಾತಿ ವಸೂಲಿ ಮಾಡುವುದನ್ನು ತಡೆಗಟ್ಟುವಂತೆ ಪ.ಪಂ.ಅಧ್ಯಕ್ಷ ಆದಿಮನಿ ಹುಸೇನ್ ಬಾಷ ಮತ್ತು ಮುಖ್ಯಾಧಿಕಾರಿ ಗರಡಿ ಕಳಕ ಮಲ್ಲೇಶ ಅವರಿಗೆ ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾ ಮಂಡಲ ಪದಾಧಿಕಾರಿಗಳು ಗುರುವಾರ ಮನವಿ ಸಲ್ಲಿಸಿದರು.
ಪಟ್ಟಣದ ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿದಿನ ಜಕಾತಿ ವಸೂಲಿ ಮಾಡುತ್ತಿರುವುದು ಪ್ರತ್ಯಕ್ಷವಾಗಿ ಪರೋಕ್ಷವಾಗಿ ತೊಂದರೆಯುಂಟಾಗುತ್ತಿದೆ. ಅಲ್ಲದೆ ಜೀವನೋಪಾಯ, ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ 2014 ಹಾಗೂ ಕರ್ನಾಟಕ ರಾಜ್ಯ ಪಟ್ಟಣ ಮಾರಾಟ ಸಮಿತಿ ಕಾಯ್ದೆ 2019 ಹಾಗೂ ರಾಜ್ಯ ಸರಕಾರದ ಬೀದಿ ಬದಿ ವ್ಯಾಪಾರಿಗಳ ಕಾಯ್ದೆ 2020 ನಿಯಮಾವಳಿ ಪ್ರಕಾರ ಪಟ್ಟಣ ಮಾರಾಟ ಸಮಿತಿ ಸದಸ್ಯರು ಒಳಗೊಂಡು ನಿಯಮಾನುಸಾರ ನಿಗದಿಪಡಿಸಿದ ಬಾಡಿಗೆಯನ್ನು ಆನ್ ಲೈನ್ ಮುಖಾಂತರ ಜಮಾ ಮಾಡುತ್ತಿಲ್ಲ. ರಸೀದಿ ನೀಡದೆ ನೇರವಾಗಿ ಜಕಾತಿ ವಸೂಲಿ ಮಾಡುತ್ತಿದ್ದಾರೆ. ಹಾಗಾಗಿ ಪ.ಪಂ ನಿಂದ ಸಭೆ ಕರೆದು ಮಾರಾಟ ಸಮಿತಿ ಸದಸ್ಯರೊಳಗೊಂಡು ಜಕಾತಿ ವಸೂಲಿ ಪ್ರಕ್ರಿಯೆ ಮುಂದುವರೆಸ ಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರಾದ ಕೆ ಮಂಜುನಾಥ, ಉಮೇಶ, ಎಂ ವೆಂಕಟೇಶ, ಕಟ್ಟಿ ಮಂಜುನಾಥ, ಪಂಪಾಪತಿ, ರವೀಂದ್ರ ನಾಯ್ಕ ಇದ್ದರು.