ಈ ಹಿಂದೆ ಮಾರ್ಕ್ಸ್ ಕಾರ್ಡನಲ್ಲಿ ವಿದ್ಯಾರ್ಥಿಯ ಭಾವಚಿತ್ರ ಬದಲಾಗಿ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿಯ ಪೋಟೋ, ಸಿನಿಮಾ ಸ್ಟಾರ್‌ಗಳ ಪೋಟೋ ಮುದ್ರಿಸಿ ಎಡವಟ್ಟು ಮಾಡಿತ್ತು. ಆದರೆ ಈ ಭಾರಿ ವಿಭಿನ್ನವಾಗಿ ಗರಿಷ್ಠ 700 ಅಂಕಕ್ಕೆ 1163 ಅಂಕ ನೀಡಿ ಅಚ್ಚರಿ ಮೂಡಿಸಿದೆ.
ಸೆಮಿಸ್ಟರ್ ಪರೀಕ್ಷೆಗಳಲ್ಲಿ ಒಟ್ಟು ಅಂಕ 700 ಇರುತ್ತೆ. ಅದಕ್ಕೆ ವಿದ್ಯಾರ್ಥಿಗಳು ಎಷ್ಟು ಅಂಕ ತೆಗೆದುಕೊಳ್ಳುತ್ತಾರೋ ಅಷ್ಟು ಅಂಕಗಳನ್ನು ಹಾಕಬೇಕು. ಆದರೆ ಇಲ್ಲಿ ಅಂಕಗಳನ್ನು ಮುದ್ರಿಸಿದವರು ಸ್ವಲ್ಪ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಹೆಚ್ಚಿನ ಕಾಳಜಿ ತೋರಿಸಿದಂತಿದೆ. ಒಂದೇ ಸೆಮಿಸ್ಟರ್ ಗೆ ಎರೆಡು ಸೆಮಿಸ್ಟರ್ ಅಂಕಗಳನ್ನು ಮುದ್ರಿಸಿಕೊಟ್ಟಿದೆ. ಹೌದು ನಾವೆಲ್ಲ 700ಕ್ಕೆ 700 ಅಂಕ ಪಡೆದು ಕಾಲೇಜಿಗೆ ಪಸ್ಟ್ ಬಂದಿದ್ದನ್ನು ನೋಡಿದ್ದೇವೆ. ಆದರೆ ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ 700 ಕ್ಕೆ 1163 ಅಂಕ ನೀಡಿದ್ದಾರೆ.
ಇದು ಕೇವಲ ಒಬ್ಬರಿಗೆ ಮಾತ್ರ ನೀಡಿದ ಅಂಕಗಳಲ್ಲ. ಬದಲಿಗೆ ಏಳೆಂಟು ವಿದ್ಯಾರ್ಥಿಗಳಿಗೆ ಹೀಗೆ ಅಂಕಗಳನ್ನು ನೀಡಿದ್ದಾರೆ. ಬಹುಶಃ ಮುಂದಿನ ಸೆಮಿಸ್ಟರ್ ಓದುವ ಅವಶ್ಯಕತೆಯಿಲ್ಲ. ಎರೆಡು ಸೆಮಿಸ್ಟರ್ನ ಅಂಕಗಳನ್ನು ಒಟ್ಟಿಗೆ ನೀಡುತ್ತೇವೆ ಎಂಬಂತಿದೆ ವಿಶ್ವವಿದ್ಯಾಲಯದ ನಡೆ.
ಎಂಟು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಗರಿಷ್ಠ ಅಂಕಗಳಿಗಿಂತ 996, 1080, 1100, 840, 1163 ಅಂಕ ಮುದ್ರಣಗೊಂಡಿದೆ. ಗರಿಷ್ಠ ಅಂಕಕ್ಕಿಂತ ಹೆಚ್ಚಿನ ಅಂಕ ಬಂದಿದ್ದನ್ನು ನೋಡಿ ವಿದ್ಯಾರ್ಥಿಗಳೇ ಶಾಕ್ ಆಗಿದ್ದಾರೆ. ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡುವ ಬಳ್ಳಾರಿಯ ಎಸ್‌ಜಿಟಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಈ ರೀತಿಯ ಹೆಚ್ಚಿನ ಅಂಕಗಳು ಕಂಡು ಬಂದಿವೆ.

ಬಿಬಿಎ ಪದವಿ ಕೋಸ್೯ನಲ್ಲಿ ಒಟ್ಟು ಎಂಟು ಸಬ್ಜೆಕ್ಟ್‌ಗಳು ಬರುತ್ತವೆ. ಅದರಲ್ಲಿ ಆರು ವಿಷಯಗಳಿಗೆ ಸಬ್ಜೆಕ್ಟ್‌ಗೆ ಗರಿಷ್ಟ ನೂರು ಅಂಕದ ರೀತಿ ಆರು ನೂರು ಅಂಕ, ಬಳಿಕ ಎರಡು ವಿಷಯಗಳಿಗೆ 50 ಅಂಕಗಳಂತೆ ಒಟ್ಟು ನೂರು ಅಂಕ ಸೇರಿ ಏಳನೂರು ಅಂಕಗಳು ಇರುತ್ತವೆ. ಆದರೆ ಇಲ್ಲಿ ಆಶ್ಚರ್ಯವೆಂಬಂತೆ 700 ಅಂಕಗಳಿಗೆ 996, 1080,1100 ಹೀಗೆ ಹೆಚ್ಚಿನ ಅಂಕಗಳನ್ನು ನೀಡಿದ್ದಾರೆ.
ಬಗ್ಗೆ ಪರೀಕ್ಷಾಂಗ ಕುಲಸಚಿವರು ತಾಂತ್ರಿಕ ದೋಷದಿಂದ ಸಮಸ್ಯೆ ಆಗಿದೆ. ಎಂಟು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ತಾಂತ್ರಿಕ ದೋಷದಿಂದ ಈ ರೀತಿಯಾಗಿದೆ. ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುತ್ತಿದ್ದೇವೆ. ಶೀಘ್ರದಲ್ಲೇ ದೋಷಪೂರಿತ ಅಂಕಪಟ್ಟಿಗಳನ್ನ ಮರು ಮುದ್ರಣ ಮಾಡಿಕೊಡುತ್ತೇವೆ. ಯಾವುದೇ ವಿದ್ಯಾರ್ಥಿಗಳು ಗೊಂದಲಕ್ಕೀಡಾಗದಿರಿ ಎನ್ನುತ್ತಾರೆ ಪರೀಕ್ಷಾಂಗ ಕುಲಸಚಿವ ಎನ್‌ಎಮ್ ಸಾಲಿ ಅವರು.
ಈ ಸಂಬಂಧ ಪ್ರತಿಕ್ರಿಯೆ ಕೇಳಲು ಕುಲಪತಿಗಳಾದ ಮುನಿರಾಜು ಅವರಿಗೆ ಕರೆ ಮಾಡಿದಾಗ, ಉತ್ತರಿಸಿದ್ದು ಹೀಗೆ. ತಾಂತ್ರಿಕ ದೋಷಗಳಾಗಿ ಅಂಕಪಟ್ಟಿಯಲ್ಲಿ ಅಂಕಗಳು ತಪ್ಪಾಗಿ ಮುದ್ರಿತಾವಾಗಿವೆ. ಅದು ವಿಶ್ವ ವಿದ್ಯಾಲಯದ ತಪ್ಪಲ್ಲ. ಬದಲಿಗೆ ಪರೀಕ್ಷಾಂಗವನ್ನು ಕಾರ್ಯಗಳನ್ನು ಅದರಲ್ಲೂ ಪ್ರಮುಖವಾಗಿ ಪರೀಕ್ಷೆ, ಫಲಿತಾಂಶವನ್ನು ಪ್ರಕಟಿಸುವ ಯುಯುಸಿಎಂಎಸ್ ( ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ) ತಂಡದ ಕಣ್ತಪ್ಪಿನಿಂದಾದ ಸಮಸ್ಯೆ. ಇದನ್ನು ಸರಿಪಡಿಸುತ್ತೇವೆ. ಯಾವುದೇ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ. ತಪ್ಪಿತಸ್ಥರ ಮೇಲೆ ಕ್ರಮವನ್ನು ಜರುಗಿಸುತ್ತೇವೆ ಎಂದರು.
ಅದು ಏನೇ ಆಗಲಿ, ಆಗಾಗ್ಗೆ ಎಡವಟ್ಟುಗಳನ್ನು ಮಾಡಿಕೊಂಡು ಸುದ್ದಿಯಾಗುವುದರ ಜೊತೆಗೆ ಹಲವರ ಟೀಕೆಗಳಿಗೂ ಗುರಿಯಾಗುತ್ತಿದೆ ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ.
ಈ ಮುಂಚೆಯೂ ಹಲವು ಪ್ರಕರಣಗಳು ವಿವಿಯಲ್ಲಿ ನಡೆದಿದ್ದು, ತನಿಖೆ ನಡೆಸಲಾಗುತ್ತಿದೆ ಎನ್ನುವ ಕುಲಪತಿಗಳು, ಇದೀಗ ನಡೆದ ಎಡವಟ್ಟಿಗೆ ಯಾರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೋ ಎಂಬುದು ಕಾದು ನೋಡಬೇಕಿದೆ.
ಒಟ್ಟಾರೆಯಾಗಿ ವಿದ್ಯಾರ್ಥಿಗಳ ಜೀವನದ ಮೇಲೆ ಚೆಲ್ಲಾಟವಾಡುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದರಲ್ಲಿ ತಪ್ಪು ಯಾರದೇ ಇರಲಿ ಅದನ್ನು ಸರಿಪಡಿಸಿಕೊಂಡು ವಿದ್ಯಾರ್ಥಿಗಳ ಜೀವನಕ್ಕೆ ಉತ್ತಮ ದಾರಿ ತೋರಿಸಬೇಕು ಎಂಬುದು ವಿಶ್ವನುಡಿ ವಾಹಿನಿಯ ಕಳಕಳಿಯಾಗಿದೆ.
.