ಕೊಪ್ಪಳ: ತಾ. ಪಂ. ಹತ್ತಿರ ಗಾಂಧೀ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಕೇಸರಿ,ಬಿಳಿ,ಹಸಿರಿನ ಖಾದಿ ನೂಲಿನ ಹಾರವನ್ನು ಹಾಕಿ ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅವರು ಗೌರವ ನಮನ ಸಲ್ಲಿಸಿದರು. ಗಾಂಧೀಜಿ ಬ್ರಿಟಿಷರನ್ನು ಓಡಿಸಲು ಯಾವುದೇ ಶಸ್ತ್ರಾಸ್ತ್ರಗಳನ್ನು ಹಿಡಿಯಲಿಲ್ಲ. ಅವರು ಅಹಿಂಸಾ ಅಸ್ತ್ರದಿಂದ ಈ ದೇಶದಿಂದ ಬ್ರಿಟಿಷರು ಕಾಲು ಕೀಳುವಂತ ಹೋರಾಟ ಮಾಡಿದರು. ಈಗ ನಮಗೆ ಎದುರಾಗಿರುವ ಬಲ್ದೋಟಾ ಕಂಪನಿ ನಮ್ಮ ಪಾಲಿಗೆ ಈಸ್ಟ್ ಇಂಡಿಯಾ ಕಂಪನಿಯಷ್ಟೇ ಪಿಡುಗಾಗಿದೆ. ಕೊಪ್ಪಳದಿಂದ ಇದನ್ನು ಓಡಿಸಲು ಗಾಂಧಿ ಮಾರ್ಗವು ನಮಗೆ ಮುಖ್ಯವಾಗಿ ಬೇಕಾಗುತ್ತದೆ ಎಂದು ಹೇಳಿದರು.
" ಕೊಪ್ಪಳದ ಸುತ್ತಮುತ್ತ ಈಗಾಗಲೇ ಹಲವಾರು ಕಾರ್ಖಾನೆಗಳ ಉತ್ಪಾದನೆಯಿಂದ ಪರಿಸರ ಮತ್ತು ಜೀವಸಂಕುಲದ ಬದುಕಿನಲ್ಲಿ ಏರು-ಪೇರು ಆಗಿದೆ.
ಅಲ್ಲಾನಗರ, ಗಿಣಿಗೇರ, ಹೊಸಕನಕಾಪುರ, ಹಳೆ ಕನಕಾಪುರ, ಬೇವಿನಹಳ್ಳಿ, ಹಿರೇಬಗನಾಳ, ಚಿಕ್ಕ ಬಗನಾಳ, ಕಾಸನಕಂಡಿ, ಕುಣಿಕೇರಿ, ಲಾಚನಕೇರಿ, ಹಾಲವರ್ತಿ ಮುಂತಾದ ಹಳ್ಳಿಗಳಲ್ಲಿ ನೀರು, ಮಣ್ಣು, ಗಾಳಿ ಕಲುಷಿತಗೊಂಡಿದ್ದು ಜನರ ಅರೋಗ್ಯದಲ್ಲೂ ಕೂಡ ಬದಲಾವಣೆ ಆಗಿದೆ. ಕ್ಷಯ, ಅಸ್ತಮಾ, ಕ್ಯಾನ್ಸರ್ ನಂತ ಕಾಯಿಲೆಗಳು ಕಾಣಿಸಿಕೊಂಡಿವೆ. ಜಾನುವಾರುಗಳಿಗೆ ತಿನ್ನಲು ಶುದ್ದ ಹುಲ್ಲು ಈ ಊರುಗಳಲ್ಲಿ ಸಿಗುತ್ತಿಲ್ಲ. ಅಕ್ಕ ಪಕ್ಕದ ಜಮೀನು ಗಳಲ್ಲಿ ಸಂಪೂರ್ಣ ಧೂಳು ಆವರಿಸಿದೆ. ರೈತರ ಬೆಳೆಗಳ ಮೇಲೆ ಕೆಂಧೂಳು ಆವರಿಸಿ ರೈತರ ಬದುಕನ್ನು ನರಕಕ್ಕೆ ದೂಡಿದೆ. ಹೀಗಾಗಿ ಕಾರ್ಖಾನೆಗಳ ವಿಸ್ತರಣೆ ಮಾಡಿದರೆ ಕೊಪ್ಪಳ ಮತ್ತು ಸುತ್ತಾಮುತ್ತ ಇರೋ ಹಳ್ಳಿಗಳು ಇನ್ನೂ ಹತ್ತೇ ವರ್ಷದಲ್ಲಿ ಸಂಪೂರ್ಣ ಧೂಳ್ಮಯವಾಗಿ ಜನ ಜೀವನದ ಬದುಕು ಅಸ್ತವ್ಯಸ್ತಗೊಳ್ಳುತ್ತದೆ. ಇದನ್ನು ಸರ್ಕಾರ ನಿಲ್ಲಿಸಬೇಕು ಸುಸ್ಥಿರ ಪರಿಸರಕ್ಕೆ ಪೂರಕವಾದ ಕೈಗಾರಿಕೆಗಳನ್ನು ತೆರೆದು ಇಲ್ಲಿನ ಯುವಕರಿಗೆ, ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು ಎಂದು ಗಾಂಧಿ ಬಳಗದ ನೇತಾರರು ಪರಿಸರವಾದಿ, ಸಾವಯವ ಕೃಷಿಕರಾದ ಆನಂದ ತೀರ್ಥ ಪ್ಯಾಟಿ ಬರಹ ಸಂದೇಶ ರವಾನಿಸಿದರು.

ಬಸವರಾಜ ಸವಡಿ ರವರು "ಇಂದು ಬೃಹತ್ ಕೈಗಾರಿಕೆಗಳ ಹೆಸರಿನಲ್ಲಿ ಇಡೀ ಪರಿಸರವನ್ನು, ಬೆಟ್ಟಗುಡ್ಡಗಳನ್ನು ಕೊರೆದು ಅರಣ್ಯ ನಾಶ ಮಾಡಿ ಜಲಮೂಲಗಳನ್ನು ಇಲ್ಲದಂತೆ ಮಾಡಲಾಗುತ್ತಿದೆ. ಇದರಿಂದ ನಮಗೆ ಗಾಂಧೀ ಸಂದೇಶಗಳನ್ನು ಪಾಲನೆ ಮಾಡಲು ಆಗಿಲ್ಲ ಎಂದು ಗೊತ್ತಾಗುತ್ತದೆ. ಇಲ್ಲಿ ಸ್ವದೇಶಿ ಆಲೋಚನೆಗಳನ್ನು ಬದಿಗೊತ್ತಿ, ಬೃಹತ್ ಹೂಡಿಕೆಯ ಕೈಗಾರಿಕೆ ಸ್ಥಾಪಿಸಿ ಕೃಷಿ ಮತ್ತು ಗುಡಿ ಕೈಗಾರಿಕೆಗಳನ್ನು ಕಡೆಗಣಿಸಲಾಗಿದೆ. ದೇಶದಲ್ಲಿ ನಿರುದ್ಯೋಗ ಸೃಷ್ಟಿಯಾಗಲು ಇದು ಕೂಡ ಮುಖ್ಯ ಕಾರಣವಾಗಿದೆ. ನಮ್ಮ ನೆಲದ ಆರ್ಥಿಕತೆ ಅಂದರೆ ಅದು ಕೃಷಿ ಮತ್ತು ಸಣ್ಣ ಕೈಗಾರಿಕೆಗಳಿಂದ ಆಗುತ್ತದೆ. ನಾವು ಗುಡಿ ಕೈಗಾರಿಕೆ ಮತ್ತು ಗ್ರಾಮೀಣ ಕೃಷಿಗೆ ತೆರೆದುಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಆಗುತ್ತದೆ ಎಂದು ಸಂದೇಶ ಬರೆದರು. ಪತಂಜಲಿ ಯೋಗ ಸಮಿತಿಯ ಮಲ್ಲನಗೌಡ ಡಿ. ಇವರು ಮಾತನಾಡುತ್ತಾ ನಮ್ಮ ದೇಶಕ್ಕೆ ಗಾಂಧಿ ಮಾರ್ಗವೇ ಆದರ್ಶ. ಸಂವಿಧಾನ ಪಿತಾಮಹ ಅಂಬೇಡ್ಕರ್ ಮಾರ್ಗವು ನಮ್ಮ ಸಮಗ್ರ ಅಭಿವೃದ್ಧಿಗೆ ಬೇಕು. ಆದರೆ ಬಂಡವಾಳ ಶಾಹಿಗಳು ತಮ್ಮ ಏಕಸ್ವಾರ್ಥದ ಅಭಿವೃದ್ಧಿಗಾಗಿ ಏನೆಲ್ಲವನ್ನೂ ಬಲಿ ತೆಗೆದುಕೊಳ್ಳುವ ಜಾಯಮಾನ ಅವರದು. ಸಂವಿಧಾನದತ್ತನನನಮ್ಮ ಬದುಕುವ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿರುವ ಬಂಡವಾಳಗಾರ ಬೃಹತ್ ಕಾರ್ಖಾನೆಗಳಿಗೆ ತಿಲಾಂಜಲಿ ಇಡಲು ಗಾಂಧಿ ಮಾರ್ಗದ ಅಹಿಂಸಾ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂದರು.
ಬಿಳಿಬಣ್ಢದ ಸಮವಸ್ತ್ರ ಹಾಗೂ ಟೋಪಿ ಧರಿಸಿ ಮೌನವಾಗಿ ಪಾದಯಾತ್ರೆ ಮಾಡುತ್ತಾ ನಗರಸಭೆ ಆವರಣದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ಬಲ್ಡೋಟಾ ಬಿಎಸ್ಪಿಎಲ್, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ 24ನೇ ದಿನದ ಅನಿರ್ದಿಷ್ಟಾವಧಿ ಧರಣಿ ಹೋರಾಟಕ್ಕೆ ಬೆಂಬಲಿಸಿ ಉಪವಾಸ ಸತ್ಯಾಗ್ರಹವನ್ನು ಗಾಂಧೀ ಬಳಗದ ಆನಂದತೀರ್ಥ ಪ್ಯಾಟಿ. ಬಸವರಾಜ ಸವಡಿ, ಯುವರಾಜ ಬಡಿಗೇರ, ಶಿವಪ್ಪ ಹಡಪದ ಹಾಗೂ ಮಲ್ಲನಗೌಡ ಡಿ. ಕೈಗೊಂಡರು. ಧರಣಿಯಲ್ಲಿ ಸಮವಸ್ತ್ರಧಾರಿಗಳಾಗಿ ಮೌನೇಶ ಹೊಸಕೆರಿ, ವೆಂಕಟೇಶ ಬಿ.ಕೆ, ಭೀಮಪ್ಪ ಹೂಗಾರ, ಮಲ್ಲಿಕಾರ್ಜುನ ಗೋನಾಳ (ಕೆ.ಬಿ. ಗೋನಾಳ), ಮೂಕಪ್ಪ ಮೇಸ್ತ್ರಿ ಬಸಾಪುರ, ಬಿ.ಎ.ಆಡೂರು, ಮಹಾಂತೇಶ ಕೊತಬಾಳ, ಡಿ.ಎಚ್.ಪೂಜಾರ, ಬಸವರಾಜ ಶೀಲವಂತರ, ಮಖಬೂಲ್ ರಾಯಚೂರು, ಮಂಜುನಾಥ ಕವಲೂರು, ಭೀಮಪ್ಪ ಯಲಬುರ್ಗಾ, ಮಹಾದೇವಪ್ಪ ಮಾವಿನಮಡು, ಪ್ರಕಾಶ ಮೇದಾರ ಇದ್ದರು.ವೆಂಕಣ್ಣ ಕಟ್ಟಿ
ಮತ್ತಿತರರು ಉಪಸ್ಥಿತರಿದ್ದರು.