LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭ್ರಷ್ಟಾಚಾರದಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ

ರಾಜ್ಯ ಸರ್ಕಾರದ ವಿರುದ್ದ ಜನಾಂದೋಲನಕ್ಕೆ ಬಿಜೆಪಿ ತೀರ್ಮಾನ : ಬಸವರಾಜ ಬೊಮ್ಮಾಯಿ

ಹಾವೇರಿ: ರಾಜ್ಯ ಸರ್ಕಾರದ  ಆಡಳಿತ ವ್ಯವಸ್ಥೆ ವಿರುದ್ಧ   ಜನಾಂದೋಲನ  ಮಾಡಬೇಕೆಂದು ಬಿಜೆಪಿ  ತೀರ್ಮಾನ ಮಾಡಿದೆ. ಜನರ ವಿಶ್ವಾಸದೊಂದಿಗೆ ಯಾವ ಪ್ರದೇಶದಲ್ಲಿ ಯಾವ ವಿಷಯ ತೆಗೆದುಕೊಂಡು ಜನಾಂದೋಲನ ರೂಪಿಸಬೇಕು ಎಂದು ಪಕ್ಷದ ಪ್ರಮುಖರ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ಅಧಿಕಾರಿಗಳ ವರ್ಗಾವಣೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಸ್ಥಳೀಯ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದ ವರಗೆ ಅಧಿಕಾರಿಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಪ್ರಾಮಾಣಿಕ ಅಧಿಕಾರಿಗಳ ನೈತಿಕತೆ ಕುಂದಿದೆ. ಆಡಳಿತ ಪಕ್ಷದ ಶಾಸಕರು ಮಾತಾಡಿದರೂ ಸಿಎಂ ಹಾಗೂ ಡಿಸಿಎಂ ತುಟಿ ಪಿಟಕ್ ಅನ್ನುತ್ತಿಲ್ಲ. ಸಂಪುಟ ಸಹೋದ್ಯೋಗಿಗಳು ಬಹಿರಂಗವಾಗಿ ಪತ್ರ ಬರೆಯುತ್ತಾರೆ. ಸಚಿವ ಸಂಪುಟದಲ್ಲೂ ಸಾಮರಸ್ಯ ವಿಶ್ವಾಸ ಇಲ್ಲ. ಸಚಿವರು ಸಂಪುಟದಲ್ಲಿ ಎತ್ತುವ ಪ್ರಶ್ನೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಬಹಿರಂಗವಾಗಿ ಪತ್ರ ಬರೆಯುತ್ತಿದ್ದಾರೆ ಎಂದರು.



ಮಳೆ ಬಂದರೂ ಪರಿಹಾರ ಇಲ್ಲ. ಬೆಳೆ ಹಾನಿಗೆ ಪರಿಹಾರ ಇಲ್ಲ. ಮನೆ ಕುಸಿದರೂ ಪರಿಹಾರ ಇಲ್ಲ.  ಯಾವುದೇ ರೀತಿ ಜನ ಸ್ಪಂದನೆ ಕೆಲಸ ಆಗ್ತಾ ಇಲ್ಲ. ರಾಜ್ಯ ಸರ್ಕಾರದ  ಆಡಳಿತ ವ್ಯವಸ್ಥೆ ವಿರುದ್ಧ ಜನಾಂದೋಲನ ಪ್ರಾರಂಭ ಆಗಲಿದೆ. ಯಾವ್ಯಾವ ಪ್ರದೇಶಗಳಲ್ಲಿ ಯಾವ ವಿಷಯ ಇದೆ ಅದನ್ನು ತೆಗೆದುಕೊಂಡು ಜನರ ವಿಶ್ವಾಸದೊಂದಿಗೆ  ಜನಾಂದೋಲನ  ಮಾಡಬೇಕೆಂದು ಬಿಜೆಪಿ  ತೀರ್ಮಾನ ಮಾಡಿದೆ. ಯಾವ ಪ್ರದೇಶದಲ್ಲಿ ಯಾವ ವಿಷಯ ತೆಗೆದುಕೊಂಡು ಜನಾಂದೋಲನ ರೂಪಿಸಬೇಕು ಎಂದು ಪಕ್ಷದ ಪ್ರಮುಖರ ಜೊತೆ  ಚರ್ಚೆ, ಚಿಂತನ ಮಂಥನ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೂಚನೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಎಲ್ಲರೂ ಸೇರಿ  ಶೀಘ್ರದಲ್ಲೇ ಜನಾಂದೋಲನ ಪೂರ್ವಭಾವಿ ಸಭೆ ಮಾಡುತ್ತೇವೆ ಎಂದು ಹೇಳಿದರು.

 

ಎಲ್ಲರೂ ಪಾಲುದಾರರು

ಈಗಾಗಲೇ ಸರ್ಕಾರದ ವಿರುದ್ದ ಪಿ.ಡಬ್ಲು ಡಿ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ಲಿಕ್ಕರ್ ಶಾಪ್ ಅಸೋಸಿಯೇಷನ್ ನವರು ಎಲ್ಲದಕ್ಕೂ ಹಣ ವಸೂಲಿ ಮಾಡುತ್ತಿದ್ದಾರೆ, ಅಧಿಕಾರಿಗಳ ವರ್ಗಾವಣೆಗೂ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಕಂಪ್ಲೇಂಟ್ ಮಾಡಿದ್ದಾರೆ. ಕೆ.ಇ.ಬಿ ಕಾಂಟ್ರಾಕ್ಟರ್ಸ್ 500 ರೂ. ಬೆಲೆಯ ಸ್ಮಾರ್ಟ್ ಮೀಟರ್ ಗೆ 4 ರಿಂದ 5 ಸಾವಿರ ವಸೂಲಿ ಮಾಡುತ್ತಿದ್ದಾರೆ ಎಂದು ಕಂಪ್ಲೇಂಟ್ ಮಾಡಿದ್ದಾರೆ. ಎಲ್ಲಾ ಅಸೋಸಿಯೇಷನ್ ದವರು ಲಂಚಾವತಾರದ ಬಗ್ಗೆ ಬಹಿರಂಗಗೊಳಿಸಿದರೂ ಸರ್ಕಾರ ಇದಕ್ಕೆ ಯಾವುದೇ ರೀತಿಯ ಸ್ಪಂದನೆ ಮಾಡದಿರುವುದನ್ನು ನೋಡಿದರೆ ಎಲ್ಲರೂ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

 

ಜಿಲ್ಲಾಡಳಿತ ಹೊಣೆ

ರೈತರ ಆತ್ಮಹತ್ಯೆ ಪರಿಶೀಲನೆ ವ್ಯವಸ್ಥೆ ಮಾಡುವುದು ವ್ಯವಸ್ಥೆನೇ ಇದೆ. ಸಚಿವ ಶಿವಾನಂದ ಪಾಟೀಲ್ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮಾತುಗಳನ್ನಾಡಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳ ಹೊಣೆ ಜಿಲ್ಲಾಡಳಿತ  ಹೊರಬೇಕು, ಸರ್ಕಾರ ಪರಿಹಾರ ಕೊಡಬೇಕು. ರೈತ ಸಂಪರ್ಕ ಕೇಂದ್ರದಿಂದ ನಕಲಿ ಬೀಜ ಕೊಟ್ಟಿದಾರೆ. ಸರ್ಕಾರವೇ ಡುಬ್ಲಿಕೇಟ್ ಮಾಡಿದ ಹಾಗೆ  ಆಯಿತು. ಪಕ್ಕದ ಧಾರವಾಡ ಜಿಲ್ಲೆಯಲ್ಲಿ ಚೆನ್ನಾಗಿ ಬೀಜಗಳು ಹುಟ್ಟಿದೆ.  ಅಲ್ಲಿ ಮಧ್ಯ ಪ್ರದೇಶದಿಂದ ತರಿಸಿದ್ದಾರೆ. ಮಹಾರಾಷ್ಟ್ರದಿಂದ ತರಿಸಿದ್ದು ಇಲ್ಲಿದೆ. ಕೃಷಿ ಸಚಿವರು ಈ ಬಗ್ಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST