ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆಯ ಬಳಿಕ ಬುಧವಾರ ಮಧ್ಯಾಹ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರ ಸಾಮಾಜಿಕ ನ್ಯಾಯದ ಪರ ಬೇಷರತ್ ಬದ್ಧತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಇದೊಂದು ರಾಷ್ಟ್ರೀಯ ಆಂದೋಲನವಾಗಿಸಲು ಅವರು ಯೋಧನಂತೆ ಮುನ್ನುಗ್ಗುತ್ತಿದ್ದಾರೆ ಎಂದರು.
ಮೂರು ವಿಷಯಗಳ ನಿರ್ಣಯ:
ಪ್ರಮುಖ ಮೂರು ವಿಷಯಗಳ ಪೈಕಿ ಭಾರತೀಯ ಜನಗಣತಿ ಆಯೋಗ, ಅಧಿಕೃತವಾಗಿ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು, ಭಾರತ (ಒಆರ್‌ಜಿಐ) ಇವರ ವತಿಯಿಂದ ರಾಷ್ಟ್ರ ಮಟ್ಟದ ಜಾತಿ ಗಣತಿ ಕೈಗೊಳ್ಳುವುದು. ಜನಗಣತಿಯು ಪ್ರತಿ ಜಾತಿ ಮತ್ತು ವ್ಯಕ್ತಿಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಅಂಶಗಳನ್ನು ಒಳಗೊಂಡಿರಬೇಕು ಮತ್ತು ತೆಲಂಗಾಣ ರಾಜ್ಯದ ಸೀಪ್ ಜಾತಿ ಸಮೀಕ್ಷೆಯನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕೆಂದು ನಿರ್ಧರಿಸಿದ್ದೇವೆ. ಮೀಸಲಾತಿಯನ್ನು ನೀಡಲು ಶೇ 50 ರಷ್ಟಿರುವ ಗರಿಷ್ಠ ಪರಿಮಿತಿಯನ್ನು ಸಡಿಲಗೊಳಿಸಿ ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಸೂಕ್ತ ಮೀಸಲಾತಿಯನ್ನು ಒದಗಿಸಬೇಕು ಮತ್ತು ಸಂವಿಧಾನದ ಅನುಚ್ಛೇಧ 15(5) ರ ಪ್ರಕಾರ ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನೀಡಬೇಕು ಎಂದು ನಿರ್ಣಯಿಸಲಾಗಿದೆ ಎಂದರು.

ಸಾಮಾಜಿಕ ಪರಿವರ್ತನೆ:
ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ ಯಶಸ್ವಿಯಾಗಿದೆ ಎಂದು ಉಚ್ಛರಿಸಿದ ಅವರು, ಸಮಾಜದ ನಿರ್ಲಕ್ಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಈ ಮೂರು ಅಂಶಗಳು ಸಹಕಾರಿಯಾಗಲಿವೆ. ರಾಹುಲ್ ಗಾಂಧಿಯವರ ದೃಢನಿಶ್ಚಯದಿಂದಾಗಿ ಮನುವಾದಿ ಮೋದಿ ಸರ್ಕಾರವನ್ನು ನ್ಯಾಯಯುತ ಮತ್ತು ಸಾಂವಿಧಾನಿಕ ಬೇಡಿಕೆಯಾಗಿದ್ದ ಜಾತಿ ಗಣತಿಯನ್ನು ಭಾರತದಲ್ಲಿ ಕೈಗೊಳ್ಳುವಂತೆ ಮಾಡಿತು. ಇದೊಂದು ಮೈಲಿಗಲ್ಲಾದರೂ, ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಇದೊಂದು ಸಣ್ಣ ಹೆಜ್ಜೆ. ನ್ಯಾಯ ಯೋಧ ರಾಹುಲ್ ಗಾಂಧೀಜಿಯವರ ಅಚಲ ನಾಯಕತ್ವದಡಿಯಲ್ಲಿ, ಭಾರತವು ಅತ್ಯುನ್ನತ ಸಾಂವಿಧಾನಿಕ ಉದ್ದೇಶವಾದ ಸಾಮಾಜಿಕ ಪರಿವರ್ತನೆಯನ್ನು ಸಾಕಾರಗೊಳಿಸಲಿದೆ. ತನ್ಮೂಲಕ ನಮ್ಮ ಮಹಾನ್ ದೇಶದಲ್ಲಿ ಸಮಸಮಾಜವನ್ನು ನಿರ್ಮಿಸಲು ಇದರಿಂದ ಸಾಧ್ಯವಾಗಲಿದೆ ಎಂದರು.
ರಾಹುಲ್ ದಿಟ್ಟ ನಿರ್ಧಾರ:
ಕಾಂಗ್ರೆಸ್ ಪಕ್ಷ ಎಂದೆಂದಿಗೂ ಸಂವಿಧಾನಕ್ಕೆ ಬದ್ಧವಾಗಿರುತ್ತದೆ. ಅಹಿಂದ ತತ್ವವು ಎಲ್ಲರಿಗೂ ಸಮಪಾಲು, ಸಮಬಾಳು ಎಂಬುದರ ಆಧಾರವಾಗಿದೆ. ಇಂದಿನ ಕಾಲಮಾನದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮಾನತೆ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬಬೇಕಾಗಿದೆ. ನ್ಯಾಯಯೋಧ ರಾಹುಲ್ ಗಾಂಧಿಯವರು ಪ್ರತಿಪಾದಿಸುತ್ತಿರುವ ಜಾತಿಗಣತಿ ಕೇವಲ ಜಾತಿಗಳ ಗಣತಿಯಾಗಿರದೇ, ಅದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ನಡೆಸುವ ಸಮೀಕ್ಷೆಯಾಗಿದೆ. ಹಿಂದುಳಿದ ಸಮುದಾಯಗಳಿಗೆ ಸಮಾನ ಅವಕಾಶ ಒದಗಿಸುವ ದಿಟ್ಟ ನಿರ್ಧಾರವನ್ನು ರಾಹುಲ್ ಗಾಂಧಿಯವರು ಕೈಗೊಂಡಿದ್ದಾರೆ. ರಾಹುಲ್ ಗಾಂಧಿಯವರ ಧೀರ ಮತ್ತು ನಿರ್ಭಯ ನಾಯಕತ್ವದಡಿಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಲು ನಿರ್ಧರಿಸಿ, ಹೋರಾಡಲು ನಾವೆಲ್ಲರೂ ಪ್ರಮಾಣ ಮಾಡುತ್ತೇವೆ ಎಂದು ಸಿಎಂ ಹೇಳಿದರು.
ಕರ್ನಾಟಕ ಮಾದರಿ ರಾಜ್ಯ:
ಸಮ್ಮಿಶ್ರ ಸರ್ಕಾರದಲ್ಲಿ ನಂತರದ ಮೂರು ವರ್ಷ, ಹತ್ತು ತಿಂಗಳು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ, ಆಯೋಗದ ವರದಿಯನ್ನು ಸ್ವೀಕರಿಸುವುದಾಗಲಿ, ಜಾರಿ ಮಾಡುವ ಬಗ್ಗೆಯಾಗಲಿ ಕೈ ಹಾಕಲಿಲ್ಲ. ನಂತರದ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಗಡೆಯವರು ಶಿಫಾರಸ್ಸುಗಳನ್ನು ಮಾಡಿ ವರದಿಯನ್ನು ಸಿದ್ದಪಡಿಸಿ ಸಲ್ಲಿಸಿದರು. ಈ ವರದಿಯನ್ನು ನಮ್ಮ ಸಚಿವ ಸಂಪುಟದಲ್ಲಿ ಮಂಡಸಿ ಚರ್ಚಿಸಿದಾಗ, ಸದರಿ ವರದಿಯು ಹತ್ತು ವರ್ಷದ ಹಿಂದಿನ ಸಮೀಕ್ಷೆಯನ್ನು ಆಧರಿಸಿರುವುದರಿಂದ ಪುನ: ಸಮೀಕ್ಷೆ ಮಾಡುವ ನಿರ್ಣಯವನ್ನು ಸಚಿವ ಸಂಪುಟ ಕೈಗೊಂಡಿದೆ. ಸಚಿವ ಸಂಪುಟದ ನಿರ್ಣಯದಂತೆ ಹಿಂದುಳಿದ ವರ್ಗದ ಆಯೋಗಕ್ಕೆ ಮೂರು ತಿಂಗಳ ಕಾಲಾವಕಾಶದಲ್ಲಿ ಮರು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಆಯೋಗವು ನೀಡಿದ ವರದಿಯನ್ನು ಜಾರಿ ಮಾಡಲಾಗುತ್ತದೆ. ೧೯೩೧ ರ ನಂತರ ಜಾತಿ ಜನಗಣತಿಯನ್ನು ಕೈಗೊಂಡ ಮೊದಲ ರಾಜ್ಯ ಕರ್ನಾಟಕ. ಆದ್ದರಿಂದಲೇ ಅದನ್ನು `ಕರ್ನಾಟಕ ಮಾದರಿ' ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

ಹೆಚ್ ಡಿ ಕೆ ಗೆ ಟಾಂಗ್:
2015ನೇ ಇಸವಿಯಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕೈಗೊಳ್ಳಲು ಹಿಂದುಳಿದ ವರ್ಗದ ಆಯೋಗಕ್ಕೆ ಆದೇಶ ನೀಡಲಾಗಿತ್ತು. ಕೇವಲ ಹಿಂದುಳಿದ ವರ್ಗವಲ್ಲದೇ ಎಲ್ಲ ಜನರನ್ನು ಸಮೀಕ್ಷೆಗೆ ಒಳಪಡಿಸಲು ಸೂಚನೆ ನೀಡಲಾಗಿದ್ದು, ಆಯೋಗವು ಸಮೀಕ್ಷೆಯನ್ನು ನಡೆಸಿತು. ೨೦೧೮ ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ, ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರು ವರದಿಯನ್ನು ನೀಡಲು ಕಾಲಾವಕಾಶ ನೀಡುವಂತೆ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕೋರಿದರು. ಆಯೋಗದ ಕೋರಿಕೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮನ್ನಿಸಲಿಲ್ಲ. ಅಂದು ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿಯವರು ಆಯೋಗಕ್ಕೆ ಕಾಲಾವಕಾಶವನ್ನು ನೀಡಿದರೂ, ವರದಿಯನ್ನು ಸ್ವೀಕರಿಸದಂತೆ ಸಚಿವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೂಚನೆ ನೀಡಿದ್ದರ ಬಗ್ಗೆ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ನಾವು ಸಿದ್ದು ಪರ ಇದ್ದೇವೆ:
ಎಐಸಿಸಿ ಓಬಿಸಿ ವಿಭಾಗದ ಅಧ್ಯಕ್ಷ ಡಾ.ಅನಿಲ್ ಜೈ ಹಿಂದ್ ಅವರು ಮಾತನಾಡಿ, ಕಾಂಗ್ರೆಸ್ ಅಹಿಂದ ಪರ; ನಾವೆಲ್ಲಾ ಸಿದ್ದರಾಮಯ್ಯ ಅವರ ಪರವಾಗಿದ್ದೇವೆ ಎಂದು ಪ್ರತಿಪಾದಿಸಿದರು. ಕಾಂಗ್ರೆಸ್ ನಲ್ಲಿ ಹಿಂದುಳಿದ ವರ್ಗದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದಾರೆ. ಕಾಂಗ್ರೆಸ್ ಇವರನ್ನು ಬದಲಾಯಿಸುತ್ತಿದೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎಐಸಿಸಿ ಒಬಿಸಿ ವಿಭಾಗದ ಅಧ್ಯಕ್ಷ ಡಾ.ಅನಿಲ್ ಜೈಹಿಂದ್, ಆ ರೀತಿಯ ಯಾವ ಪ್ರಸ್ತಾಪವೂ ಇಲ್ಲ. ನಾವೆಲ್ಲಾ ಸಿದ್ದರಾಮಯ್ಯ ಅವರ ಪರವಾಗಿ ಇದ್ದೇವೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಪುದುಚೇರಿಯ ಮಾಜಿ ಮುಖ್ಯಮಂತ್ರಿ ವಿ. ನಾರಾಯಣಸಾಮಿ, ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಇನ್ನಿತರರು ಇದ್ದರು.