ಬಳ್ಳಾರಿ : ಸಾಧನೆ ಮಾಡಬೇಕಾದರೆ ಯಾವುದೇ ಪ್ರಶಸ್ತಿಯನ್ನು ಆಶಿಸಬಾರದು ಎಂದು ಹಿರಿಯ ರಂಗಕರ್ಮಿ, ಕಾರಂತ ರತ್ನ ರಂಗ ಪ್ರಶಸ್ತಿ ಪುರಸ್ಕೃತರಾದ ಡಾ.ಶಿವಕುಮಾರ್ ತಾತ ಅವರು ಸಲಹೆ ನೀಡಿದರು.
ಬಳ್ಳಾರಿ ನಗರದ ಕನ್ನಡಭವನದಲ್ಲಿ ಆಯೋಜಿಸಲಾಗಿದ್ದ ’ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ (ರಿ) ಸಂಸ್ಥೆಯು ಪ್ರತಿವರ್ಷ ನಾಟಕ ಕೃತಿಗಳಿಗೆ ಕೊಡಮಾಡುವ ’ಕಾರಂತ ಸಾಹಿತ್ಯ ರತ್ನ’ ರಾಜ್ಯ ಮಟ್ಟದ ಪುಸ್ತಕ ಪ್ರಶಸ್ತಿಗೆ ೫ ಹಾಗೂ ರಂಗ ಸಾಧಕರ ರಂಗಭೂಮಿ ಸಾಧನೆಗಾಗಿ ನೀಡಲಾಗುವ ’ಕಾರಂತ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹಳ್ಳಿಯಲ್ಲಿಯೇ ಇದ್ದುಕೊಂಡು ಅನೇಕ ಮಕ್ಕಳಿಗೆ ನಾಟಕ ಕಲೆ ಅಭ್ಯಾಸ ಮಾಡಿಸುತ್ತಾ ಬಂದಿದ್ದು, ಈಗಾಗಲೇ ನನಗೆ ಹಲವು ಪ್ರಶಸ್ತಿಗಳು ಬಂದಿವೆ. ಈಗಲೂ ಕೆಲವರು ಕರೆ ಮಾಡಿ ನಿಮ್ಮ ಸಾಧನೆ ಏನು ಎಂದು ಕೇಳುತ್ತಾರೆ. ನನ್ನ ಸಾಧನೆ ಕೇಳಿದರೆ ಅಚ್ಚರಿ ಪಡುತ್ತೀರಿ ಎಂದು ಹೇಳಿದರಲ್ಲದೆ, ಹಲವು ವರ್ಷಗಳಿಂದ ಮಂಜುನಾಥ್ ಕತ್ತಲೆಯಲ್ಲಿ ಪಂಜಿನಂತೆ ಸೇವೆ ಸಲ್ಲಿಸುತ್ತಿದ್ದಾರೆ. ಮೂಲೆ ಮೂಲೆಯಿಂದ ಕಲಾವಿದರನ್ನು ಗುರುತಿಸಿ ಅವರನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯ ಹೀಗೆ ಸಾಗಲಿ ಎಂದು ಆಶೀರ್ವದಿಸಿದರು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಶಿವನಾಯಕ ದೊರೆ ಮಾತನಾಡಿ, ಕಾರಂತರಂಗಲೋಕ ಸಂಸ್ಥೆಯ ಕೆಲಸ ಶ್ಲಾಘನೀಯ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುವುದು ನೋಡಿದರೆ ಸಂಸ್ಥೆಯವರಿಗೆ ಕಲೆಯ ಮೇಲಿನ ಪ್ರೀತಿ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದರು.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ನಮ್ಮ ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಕೋರಲಾಗಿದೆ. ಇದರಿಂದ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಗಳನ್ನಾಡಿದ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಆರ್.ಪಿ.ಮಂಜುನಾಥ್, ಇಂದು ಪ್ರಶಸ್ತಿಗಳನ್ನು ಹಣಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಹೆಚ್ಚಾಗಿದೆ. ಯಾರ ಬಳಿ ಹಣವಿರುತ್ತದೆಯೋ ಅಂತಹವರಿಗೆ ಪ್ರಶಸ್ತಿಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಯಾವುದೇ ಹಣಕ್ಕೆ ಅಪೇಕ್ಷೆ ಪಡದೆ, ಕಲಾವಿದರನ್ನು ಗುರುತಿಸಿ ಅಂತವರಿಗೆ ರಾಜ್ಯ ಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿ, ಹಾಗೂ ಕಾರಂತ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುವ ಕೆಲಸ ಮಾಡುತ್ತಿದ್ದೇವೆ. ಈ ವರ್ಷ ನಾಲ್ಕನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಇದಾಗಿದೆ ಎಂದು ಹೇಳಿದರು.
ರಾಜ್ಯಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿಗೆ ಒಟ್ಟು ೨೨ ನಾಟಕ ಕೃತಿಗಳು ಬಂದಿದ್ದು, ಇದರಲ್ಲಿ ನಮ್ಮೊಳಗೊಬ್ಬ ಶರಣ (ರಾಘವೇಂದ್ರ ಹಳಿಪೇಟಿ), ಶೃಂಗಾರದ ಅರಮನೆಗೆ ಬಂಗಾರದ ಒಡತಿ (ಯಮುನಪ್ಪ ಅಂಗಡಗೇರಿ), ಕಲ್ಯಾಣ ಕ್ರಾಂತಿ (ಮಲ್ಲೇಶ ಬಿ ಕೋನಾಳ), ವಿಶ್ವಕವಿ ರವೀಂದ್ರನಾಥ ಒಂದು ರಂಗದರ್ಶನ (ಡಾ.ಗೀತಾ ಸೀತಾರಾಮ್), ಶರಣ ಪ್ರಭೆ (ಮುದೇನೂರು ಉಮಾಮಹೇಶ್ವರ) ಪುಸ್ತಕಗಳನ್ನು ಆಯ್ಕೆ ಮಾಡಿದ್ದು, ಇವರಿಗೆ ರಾಜ್ಯಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಲ್ಲದೆ ಜಿಲ್ಲಾ ಮಟ್ಟದ ’ಕಾರಂತ ರತ್ನ’ ರಂಗ ಪ್ರಶಸ್ತಿಯನ್ನು ಬಿ.ಕೃಷ್ಣಪ್ಪಾಚಾರಿ ಸಿರುಗುಪ್ಪ (ಬಯಲಾಟ ವೇಷಭೂಷಣ), ಎ.ಮಾರೆಪ್ಪ ಕಲ್ಲಕಂಭ (ಹಾರ್ಮೋನಿಯಂ ಮೇಷ್ಟ್ರು), ವಾಲ್ಮೀಕಿ ಈರಣ್ಣ ಕಂಪ್ಲಿ (ಬಯಲಾಟ ಮುಮ್ಮೇಳ ಗಾಯಕ), ಕೆ.ಪುರುಷೋತ್ತಮ ಹಂದ್ಯಾಳ್ (ರಂಗಭೂಮಿ ನಟನೆ), ಟಿ.ಎ.ಕುಬೇರ (ರಂಗಭೂಮಿ ನಟನೆ) ರವರಿಗೆ ಪ್ರದಾನ ಮಾಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಭಾಗವಾಗಿ ಕನ್ನಡ ರಂಗಭೂಮಿಯಲ್ಲಿ ರಂಗ ಸಂಗೀತದ ಅವಲೋಕನ ಎಂಬ ವಿಷಯದ ಕುರಿತು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ನಾಟಕ ವಿಭಾಗದ ಉಪನ್ಯಾಸಕ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕೇಂಧ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಡಾ.ಕೆ.ಶಿವಲಿಂಗಪ್ಪ ಹಂದ್ಯಾಳ್, ಕರ್ನಾಟಕ ಲಲಿತ ಕಲಾ ಅಕಾಡೆಮಿ ವರ್ಣಶ್ರೀ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ್ ಗೋವಿಂದವಾಡ, ಗೌರಿ ಹಳ್ಳಿಮನೆ ಹೋಟೆಲ್ ಮಾಲೀಕರಾದ ಶ್ರೀಧರಗಡ್ಡೆ ದೊಡ್ಡಬಸಪ್ಪ ಉಪಸ್ಥಿತರಿದ್ದರು.