LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಡಲೆಕಾಯಿ ಪರಿಷೆಯ ದೃಷ್ಯಕಾವ್ಯ

ಒಂದು ಬೀಜದ ಕಥೆ: ಗಾತ್ರದಲ್ಲಿ ಕಿರಿದಾದರೂ, ಪಾತ್ರದಲ್ಲಿ ಹಿರಿದು

  • ನಂಜುಂಡಪ್ಪ.ವಿ


ಬೆಂಗಳೂರು : ಕಡಲೆಕಾಯಿ ಬಹುತೇಕ ಮಂದಿಗೆ ವಿಶೇಷ. ಬಡವರ ಬಾದಾಮಿಯಾಗಿರುವ ಇದು ಪೌಷ್ಟಿಕ ಭರಿತ ಆಹಾರ. ಮಹಾತ್ಮಾ ಗಾಂಧೀಜಿಗೆ ಪ್ರಿಯವಾದದ್ದು. ಆದರೆ ಇತ್ತೀಚೆಗೆ ಕಡೆಲೆಕಾಯಿಗಿಂತ, ಕಡಲೆಕಾಯಿ ಬೀಜಕ್ಕಿಂತ, ಕಡಲೆಕಾಯಿ ಪರಿಷೆ ಹೆಚ್ಚು ಗಮನ ಸೆಳೆಯುತ್ತಿದೆ. ನಗರ ಪ್ರದೇಶದವರಿಗೆ ಇದೊಂದು ಸಂತೆ, ಜಾತ್ರೆ, ಸಡಗರ, ಸಂಭ್ರಮ ಇದೊಂದು ವಿಸ್ಮಯ. ಅದಕ್ಕಾಗಿಯೇ ಕಡಲೆಕಾಯಿ ಪರಿಷೆ ನಗರದ ನಾಗರಿಕರಿಗೆ ಅಚ್ಚು ಮೆಚ್ಚು.

ಇಂತಹ ಕಡಲೆಕಾಯಿಯ ಮಹಿಮೆ, ಬೀಜದ ಸತ್ವ, ಕಡಲೆಕಾಯಿಯ ಘಮ, ಬೆಳೆಯುವ ರೈತರ ಶ್ರಮ, ಬೆವರು, ಮಾರಾಟಗಾರರ ಪರಿಶ್ರಮ, ಖರೀದಿದಾರರ ಚೌಕಾಸಿ, ಹೀಗೆ ಹತ್ತು ಹಲವು ಆಯಾಮಗಳಲ್ಲಿ ಪರಿಷೆಯನ್ನು ಸೆರೆ ಹಿಡಿದಿದ್ದಾರೆ ಹಿರಿಯ ಛಾಯಾಗ್ರಾಹ ಕೆ. ವೆಂಕಟೇಶ್.‌ ನಿಜಕ್ಕೂ ಇದೊಂದು ದೃಷ್ಯ ಕಾವ್ಯ. ಪರಿಷೆಯ ಅಮೂಲ್ಯ ಕ್ಷಣಗಳನ್ನು ಅವರು ಕ್ಲಿಕ್ಕಿಸಿದ್ದಾರೆ. ಕಡಲೆಕಾಯಿ ಪರಿಷೆ ಬಗ್ಗೆ ಇದು ಮೊದಲ ಛಾಯಾ ಚಿತ್ರ ಪ್ರದರ್ಶನ ಎಂಬುದು ವಿಶೇಷ.



ಕೆ. ವೆಂಕಟೇಶ್‌ ನಾಡಿನ ಪ್ರಮುಖ ಪತ್ರಿಕಾ ಛಾಯಾಗ್ರಾಹಕ. ಅವರು ಈ ವರೆಗೆ 27 ಕ್ಕೂ ಹೆಚ್ಚು ಛಾಯಾಚಿತ್ರ ಪ್ರದರ್ಶನ ಆಯೋಜಿಸಿದ್ದಾರೆ.  ವಿಶ್ವ ವಿಖ್ಯಾತ ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕ, ಲೈಂಗಿಕ ಅಲ್ಪ ಸಂಖ್ಯಾತರನ್ನು ವಿಶ್ವಸುಂದರಿಯರಂತೆ ಬಿಂಬಿಸಿದ ಮತ್ತೊಂದು ಪ್ರದರ್ಶನ ಹಿಜಡಾ ಸಮುದಾಯವನ್ನು ಹೀಗೂ ಪ್ರತಿಬಿಂಬಿಸಬಹುದಾ ಎನ್ನುವಂತೆ ನಿಬ್ಬೆರಗಾಗುವಂತೆ ಮಾಡಿತ್ತು. ಮಹಿಳೆಯರ ಅರೆ ಬೆತ್ತಲೆಯ ಹಸಿಬಿಸಿ ಚಿತ್ರಗಳನ್ನು ಜೋಡಿಸಿ ಕ್ಯಾಲೆಂಡರ್‌ ಮಾಡುತ್ತಿದ್ದ ಮದ್ಯದ ಉದ್ಯಮಿ ವಿಜಯ್‌ ಮಲ್ಯರಿಗೆ ಸೆಡ್ಡು ಹೊಡೆದು ಹಿಜಡಾ ಸಮುದಾಯದವರನ್ನು ಮಾಡೆಲ್‌ ಗಳಂತೆ ಬಿಂಬಿಸಿ ಕ್ಯಾಲೆಂಡರ್‌ ತಂದಿದ್ದು ಕೆ. ವೆಂಕಟೇಶ್ ಅವರ ಸಾಮಾಜಿಕ ಕಳಕಳಿಗೆ ನಿದರ್ಶನ.

ಹಿಜಡಾ ಜನಾಂಗದ ಅತಿ ದೊಡ್ಡ ಹಬ್ಬ ಕೂವಗಂನಲ್ಲಿ ತೆಗೆದ  ಅದ್ಭುತ ಚಿತ್ರಗಳನ್ನು ಅವರು ಪ್ರದರ್ಶಿಸಿದ್ದರು. ಈ ಬಗ್ಗೆ ಕಾಫಿ ಟೇಬಲ್‌ ಬುಕ್‌ ಹೊರ ತಂದ ಕನ್ನಡದ ಏಕೈಕ ಛಾಯಾಗ್ರಾಹಕ. ಬೆಂಗಳೂರು ನಗರ, ಗ್ರಾಮೀಣ ಪ್ರದೇಶಗಳಲ್ಲಿ ಹಿರಿಯ ನಾಗರಿಕರನ್ನು ನೋಡಿಕೊಳ್ಳದೇ ವೃದ್ಧಾಶ್ರಮಕ್ಕೆ ದೂಡುತ್ತಿರುವ ದಯನೀಯ ಸ್ಥಿತಿಯನ್ನು ಸೆರೆ ಹಿಡಿದಿದ್ದರು. ಪ್ರದರ್ಶನ ಉದ್ಘಾಟನೆ ಮಾಡಿದ ಆಗಿನ ರಾಜ್ಯಪಾಲ ಹಂಸರಾಜ್ ಭಾರ‍‍ಧ್ವಜ್‌ ಕಣ್ಣಾಲೆಯಲ್ಲಿ ನೀರು ಜಿನುಗುತ್ತಿತ್ತು. ಮೂಕ ವಿಸ್ಮಿತರಾಗಿ ಪ್ರತಿಯೊಂದು ಚಿತ್ರವನ್ನು ನೋಡಿದರು.

ಬೆಂಗಳೂರು ಮೆಟ್ರೋದ ವಿವಿಧ ಹಂತಗಳು, ಸುರಂಗ ಕಾಮಗಾರಿ, ಮೆಟ್ರೋ ನಡೆದು ಬಂದ ವಿವಿಧ ಹಂತಗಳು ಕೆ. ವೆಂಕಟೇಶ್‌ ಕ್ಯಾಮಾರದಲ್ಲಿವೆ. ತಮಿಳುನಾಡಿನಲ್ಲಿ ಸುನಾಮಿಯ ಭೀಕರ, ಭೀಭತ್ಸ್ಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದರು. ಆಗ ಸಂಘ ಪರಿವಾರದಲ್ಲಿ ಸಕ್ರಿಯವಾಗಿದ್ದ ಈಗಿನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುನಾಮಿ ಪರಿಹಾರದಲಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ಜನರ ನೋವಿಗೆ ಮಿಡಿದ ಸಂಗತಿಯನ್ನು ಕೆ. ವೆಂಕಟೇಶ್ ಆಗಾಗ್ಗೆ ಸ್ಮರಿಸುತ್ತಾರೆ.



ಕೋವಿಡ್‌ ಸಂದರ್ಭದಲ್ಲಿ ಜನಜೀವನ ಬಾಧಿತವಾದ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. ನೋಟು ಅಮಾನ್ಯಗೊಳಿಸಿದಾಗ  ಸಾಮಾನ್ಯರು ಅನುಭವಿಸಿದ ಯಾತನೆಯನ್ನು ಕಣ್ಣಿಗೆ ಕಟ್ಟುವಂತೆ ನೀಡಿದ್ದರು. ಈ ಚಿತ್ರಗಳು ಏಐಸಿಸಿ ಗಮನಕ್ಕೂ ಬಂದಿತ್ತು ಎನ್ನುವುದು ವಿಶೇಷ. ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎನ್ನುತ್ತಾರೆ. ಆದರೆ ಒಂದು ಚಿತ್ರ ಒಂದು ಯುಗದ ಚಿತ್ರಣವನ್ನೇ ನಮ್ಮ ಸ್ಮೃತಿ ಪಟಲದಲ್ಲಿ ಮೂಡಿಸುತ್ತದೆ.

ಕಡಲೆಕಾಯಿ ಇತಿಹಾಸ ವಿಶೇಷವಾದದ್ದು. ಜಗತ್ತಿನಾದ್ಯಂತ ಕಡಲೆ ಕಾಯಿ ಹಲವು ಹೆಸರಿನಿಂದ ಚಿರಪರಿಚಿತ. ಮಾಣಿ, ಲ್ಯಾಟಿನ್ ಅಮೆರಿಕಾದಲ್ಲಿ ಕರೆಯುತ್ತಾರೆ. ಇಂಕಾ ನಾಗರಿಕತೆಯ ಈ ಸಸ್ಯವನ್ನು ಕ್ರಿ.ಶ. 1400 ರಿಂದ 1533 ನಡುವಿನ ಕಾಲಘಟ್ಟದಲ್ಲಿ ಜಗತ್ತಿನಲ್ಲಿ ಮೊಟ್ಟಮೊದಲು ಕಡಲೆಕಾಯಿ ಬೆಳೆದಿರುವುದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ. ಈಗ ಬಳಕೆಯಲ್ಲಿರುವ ಮಾಣಿ ಸ್ಪ್ಯಾನಿಷ್ ಪದ.  ಅಮೇಂಡೋಯೀಂ (ಪೋರ್ಚುಗೀಸ್), ಪಿಸ್ತಾಶೆ ದೆ ತೆರ್ರೆ (ಫ್ರೆಂಚ್), ಇಂಗ್ಲೀಷ್‌ ನಲ್ಲಿ  ಇದಕ್ಕೆ ಹಲವಾರು ನಾಮಧೇಯಗಳಾದ  ಅರ್ಥ್ನಟ್, ಮಂಕೀನಟ್ ಮತ್ತು ಗೂಬರ್ ಎಂದು ಕರೆಯಲಾಗುತ್ತದೆ. ಇದು ಗಾತ್ರದಲ್ಲಿ ಕಿರಿದಾದರೂ ಪಾತ್ರದಲ್ಲಿ ಹಿರಿದು.

ಇಂಕಾ ನಾಗರಿಕತೆಯಲ್ಲಿ ಇದನ್ನು ಯ್ನೀಚಿಕ್  ಎಂದು ಕರೆಯುತ್ತಿದ್ದರು. ಪೆರುವಿನ ನದಿ ಪಾತ್ರಗಳಲ್ಲಿ ಮತ್ತು ಆಂಡೀಸ್ ಬೆಟ್ಟದಲ್ಲಿ ಕಡಲೆಕಾಯಿ ಬೆಳೆಯಲಾಗುತ್ತಿತ್ತು.  ಆಹಾರಕ್ಕಾಗಿ ಮಾತ್ರವಲ್ಲ, ಧಾರ್ಮಿಕವಾಗಿಯೂ ಇದನ್ನು ಬಳಸಲಾಗುತ್ತಿತ್ತು. ಸಮಾಧಿಗಳಲ್ಲಿ ಪಿತೃಗಳಿಗೆ ಕಡಲೆಕಾಯಿಯನ್ನು ನೇವೇದ್ಯವಿಡುತ್ತಿದ್ದರು. ಸ್ಪೇನ್ ಆಕ್ರಮಣದ ನಂತರ ಹಾಗೂ ಲ್ಯಾಟಿನ್ ಅಮೆರಿಕಾದಾದ್ಯಂತ ಕಡಲೆಕಾಯಿಯನ್ನು ಇಂದಿಗೂ ಮಾಣಿ ಎಂದೇಕರೆಯಲಾಗುತ್ತಿದೆ.



ಕಡಲೆಕಾಯಿ ಜಗತ್ತಿನ ಮೂರನೇ ಅತ್ಯಂತ ಪ್ರಮುಖ ಸಸ್ಯಪ್ರೋಟೀನ್,   13ನೇ ಮುಖ್ಯ ಆಹಾರ ಬೆಳೆ, 4ನೇ ಪ್ರಮುಖ ಎಣ್ಣೆ ಬೀಜ. ಸಣ್ಣ ಕೋಶದಲ್ಲಿರುವ ಈ ದೈತ್ಯ ಬೀಜ  ವರ್ಣನಾತೀತ.  ಜಾಗತಿಕ ವಾಣಿಜ್ಯ ಮಾರ್ಗಗಳು ನಿರ್ಮಾಣವಾಗುವುದಕ್ಕೂ ಹಿಂದಿನಿಂದಲೇ ಈ ಭವ್ಯ ಬೀಜದ ಯಾನ ಇತ್ತು. ಪೆರು ಮತ್ತು ಪೆರುಗ್ವೆಯ ಫಲವತ್ತಾದ ಮಣ್ಣಿನಲ್ಲಿ ಕಡಲೆಕಾಯಿ ವಿಕಸನಗೊಂಡಿತು.  ಶತಮಾನಗಳ ನಂತರ, ಜೆಸ್ಯೂಟ್ ಪ್ರವಾಸಿಗರು ಈ ಪ್ರಭಾವಿ ಬೀಜವನ್ನು ದಕ್ಷಿಣ ಭಾರತದ ಮಲಬಾರ್ ಕರಾವಳಿಗೆ ತಂದರು. ಮಲಯಾಳದಲ್ಲಿ ಇದನ್ನು ಕಪ್ಪಲಂದಿ—“ಶಿಪ್ ನಟ್” ಎಂದು ಕರೆಯಲಾಗುತ್ತದೆ. ಪೋಚುಗೀಸ್ ಹಡಗುಗಳ ಮೂಲಕ ಸಮುದ್ರ ದಾಟಿ, ಸಾಗಿ ಬಂದ ಕಡಲೆಕಾಯಿಯ ಪಯಣ ರೋಚಕ.

1500ರ ವೇಳೆಗೆ, ಕಡಲೆ ಕಾಯಿ ಭಾರತೀಯ ಮಣ್ಣಿನಲ್ಲಿ ಬೇರು ಬಿಟ್ಟಿತ್ತು. 1800ರ ವೇಳೆಗಾಗಲೇ ಮೈಸೂರು ಪ್ರಾಂತ್ಯದಲ್ಲಿ ರೈತರು ಹೆಚ್ಚಾಗಿ ಬೆಳೆಯಲಾರಂಭಿಸಿದರು.  ದಕ್ಷಿಣ ಆರ್ಕಾಟ್, ತಮಿಳುನಾಡಿನಲ್ಲಿ ಇದನ್ನು ಮಣಿಲಕೋಟೈ —“ಮನಿಲಾ ನಟ್” ಎಂದೇ ಕರೆಯುತ್ತಾರೆ. ಜಲ ಮಾರ್ಗಗಳಲ್ಲಿ ಇದನ್ನು ವಿನಿಮಯದ ಸರಕಾಗಿ ಪರಿಚಯಿಸಲಾಯಿತು. ಭಾರತದಲ್ಲೀಗ ಕಡಲೆಕಾಯಿ ಬೆಳೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಗುಜರಾತ್, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿದೆ. ದೇಶಕ್ಕೆ ಬಹುದೊಡ್ಡ ಪ್ರಮಾಣದ ಕಡಲೆಕಾಯಿ ಬೀಜ ಇಲ್ಲಿಂದಲೇ ಪೂರೈಕೆಯಾಗುತ್ತದೆ.

ಪರಿಷೆ: ಪುರಾಣ - ಮನುಷ್ಯರ ನಡುವಿನ ಸೇತು

ಕಡಲೆಕಾಯಿ ಪರಿಷೆ  ಸುಮಾರು 500 ವರ್ಷಗಳಿಂದ ಬಸವನಗುಡಿಯಲ್ಲಿ ನಡೆಯುತ್ತಿದೆ. ಪ್ರತಿ ಕಾರ್ತಿಕದಲ್ಲಿ ಬೆಂಗಳೂರಿಗರ ಹೃದಯದ ನಾದ ಪುನರ್ಜೀವಿಸುತ್ತದೆ. ಕಳೆದ ಒಂಬತ್ತು ವರ್ಷಗಳಿಂದ ಕಾಡು ಮಲ್ಲೇಶ್ವರ ರಥಬೀದಿಯಲ್ಲಿ ಬಿ. ಕೆ. ಶಿವರಾಂ ಮಾರ್ಗದರ್ಶನದಲ್ಲಿ ಕಾಡು ಮಲ್ಲೇಶ್ವರ ಗೆಳೆಯರ ಬಳಗ ಕಡೆಲೆಕಾಯಿ ಪರಿಷೆಯನ್ನು ಆಯೋಜಿಸುತ್ತಿದೆ.



ಇತಿಹಾಸ

ಪುರಾಣಗಳ ಗರ್ಭದಲ್ಲಿ ಪರಿಷೆಯ ಬಗ್ಗೆ ದಂತ ಕಥೆಗಳಿವೆ. ಸುಂಕೇನಹಳ್ಳಿ ಆಸುಪಾಸಿನಲ್ಲಿ ಎತ್ತೊಂದು ಕಡಲೆಕಾಯಿ ಹೊಲಗಳನ್ನು ನಾಶಮಾಡುತ್ತಿತ್ತಂತೆ. ಆಗ  ತೊಂದರೆಗೊಳಗಾದ ರೈತರು, ಬೆಂಗಳೂರು ಸಂಸ್ಥಾಪಕಕೆಂಪೇಗೌಡರ ಮೊರೆ ಹೋದರು. ಅವರು ಆಗ ಅಧಿಕಾರ ಬಲದಿಂದಲ್ಲ, ಭಕ್ತಿ ಮಾರ್ಗದಲ್ಲಿ ಇದಕ್ಕೆ ಪರಿಹಾರ ಸೂಚಿಸಿದರು. ದೈವಿಕ ಸ್ವರೂಪದ ನಂದಿ ಬಸವನಿಗೆ ಸಮರ್ಪಿತವಾದ ದೇವಾಲಯ ನಿರ್ಮಿಸಿ ಸಮಸ್ಯೆಗೆ ಪರಿಹಾರ ರೂಪಿಸಿದರು. ಮತ್ತೊಂದು ಪುರಾಣದ ಪ್ರಕಾರ, ಆ ಎತ್ತು ಕಲ್ಲಾಗಿಮಾರ್ಪಟ್ಟಿತು ಎಂದು  ಈ ಕಥೆ ಹೇಳುತ್ತದೆ. ಇದರಿಂದ ದೊಡ್ಡ ಬಸವನಗುಡಿ ಹುಟ್ಟಕೊಂಡು ಕಡಲೆಕಾಯಿ ಪರಿಷೆಯ ಶಾಶ್ವತ ಪರಂಪರೆಯೂ ಸ್ಥಾಪನೆಯಾಯಿತು.

ರೈತರು ದಕ್ಷಿಣ ರಾಜ್ಯಗಳಿಂದ ರೈತರು ಕಡಲೆಕಾಯಿ ಚೀಲಗಳೊಂದಿಗೆ ಸಂಭ್ರಮದಿಂದ ಆಗಮಿಸುತ್ತಾರೆ. ಮೂರು ಬೀಜದ ಉದ್ದದ ಕಡಲೆಕಾಯಿಇಡೀ ಪರಿಷೆಗೆ ಕಲಶಪ್ರಾಯ. ಗುಲಾಬಿ, ಕಂದು ಕಡಲೆ ಕಾಯಿ ಗಮನ ಸೆಳೆಯುತ್ತವೆ. ಕಚ್ಚಾ, ಹುರಿದ, ಬೇಯಿಸಿದ ರೂಪಗಳಲ್ಲಿ ಬೆಂಗಳೂರು ನಾಗರಿಕರ ನಾಲಿಗೆಯ ಮೇಲೆ ಕಡಲೆಕಾಯಿ ನಲಿದಾಡುತ್ತದೆ. ಚುರಿಮುರಿ, ಕಡಲೆಪುರಿ, ಬತ್ತಾಸು, ಪರಿಷೆಯ ವಿಶೇಷ ಸಿಹಿ ತಿನಿಸುಗಳು, ಸೆಣಬಿನ ಕರಕುಶಲ ವಸ್ತುಗಳು, ಸಿಂಗಾರದ ಮಡಿಕೆಗಳು, ಮರದ ಆಟಿಕೆಗಳು ಪರಿಷೆಯ ಮೆರಗು ಹೆಚ್ಚಿಸುತ್ತವೆ. ಕಲಾ ತಂಡಗಳು, ಕುಣಿತ, ಪರಿಷೆಗೆ ಜೀವ ಕಳೆ ತುಂಬುತ್ತದೆ. ಬೆಳದಿಂಗಳ ರಾತ್ರಿಯಲ್ಲಿ ಆಕಾಶದಲ್ಲಿನ ನಕ್ಷತ್ರಗಳು ಚಿಕ್ಕ ಗ್ಯಾಲಕ್ಸಿಗಳಂತೆ ಕಂಗೊಳಿಸುತ್ತವೆ.

ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಧರ್ಮಪುರಿ ಮತ್ತಿತರೆ ಭಾಗಗಳಿಂದ ತರುತ್ತಾರೆ.  ಬಸವನಗುಡಿ ಪರಿಷೆಯಲ್ಲಿ 4,500, ಮಲ್ಲೇಶ್ವರದಲ್ಲಿ 600 ಮಳಿಗೆಗಳು ತಲೆ ಎತ್ತುತ್ತವೆ. ಸುಮಾರು ಹತ್ತು ಲಕ್ಷ ಮಂದಿ ಕಡೆಲೆಕಾಯಿ ಪರಿಷೆಯಲ್ಲಿ ಅಡ್ಡಾಡುತ್ತಾರೆ. ಬಹುತೇಕರು ಕಡಲೆಕಾಯಿ ರುಚಿ ನೋಡುತ್ತಾರೆ, ಚೌಕಾಸಿಗಿಳಿಯುತ್ತಾರೆ. ಪರಿಷೆಯ ಭವ್ಯ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಸಂಪ್ರದಾಯ ಸಿಂಗಾರದಲ್ಲಿ ಅಲಂಕೃತ ಎಮ್ಮೆ ಪರಿಷೆಯಲ್ಲಿ ಕಾವಲುಗಾರನಂತೆ ನಿಂತಿರುತ್ತದೆ. ಮುಜರಾಯಿ ಇಲಾಖೆ ವ್ಯಾಪಾರಿಗಳಿಗೆ ಉಚಿತವಾಗಿ ಅಂಗಡಿ       ಹಾಕಲು ಅವಕಾಶ ಮಾಡಿಕೊಟ್ಟಿದೆ. ಬೀದಿಗಳೆಲ್ಲೆಲ್ಲಾ ‘ಕಡಲೆಕಾಯಿ’ಗಳ ಸಾಲು–ಸಾಲು ಅಂಗಡಿಗಳು ನಗರದ ನಾಗರಿಕರನ್ನು ಸ್ವಾಗತಿಸುತ್ತದೆ.



ಕಾಣದ ಮುಖ

ಪರಿಷೆಯ ಹಿಂದೆ ಇನ್ನೊಂದು ಮುಖವಿದೆ. ಅದ್ಯಾರಿಗೂ ಕಾಣದು. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ತಮಿಳುನಾಡು ಮತ್ತು ಆಂಧ್ರಪ್ರದೇಶದ ರೈತರು, ವ್ಯಾಪಾರಿಗಳು ಸಂಭ್ರಮಕ್ಕಾಗಿ ಅಲ್ಲ, ಬದುಕು ಸಾಗಿಸಲು ಪರಿಷೆಗೆ ಆಗಮಿಸುತ್ತಾರೆ. ಪಾದಚಾರಿ ಮಾರ್ಗಗಳಲ್ಲಿ ಮಲಗಿ, ಬೆಳಗಿನ ಜಾವ ಎದ್ದು ತಮ್ಮ ಎಂದಿನ ಕಾಯಕದಲ್ಲಿ ತೊಡಗುತ್ತಾರೆ. ‘ಕಡಲೆಕಾಯಿ’ ಎನ್ನುವ ಈ ಸರಳ ಬೀಜದ ಮಾರಾಟದಿಂದ ಮಕ್ಕಳ ಶಾಲಾ ಶುಲ್ಕ, ಬಾಡಿಗೆ ಅಥವಾ ಇನ್ನೊಂದು ತಿಂಗಳ ನೆಮ್ಮದಿಯ ಬದುಕಿಗೆ ನಾಂದಿಯಾಗುತ್ತದೆ. ಭವಿಷ್ಯದ ಭರವಸೆಗೆ ನೆರವಾಗುತ್ತದೆ. ಪ್ರತಿ ಕಡಲೆಕಾಯಿ ಗುಡ್ಡೆಯಲ್ಲೂ ನೊಂದು, ಬೆಂದು, ಬಸವಳಿದ ರೈತರ ಬೆವರಿನ ವಾಸನೆ ಇರುತ್ತದೆ.  ಬಾಗಿದ ಬೆನ್ನು, ಆಯಾಸ, ಹಸಿವಿನ ಚಿತ್ರಣ ಕಣ್ಮುಂದೆ ಬರುತ್ತದೆ. ಮಳೆ ಅನಿಶ್ಚಿತತೆ ರೈತನ ಮೊಗದಲ್ಲಿ ಸದಾ ಇರುತ್ತದೆ. ನಾವು ಕಡಲೆಕಾಯಿ ತಿನ್ನುತ್ತೇವೆ; ಅವರು ಬದುಕು ನೋಡುತ್ತಾರೆ.

ಕತ್ತಲಾಗುವಾಗ…

ಜನಸಂಚಾರ ಸ್ತಬ್ಧವಾದಾಗ  ದೀಪಗಳು ಮಸುಕಾಗುತ್ತವೆ. ಗಿಜಿಗುಡುತ್ತಿದ್ದಪರಿಷೆಯ ಮೌನವಾಗುತ್ತದೆ. ವ್ಯಾಪಾರಿಗಳು ತಮ್ಮ ಚೀಲಗಳನ್ನು ಮಡಚಿ ಮುಂದಿನ ಜಾತ್ರೆ ಕಡೆಗೆ ಸಾಗುತ್ತಾರೆ. ಮುಂದಿನ ಅವಕಾಶದ ಬಗ್ಗೆ ಚಿಂತಿಸುತ್ತಾರೆ.
ಇದು ಬೆವರು, ಭಕ್ತಿ. ಸಂಸ್ಕೃತಿ. ಸಹನೆ ಮತ್ತು ಖಂಡಾಂತರಗಳು, ಶತಮಾನಗಳು, ಸಮುದಾಯಗಳನ್ನು ದಾಟಿದ ಒಂದು ಸರಳ ಬೀಜದ ಕಥೆ. 45 ಚಿತ್ರಗಳು ಕಥನವನ್ನು ಸಮರ್ಥವಾಗಿ ಅನಾವರಣಗೊಳಿಸುತ್ತದೆ. ಡಿಸೆಂಬರ್ 29 ರಿಂದ 31 ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ ನಡೆಯುವ ಪ್ರದರ್ಶನವನ್ನು 11 ರಿಂದ ಸಂಜೆ 7 ಗಂಟೆಗೆವರೆಗೆ ಕಣ್ತುಂಬಿಕೊಳ್ಳಬಹುದು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST