ಕೂಡ್ಲಿಗಿ ಕಾನಾಮಡುಗು ಗ್ರಾಮದ ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ದಾಸೋಹಿ ಪ್ರಕಾಶನವು ತನ್ನ ಶ್ರೀ ಶರಣಬಸವೇಶ್ವರ ಗ್ರಂಥಮಾಲೆ-2 ರಲ್ಲಿ `ವಿಜಯನಗರ ಸಾಹಿತ್ಯ ಸಂಸ್ಕೃತಿ' ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬಳ್ಳಾರಿಯ `ವಾಸುಕಿ ಪುಸ್ತಕಾಲಯ'ದ ರೂವಾರಿ ಶ್ರೀನಾಥ ಜೋಶಿ ಅವರು ಈ ಪುಸ್ತಕವನ್ನು ಓದಲು ಎಲ್ಲೆಡೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈ ಪುಸ್ತಕವನ್ನು ಪ್ರತಿಯೊಬ್ಬ ಕನ್ನಡಿಗನೂ ಓದಲೇಬೇಕಾದಂತಹ ಕೃತಿಯಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಈ ಕೃತಿಯ ಕೃತಿಕಾರ ಡಾ.ಕೆ.ರವೀಂದ್ರನಾಥ ಅವರೇ ಹೇಳುವಂತೆ, `ವಿಜಯನಗರ ಸಾಹಿತ್ಯ ಸಂಸ್ಕೃತಿ' ಸರಿಸಾಟಿ ಇಲ್ಲದಂತದ್ದು. `ಕರ್ನಾಟ ರಾಜ್ಯ ವೃತ್ತಾಂತಮು' ಎಂಬ ಹೆಸರಿನ ತೆಲುಗು ಭಾಷೆಯ ಕಾಗದ ದಾಖಲೆಯು ಮದನಪಲ್ಲಿ ಗ್ರಾಮದಲ್ಲಿ ದೊರೆತಿದೆ. ವಿಜಯನಗರದ ಅವನತಿಗೆ ಶ್ರೀಕಾರ ಹಾಕಿದ ತಾಳಿಕೋಟೆ; ರಕ್ಕಸ - ತಂಗಡಿ ಯುದ್ಧದ ನಂತರದ ರಾಜಕೀಯ ಸ್ಥಿತಿಗತಿಯನ್ನು, ಚರಿತ್ರೆಯನ್ನು ಈ ದಾಖಲೆಯು ವಿವರಿಸುತ್ತದೆ. ಸ್ಥಳೀಯ ಚರಿತ್ರೆಯನ್ನು ಕಟ್ಟಿಕೊಡುವ ಮಹತ್ವವು, ಈ ದಾಖಲೆಗೆ ಸಲ್ಲುತ್ತದೆ. ಇದು, ವಿಜಯನಗರದ ಅರಸರ ವ್ಯಕ್ತಿತ್ವ, ಯುದ್ಧೋಪಕರಣ ಹಾಗೂ ಸಣ್ಣಪುಟ್ಟ ಪಾಳೆಗಾರರಿಗೆ ಹರಿದು ಹಂಚಿಹೋದ ಕನ್ನಡ ಸಾಮ್ರಾಜ್ಯದ ಚರಿತ್ರೆಯನ್ನು ನಿರೂಪಿಸುವ ಅಪೂರ್ವ ಆಕರವಾಗಿದೆ ಎಂದು ಹೇಳಿದ್ದಾರೆ.
ಐತಿಹ್ಯ, ಪುರಾಣ, ಪೂರ್ವಾಪರ ಸಂಬಂಧಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡು ರಚನೆಯಾದ ಇದು ವಿಜಯನಗರದ ಉತ್ತರಾರ್ಧವನ್ನೊಳಗೊಂಡ ಅಪೂರ್ಣ ದಾಖಲೆಗಳನ್ನು ಹೊಂದಿದೆ. "ವಿಜಯನಗರ ಸಾಮ್ರಾಜ್ಯದೊಂದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡಿದ್ದ ಕುರುಗೋಡು, ಕೆಳದಿ, ಸೋದೆ, ಕೊಡಗು ಪ್ರದೇಶದ ಚೆಂಗಾಳ್ವರು, ಮಹಾನಾಡ ಪ್ರಭುಗಳು, ಸುಗುಟೂರು, ಉಮ್ಮತ್ತೂರು, ಬೂದಿಹಾಳು, ಮತ್ತೋಡು ಹಾಗೂ ಬೀಳಗಿ ಮುಂತಾದ ಸಾಮಂತರನ್ನೊಳಗೊಂಡ 'ವಿಜಯನಗರ ಒಕ್ಕೂಟ' ರಚನೆಗೆ ಕಾರಣವಾದ ವಿವರಗಳನ್ನು, ಇಲ್ಲಿಯ ಅಧ್ಯಾಯವು ವಿಜಯನಗರ - ಕರ್ನಾಟಕ ಸಾಮಾಂತರ ಸಂಬAಧ ವಿವರಿಸುತ್ತದೆ.

ಹಂಪಿಯ ಉದ್ಧಾನ ವೀರಭದ್ರ ದೇವರನ್ನು ಕುರಿತು ರಾಯಚೂರಿನ ಚಾಗಿ ಹಿರೇಮಠದ ಚನ್ನಬಸವ ಕವಿ ಬರೆದ ಅಪ್ರಕಟಿತ ಕಾವ್ಯವನ್ನು ಇಲ್ಲಿ ಪರಿಚಯಿಸಲಾಗಿದೆ. ರಾಘವಾಂಕ ಬರೆದ `ವೀರೇಶ ಚರಿತೆ'ಯ ಮೂಲಕ ವೀರಭದ್ರನ ಪರಿಕಲ್ಪನೆಯನ್ನು, ಚಂದ್ರಶೇಖರ ಕವಿ ವಿರಚಿತ `ಪಂಪಾಸ್ಥಾನ ವರ್ಣನಂ' ಕೃತಿಯ ಮೂಲಕ ಹಂಪಿ ಪರಿಸರದ ಸ್ಥಳ ಮಹಾತ್ಮ್ಯೆಗಳ ಭೌಗೋಳಿಕ ವಿವರಗಳನ್ನು ನೀಡಲಾಗಿದೆ. ಕಾಲಜ್ಞಾನ, ಟೀಕಾ ಸಾಹಿತ್ಯ ಹಾಗೂ ತೀರ್ಥಕ್ಷೇತ್ರಗಳ ಮೂಲಕ ವಿಜಯನಗರದ ಕಾವ್ಯೋಕ್ತ ಸಾಂಸ್ಕೃತಿಕ ಚರಿತ್ರೆಯನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಈ ಗ್ರಂಥವು ಒಳಗೊಂಡ 20 ವಿಭಿನ್ನ ಲೇಖನಗಳು, ವಿಶಿಷ್ಟ ಸಂಶೋಧನಾತ್ಮಕ ಲೇಖನಗಳ ಮಹತ್ವದ ಸಂಕಲನವಾಗಿದೆ. ವಿಜಯನಗರದ ಪ್ರಾಚೀನ ಸಾಹಿತ್ಯ - ಸಂಸ್ಕೃತಿಯನ್ನು ವಿಮರ್ಶಾತ್ಮಕವಾಗಿ ನಿರೂಪಿಸುತ್ತಿದೆ. ಪುಸ್ತಕದ ಬೆಲೆ ಕೇವಲ 150 ರೂ. ಇದ್ದು ಆಸಕ್ತರು ಶ್ರೀನಾಥ ಜೋಶಿ ಅವರ ಮೊಬೈಲ್ ಸಂಖ್ಯೆ: 9241288581 ಗೆ ಕರೆ ಮಾಡಿ ಪುಸ್ತಕ ಪಡೆಯಬಹುದು.