LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಒಳ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ದಲಿತರಿಂದ ಅರೆ ಬೆತ್ತಲೆ ಮೆರವಣಿಗೆ

ಬಳ್ಳಾರಿ: ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಇಂದು ಮಾದಿಗ ಸಂಘಟನೆಗಳ ಒಕ್ಕೂಟದಿಂದ ಅರೆ ಬೆತ್ತಲೆ ಮೆರವಣಿಗೆ ಮತ್ತು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಯಿತು.

 

ಮಾದಿಗ ಸಂಘಟನೆಗಳ ಒಕ್ಕೂಟದ ಸಮಾಜದ ಮುಖಂಡರುಗಳಾದ ನರಸಪ್ಪ, ದುರ್ಗಪ್ಪ ತಳವಾರ್, ಹನುಮಂತಪ್ಪ ಎಸ್ ಜೆ ಕೋಟಿ, ಹೊನ್ನೂರಪ್ಪ, ಈಶ್ವರಪ್ಪ, ಎ.ಕೆ ಹುಲುಗಪ್ಪ, ನರಸಿಂಹ ಬಾಬು ಸೇರಿದಂತೆ ಅನೇಕ ಮುಖಂಡರು ಅರೆ ಬೆತ್ತಲೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ತಕ್ಷಣವೇ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಮಾಡುವ ಕುರಿತು ಸ್ಪಷ್ಟೀಕರಣ ನೀಡಬೇಕು. ರಾಜ್ಯದ ಪರಿಶಿಷ್ಟ ಜಾತಿ ಸಮುದಾಯದ ಸಮಸ್ತ ಜನರು, ಅತೀ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಜಾರಿಯಾಗಬೇಕಿರುವ ಒಳ ಮೀಸಲಾತಿಯ ಬೇಡಿಕೆ ಮತ್ತು ಹೋರಾಟ ೩೫ ವರುಷಗಳಿಂದ ನನೆಗುದಿಗೆ ಬಿದ್ದಿದೆ.

 

ಈ ಅಸಮಾನತೆಯನ್ನು ಸರಿಪಡಿಸಲು, ಕಳೆದ ವರ್ಷ ಆಗಸ್ಟ್ ೧ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸ್ಪಷ್ಟವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ೧೦೧ ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಆದೇಶವನ್ನು ನೀಡಿದೆ. ಕರ್ನಾಟಕ ಸರ್ಕಾರವು ಈ ಸರ್ವೋಚ್ಚ ನ್ಯಾಯಾಲಯದ ತೀರ್ಪುನ್ನು ಜಾರಿಗೊಳಿಸಲು ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ. ಇದು ಸಮುದಾಯದಲ್ಲಿ ತೀವ್ರ ಅಸಮಾಧಾನ ಮತ್ತು ಆತಂಕಕ್ಕೆ ಕಾರಣವಾಗಿದೆ. ಈ ವಿಳಂಬ ನೀತಿಯಿಂದಾಗಿ ನಮ್ಮ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು ಹಾಗೂ ಮಹಿಳೆಯರು ಹಾಗೂ ಒಟ್ಟಾರೆ ಸಮಾಜ ತಮ್ಮ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

ಸುಪ್ರೀಂಕೋರ್ಟ್ ತೀರ್ಪಿನ ತರುವಾಯ ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳು ತುರ್ತು ನಿಗಾ ವಹಿಸಿ ತಮ್ಮ ರಾಜ್ಯಗಳಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಿವೆ.  ಸಾಮಾಜಿಕ ನ್ಯಾಯದ ವಿಷಯದಲ್ಲಿ ಮೇಲ್ಪಂಕ್ತಿ ಆಗಿದ್ದಾರೆ. ಆದರೆ ಕರ್ನಾಟಕ ಸರ್ಕಾರ ತೀವ್ರವಾದ ವಿಳಂಬ ನೀತಿ ಅನುಸರಿಸುತ್ತಿದ್ದು ಪರಿಶಿಷ್ಟ ಜಾತಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಾದಿಗ ಮತ್ತು ೨೯ ಉಪಜಾತಿಗಳಲ್ಲಿ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆ.

 

ನಾಗಮೋಹನ್ ದಾಸ್ ಆಯೋಗಕ್ಕೆ ಸರ್ಕಾರ ಸರಿಯಾದ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ. ಪರಿಶಿಷ್ಟ ಜಾತಿಗಳ ನಡುವೆ ಮೀಸಲಾತಿಯ ಹಂಚಿಕೆಯಲ್ಲಿ ಉಂಟಾಗಿರುವ ಅಸಮಾನತೆ ಸಮುದಾಯಗಳ ನಡುವಿನ ಹಿಂದುಳಿದಿರುವಿಕೆಯನ್ನು ಸಮಗ್ರವಾಗಿ ಅಧ್ಯಯನ ಮಾಡಲು ಆಯೋಗ ಎಲ್ಲ ಇಲಾಖೆಗಳಿಗೆ ಅಗತ್ಯ ಮಾಹಿತಿಯನ್ನು ಜನವರಿಯಲ್ಲಿ ಕೇಳಿತ್ತು. ಆದರೆ ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ಆರು ತಿಂಗಳಾದರೂ ಸರಿಯಾದ ಮಾಹಿತಿಗಳು ಆಯೋಗಕ್ಕೆ ಬಂದಿಲ್ಲ. ಕೆಲವು ಇಲಾಖೆಗಳ ಮಾಹಿತಿ ಅಪೂರ್ಣವಾಗಿದೆ. ಆಯೋಗ ನಡೆಸಿದ ಸಮೀಕ್ಷೆ, ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆಗಳು ಗೊಂದಲ ಹುಟ್ಟುಹಾಕಿ ನಗೆಪಾಟಲಿಗೆ ಈಡಾಯಿತು. ಮೂರುವಾರದಲ್ಲಿ ಸಮೀಕ್ಷೆ ಮುಗಿಸಿ ವರದಿ ಸಿದ್ಧಪಡಿಸಲಾಗುವುದು ಎಂಬ ಸರ್ಕಾರದ ಹೇಳಿಕೆ ಕಿಮ್ಮತ್ತು ಕಳೆದುಕೊಂಡಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು.



ಕಾಂತರಾಜ್ ಆಯೋಗದ ಜಾತಿಗಣತಿಯ ವರದಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳ ನಿರ್ಲಕ್ಷ್ಯದಿಂದ ಕೊನೆಗೆ ಕಸದ ಬುಟ್ಟಿ ಸೇರಿತು. ನಾಗಮೋಹನ್ ದಾಸ್ ವರದಿಯ ಬಗೆಗಿನ ಗೊಂದಲಗಳು, ಸರ್ಕಾರದ ನಿರ್ಲಕ್ಷದ ಧೋರಣೆಯ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸುತ್ತಿದ್ದೇವೆ. ಸರ್ಕಾರ ಸರಿದಾರಿಗೆ ಬರಬೇಕು. ತಕ್ಷಣ ಒಳಮೀಸಲಾತಿ ಜಾರಿಮಾಡಬೇಕು. ಇದೇ ಆಗಸ್ಟ್ ೧೧ರಿಂದ ವಿಧಾನ ಮಂಡಲಗಳ ಅಧಿವೇಶನ ಆರಂಭವಾಗುತ್ತಿದ್ದು, ಜಾರಿಗೊಳಿಸಬೇಕು. ಇಲ್ಲದೇ ಹೋದರೆ ಸರ್ಕಾರದ ನಿರ್ಲಕ್ಷ, ವಿಳಂಬ ಧೋರಣೆಯ ಬಗ್ಗೆ ಜನಾಕ್ರೋಶ ಉಗ್ರಸ್ವರೂಪ ತಾಳುವುದು ನಿಶ್ಚಿತ ಎಂದು ಎಚ್ಚರಿಸಿದರು.

 

ಒಂದು ವೇಳೆ ಸರ್ಕಾರವು ಈ ಗಡುವಿನೊಳಗೆ ಬೇಡಿಕೆಯನ್ನು ಈಡೇರಿಸಲು ವಿಫಲವಾದರೆ, ನಮ್ಮ ಹಕ್ಕುಗಳಿಗಾಗಿ ಕರ್ನಾಟಕದಾದ್ಯಂತ ಇರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು, ಕಾರ್ಮಿಕರು, ವಕೀಲರು, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಒಗ್ಗೂಡಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಾ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

 

ಈ ಪ್ರತಿಭಟನೆಯಲ್ಲಿ ಮುನಿಸ್ವಾಮಿ ಸಿರುಗುಪ್ಪ, ಮಲ್ಲೇಶ್ ಎಮ್ಮಿಗನೂರು, ಬಾಬು ಕುರುವಳ್ಳಿ, ಮಲ್ಲಿನಾಥ, ತಿಮ್ಮಪ್ಪ ಕೌಲ್ ಬಜಾರ್, ಚೌದರಿ ಶ್ರೀನಿವಾಸ್, ಫಕೀರಯ್ಯ ತೆಕ್ಕಲಕೋಟ, ಆಂಜನೇಯಲು ಕಂಪ್ಲಿ, ಲಕ್ಷ್ಮಣ ಭಂಡಾರಿ, ಬಿ ಈ ರಾಜೇಶ್, ಪ್ರಸಾದ್, ಮಾರಣ್ಣ, ಅರುಣಾಚಲಂ.ವೈ. ಗಾದಿಲಿಂಗ ಗೆಣಿಕೆಹಾಳು, ರಾಜಶೇಖರ ಕುರುಗೋಡು, ಹುಲಿಯಪ್ಪ ಕಪ್ಪಗಲ್, ಪ್ರತಾಪ್ ತಳವಾರ, ಷಣ್ಮುಖ, ಆರ್ ಶಿವಶಂಕರ್, ಸಂತೋಷ್, ಪಥ್ವಿರಾಜ್ ದೊಡ್ಡಮನೆ, ಉಮೇಶ್, ಮಲ್ಲಿ ಇಂದಿರಾನಗರ, ಏಸು, ದುರ್ಗಣ್ಣ ಬಂಡಿಹಟ್ಟಿ, ಲೋಕರಾಜ್ ಹಾಗೂ ಮಾದಿಗ ಸಮಾಜದ ಹಲವಾರು ಮುಖಂಡರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST