“ಪರ್ಸ್ ಮರೆತರೂ ಚಿಂತೆ ಬೇಡ, ನಿಮ್ಮ ಫೋನ್ ಸಾಕು!”
ಒಂದು ಕಾಲದಲ್ಲಿ ಬಸ್ ಕಂಡಕ್ಟರ್‌ಗಳು “ಸಾರ್, ಚಿಲ್ಲರೆ ಕೊಡಿ!” ಎಂದು ಕೂಗಿದರೆ, ಪ್ರಯಾಣಿಕರು ಜೇಬು ತಡಕಾಡಿ, “ಅಯ್ಯೋ, ಚಿಲ್ಲರೆ ಇಲ್ಲ!” ಎಂದು ತಲೆಕೆಡಿಸಿಕೊಳ್ಳುತ್ತಿದ್ದರು. ಅಂಗಡಿಯಲ್ಲಿ ತರಕಾರಿ ಕೊಳ್ಳುವಾಗ, “ಐದು ರೂಪಾಯಿ ಕಡಿಮೆ ಇದೆ, ನಾಳೆ ಕೊಡ್ತೀನಿ” ಎಂಬ ಮಾತುಗಳು ಸಾಮಾನ್ಯವಾಗಿದ್ದವು. ಜೇಬಿನಲ್ಲಿ ಚಿಲ್ಲರೆ ಇದೆಯೋ ಇಲ್ಲವೋ ಎಂಬ ಚಿಂತೆ ನಿತ್ಯವೂ ಇತ್ತು.
ಈಗಿನ ಪರಿಸ್ಥಿತಿ ಕೈಯಲ್ಲಿ ಸ್ಮಾರ್ಟ್ ಫೋನ್, ಡಿಜಿಟಲ್ ಪಾವತಿಯ ಮಾಯಾಜಾಲ—ಎಲ್ಲ ಸಮಸ್ಯೆಗಳಿಗೂ ಒಂದೇ ಕ್ಲಿಕ್‌ನಲ್ಲಿ ಪರಿಹಾರ! ಬಹುತೇಕ ಸಾರಿಗೆ ಬಸ್‌ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ತೆಗೆದುಕೊಳ್ಳಬಹುದು. ಚಾಮರಾಜನಗರ ವಿಭಾಗದಲ್ಲಿ ಕಳೆದ ಐದು ತಿಂಗಳಲ್ಲಿ 3.2 ಕೋಟಿ ರೂಪಾಯಿ ಮೌಲ್ಯದ ಯುಪಿಐ ವ್ಯವಹಾರಗಳು ನಡೆದಿವೆ. ಇದು ನಗದುರಹಿತ ಕ್ರಾಂತಿಯ ಆರಂಭ!
ಯುಪಿಐ ಎಂದರೇನು?
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಎಂಬುದು ಎಲ್ಲ ಬ್ಯಾಂಕ್‌ಗಳನ್ನು ಒಂದೇ ಜಾಲಬಂಧದಲ್ಲಿ ಸಂಪರ್ಕಿಸುವ ತಂತ್ರಜ್ಞಾನ. ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಅಥವಾ ಇತರ ಯಾವುದೇ ಆಪ್ ಬಳಸಿದರೂ, ಯುಪಿಐ ಇಬ್ಬರ ಖಾತೆಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸಿ, ಹಣವನ್ನು ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ತಲುಪಿಸುತ್ತದೆ. ಯುಪಿಐ ವಿಶೇಷವಿರುವುದು ಅದರ 24x7 ಸೌಲಭ್ಯದಿಂದ, ರಾತ್ತ್ರಿಯಲ್ಲೂ ಬ್ಯಾಂಕ್ ವಹಿವಾಟು ಸಾಧ್ಯವಾಗುವುದು ಮತ್ತು ಒಂದೇ ಆಪ್‌ನಲ್ಲಿ ನಿಮ್ಮ ಎಲ್ಲ ಬ್ಯಾಂಕ್ ಖಾತೆಗಳನ್ನು ಒಗ್ಗೂಡಿಸಿ, ಕ್ಷಣಾರ್ಧದಲ್ಲಿ ಹಣ ವರ್ಗಾವಣೆ ಮಾಡುವ ಸಾಮರ್ಥ್ಯದಿಂದ.

ಕ್ಯೂಆರ್ ಕೋಡ್ ಕಮಾಲು!
ಯುಪಿಐಯ ಕೀಲಿಕೈ ಕ್ಯೂಆರ್ (ಕ್ವಿಕ್ ರೆಸ್ಪಾನ್ಸ್) ಕೋಡ್. ಈ ಚೌಕಾಕಾರದ ಗೂಢಚಿತ್ರವು ಅತ್ಯಾಧುನಿಕ ಡಿಜಿಟಲ್ ಸಂವಹನ ವ್ಯವಸ್ಥೆಯಾಗಿದೆ. ಇದರೊಳಗೆ ಪಾವತಿಗೆ ಸಂಬಂಧಿಸಿದ ಎಲ್ಲ ವಿವರಗಳು ಸುರಕ್ಷಿತವಾಗಿ ಸಂಗ್ರಹವಾಗಿರುತ್ತವೆ. ಯುಪಿಐ ಸಕ್ರಿಯ ಆಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಪಿನ್ ನಮೂದಿಸಿದ ಕೆಲವೇ ಸೆಕೆಂಡುಗಳಲ್ಲಿ ಗೂಢಲಿಪಿಯನ್ನು ಡಿಕೋಡ್ ಮಾಡಿ, ನಿಮ್ಮ ಬ್ಯಾಂಕ್ ಖಾತೆಯಿಂದ ಗ್ರಾಹಕರ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಸಾಂಪ್ರದಾಯಿಕ ಬಾರ್‌ಕೋಡ್‌ಗಿಂತ ಕ್ಯೂಆರ್ ಕೋಡ್ 10 ಪಟ್ಟು ವೇಗವಾಗಿ ಕೆಲಸ ಮಾಡುತ್ತದೆ!
ಡಿಜಿಟಲ್ ಪಾವತಿ: ತಂತ್ರಜ್ಞಾನದ ಜಾದೂ!
ಡಿಜಿಟಲ್ ಪಾವತಿಯೆಂದರೆ ನಗದು ಬದಲಿಗೆ ಇಂಟರ್ನೆಟ್ ಅಥವಾ ಮೊಬೈಲ್ ಮೂಲಕ ಹಣ ಕಳುಹಿಸುವ ವ್ಯವಸ್ಥೆ. ಇದು ನಿಮ್ಮ ಖಾತೆಯಲ್ಲಿರುವ ಹಣವನ್ನು ಡಿಜಿಟಲ್ ಸಂಕೇತಗಳಾಗಿ (0-1-0-1) ಪರಿವರ್ತಿಸಿ, ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಗೆ ತಲುಪಿಸುತ್ತದೆ.
ಭಾರತವು ಇಂದು ಡಿಜಿಟಲ್ ಪಾವತಿ ಕ್ರಾಂತಿಯ ಮುಂಚೂಣಿಯಲ್ಲಿದೆ. ಗ್ರಾಮೀಣ ಕಿರಾಣಿ ಅಂಗಡಿಗಳಿಂದ ಮಹಾನಗರದ ಶಾಪಿಂಗ್ ಮಾಲ್‌ಗಳವರೆಗೆ, ಕ್ಯೂಆರ್ ಕೋಡ್‌ಗಳು ಮತ್ತು ಯುಪಿಐ ಪಾವತಿಗಳು ಹೊಸ ಆರ್ಥಿಕ ಸಂಸ್ಕೃತಿಯನ್ನು ರೂಪಿಸುತ್ತಿವೆ. ಗ್ರಾಮೀಣ ಮಹಿಳೆಯೊಬ್ಬಳು ಮೊಬೈಲ್ ಫೋನ್ ಮೂಲಕ ಹಣ ಸ್ವೀಕರಿಸುವುದು ಈಗ ಸಾಮಾನ್ಯ ದೃಶ್ಯವಾಗಿದೆ. ಒಂದು ಕಾಲದಲ್ಲಿ ನಗರಗಳಿಗೆ ಸೀಮಿತವಾಗಿದ್ದ ಡಿಜಿಟಲ್ ಪಾವತಿಗಳು ಈಗ ಹಳ್ಳಿಯ ಚಹಾ ಅಂಗಡಿಗಳು, ಬೀದಿಬದಿಯ ವ್ಯಾಪಾರಿಗಳು, ದೇವಸ್ಥಾನದ ಮುಂದೆ ಭಿಕ್ಷೆ ಬೇಡುವವರಿಗೂ ತಲುಪಿ, ಎಲ್ಲೆಡೆ ವ್ಯಾಪಕವಾಗಿವೆ.

ಇತ್ತೀಚಿನ ವರದಿಗಳ ಪ್ರಕಾರ, ಭಾರತವು ತಿಂಗಳಿಗೆ ಸರಾಸರಿ 12 ಬಿಲಿಯನ್ ಯುಪಿಐ ವಹಿವಾಟುಗಳೊಂದಿಗೆ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯ ರಾಷ್ಟ್ರವಾಗಿದೆ. ಕಳೆದ ವರ್ಷ ಕ್ಯೂಆರ್ ಕೋಡ್ ಮೂಲಕ 15,547 ಕೋಟಿಗೂ ಹೆಚ್ಚು ಪಾವತಿಗಳು ನಡೆದಿವೆ. ಗೂಗಲ್ ಇಂಡಿಯಾ ವರದಿಯಂತೆ, ಗ್ರಾಮೀಣ ಪ್ರದೇಶದ 48% ಜನರು ಈಗ ಡಿಜಿಟಲ್ ಪಾವತಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಕೇವಲ ಮೂರು ವರ್ಷಗಳಲ್ಲಿ ನಗದು ವಹಿವಾಟು 89% ರಿಂದ 59% ಕ್ಕೆ ಇಳಿದಿದೆ.
ಬದಲಾವಣೆಯ ಕತೆಗಳು
ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದಲ್ಲಿ ಗಂಗಮ್ಮ ಎಂಬ ದಿನಸಿ ಅಂಗಡಿಯ ಒಡತಿ ಮೊದಲು ಕೇವಲ ನಗದು ಸ್ವೀಕರಿಸುತ್ತಿದ್ದರು. ಸ್ಥಳೀಯ ಯುವಕನ ಸಹಾಯದಿಂದ ಆಕೆಯ ಮೊಬೈಲ್‌ನಲ್ಲಿ ಭೀಮ್ ಯುಪಿಐ ಆಪ್ ಸ್ಥಾಪಿಸಲಾಯಿತು. ಈಗ ಆಕೆಯ ಅಂಗಡಿಯಲ್ಲಿ ಗ್ರಾಹಕರು 10 ರೂಪಾಯಿ ಚಾಕೊಲೇಟ್‌ಗೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿಸುತ್ತಾರೆ. "ಫೋನ್ಪೇಯಲ್ಲಿ ರೂಪಾಯಿ ಹತ್ತು ಸ್ವೀಕರಿಸಲಾಗಿದೆ. ಧನ್ಯವಾದಗಳು" ಎಂಬ ಧ್ವನಿ ಸಂದೇಶ ಗಂಗಮ್ಮನ ಮುಖದಲ್ಲಿ ಮಂದಹಾಸ ಮೂಡಿಸುತ್ತದೆ. "ನನ್ನ ಫೋನ್, ಈಗ ನನ್ನ ನಗದು,” ಎಂದು ಲೀಲಾವತಿ ಉತ್ಸಾಹದಿಂದ ಹೇಳುತ್ತಾರೆ. ದಾವಣಗೆರೆಯ ಆಟೋ ಚಾಲಕ ಈರಣ್ಣ ದಿನವಿಡೀ ಕ್ಯೂಆರ್ ಕೋಡ್ ಮೂಲಕ ಪಾವತಿಗಳನ್ನು ಸ್ವೀಕರಿಸುತ್ತಾರೆ. “ಹೆಚ್ಚಿನ ಆದಾಯ, ಕಡಿಮೆ ಅಪಾಯ, ನೇರವಾಗಿ ಖಾತೆಗೆ,” ಎಂದು ಅವರು ವಿವರಿಸುತ್ತಾರೆ. ಈ ಪ್ರಸಂಗಗಳು ಡಿಜಿಟಲ್ ಪಾವತಿಯು ಕೇವಲ ತಂತ್ರಜ್ಞಾನವಲ್ಲ, ಜೀವನದ ಭಾಗವಾಗಿದೆ ಎಂಬುದನ್ನು ತೋರಿಸುತ್ತವೆ.
ಸವಾಲುಗಳು
ಈ ಪಯಣದಲ್ಲಿ ಸವಾಲುಗಳೂ ಇವೆ. ಟ್ರಾಯ್ ವರದಿಯಂತೆ, ಗ್ರಾಮೀಣ ಭಾರತದಲ್ಲಿ 100 ಜನರಲ್ಲಿ ಕೇವಲ 37 ಜನರಿಗೆ ಸ್ಥಿರ ಇಂಟರ್ನೆಟ್ ಸಂಪರ್ಕವಿದೆ. 60 ವರ್ಷ ಮೇಲ್ಪಟ್ಟವರಲ್ಲಿ ಕೇವಲ 12% ಜನರು ಡಿಜಿಟಲ್ ವಹಿವಾಟುಗಳಲ್ಲಿ ಸಕ್ರಿಯರಾಗಿದ್ದಾರೆ, ತಂತ್ರಜ್ಞಾನ ಅನಕ್ಷರತೆಯ ಕೊರತೆಯಿಂದ ಹಿಂದುಳಿಯುತ್ತಿದ್ದಾರೆ. CERT-IN ವರದಿಯ ಪ್ರಕಾರ, 2023ರಲ್ಲಿ 1.5 ಲಕ್ಷಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಓಟಿಪಿ ತಂತ್ರ, ನಕಲಿ ಲಿಂಕ್‌ಗಳು, ಮೋಸದ ಆಪ್‌ಗಳು ಜನರಲ್ಲಿ ಭಯವನ್ನುಂಟುಮಾಡಿವೆ.
ಮುಂದಿನ ಹೆಜ್ಜೆಗಳು
ಡಿಜಿಟಲ್ ಸಾಕ್ಷರತಾ ಶಿಬಿರಗಳು ಪ್ರತಿ ಗ್ರಾಮಕ್ಕೂ ತಲುಪಬೇಕು. ಸೈಬರ್ ಭದ್ರತೆಯ ತರಬೇತಿಯು ಶಾಲೆಗಳಿಂದಲೇ ಆರಂಭವಾಗಬೇಕು. 5G ಸಂಪರ್ಕ ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಿದಾಗ ಡಿಜಿಟಲ್ ಪಾವತಿಗಳ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಬಹುದು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕಮ್ಯೂನಿಟಿ ಡಿಜಿಟಲ್ ಸಹಾಯ ಕೇಂದ್ರಗಳ ಸ್ಥಾಪನೆಯಿಂದ ಜ್ಞಾನ ಹಂಚಿಕೆ ಸಾಧ್ಯವಾಗುತ್ತದೆ.

ನಗದುರಹಿತ ಭವಿಷ್ಯ
ಭಾರತ ಸರ್ಕಾರದ ಜನ್-ಧನ್ ಯೋಜನೆಯ ಮೂಲಕ ಐವತ್ತು ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳು ತೆರೆಯಲ್ಪಟ್ಟಿದ್ದು, ಡಿಜಿಟಲ್ ವಹಿವಾಟುಗಳಿಗೆ ಬುನಾದಿಯಾಗಿವೆ. ಇದರೊಂದಿಗೆ, ಇತ್ತೀಚೆಗೆ ಆರಂಭಿಸಲಾದ 'ಯುಪಿಐ ಲೈಟ್' ಯೋಜನೆಯು ಕಡಿಮೆ ಮೊತ್ತದ ವಹಿವಾಟುಗಳಿಗೆ ಸರಳವಾದ, ಇಂಟರ್ನೆಟ್-ಮುಕ್ತ ಆಯ್ಕೆಯನ್ನು ಒದಗಿಸುತ್ತದೆ. ಡಿಜಿಟಲ್ ಪಾವತಿಗಳು ಕಾಗದದ ನೋಟುಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಿವೆ..
ನಾವು ಇಂದು ಒಂದು ತಿರುವಿನ ಬಿಂದುವಿನಲ್ಲಿದ್ದೇವೆ, ಹಳೆಯ ತೊಡಕುಗಳ ನಡುವೆ ಹೊಸ ಸಾಧ್ಯತೆಗಳ ಬೆಳಕು ಮಿಂಚುತ್ತಿದೆ. ತಂತ್ರಜ್ಞಾನ, ಶಿಕ್ಷಣ, ಜಾಗೃತಿ, ಮತ್ತು ಸಹಭಾಗಿತ್ವವೇ ನಗದುರಹಿತ ಭವಿಷ್ಯದ ನಾಲ್ಕು ಸ್ತಂಭಗಳು. ನಗದುರಹಿತ ಭಾರತದ ಕನಸು ಈಗ ಸಾಕಾರಗೊಳ್ಳುತ್ತಿದೆ—ಆ ದಿನ ಹಿಂದೆಂದಿಗಿಂತಲೂ ಈಗ ಸಮೀಪದಲ್ಲಿದೆ!
ಡಾ. ಎಸ್.ಎಂ. ಶಶಿಧರ