ಅವರಂತೂ ಬಹಳ ದೊಡ್ಡ ದೈವ ಭಕ್ತರು. ಪರಿಚಯದ ಹಲವಾರು ಜನರನ್ನು ಅವರು ಕರೆದಿದ್ದರು. ಬಹಳಷ್ಟು ಜನ ಬಂದಿದ್ರು. ಪುರೋಹಿತರು ಪೂಜೆ ಮಾಡುತ್ತಿದ್ದರು. ಆಫೀಸ್ ಬಹಳ ಚಿಕ್ಕದಿದ್ದುದರಿಂದ ಎಲ್ಲರೂ ನಿಂತ್ಕೊಂಡೇ ಇರಬೇಕಾಯಿತು. ಆ ಲಾಯರಿಗೆ ಸ್ನೇಹಿತರಾದ ಇನ್ನೊಬ್ಬ ಲಾಯರು ಅಲ್ಲಿಗೆ ಬಂದಿದ್ದರು.
ಪುರೋಹಿತರು ಪೂಜೆಯ ನಂತರ ಮಂತ್ರ ಹೇಳುತ್ತಾ ಎಲ್ಲರ ಹಣೆಗೆ ಕುಂಕುಮ ಇಡುತ್ತಾ ಈ ಲಾಯರೆಡೆಗೆ ಬಂದು ಬೆರಳ ತುದಿಯ ಕುಂಕುಮವನ್ನು ಇವರ ಹಣೆಗೆ ಇಡಲು ಹೋದಾಗ ಇವರು ತನ್ನ ಎಡಗೈಯಿಂದ ಪುರೋಹಿತರ ಕೈಯನ್ನು ಹಿಡಿದು ಕೆಳಗಿಳಿಸಿದರು ಮತ್ತು ತಕ್ಷಣವೇ ಅವರ ಕಣ್ಣು ದೂರದ ಬಾಗಿಲ ಬಳಿ ನಿಂತಿದ್ದ ಅವರ ಮನೆಯವರತ್ತ ತಿರುಗಿತು. ಅವರನ್ನೇ ನೋಡುತ್ತಿದ್ದ ನಾನು ಅವರ ಕಣ್ಣು ಹೋದೆಡೆ ದೃಷ್ಟಿ ತಿರುಗಿಸಿದೆ. ಕೈಕಟ್ಟಿ ನಿಂತಿದ್ದ ಅವರ ಹೆಂಡತಿ ಅಸಹನೆಯಿಂದ ತನ್ನ ತಲೆಯನ್ನು ಎಡಕಡೆಗೆ ಎಳೆಯುತ್ತಾ ತನ್ನೆಡೆ ಬರುವಂತೆ ಸನ್ನೆ ಮಾಡುತ್ತಿದ್ದರು. ಇವರು ಮೌನವಾಗಿ ಮೆಲ್ಲನೆ ದೂರ ಸರಿದರು. ಪುರೋಹಿತರು ನನ್ನ ಹಣೆಗೂ ಕುಂಕುಮ ಹಾಕಿದ ಮೇಲೆ ಪ್ರಸಾದ, ಕಾಫಿ, ತಿಂಡಿ ತಿಂದು ಅಲ್ಲಿಂದ ಹೊರಟೆ.
ಕೆಲವು ದಿನಗಳ ನಂತರ ಅ ಲಾಯರನ್ನು ಭೇಟಿಯಾದಾಗ ನಾನು ಹೇಳಿದೆ, ಅವತ್ತು ನೀವು ಮಾಡಿದ್ದು ನನಗೆ ಅಷ್ಟು ಸರಿ ಕಾಣಲಿಲ್ಲ. ಏಕೆಂದರೆ ನಿಮಗೆ ಮೊದಲೇ ಗೊತ್ತಿತ್ತು ಅವರು ದೊಡ್ಡ ದೈವ ಭಕ್ತರು ಅಂತ. ಅದರ ಮೇಲೆ ಅವರು ಸ್ವಂತ ಆಫೀಸ್ ಮಾಡಿದಾಗ ಅದನ್ನು ಪೂಜೆ ಮಾಡದೆ ಓಪನ್ ಮಾಡ್ತಾರಾ? ತುಂಬಾ ಭಕ್ತಿಯಿಂದಲೇ ಮಾಡಿರುತ್ತಾರೆ. ಎಲ್ಲ ಗೊತ್ತಿದ್ದೂ ಅಲ್ಲಿಗೆ ಹೋದ ಮೇಲೆ ಅವರ ಸಂಸ್ಕೃತಿ ಏನಿದೆ ಅದನ್ನು ಗೌರವಿಸಬೇಕು. ನಿಮಗೆ ನಂಬಿಕೆ ಇಲ್ಲದಿರಬಹುದು ಆದರೆ ಅವರ ಸಂಸ್ಕೃತಿಗೆ ಅವಮಾನ ಮಾಡುವ ಕೆಲಸ ಮಾಡಬಾರದು. ನಿಮಗೆ ಬೇಕಿದ್ದರೆ ಪೂಜೆ ಮುಗಿಯವ ತನಕ ಹೊರಗಡೆ ಇರಬಹುದಿತ್ತು. ಅಥವಾ ಲೇಟ್ ಆಗಿ ಬರಬಹುದಿತ್ತು. ನೋಡಿದ್ರಲ್ಲಾ, ನೀವು ಮಾಡಿದ್ದು ನಿಮ್ಮನೆಯವರಿಗೇ ಇಷ್ಟ ಆಗಿಲ್ಲ.
ನಾನು ಕೂಡ, ಮನುಷ್ಯನ ದೈನಂದಿನ ಕೆಲಸ ಕಾರ್ಯಗಳಲ್ಲಿ ದೈವದ ಪ್ರಭಾವ ಇಲ್ಲ ಅಂತ ತಿಳ್ಕೊಂಡೋನು. ಆದರೆ ಅದನ್ನು ಹೋದಲೆಲ್ಲ ಪ್ರಚಾರ ಮಾಡಬೇಕು ಅನ್ನೋ ಬಯಕೆ ನನಗಿಲ್ಲ. ಯಾರಾದ್ರೂ ನಂಗೆ ಕುಂಕುಮ ಇಟ್ರೆ ಅದರಿಂದ ಇದ್ದಕ್ಕಿದ್ದಂಗೆ ನಾನು ಬಹಳ ದೊಡ್ಡ ಭಕ್ತನಾಗಲ್ಲ. ವಿರೋಧ ಮಾಡಿ ತೋರಿಸಿ ಗಳಿಸಿಕೊಳ್ಳುವುದೇನೂ ಇಲ್ಲ. ರೋಮಿಗೆ ಹೋದಮೇಲೆ ರೋಮನ್ನರ ತರ ಇರಬೇಕು ಅಂತಾರೆ. ಇಲ್ಲಾದ್ರೆ ಹೋಗಲೇಬಾರದು.
ಅವರೇನೂ ಮಾತನಾಡಲಿಲ್ಲ. ಅವರಿಗೆ ದೇವರ ಮೇಲೆ ನಂಬಿಕೆ ಇರಲಿಲ್ಲ. ಆದರೆ, ಗೌಡ್ರ ಮೇಲೆ ಇತ್ತು. 98 ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾದರು. ನಿವೃತ್ತಿಯಾಗುವ ವೇಳೆಗೆ ಅತ್ಯುನ್ನತ ಪದವಿಯಲ್ಲಿದ್ದರು. ಬೇಕಾದವರಲ್ಲಿ ತೋರಿಸಲು ಭಕ್ತಿ ಅವರಲ್ಲಿ ಇನ್ನೂ ಉಳಿದಿತ್ತು .
ಯಾಕೆ ನೆನಪಾಯಿತು ಅಂದ್ರೆ, ಮೊನ್ನೆ ಯಾವುದೋ ಒಂದು ವಿಷಯದ ಬಗ್ಗೆ ಅವರ ವಿಡಿಯೋ ನೋಡಿದೆ. ಜೀವನದಲ್ಲಿ ಎಲ್ಲ ಬಂದಿತ್ತು, ಬಣ್ಣ ಬದಲಾಗಿರಲಿಲ್ಲ.
ಈಗಲೂ ದಸರಾ ಉದ್ಘಾಟನೆಗೆ ಇಂತಹವರೊಬ್ಬರು ತಯಾರಾಗಿರುವುದನ್ನು ನೋಡಿದಾಗ ಬೂಕರ್ ಬಂದರೂ ಜೋಕರ್ ಆಗುವುದನ್ನು ತಪ್ಪಿಸಲಾಗೋದಿಲ್ಲವಲ್ಲಾ ಅನಿಸಿದ್ದಂತೂ ಸತ್ಯ.

ಬಿ ಶ್ರೀಪತಿರಾವ್