ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ನಾಗರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದ ಭವ್ಯ ಸಂವಿಧಾನವು ಅನೇಕ ಮಹನೀಯರ ಶ್ರಮದ ಫಲವಾಗಿದ್ದು, 1950 ಜನವರಿ 26 ರಂದು ಜಾರಿಗೊಳಿಸಿದ ಸುಸಂದರ್ಭದ ಸವಿನೆನಪಿಗಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದೇಶದ ಪ್ರಜೆಗಳು ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಪಾಲಿಸಬೇಕೆಂದು ತಿಳಿಸಿದರು.
ಇದೇ ವೇಳೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಗ್ರಾ.ಪಂ ಉಪಾಧ್ಯಕ್ಷರಾದ ಸುಧೀರ್ ಹಾಗೂ ಗ್ರಾಮದ ಮುಖಂಡರು ಧ್ವಜಾರೋಹಣ ನೆರವೇರಿಸಿದರು.

ಶಾಲಾ ಮಕ್ಕಳು ಕನ್ನಡ-ಇಂಗ್ಲೀಷ್-ಹಿಂದಿ ಭಾಷೆಗಳಲ್ಲಿ ಮನಮೋಹಕವಾಗಿ ಭಾಷಣ ಮಾಡಿದ್ದು ವಿಶೇಷವಾಗಿತ್ತು. 77 ನೇ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಮದಲ್ಲಿ ಚಿಣ್ಣರ ಮತ್ತು ವಿದ್ಯಾರ್ಥಿಗಳು ವಿಭಿನ್ನ ನೃತ್ಯ ಮೂಲಕ ನೆರೆದಿದ್ದವರಿಗೆ ಭರಪೂರ ಮನರಂಜನೆ ನೀಡಿದರು.
ಹಾಗೂ 4ನೇ ತರಗತಿ ವಿದ್ಯಾರ್ಥಿನಿ ಪೂಜಾ, ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಶಾಲೆಯ ಹಳೆ ವಿದ್ಯಾರ್ಥಿಗಳಾದ ಅಭಿಷೇಕ್, ಸಚಿನ್, ಸುಧೀರ್, ದಿನೇಶ್ ಅವರು 77ನೇ ಗಣರಾಜ್ಯೋತ್ಸವದ ನಿಮಿತ್ತ ರಸಪ್ರಶ್ನೆ ಆಯೋಜನೆ ಮಾಡಿ ವಿಜೇತರಿಗೆ ಹಾಗೂ ಭಾಷಣ ಮತ್ತು ವೇಷಭೂಷಣ ಸ್ಪರ್ಧೆಯಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ, ಮುಂದಿನ ಶಿಕ್ಷಣಕ್ಕೆ ಶುಭಕೋರಿದರು.
ಧ್ವಜಾರೋಹಣ ಕಾರ್ಯಕ್ರಮಕ್ಕು ಮುನ್ನ ಶಾಲಾ ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರದೊಂದಿಗೆ ಡ್ರಮ್ಸ್-ಘೋಷಣೆಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಕೈಗೊಳ್ಳಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕುಮಾರಸ್ವಾಮಿ, ಶಿವಣ್ಣ ಎ.ಕೆ, ಅಶೋಕ, ನಾಗರಾಜ, ಕೊಟ್ರೇಶ್, ಪಂಪಾಪತಿ, ಬಸವರಾಜ, ಚಂದ್ರಶೇಖರ್ ಸೇರಿದಂತೆ ಶಾಲಾ ಶಿಕ್ಷಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.