LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

26ನೇ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರ್ ವಿಜಯೋತ್ಸವ

ಯುದ್ಧತಂತ್ರ, ಕೌಶಲ್ಯದಲ್ಲಿ ಬದಲಾವಣೆಯಾದರೂ ದೇಶದ ಕೆಲ ರಾಜಕೀಯ ಮುಖಂಡರು ಬದಲಾಗುವುದೇ ಇಲ್ಲ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ  ಬಿ.ಎಲ್.ಸಂತೋಷ್ ಜೀ

ಬೆಂಗಳೂರು : ಪಾಕಿಸ್ಥಾನದಂತೆ ನಮ್ಮ ದೇಶದ ಕೆಲವು ರಾಜಕೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಬದಲಾಗುವುದೇ ಇಲ್ಲ. ಆದರೆ ಬದಲಾಗದೇ ಇರುವುದು ನಮ್ಮ ಸೈನಿಕರ ಕೆಚ್ಚೆದೆ. ಎದುರಾಳಿಗಳಿಗೆ ಪ್ರತ್ಯುತ್ತರ ನೀಡುವ ಅವರ ಅದಮ್ಯ, ಅಚಲ ವಿಶ್ವಾಸ ಎಂದು  ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ  ಬಿ.ಎಲ್.ಸಂತೋಷ್ ಜೀ ಹೇಳಿದ್ದಾರೆ.

ಸರ್ಜಾಪುರದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದಿಂದ  26ನೇ ಕಾರ್ಗಿಲ್ ಮತ್ತು ಆಪರೇಷನ್  ಸಿಂಧೂರ್ ವಿಜಯೋತ್ಸವ ಮತ್ತು ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ನಿಮಿತ್ತ ಆಯೋಜಿಸಲಾದ 1500 ಅಡಿ ಉದ್ದದ್ದ ಬೃಹತ್ ಜಾಥಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮಲ್ಲಿನ ಕೆಲವು ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು ಪ್ರತಿಯೊಂದಕ್ಕೂ ಸಾಕ್ಷ್ಯ ಕೇಳುತ್ತಾರೆ. ಯುದ್ಧ ಮಾಡಿದರೆ, ಬಾಂಬ್ ಹಾಕಿದರೆ, ಶತ್ರು ದೇಶದ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದರೆ, ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದರೆ ನಮಗೆ ಸಾಕ್ಷ್ಯ ಕೊಡಿ ಎನ್ನುತ್ತಾರೆ. ನಮ್ಮ ಸೈನಿಕರು ಯುದ್ಧ ಮಾಡುವ ಜೊತೆಗೆ ಛಾಯಾಚಿತ್ರ ತೆಗೆದು ಇವರಿಗೆ ಪುರಾವೆ ಒದಗಿಸಬೇಕಾಗಿದೆ. ನಮ್ಮ ಸೇನೆ, ಪ್ರಧಾನಮಂತ್ರಿ ಹೇಳಿದ್ದನ್ನು ಸಹ ಇವರು ನಂಬುತ್ತಿಲ್ಲ ಎಂದು ವಿಷಾದಿಸಿದರು.



ಆಪರೇಷನ್ ಕಾರ್ಗಿಲ್ ವಿಜಯ್ ಯಶಸ್ಸಿಗೆ 74 ದಿನ, ಆಪರೇಷನ್ ಸಿಂಧೂರ್ ಗೆಲುವಿಗೆ ಕೇವಲ 4 ದಿನಗಳನ್ನು ತೆಗೆದುಕೊಂಡಿತು. ನಮ್ಮಲ್ಲಿ ಯುದ್ಧ ತಂತ್ರಗಳು, ಕೌಶಲ್ಯಗಳು ಬದಲಾಗಿವೆ. ಇಷ್ಟೆಲ್ಲಾ ಬದಲಾವಣೆಗಳ ನಡುವೆ ನಮ್ಮಲ್ಲಿಯೇ ಬದಲಾವಣೆ ಕಾಣುತ್ತಿಲ್ಲ. ಪಾಕಿಸ್ಥಾನ, ಅಲ್ಲಿನ ಸೈನ್ಯ ರಾಕ್ಷರ ಸ್ವರೂಪಿಯದ್ದು. ಪಾಕಿಸ್ಥಾನ  ಎಂದಿಗೂ ಬದಲಾಗಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮದ ಬಗ್ಗೆ 33 ಬಾರಿ ಮಾತನಾಡಿದ್ದಾರೆ. ಇದನ್ನೇ ನಮ್ಮವರು ಪದೇ ಪದೇ ಪ್ರಶ್ನಿಸುತ್ತಾರೆ. ಪಾಕ್  ನೆಟ್ಟಗಾಗುವುದಿಲ್ಲ. ಅಮೆರಿಕ ದೇಶ ಕೂಡ ಡೊಂಕಾಗಿದೆ. ಪಾಕಿಸ್ಥಾನ ಬೇಡಿಕೊಳ್ಳುವವರೆಗೆ ನಮ್ಮ ಸೈನಿಕರು ಯುದ್ಧ ನಿಲ್ಲಿಸಿರಲಿಲ್ಲ ಎಂದರು.

ನಮ್ಮ ಶ್ರೇಷ್ಠ ಸೇನಾಧಿಕಾರಿ ಬಿಪಿನ್ ರಾವತ್ ಅವರು ನೆರೆಯ ಪಾಕಿಸ್ಥಾನ, ಚೀನಾ ದೇಶಗಳನ್ನು ಎದುರಿಸುವ ಜೊತೆಗೆ ನಮ್ಮಲ್ಲಿರುವ ಅಸ್ಥಿರತಾವಾದಿಗಳನ್ನು ಸಹ ಎದುರಿಸಬೇಕಾಗಿದೆ ಎಂದು ಹೇಳುತ್ತಿದ್ದರು.  ಕಾರ್ಗಿಲ್, ಆಪರೇಷನ್ ಸಿಂಧೂರ್ ನಲ್ಲಿ ನಮ್ಮ ಗೆಲುವಿಗೆ ವೀರ ನಾರಿಯರ ಕೊಡುಗೆ ಅಪಾರ. ಅವರಿಗೂ ನಾವು ಗೌರವ ಸಲ್ಲಿಸಬೇಕಾಗಿದೆ. ನಾವು ಅವರೆಲ್ಲರಿಗೂ ಕೃತಜ್ಞರಾಗಿರಬೇಕು. ಯುವ ಸಮೂಹ ದೇಶ ರಕ್ಷಣೆಗೆ ಸಜ್ಜಾಗಬೇಕು. ದೇಶದ ಸೈನಿಕರ ಮಾನಸಿಕತೆಯನ್ನು ಅರ್ಥಮಾಡಿಕೊಳ್ಳಬೇಕು. ನಾವು ಕೆಲಸ ಮಾಡಿದ ಕಂಪೆನಿಗಳಿಗೆ ಬಯ್ಯುತ್ತೇವೆ. ಆದರೆ ಸೈನಿಕರು ತಮಗೆ ಸೌಕರ್ಯ ದೊರೆಯದಿದ್ದರೂ ಸೇನೆ, ಉನ್ನತಾಧಿಕಾರಿಗಳ ವಿರುದ್ಧ ಮಾತನಾಡುವುದಿಲ್ಲ. ನಮ್ಮ ಸೈನಿಕರ ಬೆನ್ನಿಗೆ ಎಂದಿಗೂ ಗುಂಡು ಬಿದ್ದಿಲ್ಲ. ಬಿದ್ದಿದ್ದರೆ ಅದು ಎದೆಗೆ ಎಂದರು.



ನಮ್ಮಲ್ಲಿ ಅನೈತಿಕ ಚಟುವಟಿಕೆ ನಡೆಸುವ ನಟ, ನಟಿಯರ ಚಿತ್ರಗಳನ್ನು ನಮ್ಮ ಯುವ ಸಮೂಹ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಂಡಿರುತ್ತಾರೆ. ಆದರೆ ಸೈನಿಕರಿಗೆ ಎಲ್ಲಿಯೂ ಸ್ಥಾನ ನೀಡುತ್ತಿಲ್ಲ. ಪಹಲ್ಗಾಮ್ ನಲ್ಲಿ ಹಿಂದುಗಳು ಎಂದು ಖಚಿತಪಡಿಸಿಕೊಂಡು ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ದೇಶದಲ್ಲಿ ಜನರಿಗೆ ನೌಕರಿ ಸಿಗುತ್ತಿದೆ. ಅಭಿವೃದ್ಧಿಯಾಗುತ್ತಿದೆ. ಇದನ್ನು ವಿಚಿದ್ರಗೊಳಿಸಲು ಇಂತಹ  ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಣ್ಣ ಮಾತನಾಡಿ, ಸೈನಿಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಆದ್ಯತೆ ನೀಡುತ್ತಿಲ್ಲ. ಸೈನಿಕರಿಗಾಗಿ ಮೀಸಲಿಟ್ಟಿರುವ ಜಮೀನು ಮಂಜೂರು ಮಾಡಲು ಆಸಕ್ತಿ ತೋರುತ್ತಿಲ್ಲ. ಸರ್ಕಾರದ ಬಳಿ ಜಮೀನು ಇರುವುದಕ್ಕಿಂತ ನಿಜವಾದ ಫಲಾನುಭವಿಗಳಿಗೆ ಒದಗಿಸಲು ಆಸಕ್ತಿ ತೋರಬೇಕು. ನಿವೃತ್ತ ಸೈನಿಕರ ಸಮಸ್ಯೆಗಳಿಗೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ  ಬೆಂಗಳೂರು ಘಟಕದ ಅಧ್ಯಕ್ಷ ವೇಣು ಮಾತನಾಡಿ, ಮಾಜಿ ಸೈನಿಕರು, ಜನ ಸಾಮಾನ್ಯರು, ವಿದ್ಯಾರ್ಥಿಗಳು ಒಳಗೊಂಡಂತೆ 1500 ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಮ್ಮಲ್ಲಿ ರಾಷ್ಟ್ರ ಚಿಂತನೆ ಬರಬೇಕು. ಹೀಗಾಗಿ ರಾಷ್ಟ್ರೀಯತೆ ಮೂಡಿಸಲು ಐದು ಕಿಲೋಮೀಟರ್ ಪಥ ಸಂಚಲನ ಮಾಡಿದ್ದೇವೆ. ದೇಶ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.



ಕ್ಯಾಪ್ಟನ್.  ಪ್ರಾಂಜಲ್ ಅವರ ತಂದೆ ವೆಂಕಟೇಶ್, ವಿಧಾನ ಪರಿಷದ್ ಸದಸ್ಯರಾದ ಗೋಪಿನಾಥ್, ಗೌರವಧ್ಯಕ್ಷ ಜಯಣ್ಣ, ಜಿಲ್ಲಾಧಕ್ಷರುಗಳು, ರಾಜ್ಯ ಪಧಾಧಿಕಾರಿಗಳು, 1962, 1963, 1971 ರಲ್ಲಿ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಸೈನಿಕರು, ಅಧಿಕಾರಿಗಳು, ಮುಖಂಡರುಗಳಾದ ಹುಲ್ಲಳ್ಳಿ ಶ್ರೀನಿವಾಸ, ಶಿವಪ್ಪ, ಜಯಣ್ಣ, ಜಯಪ್ರಕಾಶ್, ಮುರಳಿಕೃಷ್ಣ, ಪುನೀತ್, ಅರವಿಂದ, ಲಕ್ಷ್ಮೀನಾರಾಯಣ, ಉಮೇಶಬಾಬು, ಭರತ್, ಭಾಜಪ ಕಾರ್ಯಕರ್ತರು, ಕಾಲೇಜು ವಿದ್ಯಾರ್ಥಿಗಳು, ಭಾಗವಹಿಸಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST