LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವರನಟ ರಾಜ್ ಕುಮಾರ್ ಅಪಹರಣವಾಗಿ ತುಂಬಿತು 25 ವರ್ಷ

ಬೆಂಗಳೂರು : ಇಂದಿಗೆ ಸರಿಯಾಗಿ 25 ವರ್ಷಗಳ ಹಿಂದೆ.. ಅಂದು ಭೀಮನ ಅಮವ್ಯಾಸೆ. ಕಾರ್ಗತ್ತಲು ಆವರಿಸಿತ್ತು…. ಆಗ ನಾಡು ನಡುಗುವ ಘಟನೆಯೊಂದು ನಡೆಯಿತು.

ರಾಜ್ಯದ ವರನಟ ಡಾ.ರಾಜ್‌ಕುಮಾರ್‌ ಅಪಹರಣ ಘಟನೆಯ ಕರಾಳ ಛಾಯೆ ಮಾತ್ರ ಇಂದಿಗೂ ಮಾಸಿಲ್ಲ…

ಹುಟ್ಟೂರು ಗಾಜನೂರಿನಲ್ಲಿ ನಿರ್ಮಿಸಿದ ನೂತನ ಮನೆಯ ಗೃಹಪ್ರವೇಶದ ಕಾರ್ಯಕ್ರಮ ನಿಮಿತ್ತ ತಿರುಪತಿಗೆ ಕುಟುಂಬ ಸಮೇತರಾಗಿ ತೆರಳಿದ್ದ ರಾಜ್‌ಕುಮಾರ್‌ ಅಲ್ಲಿಂದ ಹುಟ್ಟೂರು ಗಾಜನೂರಿಗೆ ಹೋಗಿದ್ದರು.



2000ರ ಜುಲೈ.30ರ ರಾತ್ರಿ 9.30ರ ಅಸುಪಾಸಿನಲ್ಲಿ -----ಬಂದೂಕುಧಾರಿ ಸಹಚರರೊಂದಿಗೆ ನುಗ್ಗಿದ ಕಾಡುಗಳ್ಳ ವೀರಪ್ಪನ್‌, ಕರ್ನಾಟಕ ರತ್ನ ರಾಜ್‌ಕುಮಾರ್‌ ಅವರನ್ನು ಸಾವಧಾನವಾಗಿಯೇ ತನ್ನೊಂದಿಗೆ ಕಾಡಿಗೆ ಕರೆದುಕೊಂಡು ಹೋದ..

ಮರುದಿನ ವಿಷಯ ಬರಸಿಡಿಲಿನಂತೆ ರಾಜ್ಯದೆಲ್ಲೆಡೆ ಈ ಸುದ್ದಿ ಅಪ್ಪಳಿಸಿತು. ಈ ಸುದ್ದಿಯು ಅಭಿಮಾನಿಗಳಲ್ಲಿ ಆಕ್ರಂದನ, ಆಕ್ರೋಶ, ಗೊಂದಲ, ಹತಾಶೆ ಸಂಪೂರ್ಣ ಕದಡಿತ್ತು. ಈ ಘಟನೆ ನಡೆದ 108 ದಿನಗಳ ಬಳಿಕ ರಾಜ್ ಕುಮಾರ್, ವೀರಪ್ಪನ್ ಸೆರೆಯಿಂದ ಬಿಡುಗಡೆಯಾಗಿ ಮನೆಗೆ ಹಿಂತಿರುಗಿದರು.

ನಂತರ ಅಣ್ಣಾವ್ರು ಅಭಿಮಾನಿ ದೇವರುಗಳ ಜತೆಗೆ ಇದ್ದದ್ದು ಆರು ವರ್ಷ ಮಾತ್ರ. ಆದರೆ, ರಾಜ್ ಕುಮಾರ್ ಅಪಹರಣದ ಸಂದರ್ಭದಲ್ಲಿ ರಾಜ್ಯದಾದ್ಯಂತ ಉಂಟಾದ ಗದ್ದಲ, ಪ್ರತಿಭಟನೆ, ಜನರ ಕಣ್ಣೀರು, ಸರ್ಕಾರದಲ್ಲಿಯೂ ಮೂಡಿಸಿದ ಕೋಲಾಹಲವನ್ನು ಕಂಡವರಿಗೆ, 25 ವರ್ಷಗಳು ಕಳೆದಿದ್ದರೂ ಈ ಕರಾಳ ಘಟನೆ ಮರೆಯಲು ಎಂದಿಗೂ ಸಾಧ್ಯವಾಗದು.



ರಾಜ್ ಕುಮಾರ್, ನಾಗಪ್ಪ, ಎಸ್ಎ ಗೋವಿಂದರಾಜು, ನಾಗೇಶ್ ಅವರುಗಳನ್ನು ಅಪಹರಿಸಲಾಯಿತು. ಜೊತೆಗೆ ಕಾರು ಚಾಲಕನನ್ನೂ ಅಪಹರಿಸುವ ಯೋಚನೆ ಇತ್ತು. ಆದರೆ ಪಾರ್ವತಮ್ಮನವರು ಬೆಂಗಳೂರಿಗೆ ಹೋಗಬೇಕಾದ ಕಾರಣ ಡ್ರೈವರ್ ಅನ್ನು ಅಲ್ಲಿಯೇ ಬಿಡಲಾಯಿತು.

2000 ಜುಲೈ 30ರಂದು ಅಪಹರಣ ನಡೆದ ದಿನ ವೀರಪ್ಪನ್ ಪಾರ್ವತಮ್ಮನ ಕೈಗೆ ಕ್ಯಾಸೆಟ್ ಒಂದನ್ನು ಕೊಟ್ಟಿದ್ದರು. ಆಗಸ್ಟ್ 2 ರಂದು ನಕ್ಕೀರನ್ ಗೋಪಾಲನ್ ಅನ್ನು ಮೊದಲ ಸಂಧಾನಕಾರನಾಗಿ ಬಾರಿಗೆ ಕಾಡಿಗೆ ಕಳಿಸಲಾಯಿತು.

ವೀರಪ್ಪನ್ ಕಳಿಸಿದ್ದ ಮೊದಲ ಬೇಡಿಕೆಗಳ ಪಟ್ಟಿ ಆಗಸ್ಟ್ 4 ರಂದು ತಲುಪಿತ್ತು. ಬಹುತೇಕ ಬೇಡಿಕೆಗಳು ಈಡೇರಿಸಲು ಅಸಾಧ್ಯವಾಗಿದ್ದವು. ಕರ್ನಾಟಕದಲ್ಲಿ ತಮಿಳು ಭಾಷೆಯನ್ನು ಎರಡನೇ ಆಡಳಿತ ಭಾಷೆಯನ್ನಾಗಿ ಘೋಷಿಸಬೇಕೆಂಬ ಬೇಡಿಕೆಯೂ ಇತ್ತು. ತಮಿಳುನಾಡಿಗೆ 205 ಟಿಎಂಸಿ ನೀರು ಬಿಡಬೇಕು ಎನ್ನುವ ಬೇಡಿಕೆ ಇತ್ತು.



ಇದು ಎರಡೂ ಸರ್ಕಾರಗಳಿಗೆ ಆತಂಕ ಮೂಡಿಸಿತು. ಸೆಪ್ಟೆಂಬರ್, 2000 ಸೆಪ್ಟೆಂಬರ್ ತಿಂಗಳಲ್ಲಿ ಕೆಲವು ಮುಖ್ಯ ಘಟನೆಗಳು ನಡೆದವು. ಕೆಲ ಅಭಿಮಾನಿಗಳು ರಾಜ್ಕುಮಾರ್ ಅವರನ್ನು ಹುಡುಕುತ್ತಾ ಕಾಡಿಗೆ ನುಗ್ಗಿದರು. ರಜನೀಕಾಂತ್ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿ ಸರ್ಕಾರಗಳ ಮೇಲೆ ಒತ್ತಡ ಹಾಕಿದರು.

ನಾಗಪ್ಪ, ವೀರಪ್ಪನ್ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ರಾಜ್ಯಕ್ಕೆ ಮರಳಿದರು. ಇದು ಸರ್ಕಾರವನ್ನು ತೀವ್ರ ಆತಂಕ್ಕಕ್ಕೆ ತಳ್ಳಿತು. ಅಕ್ಟೋಬರ್ , 2002 ಅಕ್ಟೋಬರ್ ನಲ್ಲಿ ವೀರಪ್ಪನ್ ನ ಹೊಸ ಕ್ಯಾಸೆಟ್ ಸರ್ಕಾರವನ್ನು ತಲುಪಿತ್ತು. ಸ್ವತಃ ರಾಜ್ಕುಮಾರ್ ಧ್ವನಿ ಅದರಲ್ಲಿತ್ತು. ಸಂಧಾನಕಾರ ನಕ್ಕೀರನ್ ಗೋಪಾಲನ್ ಅನ್ನು ಬದಲಾಯಿಸಿ ಆ ಸ್ಥಾನಕ್ಕೆ ನೆಡುಮಾರನ್ ಅನ್ನು ನೇಮಿಸಬೇಕು ಎಂಬ ಬೇಡಿಕೆ ಇತ್ತು. ನೆಡುಮಾರನ್ ಜೊತೆಗೆ ಫ್ರೊಫೆಸರ್ ಕಲ್ಯಾಣಿ ಸಹ ಸಂಧಾನಕ್ಕೆ ಹೋಗಿದ್ದರು. ನೆಡುಮಾರನ್ ಸಂಧಾನಕ್ಕೆ ಯಶಸ್ಸು ಸಿಕ್ಕಿ ನವೆಂಬರ್ 16 ರಂದು ರಾಜ್ ಕುಮಾರ್ ಅಳಿಯ ಗೋವಿಂದರಾಜು ಅವರನ್ನು ಬಿಡುಗಡೆಯನ್ನು ವೀರಪ್ಪನ್ ಮಾಡಿದ. ನವೆಂಬರ್ 9, 2002 ನವೆಂಬರ್ 9 ರಂದು ಫ್ರೊಫೆಸರ್ ಕಲ್ಯಾಣಿ, ಸುಕುಮಾರನ್, ನೆಡುಮಾರನ್ ಅವರುಗಳ ಜೊತೆಗೆ ತಮಿಳು ಬರುತ್ತಿದ್ದ ಕರ್ನಾಟಕದ ವೈದ್ಯೆ ಭಾನು ಎಂಬಾಕೆಯೂ ಕಾಡಿಗೆ ಹೋದರು.



ರಾಜ್‌ ಕುಮಾರ್ ಅವರ ಆರೋಗ್ಯವನ್ನು ಪರಿಶೀಲನೆ ಮಾಡಿದ ಭಾನು, ರಾಜ್ಕುಮಾರ್ ಅವರ ಆರೋಗ್ಯ ತೀರ ಹದಗೆಟ್ಟಿದೆ. ಅವರು ಇಷ್ಟು ದಿನ ಇಲ್ಲಿ ಬದುಕಿರುವುದೇ ಹೆಚ್ಚು ಎಂದರು.

2000 ನವೆಂಬರ್ 18 ರಂದು ತಮಿಳುನಾಡಿನ ಬನ್ನಾರಿ ಬಳಿ ಒತ್ತೆಯಾಳುಗಳನ್ನು ಬಂಧಮುಕ್ತ ಮಾಡಲಾಯಿತು. ಅಮ್ಮಾಪೇಟ್ ಎಂಬಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ರಾಜ್ ಕುಮಾರ್ ಅವರನ್ನು ಹೆಲಿಕಾಪ್ಟರ್ ಮೂಲಕ ರಾಜ್ಯಕ್ಕೆ ಕರೆತರಲಾಯಿತು.



ರಾಜ್ ಕುಮಾರ್ ಅವರನ್ನು ನೋಡಲು ಲಕ್ಷಾಂತರ ಜನ ಬೆಂಗಳೂರಿನಲ್ಲಿ ಸೇರಿದ್ದರು. ರಾಜ್ ಕುಮಾರ್ ಅವರ ಅಪಹರಣ ಘಟನೆಯು ಈಗ ಇತಿಹಾಸ. ಆದರೆ ಡಾ. ರಾಜ್ ಕುಮಾರ್ ಅವರ ಅಭಿಮಾನಿಗಳ ಪಾಲಿಗೆ ಅವರ ಅಗಲಿಕೆ ಮತ್ತು ಅಪಹರಣ ಇಂದಿಗೂ ಕಾಡುತ್ತಿದೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST