ಕೊಪ್ಪಳ: ಮಠ ಮಂದಿರಗಳ ಅನುದಾನ ಬಿಡುಗಡೆಗೆ ಸಚಿವ ಶಿವರಾಜ್ ತಂಗಡಗಿ ಕಮಿಷನ್ ಭ್ರಷ್ಟಾಚಾರ ನಡೆಸಿದ್ದು ಕೂಡಲೇ ರಾಜೀನಾಮೆ ನೀಡುವಂತೆ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಒತ್ತಾಯಿಸಿದರು.

ಅವರು ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶ್ರೀ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠಕ್ಕೆ ಹಿಂದಿನ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ೩.೫ ಕೋಟಿ ಹಣ ಮಂಜೂರು ಮಾಡಲಾಗಿತ್ತು. ಇದರಲ್ಲಿ ಈಗಾಗಲೇ ಮಠದ ಕಾಮಗಾರಿಗಳಿಗೆ ೨.೫ಕೋಟಿ ವೆಚ್ಚವಾಗಿ ಅನುದಾನ ಬಿಡುಗಡೆ ಮಾಡಲಾಗಿತ್ತು ಸರ್ಕಾರವು ಬದಲಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತರುವಾಯ ಬಾಕಿ ೧.೫ ಕೋಟಿ ಹಣವನ್ನು ಬಿಡುಗಡೆ ಮಾಡಿರಲಿಲ್ಲ ಮಠದ ಸ್ವಾಮಿಗಳು ಬಾಕಿ ಬರಬೇಕಾದ ಹಣವನ್ನು ಬಿಡುಗಡೆ ಮಾಡಲು ಸಚಿವ ಶಿವರಾಜ್ ತಂಗಡಗಿಯವರಿಗೆ ಮನವಿ ಮಾಡಿದ ತರುವಾಯವು ಫಲ ದೊರೆಯದಿದ್ದಾಗ ಅನಿವಾರ್ಯವಾಗಿ ನ್ಯಾಯಾಲದ ಮೊರೆ ಹೋಗಿ ನ್ಯಾಯಾಲಯವು ಶ್ರೀ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠಕ್ಕೆ ಬಾಕಿ ೧.೫ಕೋಟಿ ಹಣವನ್ನು ಬಿಡುಗಡೆ ಮಾಡಲು ಆದೇಶಿಸಿತು. ಹಿಂದುಳಿದ ವರ್ಗದ ಸಚಿವ ಶಿವರಾಜ್ ತಂಗಡಗಿಯವರು ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿ ಬಾಕಿ ಹಣ ಬಿಡುಗಡೆಗೆ ಶೇಕಡಾ ೨೦% ರಿಂದ ೨೫% ರಷ್ಟು ಕಮಿಷನ್ ನೀಡಲು ಒತ್ತಾಯಿಸಿರುವುದು ಅತ್ಯಂತ ಖಂಡನೀಯ ಎಂದರು.
ನ್ಯಾಯಯುತವಾಗಿ ಬಾಕಿ ಹಣ ಬಿಡುಗಡೆಗೆ ಲಂಚ ಕೇಳುವ ಹೀನ ಮಟ್ಟಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಕುಸಿದಿರುವುದು ನಾಚಿಗೇಡಿನ ಸಂಗತಿ,ರಾಜ್ಯ ಸರ್ಕಾರವು ಮಠಕ್ಕೆ ನೀಡಬೇಕಾದ ಹಣಕ್ಕೂ ಕಮೀಷನ್ ನೀಡಲು ಒತ್ತಾಯಿಸಿರುವುದು ಸರ್ಕಾರದಲ್ಲಿ ಮಠವಾಗಲಿ, ಮಂದಿರವಾಗಲಿ ಅಥವಾ ವ್ಯಕ್ತಿಯಾಗಲಿ ಲಂಚ ಕೊಟ್ಟರೇ ಮಾತ್ರ ಹಣ ಬಿಡುಗಡೆ ಮಾಡುವುದು ಎಂದಿರುವುದು ಎಲ್ಲ ಹಂತದಲ್ಲಿಯೂ ಹರಡಿರುವ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಿದೆ,ರಾಜ್ಯದ ವಿವಿಧ ಮಠ ಮತ್ತು ಸಂಘ ಸಂಸ್ಥೆಗಳಿಗೆ ಬಿಡುಗಡೆ ಮಾಡಬೇಕಾದ ಹಣಕ್ಕೂ ಸಚಿವರಿಗೆ ಕಪ್ಪ ನೀಡಿ ಪಡೆಯಬೇಕಾದ ದುರವಸ್ಥೆ ಸ್ಥಿತಿಯು ಅತ್ಯಂತ ಖಂಡನೀಯ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕಡಿವಾಣವಿಲ್ಲದಾಗಿದೆ ಸ್ವತ: ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ ಸಿಲುಕಿದ್ದಾರೆ. ವಾಲ್ಮೀಕಿ ನಿಗಮದ ಹಗರಣ ಈಗ ಸಿಬಿಐ ತನಿಖೆಗೆ ನ್ಯಾಯಾಲಯದ ಆದೇಶವಾಗಿದೆ. ಮಠಗಳು ಹಣಕೊಟ್ಟು ಅನುದಾನ ಪಡೆಯಿರಿ ಎಂಬ ಹೀನಾಯ ಪರಿಸ್ಥಿತಿ ರಾಜ್ಯದಲ್ಲಿ ಕಂಡಿರಲಿಲ್ಲ, ಕೂಡಲೇ ಶ್ರೀ ಶೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಬಾಕಿ ಅನುದಾನ ಬಿಡುಗಡೆ ಮಾಡಬೇಕು ಹಿಂದುಳಿದ ವರ್ಗದ ಇಲಾಖೆಯಲ್ಲಿ ಅನುದಾನ ಬಿಡುಗಡೆಗೆ ಕಪ್ಪ ವಸೂಲಿಯ ಬಗ್ಗೆ ತನಿಖೆಗೆ ಆದೇಶಿಸಬೇಕು. ಹಿಂದುಳಿದ ವರ್ಗದ ಸಚಿವ ಶಿವರಾಜ್ ತಂಗಡಗಿಯವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ ೨೫% ಕಮೀಷನ್ ಕೇಳಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕಾಂಗ್ರೆಸ್ ಸರ್ಕಾರದ ಭ್ರಷ್ಟ ಮುಖವನ್ನು ಬಯಲುಗೊಳಿಸಿವೆ. ವಿಶೇಷವಾಗಿ, ತೈಲೇಶ್ವರ ಗಾಣಿಗ ಮಠಕ್ಕೆ ಮಂಜೂರಾದ ೩.೫ ಕೋಟಿ ಅನುದಾನ ಬಿಡುಗಡೆಗೆ ಕಮೀಷನ್ ಕೇಳಲಾಗಿದೆ ಎಂಬ ಆರೋಪ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಎದ್ದಿದೆ. ಈ ಬಗ್ಗೆ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿಯವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದು ಆರೋಪಗಳನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಈ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸಚಿವರು ತಮ್ಮ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಒತ್ತಾಯಿಸಿದರು.

ಇದೇ ವೇಳೆ, ಕೊಪ್ಪಳ ಜಿಲ್ಲೆಯ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಸರ್ಕಾರದಿಂದ ನಿರಂತರವಾಗಿ ನಡೆಯುತ್ತಿರುವ ಅನ್ಯಾಯಗಳ ಬಗ್ಗೆಯೂ ಚರ್ಚಿಸಲಾಯಿತು. ಇತ್ತೀಚೆಗೆ ಕೊಪ್ಪಳ ಕ್ಷೇತ್ರದಲ್ಲಿ ಡ್ರಗ್ಸ್ ಪೆಡ್ಲರ್ಗಳು ಸಿಕ್ಕಿಬಿದ್ದ ಘಟನೆಯನ್ನು ಗಂಗಾವತಿ ಕ್ಷೇತ್ರಕ್ಕೆ ಕರೆತಂದು ಬಂಧಿಸಲಾಗಿದೆ ಎಂಬುದು ರಾಜಕೀಯ ಪ್ರೇರಿತ ಕೃತ್ಯವಾಗಿದ್ದು, ಗಂಗಾವತಿ ಕ್ಷೇತ್ರಕ್ಕೆ ಅಪಪ್ರಚಾರ ತರಲು ನಡೆದ ಷಡ್ಯಂತ್ರ ಎಂದು ಆರೋಪಿಸಲಾಯಿತು.
ಕಳೆದ ವಿಧಾನಸಭೆ ಅಧಿವೇಶನದಲ್ಲಿ ಹಂಪಿಯಲ್ಲಿ ಪೊಲೀಸ್ ಉಪವಿಭಾಗದ ಕಚೇರಿ ಮತ್ತು ಆನೆಗೊಂದಿ ಭಾಗದಲ್ಲಿ ಪೊಲೀಸ್ ಠಾಣೆ ಸ್ಥಾಪನೆಗೆ ಸಂಬಂಧಿಸಿದಂತೆ ಮಾಡಿದ ಮನವಿಗೆ ಇದುವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ.ಇದರ ಜೊತೆಗೆ, ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನದ ಬಗ್ಗೆಯೂ ಗಮನ ಸೆಳೆಯಲಾಯಿತು. ಪಡಿತರ ಸಾಗಣೆಗೆ ಬಳಸುವ ಲಾರಿಗಳಿಗೆ ಸಕಾಲದಲ್ಲಿ ಪಾವತಿ ಮಾಡದಿರುವುದು ಸರ್ಕಾರದ ದುರ್ಬಲ ಆರ್ಥಿಕ ಸ್ಥಿತಿಯ ಸ್ಪಷ್ಟ ಉದಾಹರಣೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸುಗೂರು, ರಾಜ್ಯ ಕಾರ್ಯದರ್ಶಿ ಶರಣು ತಳ್ಳಕೇರಿ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ ಸೇರಿದಂತೆ ಪಕ್ಷದ ಹಲವು ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.