ತಿಪಟೂರು: ತಿಪಟೂರು ತಾಲೂಕಿನ ಆಲ್ಬೂರು ಗ್ರಾಮದ ಶ್ರೀ ಶಿವ ಸತ್ಯ ಶನೇಶ್ವರ ಸ್ವಾಮಿಯ 22ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಇದೇ ಜನವರಿ 28ರಿಂದ ಜನವರಿ 31ರವರೆಗೆ ಭಕ್ತಿಭಾವ ಹಾಗೂ ವೈಭವದಿಂದ ನಡೆಯಲಿದೆ ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಹಲಗೂರು ಶಂಕರಪ್ಪ ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರಾ ಮಹೋತ್ಸವದ ಅಂಗವಾಗಿ ಜನವರಿ 28ರಂದು ಮಲ್ಲಘಟ್ಟ ಕ್ಷೇತ್ರದಲ್ಲಿ ಗಂಗಾಸ್ಥಾನ ಕಾರ್ಯಕ್ರಮ ನಡೆಯಲಿದೆ. ಜನವರಿ 29ರಂದು ಆಲ್ಬೂರು ಅಣ್ಣಪ್ಪನಳ್ಳಿಯಲ್ಲಿ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸುಮಾರು 50ರಿಂದ 60 ಗ್ರಾಮಗಳ ಗ್ರಾಮ ದೇವತೆಗಳ ಸಾನಿಧ್ಯದಲ್ಲಿ ಬೆಳಗ್ಗೆ 9 ಗಂಟೆಗೆ ಅಗ್ನಿಕುಂಡೋತ್ಸವ ಜರುಗಲಿದೆ ಎಂದು ತಿಳಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಒಂದು ದಿನದ ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕ್ರೀಡಾಭಿಮಾನಿಗಳಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂದಿದೆ ಎಂದರು.
ಜನವರಿ 30ರಂದು ಮಧ್ಯಾಹ್ನ 12 ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಆದಿಚುಂಚನಗಿರಿ ಮಠದ ನಿರ್ಮಲಾನಂದ ಮಹಾಸ್ವಾಮಿಜಿ, ಕೆರೆಗೋಡಿರಂಗಪುರದ ಗುರು ಪರದೇಶಿ ಕೇಂದ್ರದ ಮಹಾಸ್ವಾಮಿಜಿ, ಕಾಗಿನೆಲೆ ಮಹಾಸ್ಥಾನದ ನಿರಂಜನಾನಂದ ಪುರಿ ಸ್ವಾಮೀಜಿ, ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಕರಿ ವಿಶ್ವಭದೇಶಿ ಕೇಂದ್ರದ ಶಿವಯೋಗೇಶ್ವರ ಮಹಾಸ್ವಾಮಿಜಿ, ಉಪ್ಪೂರು ತಮಟೆಹಳ್ಳಿಯ ಅಭಿನವ ಮಲ್ಲಿಕಾರ್ಜುನ ದೇಶಿ ಕೇಂದ್ರದ ಸ್ವಾಮೀಜಿ, ಬಂಜಾರ ಗುರುಪೀಠದ ಸೇವಾಲಾಲ್ ಸ್ವಾಮೀಜಿ, ಸಿದ್ದರಾಮಯ್ಯ ಗುರುಪೀಠದ ಇಮ್ಮಡಿ ಸಿದ್ದರಾಮಯ್ಯ ಕೃಷ್ಣ ಯಾದವಾನಂದ ಸ್ವಾಮೀಜಿ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಪೀಠಗಳ ಪೀಠಾಧ್ಯಕ್ಷರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಶಾಸಕ ಕೇಶರಕ್ಷರಿ ವಹಿಸಲಿದ್ದು, ಸರ್ವಧರ್ಮ ಸಮ್ಮೇಳನವನ್ನು ತುರುವೇಕೆರೆ ಶಾಸಕ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ಬಿ. ಸೋಮಣ್ಣ, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಕೆಪಿಸಿಸಿ ಸದಸ್ಯ ವಿ. ಯೋಗೀಶ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜಾತ್ರಾ ಮಹೋತ್ಸವದ ಅವಧಿಯಲ್ಲಿ ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, 30ಕ್ಕೂ ಹೆಚ್ಚು ಹಳ್ಳಿಗಳ ಗ್ರಾಮಸ್ಥರು ಒಗ್ಗೂಡಿ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಸಮಿತಿ ತಿಳಿಸಿದೆ. ಇದೇ ದಿನ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ರಾತ್ರಿ ವಿಶೇಷ ಉತ್ಸವ ಹಾಗೂ ಸಂಗೀತ ಕಾರ್ಯಕ್ರಮವನ್ನು ಕಾಮಿಡಿ ಕಿಲಾಡಿ ಹಾಸ್ಯ ಕಲಾವಿದರು ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಾತ್ರಾ ಸಮಿತಿಯ ಉಪಾಧ್ಯಕ್ಷ ಚೌದ್ರಿ ಮಹಾಲಿಂಗಪ್ಪ ಸೇರಿದಂತೆ ಗಂಗಾಧರ್, ಅಶೋಕ್, ಗಿರೀಶ್, ರಂಗನಾಥ್, ವಿದು ಕುಮಾರ್, ಮಂಜುನಾಥ್, ನಾಗರಾಜು ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.